ಇಂದಿರಾರ ಗೆಲುವೇ ಅರಸರಿಗೆ ಮುಳುವಾಯಿತು...

Update: 2016-05-24 17:29 GMT

ಭಾಗ-6

ಸ್ವಪಕ್ಷೀಯರ, ವಿರೋಧ ಪಕ್ಷದವರ ಮತ್ತು ಮೇಲ್ಜಾತಿಯವರ ಪ್ರಬಲ ವಿರೋಧದ ನಡುವೆಯೂ ದೇವರಾಜ ಅರಸು ಎರಡನೆ ಬಾರಿಗೆ ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆಗಳನ್ನು ಗೆದ್ದಿದ್ದು, ಅವರಲ್ಲಿ ಅತಿಯಾದ ಆತ್ಮವಿಶ್ವಾಸಕ್ಕೆ ಕಾರಣವಾಯಿತು. ಕಾಂಗ್ರೆಸ್‌ನ ಕೆಲ ನಾಯಕರು ಪಕ್ಷ ತೊರೆದುಹೋಗಿದ್ದು, ಜನತಾ ಪಕ್ಷ ಅಕಾರಕ್ಕೆ ಬಂದದ್ದು, ಇಂದಿರಾ ಗಾಂ ಸೋತು ಮನೆಯಲ್ಲಿ ಕೂರುವಂತಾಗಿದ್ದು ಅರಸರನ್ನು ರಾಷ್ಟ್ರೀಯ ನಾಯಕರ ಸಾಲಿನಲ್ಲಿ, ಮುಂಚೂಣಿಯಲ್ಲಿ ನಿಲ್ಲಿಸಿತು. ಸಹಜವಾಗಿಯೇ ದಿಲ್ಲಿ-ಬೆಂಗಳೂರಿನ ನಡುವಿನ ಓಡಾಟ, ನಾಯಕರೊಂದಿಗಿನ ವಿಚಾರ-ವಿನಿಮಯ ಹೆಚ್ಚಾಯಿತು. ಆಗಲೇ ಅರಸರಿಗೆ ಸಣ್ಣ ಮಟ್ಟದ ಅಹಂ ಕೂಡ ಆವರಿಸಿಕೊಂಡಿತು. ಆದರೆ ಇಂದಿರಾ ಗಾಂಯವರ ಮೇಲೆ ವಿಶೇಷ ಗೌರವ ಹೊಂದಿದ್ದ ಅರಸರು, ‘‘ರಘು, ಮೇಡಂ ಮತ್ತೆ ಲೈಮ್‌ಲೈಟ್‌ಗೆ ಬರಬೇಕಪ್ಪ, ಅದಕ್ಕೆ ನಾವೇನಾದರೂ ಮಾಡಬೇಕಪ್ಪ’’ ಎಂದು ಹೇಳುತ್ತಿದ್ದರು. ಆದರೆ ದಿಲ್ಲಿ ಮಟ್ಟದ ನಾಯಕರಿಗೆ ಮತ್ತು ಸ್ವತಃ ಇಂದಿರಾ ಗಾಂಯವರಿಗೆ ಉತ್ಸಾಹವೇ ಇರಲಿಲ್ಲ. 77ರ ಸೋಲು ಆ ಮಟ್ಟಿಗೆ ಅವರನ್ನು ಕುಗ್ಗಿಸಿತ್ತು. ಆದರೂ ಅರಸು ಬಿಡಲಿಲ್ಲ. ಹೇಗೋ ಮಾಡಿ ಕೊನೆಗೆ ಮೇಡಂ ಚುನಾವಣೆಗೆ ನಿಲ್ಲುವಂತೆ ಒಪ್ಪಿಸಿದ್ದಾಯಿತು. ಆದರೆ ಎಲ್ಲಿಂದ ಸ್ಪರ್ಸುವುದು? ಇದೇ ದೊಡ್ಡ ಪ್ರಶ್ನೆಯಾಯಿತು. ಎಲ್ಲರೂ ತಮಿಳುನಾಡಿನ ತಂಜಾವೂರು ಸೂಕ್ತವಾದ ಕ್ಷೇತ್ರ ಎಂಬ ಒಮ್ಮತಕ್ಕೆ ಬಂದರು.

ಇನ್ನೇನು ಮೇಡಂ ಎಸ್ ಎನ್ನುವಷ್ಟರಲ್ಲಿ, ತಮಿಳುನಾಡಿನ ಮುಖ್ಯಮಂತ್ರಿ ಎಂಜಿಆರ್, ‘‘ನಮಗೆ ಕೇಂದ್ರ ಸರಕಾರದೊಂದಿಗೆ ಸಹಕಾರ ಸಹಮತ ಮುಖ್ಯ’’ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು. ಅಂದರೆ ಕೇಂದ್ರದ ಆಡಳಿತ ಪಕ್ಷವಾದ ಜನತಾ ಪರ ಎನ್ನುವುದನ್ನು ಸ್ಪಷ್ಟಪಡಿಸಿದರು. ಅರಸರು ಮತ್ತೆ ದಿಲ್ಲಿಗೆ ಓಡಿದರು. ಕರ್ನಾಟಕದಲ್ಲಿಯೇ ನಿಲ್ಲಿ ಎಂದು ಮನವಿ ಮಾಡಿಕೊಂಡರು. ತುಂಬಾ ಸ್ೇ ಕ್ಷೇತ್ರ ಎಂದು ಬಳ್ಳಾರಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳ ಜಾತಿವಾರು ಸಮೀಕ್ಷೆ, ಮತಗಳ ವಿಭಜನೆ, ಪಕ್ಷಗಳ ಬಲಾಬಲವನ್ನೆಲ್ಲ ಸವಿಸ್ತಾರವಾಗಿ ವಿವರಿಸಿದರು. ಕೊನೆಗೆ ಚಿಕ್ಕಮಗಳೂರಿನಿಂದ ಸ್ಪರ್ಸುವುದೆಂದು ತೀರ್ಮಾನವಾಯಿತು. ಇಷ್ಟೆಲ್ಲ ಆದ ಮೇಲೂ ಇಂದಿರಾ ಗಾಂ, ‘ನಿಲ್ಲುವುದೋ ಬೇಡವೋ’ ಎಂಬ ಗೊಂದಲದಲ್ಲಿದ್ದರು. ಆಗ ಅರಸು ಆಡಿದ ಮಾತು, ‘ನಿಮಗೇಕೆ ಚಿಂತೆ, ನಾನು ಗೆಲ್ಲಿಸುತ್ತೇನೆ’ ಇನ್ನೂ ಈಗಲೂ ನನ್ನ ಕಿವಿಯಲ್ಲಿಯೇ ಇದೆ. ಅರಸರ ಆತ್ಮವಿಶ್ವಾಸವಿತ್ತಲ್ಲ, ಅದ್ಭುತ.

 ಇಂದಿರಾ ಗಾಂ ಒಪ್ಪಿದರು. ನಾವು ಎಲ್ಲ ತಯಾರಿ ಮಾಡಿಕೊಳ್ಳುತ್ತಿರುವಾಗಲೇ ಮತ್ತೊಂದು ಬಾಂಬ್. ಜನತಾ ಪಕ್ಷದ ರಾಮಕೃಷ್ಣ ಹೆಗಡೆಯವರು ಚಿಕ್ಕಮಗಳೂರಿನಿಂದ ಡಾ. ರಾಜ್‌ರನ್ನು ಅಭ್ಯರ್ಥಿಯನ್ನಾಗಿಸುತ್ತಿದ್ದಾರಂತೆ, ರಾಜ್ ಒಪ್ಪಿದ್ದಾರಂತೆ ಎನ್ನುವ ಸುದ್ದಿಯನ್ನು ಇಂದಿರಾ ಮೇಡಂ ಕಿವಿಗೆ ನಮ್ಮವರೇ ತುಂಬಿದ್ದರು. ಮತ್ತೆ ಗೊಂದಲ. ಮತ್ತೆ ಅರಸು ಓಡಿದರು. ‘‘ರಾಜ್ ಒಳ್ಳೆಯ ನಟ, ಆದರೆ ಅವರಿಗೆ ರಾಜಕೀಯ ಆಸಕ್ತಿ ಇಲ್ಲ, ಆ ರೀತಿಯ ಮಾತುಕತೆ ಏನೂ ನಡೆದಿಲ್ಲ, ಅದೆಲ್ಲ ಸುಳ್ಳು, ನೀವು ಸುಮ್ಮನೆ ಬನ್ನಿ’’ ಎಂದು ಕನ್ವಿನ್ಸ್ ಮಾಡಿ ಕರೆದುಕೊಂಡು ಬಂದು ಅಭ್ಯರ್ಥಿಯನ್ನಾಗಿಸಿದರು. 1978ರ ಐತಿಹಾಸಿಕ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಗೆ ಮುಖ್ಯ ಕಾರಣಕರ್ತರಾದರು. ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಜನತಾಪಕ್ಷದ ಅಭ್ಯರ್ಥಿಯಾದರು.

ಕೇಂದ್ರದ ಇಡೀ ಜನತಾ ಸರಕಾರವೇ ಚಿಕ್ಕಮಗಳೂರಿಗೆ ಬಂತು, ಜಾರ್ಜ್ ೆರ್ನಾಂಡಿಸ್‌ರಂತೂ ಆ ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು, ಅದರ ಸಂಪೂರ್ಣ ಉಸ್ತುವಾರಿ ಹೊತ್ತು ಚಿಕ್ಕಮಗಳೂರಿನಲ್ಲಿ ಬೀಡುಬಿಟ್ಟರು. ವಿಚಲಿತರಾಗದ ಅರಸು, ಮಂತ್ರಿಗಳು, ಶಾಸಕರಿಗೆ ಒಂದೊಂದು ತಾಲೂಕು ಉಸ್ತುವಾರಿ ವಹಿಸಿದರು. ಈ ನಡುವೆ ಮೂಡುಬಿದಿರೆಯಲ್ಲಿ ಹುಡುಗಿಯೊಬ್ಬಳ ಸಾವಾಯಿತು. ಕಲ್ಲು ತೂರಾಟ ದೊಡ್ಡ ದೊಂಬಿ ನಡೆಯಿತು. ಚಿಕ್ಕಮಗಳೂರು ಅಕ್ಷರಶಃ ಯುದ್ಧಭೂಮಿಯಾಯಿತು. ದೇಶ ವಿದೇಶದ ಸುದ್ದಿ ಮಾಧ್ಯಮಗಳು, ಖ್ಯಾತ ಪತ್ರಕರ್ತರು ಚಿಕ್ಕಮಗಳೂರಿಗೆ ಬಂದಿಳಿದರು. ಇಷ್ಟಾದರೂ ಅರಸರಿಗೆ ಇಂದಿರಾರನ್ನು ಗೆಲ್ಲಿಸುತ್ತೇನೆಂಬ ಅಚಲ ಆತ್ಮವಿಶ್ವಾಸವಿತ್ತು. ಅವರು ಅಂದುಕೊಂಡಂತೆಯೇ, 70 ಸಾವಿರ ಲೀಡ್‌ನಲ್ಲಿ ಗೆಲ್ಲಿಸಿದರು. ಇಂದಿರಾಗಾಂಯ ಗೆಲುವೇ ಅರಸರಿಗೆ ಮುಳುವಾಯಿತು. ಕಿಂಗ್‌ಮೇಕರ್ ಪಟ್ಟವೇ ಪೆಟ್ಟು ಕೊಟ್ಟಿತು. ವಿಜಯದ ಪತಾಕೆಯೇ ಪತನದ ಹಾದಿ ತೋರಿಸಿತು. ಅರಸರ ಅಹಂ ಅದಕ್ಕೆ ಸಹಕರಿಸಿತು.
  
ಸಂಜಯ್ ಗಾಂ ಗರಂ ಆಗಿದ್ದು...
ಅಳುಕುತ್ತಲೇ ಚುನಾವಣೆ ಸ್ಪರ್ಸಿ ಗೆದ್ದ ಇಂದಿರಾಗಾಂಯವರು, ಗೆದ್ದ ನಂತರ ಜೀವಕಳೆಯಿಂದ, ಹೊಸ ಖದರ್‌ನಿಂದ ಓಡಾಡತೊಡಗಿದರು. ಇಂದಿರಾ ಗಾಂಯನ್ನು ಗೆಲ್ಲಿಸಿದ ಅರಸು ಕಿಂಗ್ ಮೇಕರ್ ಪಟ್ಟ ಪಡೆದು ಬೀಗತೊಡಗಿದರು. ಇದು ಕಾಂಗ್ರೆಸ್ಸಿನೊಳಗೇ ಇದ್ದ ಅರಸು ವಿರೋಗಳ ಅಸಹನೆಗೆ ತುಪ್ಪ ಸುರಿಯಿತು. ದೂರುಗಳನ್ನು ಹೊತ್ತು ದಿಲ್ಲಿಗೆ ಹೋಗಿಬರುವವರ ಸಂಖ್ಯೆ ಹೆಚ್ಚಾಯಿತು. ಹಾಗೆಯೇ ಅದಾಗತಾನೆ ರಾಜಕಾರಣಕ್ಕೆ ಇಳಿಯುತ್ತಿದ್ದ ಸಂಜಯ್‌ಗಾಂಯ ಸುತ್ತ ಸುಳಿದಾಡುವವರು, ಓಲೈಸುವವರು ಹೆಚ್ಚಾದರು. ಅರಸು ವಿರುದ್ಧದ ದೂರನ್ನು ಇಂದಿರಾ ಕೇಳದಿದ್ದಾಗ, ಸಂಜಯ್‌ಗಾಂಯನ್ನು ಹಿಡಿದುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳತೊಡಗಿದರು.

ಅಂದಿನ ಮಾಧ್ಯಮಗಳಲ್ಲಿ ಅರಸು ಕಂಡರೆ ಸಂಜಯ್‌ಗೆ ಆಗುವುದಿಲ್ಲ ಎಂಬ ಸುದ್ದಿಗಳದೇ ಕಾರುಬಾರು. ಆದರೆ ಅವರಿಬ್ಬರ ನಡುವೆ ಅಂಥಾದ್ದೇನು ನಡೆದಿರಲಿಲ್ಲ. ಇಬ್ಬರೂ ನನಗೆ ತೀರಾ ಆತ್ಮೀಯರಾದ ಕಾರಣ, ಇದನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಕಷ್ಟವಾಗುತ್ತದೆಂದು ಭಾವಿಸಿ, ಇಬ್ಬರೊಂದಿಗೂ ಮಾತಾಡಿ, ಭೇಟಿಗೆ ಅರೇಂಜ್ ಮಾಡಿದೆ. ಇಬ್ಬರೂ ಒಪ್ಪಿದರು. ಒಂದು ದೊಡ್ಡ ಸ್ಟಾರ್ ಹೊಟೇಲ್‌ಗೆ ಬಂದರು. ಸ್ಪಷ್ಟವಾಗಿ, ನೇರವಾಗಿ ಕೇಳಿದರು ಅರಸು, ‘‘ಏಕೆ ಇಂದಿರಾರಿಗೆ ನನ್ನ ಪ್ರೋಗ್ರಾಂಗಳು ಹಿಡಿಸಲಿಲ್ಲವಾ, ಗೆಲ್ಲಲಿಕ್ಕಾಗಲ್ಲ ಎಂಬ ಸಂದೇಹ ಬಂದಿತ್ತಾ ನಿಮಗೆ?’’
ಸಂಜಯ್‌ಗಾಂ, ‘‘ಇಲ್ಲ, ಆದರೆ ನಿಮಗೆ ಇಂದಿರಾ ಗಾಂಯವರನ್ನೂ ಹಿಂದಿಕ್ಕಿ ಪ್ರಧಾನಮಂತ್ರಿ ಆಗುವ ಆಸೆ ಇದೆ ಅಂತ ಗುಮಾನಿ ಇದೆ’’

ಅರಸು, ‘‘ಅಯ್ಯೋ ರಾಮ, ಅಂತ ಆಸೆ ಏನೂ ಇಲ್ಲ. ಅಷ್ಟಕ್ಕೂ ನನಗೆ ಜನ ಓಟು ಕೊಟ್ಟಿರೋದು ಇಲ್ಲಿ ಕೆಲಸ ಮಾಡಲಿ ಅಂತ, ಅದನ್ನು ಬಿಟ್ಟು ದಿಲ್ಲಿಗೆ ಹೇಗೆ ಬರಲಿ. ನನಗೆ ಆಸೆನೂ ಇಲ್ಲ, ಬರೋದು ಇಲ್ಲ’’ ಎಂದರು. ಅರಸರ ಮಾತು ಖಡಕ್ಕಾಗಿತ್ತು, ನೇರವಾಗಿತ್ತು, ಸತ್ಯವಾಗಿತ್ತು. ಸಂಜಯ್ ಗಾಂಗೆ ಅರ್ಥವಾಯಿತು. ವಿಶ್ವಾಸ ಹುಟ್ಟಿತು. ಯೂತ್ ಕಾಂಗ್ರೆಸ್ ಆರ್ಗನೈಸ್ ಮಾಡುವ ನೆಪದಲ್ಲಿ ನಾನು ಸಂಜಯ್ ಮತ್ತು ಅರಸು ಅವರನ್ನು ಒಂದೆಡೆ ಸೇರಿಸಲು ಸಮಾರಂಭಗಳಿಗೆ ಆಹ್ವಾನಿಸಿದೆ. ಇಬ್ಬರೂ ಬಂದರು, ವೇದಿಕೆ ಹಂಚಿಕೊಂಡರು. ಆದರೂ ಬಂಡಾಯ ಎನ್ನುವುದು ಅಲ್ಲೇ ಬೀಜರೂಪದಲ್ಲಿತ್ತು. ಅದು ಸಂಜಯ್ ಗಾಂ ಹೊಲದಲ್ಲಿ ಬಿದ್ದು ಬಲಿಯುತ್ತಿತ್ತು.

ಇಂದಿರಾ-ಅರಸು ನಡುವಿನ ಮೊದಲ ಬಿರುಕು
ದೇವರಾಜ ಅರಸು ಎರಡನೆ ಬಾರಿಗೆ ಮುಖ್ಯಮಂತ್ರಿಯಾದ ನಂತರ ರಾಷ್ಟ್ರೀಯ ಮಟ್ಟದ ಹಿರಿಯ ಅನುಭವಿ ರಾಜಕಾರಣಿಯಾಗಿ ರೂಪುಗೊಂಡಿದ್ದರು. ಕಾಂಗ್ರೆಸ್ ಬಿಟ್ಟುಹೋಗಿದ್ದ ಎಸ್.ಎಂ.ಕೃಷ್ಣ, ಕೆ.ಎಚ್.ಪಾಟೀಲ್, ಹುಚ್ಚುಮಾಸ್ತಿಗೌಡರು ಚುನಾವಣೆಯಲ್ಲಿ ಸೋಲುಂಡು ಅವರಾಗಿಯೇ ಮತ್ತೆ ಕಾಂಗ್ರೆಸ್‌ಗೆ ಬಂದು ಸೇರಿದ್ದರು. ಸೋಷಲಿಸ್ಟ್ ಪಾರ್ಟಿಯಲ್ಲಿದ್ದ ಹಿಂದುಳಿದ ನಾಯಕ ಎಸ್.ಬಂಗಾರಪ್ಪರನ್ನು ಅರಸು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಮಂತ್ರಿ ಮಾಡಿದ್ದರು. ಇಂದಿರಾ ಗಾಂಯನ್ನು ಉಪಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಅರಸು ಎಂದರೆ ಮುತ್ಸದ್ದಿ, ರಾಷ್ಟ್ರೀಯ ನಾಯಕ ಎಂಬುದನ್ನು ಸಾಬೀತುಪಡಿಸಿದ್ದರು. ಹೀಗೆ... ಉದ್ದಕ್ಕೂ ಮೇಲುಗೈ ಸಾಸುತ್ತಲೇ ಸಾಗಿದ್ದ ಅರಸು ಅವರಿಗೆ ಮೊತ್ತ ಮೊದಲ ಬಾರಿಗೆ ಹೈಕಮಾಂಡ್ ಶಾಕ್ ಕೊಡಲು ಮುಂದಾಗಿದ್ದು ಪಿಸಿಸಿ ಪ್ರೆಸಿಡೆಂಟ್ ನೇಮಕ ಮಾಡುವ ಮೂಲಕ. ತಮ್ಮ ತೀರ್ಮಾನಗಳಿಗೆ ತಡೆಯೊಡ್ಡುವವರೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದಾಗ; ಚುನಾಯಿತ ಶಾಸಕರೆಲ್ಲ ಅರಸು ಹೆಸರಿಸಿದ ವ್ಯಕ್ತಿಯನ್ನೇ ಬೆಂಬಲಿಸುವುದಾಗಿ ಭೇಷರತ್ ಬೆಂಬಲ ನೀಡಿದ್ದಾಗ; ಮುಖ್ಯಮಂತ್ರಿ ಮತ್ತು ಶಾಸಕಾಂಗ ಪಕ್ಷದ ನಾಯಕರಾದ ದೇವರಾಜ ಅರಸು ಅವರನ್ನು ಕೇಳದೆ ಪಿಸಿಸಿ ಅಧ್ಯಕ್ಷರನ್ನಾಗಿ ಎಸ್.ಬಂಗಾರಪ್ಪ, ಉಪಾಧ್ಯಕ್ಷರನ್ನಾಗಿ ವೀರಪ್ಪ ಮೊಯ್ಲಿಯವರನ್ನು ಹೈಕಮಾಂಡ್ ನೇಮಿಸಿತು.

‘‘ಕಾಂಗ್ರೆಸ್‌ಗೆ ನಾನು ಕರೆತಂದು ಗೆಲ್ಲಿಸಿದ, ಮಂತ್ರಿ ಮಾಡಿದ ಬಂಗಾರಪ್ಪರನ್ನು ನನ್ನ ಒಂದು ಮಾತನ್ನೂ ಕೇಳದೆ, ನನ್ನ ಮಂತ್ರಿಮಂಡಲದಿಂದ ಬಿಡಿಸಿ ಅಧ್ಯಕ್ಷನನ್ನಾಗಿ ನೇಮಿಸಿದರಲ್ಲ’’ ಎನ್ನುವುದು ಅರಸು ಅವರ ಬೇಸರಕ್ಕೆ ಕಾರಣವಾಯಿತು. ಪ್ರತಿಷ್ಠೆಗೆ ಪೆಟ್ಟು ಕೊಟ್ಟಿತು. ಇದಕ್ಕಿಂತಲೂ ಇನ್ನೊಂದು ಶಾಕ್ ಎಂದರೆ, ಹಿಂದಿನ ರಾತ್ರಿಯಷ್ಟೇ ನೀವು ಹೇಳಿದವರ ಪರ ನಿಲ್ಲುವುದಾಗಿ ಘೋಷಿಸಿದ್ದ ಶಾಸಕರು ಬೆಳಗ್ಗೆ ಎದ್ದು ಬಂಗಾರಪ್ಪರ ಪಾಳೆಯ ಸೇರಿ ಜೈಕಾರ ಹಾಕುತ್ತಿದ್ದುದು. ಇಲ್ಲಿ ಇನ್ನೊಂದು ಮುಖ್ಯವಾದ ಸಂಗತಿ ಎಂದರೆ, ಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಶಾಸಕರೆಲ್ಲ ಅರಸು ಬೆನ್ನಿಗೆ ನಿಂತರೆ, ನಾನು ಮತ್ತು ಗುಂಡೂರಾವ್ ಮಾತ್ರ, ಸೋತ ಇಂದಿರಾ ಗಾಂಯವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧ, ಅವರ ಪರ ನಿಲ್ಲುವುದು ನೈತಿಕವಾಗಿ ಸರಿಯಾದ ಕ್ರಮ ಎಂದು ಅರಸು ಅವರಿಗೇ ಹೇಳಿ ಬಂದಿದ್ದೆವು. ಇಲ್ಲಿಂದ ಮುಂದಕ್ಕೆ ಅರಸು ದಾರಿಯೇ ಬೇರೆಯಾಯಿತು. 10 ವರ್ಷಗಳ ಕಾಲ ಕಟ್ಟಿ ಬೆಳೆಸಿದ ಕಾಂಗ್ರೆಸ್ ಪಕ್ಷವನ್ನು ಅವರೇ ಬಿಡುವಂತಹ ಸಂದರ್ಭ ಸೃಷ್ಟಿಯಾಯಿತು. ಅದಕ್ಕೆ ಪೂರಕವಾಗಿ ರಾಷ್ಟ್ರೀಯ ಮಟ್ಟದಲ್ಲಿ ಶರದ್ ಪವಾರ್‌ರಂತಹ ನಾಯಕರು ಅರಸು ಜೊತೆ ಕೈಜೋಡಿಸಿದರು.

ಹೊಂದಾಣಿಕೆ ಬೇಡವೇ ಬೇಡ
 ಇಂದಿರಾ ಗಾಂಯವರೊಂದಿಗೆ ಭಿನ್ನಾಭಿಪ್ರಾಯ ಗಳಿದ್ದರೂ ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿ ಯಾಗಿಯೇ ಮುಂದುವರಿದಿದ್ದರು. ಅವರ ಕುರ್ಚಿಗೇನು ಕಂಟಕ ಬಂದಿರಲಿಲ್ಲ. ಹೈಕಮಾಂಡ್ ಕೂಡ ಅವರನ್ನು ಕಿತ್ತುಹಾಕಬೇಕೆಂದು ಯೋಚಿಸಲೂ ಇಲ್ಲ. ಹೀಗಿರುವಾಗಲೇ 1980ರ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಅರಸು ಅವರಿಗೆ ಅದು ಯಾರು ಬುದ್ಧಿ ಹೇಳಿದರೋ ಅಥವಾ ಅವರ ಬುದ್ಧಿಯೇ ಕೆಟ್ಟಿತ್ತೋ, ಅರಸು ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಿದರು. ಲೋಕಸಭಾ ಚುನಾವಣೆಗೆ ಸ್ಪರ್ಸಲು ಒಳ್ಳೊಳ್ಳೆಯ ನಾಯಕರನ್ನೇ ಆಯ್ದು ಅಭ್ಯರ್ಥಿಗಳನ್ನಾಗಿಸಿದರು. ಈ ಸಂದರ್ಭದಲ್ಲಿ ಶಾಸಕರು ಮತ್ತು ಮಂತ್ರಿಗಳು ಅರಸು ಪರವಿದ್ದರು. ಕೆಲ ಬೆರಳೆಣಿಕೆಯಷ್ಟು, ಅಂದರೆ ಒಂಬತ್ತು ಎಂಎಲ್‌ಎಗಳು ಮತ್ತು ಏಳು ಎಂಎಲ್ಸಿಗಳು ಮಾತ್ರ ಇಂದಿರಾ ಗಾಂಯವರೊಂದಿಗೆ ಗುರುತಿಸಿಕೊಂಡರು. ಸರಕಾರವಿತ್ತು, ಆಡಳಿತ ಯಂತ್ರವಿತ್ತು, ಅದಕ್ಕಿಂತ ಹೆಚ್ಚಾಗಿ ಅರಸು ಚರಿಷ್ಮಾ ಇತ್ತು. ಇಷ್ಟೆಲ್ಲ ಇದ್ದರೂ ನನ್ನ ಗ್ರಹಿಕೆಯ ಪ್ರಕಾರ ಇಂದಿರಾ ಗಾಂಯವರ ಪರ ಗಾಳಿ ಮತ್ತು ಗೆಲುವು ಕಾಣತೊಡಗಿತು. ಬೀದರ್‌ನಿಂದ ಕೋಲಾರದವರೆಗೆ ಇಂದಿರಾ ಗಾಂ ಪ್ರವಾಸ ಮಾಡಿದರು. ಸುಮಾರು 180 ಜಾಗಗಳಲ್ಲಿ ಭಾಷಣ ಮಾಡಿದರು. ಅವರೊಂದಿಗೆ ಸುತ್ತುವಾಗ ನಾನು ಜನರನ್ನು ಕೇಳುತ್ತಿದ್ದೆ. ಅದಕ್ಕವರು ‘‘ಇದು ಅಮ್ಮನ ಎಲೆಕ್ಷನ್ನು, ಹಾಗಾಗಿ ಈಗ ಅಮ್ಮನಿಗೆ, ಆಮೇಲೆ ಅರಸುಗೆ’’ ಅನ್ನುವುದು ಜನರ ಅಭಿಪ್ರಾಯವಾಗಿತ್ತು.

ಎಷ್ಟೇ ಆಗಲಿ ಅರಸು ನನ್ನ ನಾಯಕ, ಅವರಿಂದ ದೂರವಾಗಿರಬಹುದು, ದ್ವೇಷಿಯಲ್ಲ ಎಂದು ಅಹಂ ಬದಿಗಿಟ್ಟು ಅರಸು ಅವರನ್ನು ಕಾಣಲು ಹೋದೆ. ನನ್ನ ಜೊತೆ ರೋಷನ್ ಬೇಗ್ ಕೂಡ ಇದ್ದರು. ಎಂದಿನ ಆತ್ಮೀಯತೆಯಿಂದಲೇ ಮಾತನಾಡಿದ ಅರಸು ಅವರಿಗೆ, ‘‘ಸರ್, ಇಂದಿರಾ ಗಾಂಯವರು ಗೆಲ್ಲೋ ಥರ ಕಾಣುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಹೊಂದಾಣಿಕೆ ಮಾಡಿಕೊಳ್ಳಿ... ಪ್ಲೀಸ್’’ ಎಂದು ವಿನಂತಿಸಿಕೊಂಡೆ. ಅದಕ್ಕವರು, ‘‘ಯಾಕಪ್ಪ ಕಷ್ಟ ಪಡ್ತೀಯಾ, ಗೆದ್ರೂ ಸೋತ್ರೂ ನನಗೇನು ಬೇಜಾರಿಲ್ಲ. ಎಲ್ಲಾ ಸಮಯದಲ್ಲೂ ಆಕೆಯ ಪರವಾಗಿ ನಿಂತೆ. ಆದ್ರೂ ಆಕೆ ನನ್ನ ನಂಬಲಿಲ್ಲ ಅಂದ್ರೆ ಏನ್ಮಾಡ್ಲಿ. ಜನಾಭಿಪ್ರಾಯಕ್ಕೆ ತಲೆಬಾಗುತ್ತೇನೆಯೇ ಹೊರತು ಆಕೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲ್ಲಪ್ಪ...’’ ಎಂದರು. ಅವರ ಮಾತು ಸೋಲನ್ನು ಗ್ರಹಿಸಿದಂತೆ ಕಾಣುತ್ತಿತ್ತು. ಸ್ವಾಭಿಮಾನವೇ ಮುಖ್ಯವಾಗಿತ್ತು. 28ಕ್ಕೆ 28 ಸ್ಥಾನಗಳಲ್ಲೂ ಅರಸು ಅಭ್ಯರ್ಥಿಗಳು ಸೋತಿದ್ದರು. ಸೋತಿದ್ದು ಲೋಕಸಭಾ ಚುನಾವಣೆಯನ್ನು. ಆದರೆ ಅರಸು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಭಾರತದ ರಾಜಕಾರಣದ ಇತಿಹಾಸದಲ್ಲಿ, ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ ಸೋತಿದ್ದಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಮೊದಲ ವ್ಯಕ್ತಿ ಎಂದರೆ ಅದು ಅರಸು.

ಅಸೆಂಬ್ಲಿ ಡಿಸಾಲ್ವ್ ಮಾಡಬಹುದಿತ್ತು, ಆದರೆ ಮಾಡುವುದಿಲ್ಲ. ಶಾಸಕರ ಸಭೆ ಕರೆದು, ಯಾರಿಗೆ ನನ್ನ ಮೇಲೆ ನಂಬಿಕೆ ಇದೆಯೋ ಅವರು ಉಳಿಯಬಹುದು, ಮಿಕ್ಕವರು ಹೋಗಬಹುದು ಎಂದರು. ಇದು ಅರಸರ ದೊಡ್ಡ ಗುಣ. ಬೆಳೆಸಿದವರೆ ಬೆನ್ನಿಗಿರಿದರು
ರಾಜಕಾರಣವೆಂದರೆ ಅವಕಾಶವಾದಿತನ ಎಂಬುದನ್ನು ಸಾಕ್ಷಾತ್ಕರಿಸಿದ ಸಂದರ್ಭವದು. ದೇವರಾಜ ಅರಸು ಸಣ್ಣ ಪುಟ್ಟ ಸಮುದಾಯ ಗಳನ್ನು, ಬಡವರನ್ನು, ರಾಜಕಾರಣದ ಗಂಧಗಾಳಿಯೇ ಗೊತ್ತಿಲ್ಲದವರನ್ನು ಕರೆತಂದು ವಿಧಾನಸೌಧದ ಪಡಸಾಲೆಗೆ ಬಿಟ್ಟಿದ್ದರು. ಆದರೆ ಅರಸು ರಾಜೀನಾಮೆ ಕೊಡುತ್ತಿದ್ದಂತೆಯೇ, ಅವರಿಂದ ರಾಜಕಾರಣಕ್ಕೆ ಬಂದವರು, ಬೆಳೆದವರು, ಬದುಕಿದವರು ಬೆನ್ನು ಹಾಕಿ ನಿಂತರು. ವಿರೋ ಪಾಳೆಯದಲ್ಲಿದ್ದ ಗುಂಡೂರಾವ್‌ರನ್ನು ಬೆಂಬಲಿಸಿದರು. ಇದು ಅರಸು ಅವರಿಗೆ ಕರ್ನಾಟಕದ ರಾಜಕಾರಣಿಗಳು ಮಾಡಿದ ಮಹಾದ್ರೋಹ ಅಂತ ನಾನು ಭಾವಿಸುತ್ತೇನೆ.

ಈ ಸಂದರ್ಭದಲ್ಲಿ ಅರಸು, ನನ್ನನ್ನು ಮತ್ತು ಗುಂಡೂರಾವ್‌ರನ್ನು ಕುರಿತು, ‘‘ನೀವಿಬ್ಬರೂ ಬಂದು ಹೇಳಿದಿರಿ, ನಿಮ್ಮ ನಡೆಯನ್ನು ಮೆಚ್ಚುತ್ತೇನೆ. ಆದರೆ ನೀವೇ ನಮ್ಮ ನಾಯಕರು, ನೀವಿಲ್ಲದಿದ್ದರೆ ಬಾವಿಗೆ ಬೀಳುತ್ತೇನೆ, ಪಾಲಿಡಾಲ್ ಕುಡಿಯುತ್ತೇನೆ ಎಂದವರೆಲ್ಲ ನಾನು 5 ಗಂಟೆಗೆ ರಾಜೀನಾಮೆ ಕೊಡುತ್ತಿದ್ದಂತೆ, 8 ಗಂಟೆಗೆ ನನ್ನನ್ನು ಬಿಟ್ಟು ಹೋದ್ರಲ್ಲಪ್ಪ. ಪಾಲಿಡಾಲ್ ಕುಡಿತೀನಿ ಎಂದವರೆಲ್ಲ ಪಾಲಿಡಾಲ್ ಕೊಟ್ಟುಬಿಟ್ಟರಲ್ಲಪ್ಪ’’ ಎಂದು ನೊಂದುಕೊಂಡರು.
ರಾಜಕಾರಣದಲ್ಲಿ ಇದೆಲ್ಲ ಸರ್ವೇ ಸಾಮಾನ್ಯ ಎನ್ನಬಹುದು, ಪಕ್ಷನಿಷ್ಠೆ ತೋರದಿದ್ದರೆ ಕಾಂಗ್ರೆಸ್‌ನಲ್ಲಿ ಯಾವ ನಾಯಕನೂ ಉಳಿಯಲು ಸಾಧ್ಯವಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಲೂ ಬಹುದು. ಆದರೆ, ಅರಸು ಎಲ್ಲರಂತಲ್ಲ. ಆ ವ್ಯಕ್ತಿತ್ವಕ್ಕೆ ಸರಿಸಾಟಿಯೇ ಇಲ್ಲ. ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ಮುಖ್ಯಮಂತ್ರಿಯಾಗಿದ್ದವರು ಇದ್ದಕ್ಕಿದ್ದಂತೆ ರಾಜೀನಾಮೆ ಕೊಟ್ಟು, ವಿರೋಧ ಪಕ್ಷದ ನಾಯಕನ ಸೀಟಿನಲ್ಲಿ ಕೂರುತ್ತಾರೆ. ಸಾಮಾನ್ಯ ಶಾಸಕನಂತೆ ವರ್ತಿಸುತ್ತಾರೆ. ಇದು ಸಾಮಾನ್ಯರಿಗೂ ಸಾಧ್ಯವಾಗದ ನಡೆ.

ಅರಸರ ಅಭ್ಯಾಸ ಮತ್ತು ಹವ್ಯಾಸ

ದೇವರಾಜ ಅರಸರಲ್ಲಿ ಮಹಾರಾಜನ ವರ್ಚಸ್ಸು, ಬಡತನಕ್ಕೆ ಮರುಗುವ ಮನಸ್ಸು ಎರಡೂ ಇತ್ತು. ಸಂವಿಧಾನ, ಪ್ರಜಾಪ್ರಭುತ್ವ, ರಾಜಕಾರಣ, ಕಾನೂನುಗಳ ಪಾಂಡಿತ್ಯವಿತ್ತು. ಉತ್ತಮ ಅಭಿರುಚಿಯ ಸಾಹಿತ್ಯ-ಸಂಗೀತದ ಗೀಳಿತ್ತು. ಅವರ ಮನೆಯಲ್ಲಿ ಅತ್ಯುತ್ತಮ ಎನ್ನಬಹುದಾದ ಬಹಳ ದೊಡ್ಡ ಲೈಬ್ರರಿ ಇತ್ತು. ಆಗಾಗ ಕನ್ನಡದ ಶ್ರೇಷ್ಠ ಸಾಹಿತಿ-ಕಲಾವಿದರು ಮನೆಗೆ ಬಂದು ಗಂಟೆಗಟ್ಟಲೆ ಕೂತು ಪಟ್ಟಾಂಗ ಹೊಡೆಯುತ್ತಿದ್ದುದೂ ಇತ್ತು. ಜೊತೆಗೆ ನಮ್ಮಂತಹ ಭೋಪರಾಕ್ ಕಮಿಟಿಯವರು ಕಡ್ಡಾಯವಾಗಿ ಪಕ್ಕದಲ್ಲಿರಲೇಬೇಕಿತ್ತು. ರಾಜಕಾರಣದಲ್ಲಿ ನೂರೆಂಟು ಸಮಸ್ಯೆಗಳಿದ್ದರೆ; ವೈಯಕ್ತಿಕ ಬದುಕಿನಲ್ಲಿ ಸಂಕಟಗಳ ಸರಮಾಲೆಯೇ ಇತ್ತು. ಅರಸರಿಗೆ ತುಂಬಾ ಒಳ್ಳೆಯ ಡ್ರೆಸ್ ಸೆನ್ಸ್ ಇತ್ತು. ಜುಬ್ಬಾ-ಕಚ್ಚೆ ಪಂಚೆ, ಪಂಚೆಗೆ ಬೆಲ್ಟ್, ಶೂಸ್, ಹ್ಾ ಶೂಸ್ ಅದಕ್ಕೆ ಮಿರಿ ಮಿರಿ ಮಿಂಚುವ ಪಾಲಿಶ್. ತೀರಾ ವಿಭಿನ್ನವಾದ ಹ್ಯಾಟು, ಕ್ಲೋಸ್ ಕೋಟು-ಪ್ಯಾಂಟು. ಈ ಕೋಟ್ ಇತ್ತಲ್ಲ, ಇದು ಅರಸು ಅವರದೇ ಆದ ಸ್ಪೆಷಲ್ ಕೋಟು. ಅದನ್ನು ಅವರೊಬ್ಬರೆ ಹಾಕುತ್ತಿದ್ದುದು.

ಅದನ್ನು ಚರ್ಚ್ ಸ್ಟ್ರೀಟ್‌ನ ಎಸ್‌ಸ್ವೆರ್ ಎಂಬ ಶಾಪ್, ಅದರ ಮಾಲಕ ಮುಸ್ಲಿಂ, ಇವರಿಗಾಗಿಯೇ ವಿಶೇಷವಾಗಿ ಹೊಲಿದು ಕೊಡುತ್ತಿದ್ದರು. ಅದಾದ ಮೇಲೆ ಕಮರ್ಷಿಯಲ್ ಸ್ಟ್ರೀಟ್‌ನ ಒಂದು ದರ್ಜಿ ಕುಟುಂಬವೂ ಆ ಕೋಟ್ ಹೊಲಿದು ಕೊಟ್ಟಿದ್ದುಂಟು. ಈಗ ಅವರಿಬ್ಬರೂ ಇಲ್ಲ, ಅಂಗಡಿಯೂ ಇಲ್ಲ. ಅರಸರು ಮನೆಯಲ್ಲಿದ್ದಾಗ ಪಟಾಪಟಿ ಪೈಜಾಮ, ಅರ್ಧತೋಳಿನ ಶರ್ಟ್ ಧರಿಸುತ್ತಿದ್ದರು. ಅರಸರ ಬಟ್ಟೆಗಳನ್ನು ಜೋಪಾನವಾಗಿ ಒಗೆದು, ಇಸಿ ಮಾಡಿ ಸರಿಯಾದ ಸಮಯಕ್ಕೆ ಒದಗಿಸುತ್ತಿದ್ದವನು ಅವರ ಮನೆಯ ಆಳು ಸಿದ್ದ ಅಂತ. ಅರಸು ಆತನನ್ನು ಕರೆಯುವಾಗ, ‘ಸಿದ್ದಯ್ಯ, ಬಟ್ಟೆ ರೆಡಿ ಇದೆಯಾ’ ಎನ್ನುತ್ತಿದ್ದರು. ಗಾಲ್ ಕೋರ್ಟ್‌ನಲ್ಲಿ, ಪ್ಯಾಲೆಸ್ ಗ್ರೌಂಡ್‌ನಲ್ಲಿ ಪ್ರತಿದಿನ ವಾಕಿಂಗ್. ಕುಸ್ತಿ ಪಂದ್ಯ, ಪೈಲ್ವಾನರು, ಉಸ್ತಾದ್‌ಗಳು, ಗರಡಿಮನೆ ಅಂದರೆ ಇಷ್ಟ. ಒಳ್ಳೆಯ ಸ್ವಿಮ್ಮರ್. ಆಗಾಗ ಟೆನಿಸ್ ಆಡುತ್ತಿದ್ದರು. ಪ್ರಿಯವಾದ ಫಿಯಟ್ ಕಾರ್‌ನಲ್ಲಿ ಸುತ್ತಾಡುತ್ತಿದ್ದರು. ಊಟ-ತಿಂಡಿಯನ್ನು ಮನಪೂರ್ವಕವಾಗಿ ಸವಿಯುತ್ತಿದ್ದರು. ಪೈಪ್ ಸೇದುತ್ತಿದ್ದರು. ಸ್ನೇಹಿತರು, ಸಮಾನ ಮನಸ್ಕರು, ಉನ್ನತ ಅಕಾರಿಗಳ ಪಾರ್ಟಿಗಳಲ್ಲಿ ಹಿತಮಿತವಾಗಿ ವ್ಹಿಸ್ಕಿ ಕುಡಿಯುತ್ತಿದ್ದರು. ಹಳ್ಳಿಯನ್ನು, ಹಳ್ಳಿಯ ಜನರನ್ನು, ಆಚಾರ-ವಿಚಾರವನ್ನು ಅತಿಯಾಗಿ ಇಷ್ಟಪಡುತ್ತಿದ್ದರು.
ವಿಜ್ಞಾನ, ಆಧುನಿಕತೆಯ ಅರಿವಿದ್ದ ಅರಸು, ಮೊದಮೊದಲು ದೇವರು-ದೇವಸ್ಥಾನ, ಪೂಜೆ-ಪುನಸ್ಕಾರದಿಂದ ದೂರವಿದ್ದರು. ಕೊನೆ ಕೊನೆಗೆ ಅತಿ ಎನ್ನಿಸುವಷ್ಟು ಪೂಜೆ ಮಾಡುತ್ತಿದ್ದರು. ಯಾರಾದರೂ ಬಂದು ಪ್ರಸಾದ ಎಂದು ಏನನ್ನಾದರೂ ಕೊಟ್ಟರೆ, ಕಣ್ಣುಮುಚ್ಚಿ ತಿನ್ನುತ್ತಿದ್ದರು. ಮಂತ್ರ-ತಂತ್ರದ ತಾಯತ ಕಟ್ಟಿಸಿಕೊಳ್ಳುತ್ತಿದ್ದರು. ಜ್ಯೋತಿಷಿಗಳನ್ನು ಹುಡುಕಿಕೊಂಡು ಹೋಗಿ ಶಾಸ ಕೇಳುತ್ತಿದ್ದರು. ಒಟ್ಟಿನಲ್ಲಿ ಒಬ್ಬ ಪರಿಪೂರ್ಣ ಮನುಷ್ಯನಿಗಿರಬೇಕಾದ ಎಲ್ಲ ಗುಣಸ್ವಭಾವಗಳೂ ಅರಸರಲ್ಲಿದ್ದವು. ಅವರಿಗೆ ಸಾಮಾನ್ಯರ ಸುಖ, ಶ್ರೀಮಂತರ ಸಮಸ್ಯೆ ಎರಡೂ ಗೊತ್ತಿದ್ದರಿಂದಲೇ ಅವರು ದೇವ-ರಾಜ-ಅರಸು.

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News