ಚಾಮ್ಸ್‌ಕಿ ಭವಿಷ್ಯವಾಣಿಯೂ ಸರ್ವಾಧಿಕಾರಿಗಳ ಉದಯವೂ
ಕೆಲವು ದಿನಗಳ ಹಿಂದೆೆ ಒಂದು ಕುತೂಹಲಕಾರಿ ಘಟನೆ ನಡೆಯಿತು. ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೆಂಬಲಾರ್ಥವಾಗಿ ದಿಲ್ಲಿಯಲ್ಲಿ ಒಂದು ಪ್ರಾರ್ಥನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದನ್ನು ಆಯೋಜಿಸಿದವರು ಹಿಂದೂ ಸೇನಾ ಎಂಬ ಸಂಘ ಪರಿವಾರದ ಸಂಘಟನೆ! ಆ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಸೇನಾದ ಅಧ್ಯಕ್ಷರು, ‘‘ಡೊನಾಲ್ಡ್ ಟ್ರಂಪ್ ಗೆದ್ದರೆ ಅದು ಅಮೆರಿಕ, ಭಾರತ ಹಾಗೂ ಸಕಲ ಮಾನವಕುಲಕ್ಕೇ ಒಳ್ಳೆಯದು’’ ಎಂದು ಸಾರಿದ್ದಾರೆ. ಸನ್ಮಾನ್ಯರ ಪ್ರಕಾರ ಟ್ರಂಪ್ ಅಧ್ಯಕ್ಷರಾದರೆ ಆತ ಇಸ್ಲಾಮಿಕ್ ಉಗ್ರವಾದವನ್ನು ನಾಶಪಡಿಸಲಿರುವುದರಿಂದ ಆತನ ಗೆಲುವಿಗಾಗಿ ಸಾಧ್ಯವಿರುವಷ್ಟೂ ಪ್ರಯತ್ನಗಳನ್ನು ಮಾಡಲಾಗುವುದಂತೆ. ಇದನ್ನು ಕೇಳಿ ಆಶ್ಚರ್ಯವೂ ಆಗಲಿಲ್ಲ, ಆಘಾತವೂ ಆಗಲಿಲ್ಲ. ಏಕೆಂದರೆ ಒಂದು ಬಗೆಯ ಮೂಲಭೂತವಾದಿಗಳಿಗೆ ಇನ್ನೊಂದು ಬಗೆಯ ಮೂಲಭೂತವಾದಿಗಳನ್ನು ಕಂಡರೆ ಇಷ್ಟವಾಗುವುದು, ಪರಸ್ಪರರನ್ನು ಸಂಪರ್ಕಿಸುವುದು, ಸಂಬಂಧ ಬೆಳೆಸುವುದು ಇತ್ಯಾದಿಗಳೆಲ್ಲ ಅಸಹಜ ಪ್ರಕ್ರಿಯೆಗಳೇನೂ ಅಲ್ಲ. ಉದಾಹರಣೆಗೆ ಸಂಘ ಪರಿವಾರದ ಮಂದಿ ಈ ಹಿಂದೆಯೂ ನಾರ್ವೆ, ಇಸ್ರೇಲ್‌ನ ಮೂಲಭೂತವಾದಿಗಳ ಜೊತೆ ನಿಕಟ ಸಂಪರ್ಕ ಸಾಧಿಸಿದವರೇ. ಈಗ ಇವರಿಗೆ ಟ್ರಂಪ್ ಆಪ್ಯಾಯಮಾನವಾಗಿ ಕಾಣಿಸುತ್ತಿರುವುದೇಕೆಂದರೆ ಆತ ಹೋದಲ್ಲಿ ಬಂದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಕಿಡಿಕಾರುತ್ತಿದ್ದಾನೆ. ಆತನ ಬೆಂಕಿಯುಗುಳುವ ಮಾತುಗಳು ಇವರ ಕಿವಿಗೆ ಇಂಪಾದ ಸಂಗೀತದಂತೆ ಕೇಳಿಸುತ್ತಿದೆ. ಅಮೆರಿಕದ ಪ್ರಸಕ್ತ ರಾಜಕಾರಣದಲ್ಲಿ ಡೊನಾಲ್ಡ್ ಟ್ರಂಪ್‌ನಂತಹ ವ್ಯಕ್ತಿಗಳು ಮುನ್ನೆಲೆಗೆ ಬರಲಿದ್ದಾರೆಂದು ಖ್ಯಾತ ಚಿಂತಕರಾದ ನೋಮ್ ಚಾಮ್ಸ್‌ಕಿ ಆರು ವರ್ಷಗಳ ಹಿಂದೆಯೆ ಭವಿಷ್ಯ ನುಡಿದಿದ್ದರು. ವಸ್ತುಸ್ಥಿತಿಯನ್ನು ಆಳವಾಗಿ ಅಭ್ಯಸಿಸಿದ ಬಳಿಕ 2010ರಲ್ಲಿ ಸಂದರ್ಶನವೊಂದರ ವೇಳೆ ಆಡಿದ ಮಾತುಗಳವು. ಅದನ್ನು ಓದುತ್ತಾ ಓದುತ್ತಾ ಮನಸ್ಸಿನಲ್ಲಿ ಮೆಲುಕು ಹಾಕುತ್ತಿದ್ದಂತೆ ತಟಕ್ಕನೆ ಅನಿಸಿದುದೇನೆಂದರೆ ಅಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳು ಹೆಚ್ಚುಕಡಿಮೆ ಸಂಪೂರ್ಣವಾಗಿ ಭಾರತಕ್ಕೂ ಅನ್ವಯಿಸುತ್ತವಲ್ಲವೆ ಎಂದು! ಕೇವಲ ಹೆಸರು ಮತ್ತು ಸನ್ನಿವೇಶಗಳಲ್ಲಿ ಅಲ್ಪಸ್ವಲ್ಪಬದಲಾವಣೆ ಮಾಡಿಕೊಂಡರೆ ಸಾಕು, ಭಾರತದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತ ವ್ಯಾಖ್ಯಾನ ಸಿದ್ಧ! ನೋಮ್ ಚಾಮ್ಸ್‌ಕಿ ಮಾಡಿದ್ದ ಆ ಪ್ರತಿಭಾಪೂರ್ಣ ವಿಶ್ಲೇಷಣೆಯ ಕೆಲವೊಂದು ಮುಖ್ಯಾಂಶಗಳು ಹೀಗಿವೆ: ‘‘ನನ್ನ ಜೀವಮಾನದಲ್ಲಿ ಯಾವತ್ತೂ ಕಂಡಿರದಂತಹ ಬೆಳವಣಿಗೆಗಳು ಅಮೆರಿಕದ ಸಮಾಜದಲ್ಲಿ ನಡೆದಿವೆ..... ವೈಮಾರ್ ಜರ್ಮನಿ (1919ರಿಂದ 1933ರ ತನಕ ಇದ್ದಂತಹ ಅರೆ ಅಧ್ಯಕ್ಷೀಯ, ಪ್ರಾತಿನಿಧಿಕ ಪ್ರಜಾಪ್ರಭುತ್ವ ವ್ಯವಸ್ಥೆ) ಅದರ ಕೊನೆಯ ವರ್ಷಗಳಲ್ಲಿ ಹೇಗಿತ್ತೊ (30ರ ದಶಕದ ಜಾಗತಿಕ ಆರ್ಥಿಕ ಹಾಗೂ ಕೈಗಾರಿಕಾ ಕುಸಿತದಿಂದಾದ ಪರಿಣಾಮಗಳು, ಮಿತಿಮೀರಿದ ನಿರುದ್ಯೋಗ, ಭಾರೀ ಹಣದುಬ್ಬರ ಇತ್ಯಾದಿ) ಹಾಗಿದೆ ಇಂದಿನ ಅಮೆರಿಕದ ಪರಿಸ್ಥಿತಿ. ಅವೆರಡರ ನಡುವಿನ ಸಮಾನತೆಗಳು ಗಮನ ಸೆಳೆಯುವಂತಿವೆ. ಸಂಸದೀಯ ವ್ಯವಸ್ಥೆ ಬಗ್ಗೆ ಮೂಡಿರುವ ಅತೀವ ಭ್ರಮನಿರಸನದ ಭಾವನೆ ಅವುಗಳಲ್ಲೊಂದು. ಅಂದು ನಾಜಿಗಳು ಜರ್ಮನಿಯ ಸಮಾಜವಾದಿ ಮತ್ತು ಕಮ್ಯೂನಿಸ್ಟ್ ಪಕ್ಷಗಳನ್ನು ನಾಮಾವಶೇಷ ಮಾಡುವಲ್ಲಿ ಸಫಲರಾದರು. ಇತರ ಬಂಡವಾಳವಾದಿ ಪಕ್ಷಗಳ ವಿರುದ್ಧವೂ ದ್ವೇಷ ಇದ್ದುದರಿಂದ ಅವು ಕೂಡ ಕಣ್ಮರೆಯಾದುವು. ಹೀಗೆ ಒಂದು ನಿರ್ವಾತ ಸ್ಥಿತಿಯನ್ನು ನಿರ್ಮಾಣ ಮಾಡಿದ ಬಳಿಕ ಬಹಳ ಚತುರತೆ ಮತ್ತು ಬುದ್ಧಿವಂತಿಕೆಯಿಂದ ಇಡೀ ದೇಶದ ಮೇಲೆ ಅಧಿಕಾರ ಸ್ಥಾಪಿಸಲಾಯಿತು (1933ರ ಜನವರಿಯಲ್ಲಿ ಹಿಟ್ಲರ್‌ನ ಅಧ್ಯಕ್ಷತೆಯಲ್ಲಿ ಒಂದು ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತ್ತು. ಇದಾದ ಕೆಲವೇ ವಾರಗಳಲ್ಲಿ ನಾಜಿಗಳ ದುರಾಡಳಿತ, ದಬ್ಬಾಳಿಕೆ, ವಿರೋಧ ಪಕ್ಷಗಳ ಹತ್ತಿಕ್ಕುವಿಕೆ, ರಾಜಕೀಯ ಸಭೆಗಳಿಗೆ ನಿಷೇಧ, ಮಾನವ ಹಕ್ಕುಗಳ ದಮನ, ಅಕ್ರಮ ಬಂಧನಗಳು, ಹತ್ಯೆಗಳು ಮುಂತಾದ ವಿದ್ಯಮಾನಗಳು ಪ್ರಾರಂಭವಾದವು. ಇದರಲ್ಲೆಲ್ಲ ನಾಜಿ ಕಾಲಾಳು ಪಡೆಗಳದೆ ಪ್ರಮುಖ ಪಾತ್ರ. ಫೆಬ್ರವರಿಯಲ್ಲಿ ಅನುಮಾನಾಸ್ಪದವಾಗಿ ಪಾರ್ಲಿಮೆಂಟ್ ಅಗ್ನಿ ದುರಂತ ಸಂಭವಿಸಿತು. ಇದನ್ನೆ ನೆಪವಾಗಿಟ್ಟುಕೊಂಡ ಹಿಟ್ಲರ್, ಪಾರ್ಲಿಮೆಂಟ್ ಅಗ್ನಿ ಹುಕುಂಅನ್ನು ಮತ್ತು ರಾಷ್ಟ್ರಾಧ್ಯಕ್ಷನಿಗೆ ಸಂಸತ್ತನ್ನು ಬೈಪಾಸ್ ಮಾಡುವ ಅಧಿಕಾರವನ್ನೊದಗಿಸುವ ಕಾಯ್ದೆಯನ್ನು ಜಾರಿಗೊಳಿಸಿದ. ಹೀಗೆ ಅಧಿಕಾರವೆಲ್ಲ ನಾಜಿ ಪಕ್ಷದಲ್ಲಿ ಕೇಂದ್ರೀಕೃತಗೊಂಡಿತು. ಹಿಟ್ಲರ್ ಜರ್ಮನಿಯ ಸರ್ವಾಧಿಕಾರಿಯಾದ)’’.
ಅಮೆರಿಕದ ಡೆಮೊಕ್ರಾಟಿಕ್ ಪಕ್ಷ ಕೇವಲ ಚುನಾವಣೆಗಳನ್ನಷ್ಟೆ ದೃಷ್ಟಿಯಲ್ಲಿಟ್ಟುಕೊಂಡು ಬಲಪಂಥೀಯ ರಾಜಕಾರಣದತ್ತ ವಾಲುತ್ತಿರುವ ಬಗ್ಗೆ, ಜನಪರ ಉದಾರವಾದಿ ನೀತಿಗಳನ್ನು ಕೈಬಿಡುತ್ತಿರುವ ಬಗ್ಗೆ ತಾನು ದಶಕಗಳಿಂದಲೂ ಎಚ್ಚರಿಸುತ್ತ ಬಂದಿರುವೆ ಎನ್ನುವ ಚಾಮ್ಸ್‌ಕಿ ಇಂದಿನ ಬೆಳವಣಿಗೆಗಳಿಗೆ ರಾಜಕಾರಣಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡುತ್ತಾರೆ: ‘‘.......ಆದಾಗ್ಯೂ ಜನಹಿತವನ್ನು ಕಡೆಗಣಿಸಿದ ರಾಜಕಾರಣಿಗಳಿಗೆಲ್ಲ ಟ್ರಂಪ್ ಆಗಮನದಿಂದ ದಿಗ್ಭ್ರಾಂತಿಯಾಗಿದೆ...... ಇದು ಅನಿವಾರ್ಯವಾಗಿತ್ತು; ಇಂತಹದೊಂದು ವಿದ್ಯಮಾನ ಘಟಿಸುವಂತಹ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಲಾಗಿತ್ತು. ಏನಾಗಿತ್ತೆೆಂದರೆ ಡೆಮೊಕ್ರಾಟಿಕ್ ಪಕ್ಷ ಕಾರ್ಮಿಕರನ್ನು, ಜನಸಾಮಾನ್ಯರನ್ನು ಕೈಬಿಟ್ಟು ಕಾರ್ಪೊರೇಟ್ ಧಣಿಗಳು ಮತ್ತು ಹಣವಂತರ ಕೈಹಿಡಿಯಿತು. ಇವರೆಲ್ಲ ನಿಧಾನಕ್ಕೆ ಒಬ್ಬೊಬ್ಬರಾಗಿ ಸರಕಾರದ ಕೀಲಕ ಸ್ಥಾನಗಳಲ್ಲಿ ಸೇರಿಕೊಂಡರು. ನವಉದಾರವಾದವನ್ನು ಪಕ್ಷ ತನ್ನ ಮೂಲತತ್ವವಾಗಿ ಅಳವಡಿಸಿಕೊಂಡಿತು. ನವಉದಾರವಾದ ಎಂಬುದು ಕಾರ್ಮಿಕ ಸಂಘಟನೆಗಳು ಮತ್ತು ಸಾರ್ವಜನಿಕ ವಲಯಗಳ ಕುರಿತು ಒಲವಿರದ, ಸೈನ್ಯ ಮತ್ತು ಬೃಹತ್ ವಾಣಿಜ್ಯೋದ್ಯಮಗಳಿಗೆ ವಿರೋಧವಿರದ ಸಿದ್ಧಾಂತ. ಹೀಗಾಗಿ ಡೆಮೊಕ್ರಾಟಿಕ್ ಪಕ್ಷದ ನೀತಿಗಳೆಲ್ಲವೂ ಸೈನ್ಯ ಮತ್ತು ಬೃಹತ್ ವಾಣಿಜ್ಯೋದ್ಯಮಗಳ ಪರ ಹಾಗೂ ಪರಿಸರ ವಿರೋಧಿಯಾಗಿ ಪರಿಣಮಿಸಿದವು. ಪಕ್ಷದ ಗೆಲುವಿಗೆ ಧನಿಕ ಬೆಂಬಲಿಗರೆ ಬೇಕು ಎಂಬ ನೆಪವೊಡ್ಡಿ ಜನಸಾಮಾನ್ಯರ ಬವಣೆಗಳನ್ನು ಪೂರ್ತಿ ನಿರ್ಲಕ್ಷಿಸಲಾಯಿತು.’’
‘‘ಅತ್ತ ಡೆಮೊಕ್ರಟಿಕ್ ಪಕ್ಷದ ಸ್ಥಿತಿ ಹೀಗಿದ್ದರೆ ಇತ್ತ ರಿಪಬ್ಲಿಕನ್ ಪಕ್ಷ ಶ್ರೀಮಂತರ ಮುಂದೆ ನಡುಬಗ್ಗಿಸಿ ಅವರ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಯುದ್ಧಕ್ಕಾಗಿ ಹಾತೊರೆಯುವವರೂ ಪರಿಸರ ವಿಜ್ಞಾನವನ್ನು ತಿರಸ್ಕರಿಸುವವರೂ ಆಗಿರುವ ಇವರು ಮಾನವಕುಲಕ್ಕೇ ಅಪಾಯಕಾರಿ. ಹೀಗಾಗಿ ಈಗ ಅಮೆರಿಕದ ರಾಜಕೀಯ ವ್ಯವಸ್ಥೆ ಬಹುಮಟ್ಟಿಗೆ ಸುಸಂಘಟಿತ ಐಶ್ವರ್ಯವಂತರ ಆವಶ್ಯಕತೆಗಳಿಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ಇದರಿಂದಾಗಿ ಜನಸಾಮಾನ್ಯರಲ್ಲಿ ಅತೃಪ್ತಿ ಉಂಟಾಗಿದ್ದು ಅವರ ಮಧ್ಯೆ ಒಂದು ನಿರ್ವಾತ ಪರಿಸ್ಥಿತಿ ನಿರ್ಮಾಣವಾಗಿದೆ. ಟ್ರಂಪ್‌ನಂತಹ ದೊಡ್ಡ ಗಂಟಲಿನ, ಜನಸಮೂಹವನ್ನು ಪ್ರಭಾವಿಸುವ ಪುಢಾರಿಗಳು ಉದ್ಭವಿಸುವುದೆ ಇಂತಹ ವಾತಾವರಣದಲ್ಲಿ.’’
‘‘ಪುಣ್ಯಕ್ಕೆ ಜನಸಮೂಹವನ್ನು ಪ್ರಭಾವಿಸುವುದರ ಜೊತೆ ಪ್ರಾಮಾಣಿಕನೂ ಆಗಿರುವ ವ್ಯಕ್ತಿ ಇದುವರೆಗೂ ಕಾಣಿಸಿಕೊಂಡಿಲ್ಲ. ಜನಸಮೂಹವನ್ನು ಪ್ರಭಾವಿಸುವ ವ್ಯಕ್ತಿ ಮೋಸಗಾರನಾಗಿರುತ್ತಾನೆಂಬುದು ಸುವ್ಯಕ್ತ. ಆದುದರಿಂದ ಆತ ಮೆಕಾರ್ತಿ, ನಿಕ್ಸನ್ ಅಥವಾ ಇವ್ಯಾಂಜೆಲಿಕಲ್ ಪಂಥದ ಬೋಧಕರಂತೆ ಆತ್ಮವಿನಾಶ ಮಾಡಿಕೊಳ್ಳುತ್ತಾನೆ. ಜನರಲ್ಲಿ ಆಶಾಭಂಗ, ಭ್ರಮನಿರಸನ ಮತ್ತು ಸಿಟ್ಟಿನ ಭಾವನೆಗಳು ತುಂಬಿರುವಂತಹ ಪರಿಸ್ಥಿತಿಯಲ್ಲಿ, ಸರಕಾರದ ವತಿಯಿಂದ ಸಮಂಜಸ ಪ್ರತಿಕ್ರಿಯೆಯೂ ಇಲ್ಲದಂತಹ ಪರಿಸ್ಥಿತಿಯಲ್ಲಿ ಜನಸಮೂಹವನ್ನು ಪ್ರಭಾವಿಸುವುದರೊಂದಿಗೆ ಪ್ರಾಮಾಣಿಕನೂ ಆಗಿರುವ ವ್ಯಕ್ತಿ ಬಂದರೆ ನಿಜಕ್ಕೂ ದೊಡ್ಡ ಕ್ಷೋಬೆ ಉಂಟಾಗಲಿದೆ.’’
‘‘ಈಗ ಬಂದಿರುವ ಟ್ರಂಪ್ ಮಹಾಶಯ ಪ್ರಾಮಾಣಿಕನಲ್ಲ. ಆದರೆ ಬೆಂಬಲಿಗರ ಪ್ರಕಾರ ಆತ ಇದ್ದುದನ್ನು ಇದ್ದ ಹಾಗೆ ಹೇಳುವ ವನು; ಆತನದು ನೇರನುಡಿ, ರಾಜಕೀಯವಾಗಿ ನಿರ್ದಿಷ್ಟ ಮಾತು. ಇಷ್ಟೆ ಅಲ್ಲ, ಆತ ಭ್ರಷ್ಟಾಚಾರಿಯಲ್ಲ, ತನ್ನ ಸ್ವಂತದ ದುಡ್ಡು ಖರ್ಚು ಮಾಡುತ್ತಾನೆ, ತಾವು ಯಾರನ್ನು ತಮ್ಮ ನೈಜ ಶತ್ರುಗಳೆಂದು ಭಾವಿಸಿರುವೆವೊ ಅಂಥವರ ಬಗ್ಗೆ ಸತ್ಯವನ್ನೆ ನುಡಿಯುತ್ತಾನೆ ಎಂದೂ ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಟ್ರಂಪ್ ಬಿಲಿಯಾಧಿಪತಿಗಳ ಬಗ್ಗೆ ಮಾತಾಡು ವುದಿಲ್ಲ. ಆತನ ವಾಗ್ದಾಳಿಗಳೆಲ್ಲ ಕಾನೂನುಬಾಹಿರ ವಲಸಿಗರು ಮತ್ತು ಮುಸ್ಲಿಮರ ಮೇಲೆ ಕೇಂದ್ರೀಕೃತವಾಗಿವೆ. ಅಂತಿಮವಾಗಿ ಟ್ರಂಪ್ ಮಾಡಿರುವುದೇನೆಂದರೆ ಜನಸಾಮಾನ್ಯರ ಭಯ ಮತ್ತು ದ್ವೇಷಗಳನ್ನು ತನಗೆ ಅನುಕೂಲಕರವಾಗುವಂತೆ ತಿರುಗಿಸಿರುವುದು. ಅಂದು ಜರ್ಮನಿಯಲ್ಲಿ ಯಹೂದ್ಯರನ್ನು ಶತ್ರುಗಳಾಗಿ ಬಿಂಬಿಸಲಾಗಿದ್ದರೆ ಇಂದು ಅಮೆರಿಕದಲ್ಲಿ ಕಾನೂನುಬಾಹಿರ ವಲಸಿಗರು ಮತ್ತು ಕರಿಯರು ಅದೇ ಸ್ಥಿತಿ ಎದುರಿಸುತ್ತಿದ್ದಾರೆ. ಶ್ವೇತವರ್ಣೀಯ ಪುರುಷರನ್ನು ಕಿರುಕುಳಕ್ಕೊಳಗಾಗಿರುವ ಅಲ್ಪಸಂಖ್ಯಾತರೆಂದು ಬಿಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಾವು ನಮ್ಮ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ, ದೇಶದ ಗೌರವವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಲಾಗುವುದು. ಸೇನಾಶಕ್ತಿಯನ್ನು ಸ್ತುತಿಸಲಾಗುವುದು. ಜನರ ಮೇಲೆ ಹಲ್ಲೆಗಳಾಗಲಿವೆ. ಅಂತಿಮವಾಗಿ ಇದೆಲ್ಲ ಎದುರಾಳಿಗಳನ್ನು, ವಿರೋಧಿಗಳನ್ನು ಸದೆಬಡಿದು ಅವರ ಬಾಯಿಮುಚ್ಚಿಸುವ ಶಕ್ತಿಯಾಗಿ ಪರಿಣಮಿಸಬಹುದು.’’
ಜನಸಾಮಾನ್ಯರ ಆವಶ್ಯಕತೆಗಳನ್ನು ಕಡೆಗಣಿಸಿ ಅವರಿಗೆ ಬರೀ ಭರವಸೆಗಳನ್ನೊಡ್ಡಿ ಉನ್ನತ ಸ್ಥಾನಕ್ಕೇರಿದ ರಾಜಕಾರಣಿಗಳಿಗೆ ಟ್ರಂಪ್ ಕಂಡು ದಿಗ್ಭ್ರಮೆಯಾಗಿದೆ. ಆದರೆ ಅವರು ಸೃಷ್ಟಿಸಿದ ಸನ್ನಿವೇಶಗಳಿಂದಾಗಿ ಆತನ ಆಗಮನ ಅನಿವಾರ್ಯವಾಗಿತ್ತು........ ದೇಶದ ಮನಃಸ್ಥಿತಿ ನೋಡಿದಾಗ ಭಯವಾಗುತ್ತಿದೆ. ಜನರ ಕ್ರೋಧವನ್ನು, ನಿರಾಶೆಯನ್ನು, ಸಂಸ್ಥೆಗಳ ಮೇಲಿರುವ ದ್ವೇಷದ ಮಟ್ಟವನ್ನು ರಚನಾತ್ಮಕವಾಗಿ ಸಂಘಟಿಸಲಾಗಿಲ್ಲ. ದೇಶ ಆತ್ಮವಿನಾಶಕಾರಿ ಭ್ರಮಾಲೋಕದತ್ತ ಚಲಿಸುತ್ತಿದೆ. ಆ ಭ್ರಮಾಲೋಕದ ಸಾಕಾರರೂಪವೆ ಟ್ರಂಪ್. ಆತ ಕ್ರೋಧದ ಮೂರ್ತ ಸ್ವರೂಪ; ಸುತ್ತಿಗೆ. ಈ ಸುತ್ತಿಗೆಯಿಂದ ಸಂಸ್ಥೆಗಳನ್ನು ಪುಡಿಗುಟ್ಟಿ ಅಮೆರಿಕವನ್ನು ಸುಖ, ಸಮೃದ್ಧಿಯಿಂದ ಕೂಡಿದ್ದೆನ್ನಲಾದ ಗತಕಾಲಕ್ಕೆ ಒಯ್ಯುವ ಅಭಿಲಾಷೆ ಆತನ ಬೆಂಬಲಿಗರದು..... ಅಮೆರಿಕದ ರಾಜಕೀಯ ವರ್ಗ ಟ್ರಂಪ್ ವಿದ್ಯಮಾನದ ಭಾರ ತಾಳಲಾರದೆ ಮುಗ್ಗರಿಸಿದೆ. ವಾಸ್ತವವಾಗಿ ಅದರ ವೈಫಲ್ಯಗಳೆ ಟ್ರಂಪ್‌ನ ಸೃಷ್ಟಿಗೆ ಕಾರಣವಾಗಿವೆ. ಸದ್ಯ ವ್ಯವಸ್ಥೆಯ ಮುಂದಿರುವ ಆಯ್ಕೆ ಏನೆಂದರೆ ಒಂದೊ ಟ್ರಂಪ್‌ನ ನಕಲಿ ಜನಪರ ಸಿದ್ಧಾಂತಕ್ಕೆ ಮರುಳಾದವರ ನೈಜ ಆತಂಕಗಳನ್ನು ನಿವಾರಿಸಬೇಕು ಅಥವಾ ರಿಪಬ್ಲಿಕನ್ ಪಕ್ಷ ಹಲವು ದಶಕಗಳಿಂದ ಸಂಕೇತಭಾಷೆಯಲ್ಲಿ ಹೇಳುತ್ತಿದ್ದುದನ್ನು ಟ್ರಂಪ್ ಇಂದು ಬಹಿರಂಗವಾಗಿ ಹೇಳುತ್ತಿರುವುದರಿಂದ ಅದೀಗ ತಾನು ಡೊನಾಲ್ಡ್ ಟ್ರಂಪ್‌ನ ಪಕ್ಷ ಎಂಬುದನ್ನು ಒಪ್ಪಿಕೊಂಡು ಸುಮ್ಮನಿರಬೇಕು.’’
ಟ್ರಂಪ್ ಆಡಳಿತ ಹೇಗಿರಬಹುದು ಎಂಬ ಪ್ರಶ್ನೆಗೆ ಚಾಮ್ಸ್‌ಕಿ ಉತ್ತರ ಮಾರ್ಮಿಕವಾಗಿದೆ: ‘‘ಜಗತ್ತನ್ನು ಸರ್ವನಾಶಪಡಿಸಬಲ್ಲ ಗುಂಡಿಯ ಮೇಲೆ ಬೆರಳಿಟ್ಟಿರುವ ಅಥವಾ ಅಪಾರ ಪ್ರಭಾವ ಬೀರುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಒಂದು ವಿಧದ ಸ್ವಚ್ಛಂದವೃತ್ತಿಯ ವ್ಯಕ್ತಿಯನ್ನು ಹೊಂದುವ ಆ ದೃಶ್ಯವನ್ನು ಊಹಿಸಿಕೊಂಡಾಗ ತುಂಬಾ ಗಾಬರಿಯಾಗುತ್ತದೆ.’’
ಇತ್ತೀಚಿನ ವರ್ಷಗಳಲ್ಲಿ ಭಾರತದ ರಾಜಕೀಯ ರಂಗದಲ್ಲಿ ಆಗಿರುವ ಮಹತ್ತರ ಸ್ಥಿತ್ಯಂತರಗಳು ಚಾಮ್ಸ್‌ಕಿಯ ಭವಿಷ್ಯವಾಣಿಯ ಯಥಾರ್ಥತೆಯನ್ನು ಮತ್ತು ಅದರ ಸಾರ್ವಲೌಕಿಕತೆಯನ್ನು ಸಾಬೀತುಪಡಿಸುವಂತಿವೆ.
***************************************************************************
(ಆಧಾರ: ಮೇ 5, 2016ರ Common Dreamsಜೇಕ್ ಜಾನ್ಸನ್ ಲೇಖನ)