ಅಸ್ಸಾಂ ಹಿಂದುತ್ವದ ಹೊಸ ಪ್ರಯೋಗಭೂಮಿ?

Update: 2016-05-25 17:15 GMT

ಸ್ಸಾಂನ ನಿಯೋಜಿತ ಮುಖ್ಯಮಂತ್ರಿ ಸಬರಾನಂದ ಸೊನೊವಾಲ್, 2011ರಲ್ಲಿ ಅಸ್ಸಾಂ ಗಣ ಪರಿಷತ್‌ನಿಂದ ಬಿಜೆಪಿಗೆ ನಿಷ್ಠಾಂತರ ಹೊಂದಿದವರು. ಅಂದರೆ ಸಂಘ ಪರಿವಾರದ ಸಿದ್ಧಾಂತದ ಸಂಪೂರ್ಣ ಗರಡಿಯಲ್ಲಿ ಪಳಗಿದವರಲ್ಲ. ಇತ್ತೀಚಿನ ಒಂದು ಸಂದರ್ಶನದಲ್ಲಿ, ‘‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಜಾತ್ಯತೀತ ತತ್ವವನ್ನು ಅಳವಡಿಸಿಕೊಳ್ಳುತ್ತದೆ’’ ಎಂದು ಹೇಳಿದ್ದಾರೆ. ಈ ದಿಗಿಲು ಹುಟ್ಟಿಸುವ ಹೇಳಿಕೆ ವಿಭಿನ್ನ ಅರ್ಥವನ್ನು ಒಳಗೊಂಡಿದೆ.

ಇದೀಗ ಬಿಜೆಪಿ ಅಸ್ಸಾಂ ಚುನಾವಣೆ ಗೆದ್ದಿದೆ. ಸೊನೊವಾಲ್ ಅವರ ವೈಯಕ್ತಿಕ ಸೈದ್ಧ್ದಾಂತಿಕ ಒಲವಿನ ಹೊರತಾಗಿಯೂ, ರಾಜ್ಯ ಇದೀಗ ಹಿಂದುತ್ವದ ಹೊಸ ಪ್ರಯೋಗಶಾಲೆಯಾಗುವ ಎಲ್ಲ ಸೂಚನೆಗೂ ಕಾಣುತ್ತಿವೆ. ಇಲ್ಲಿ ನಡೆಯುವ ಪ್ರಯೋಗಗಳು, ರಾಮನ ಪುರಾಣ ಅಥವಾ ಅಸ್ಸಾಂನ ಮೇಲೆ ಹಿಂದಿ ಹೇರುವುದು ಅಥವಾ ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧ ಹೇರುವಂತಹ ಕ್ರಮಗಳನ್ನು ಈ ಪ್ರಯೋಗ ಕೈಗೊಳ್ಳಲಾರದು. ಅದಾಗ್ಯೂ ಹಿಂದೂ ರಾಷ್ಟ್ರೀಯವಾದದ ಆಡುಂಬೊಲವಾಗಿ ಅಸ್ಸಾಂ ಬೆಳೆಯಲು ಪ್ರಮುಖವಾಗಿ ಮೂರು ಕಾರಣಗಳಿವೆ.

ಒಂದು: ಅಕ್ರಮ ವಲಸಿಗರ ಸಮಸ್ಯೆ: ಈ ವಿಷಯವನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಿ, ಕೋಮು ಬಣ್ಣ ಬಳಿದು ಬಿಜೆಪಿ ಚುನಾವಣೆ ಗೆದ್ದಿದೆ. ಇದೀಗ ಬಿಜೆಪಿ ಸರಕಾರ, ತನ್ನ ನೀತಿಯನ್ನು ಮೆದುಗೊಳಿಸಲು ಸಾಧ್ಯವಿಲ್ಲ.
ಎರಡು: ಅಸ್ಸಾಂ ಜನಸಂಖ್ಯೆಯಲ್ಲಿ ಶೇ.34ರಷ್ಟು ಮಂದಿ ಮುಸ್ಲಿಮರು. ಇವರೆಲ್ಲರನ್ನೂ ಜಾತೀಯವಾಗಿ ಒಂದು ದಶಕದಿಂದ ಅಖಿಲ ಭಾರತ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸಂಘಟಿಸಿದೆ. ವಲಸೆ ಸಮಸ್ಯೆ ಇವರನ್ನು ಸಾಕಷ್ಟು ಬಾಧಿಸುತ್ತದೆ. ಈ ನಿಟ್ಟಿನಲ್ಲಿ ಹೊಸ ಸರಕಾರದ ಕ್ರಮ, ಇನ್ನಷ್ಟು ಈ ಸಮುದಾಯವನ್ನು ಹಿಂದಕ್ಕೆ ಕಳುಹಿಸಲು ಹೊಸ ಸರಕಾರ ಪ್ರಯತ್ನಿಸುವ ಸಾಧ್ಯತೆ ಇದೆ.
ಮೂರನೆಯ ಹಾಗೂ ಪ್ರಮುಖ ಕಾರಣವೆಂದರೆ, 1940ರ ದಶಕದಲ್ಲೇ ಹಿಂದುತ್ವ ಯೋಜನೆ ಅಸ್ಸಾಂನಲ್ಲಿ ಅಸ್ತಿತ್ವದಲ್ಲಿತ್ತು. ಬಹುಶಃ ಬಿಜೆಪಿ ಕಳೆದ ಎರಡು ವರ್ಷಗಳಲ್ಲಿ ರಾಜಕೀಯವಾಗಿ ತಮ್ಮ ಅಸ್ತಿತ್ವ ಹಾಗೂ ಪ್ರಸ್ತುತತೆಯನ್ನು ಹೊಂದಿರಬಹುದು. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಮೊದಲ ಅಸ್ಸಾಂ ಶಾಖೆಯನ್ನು 1946ರಲ್ಲಿ ಆರಂಭಿಸಿತು. ಗುವಾಹಟಿಯ ಮಾರ್ವಾಡಿ ವ್ಯಾಪಾರಿಯೊಬ್ಬರ ಆಹ್ವಾನದ ಮೇರೆಗೆ ಇದನ್ನು ಸ್ಥಾಪನೆ ಮಾಡಲಾಯಿತು ಎಂದು ಮಾಲಿನಿ ಭಟ್ಟಾಚಾರ್ಯ ಪ್ರಬಂಧವೊಂದರಲ್ಲಿ ವಿವರಿಸುತ್ತಾರೆ. ಇದು ಅಸ್ಸಾಂನಲ್ಲಿ ಹಿಂದುತ್ವ ಹುಟ್ಟಿಕೊಂಡ ಬಗೆಗೆ ಹಾಗೂ ಬಲಗೊಂಡ ಬಗೆಗೆ ಮಾಲಿನಿ ಭಟ್ಟಾಚಾರ್ಯ ತಮ್ಮ ಪ್ರಬಂಧದಲ್ಲಿ ವಿವರಿಸಿದ್ದಾರೆ.
ರಾಜ್ಯಾದ್ಯಂತ ಹರಡಿದ ಬಳಿಕ, ತನ್ನ ಹಾದಿಯಲ್ಲಿ ಬಂದ ಪ್ರತಿಯೊಂದು ಅವಕಾಶವನ್ನೂ ಸಮರ್ಥವಾಗಿ ಬಳಸಿಕೊಂಡಿತು. ವಿಭಜನೆ ವೇಳೆಯ ಹಿಂಸಾಚಾರ ಮತ್ತು ನಂತರದ ಪರಿಣಾಮಗಳು, ನಿರಾಶ್ರಿತರ ಒಳಹರಿವು, 1950ರ ಭೀಕರ ಭೂಕಂಪ, ವಲಸೆಗಾರರ ಸಮಸ್ಯೆ ಮತ್ತಿತರ ಘಟನೆಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡಿತು. ಆದ್ದರಿಂದ ಸಂಘ ಪರಿವಾರ ಸೊನೊವಾಲ್ ಅವರ ಹಿಂದೆ ನಿಂತು ಹಿಂದುತ್ವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸೂಚಿಸುವ ಸಾಧ್ಯತೆ ವಿರಳ.

ವಲಸೆ ಸಮಸ್ಯೆ
ಸೊನೊವಾಲ್ ಅವರಿಗೆ ವಲಸೆ ಸಮಸ್ಯೆ ದೊಡ್ಡ ವಿಷಯವಲ್ಲ. ಏಕೆಂದರೆ ಅವರ ರಾಜಕೀಯ ವೃತ್ತಿ ವಿಕಸನಗೊಂಡದ್ದೇ ಈ ಕಾರಣದಿಂದ. ಅಸ್ಸಾಂ ಗಣ ಪರಿಷತ್ ಸಂಸದರಾಗಿ, ಇಂದಿರಾಗಾಂಧಿ ಸರಕಾರ ಜಾರಿಗೆ ತಂದ ವಿವಾದಾತ್ಮಕ ಅಕ್ರಮ ವಲಸಿಗರ (ನ್ಯಾಯಮಂಡಳಿ ನಿರ್ಧಾರ) ಕಾಯ್ದೆ- 1983 ಅಥವಾ ಐಎಂಡಿಟಿ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೊರೆ ಹೋದವರು.
ಸರಳವಾಗಿ ಹೇಳಬೇಕೆಂದರೆ 1971ರ ಮಾರ್ಚ್ 25ರ ಬಳಿಕ ಅಸ್ಸಾಂಗೆ ವಲಸೆ ಬಂದವರ ಗಡಿಪಾರಿಗೆ ಸಾಂಸ್ಥಿಕ ವಾದಸರಣಿಯನ್ನು ಆರಂಭಿಸಿದವರು ಇವರು. ಇದಕ್ಕೂ ಮೊದಲು ವಲಸೆ ಬಂದವರನ್ನು ಕಾನೂನುಬದ್ಧ ನಾಗರಿಕರು ಎಂದು ಪರಿಗಣಿಸಬಹುದು ಎಂದು ಪ್ರತಿಪಾದಿಸಿದ್ದರು.
ಆದರೆ ಸುಪ್ರೀಂಕೋರ್ಟ್ ಈ ಐಎಂಡಿಟಿ ಕಾಯ್ದೆಯನ್ನು ತಳ್ಳಿಹಾಕಿತು. ಏಕೆಂದರೆ ಇತರ ರಾಜ್ಯಗಳಲ್ಲಿ ಭಾರತೀಯ ನಾಗರಿಕರು ಎಂದು ಪರಿಗಣಿಸಲು ಇದ್ದ ಗಡುವು 1948ರ ಜುಲೈ 19 ಆಗಿತ್ತು. ಅಂತೆಯೇ ಐಎಂಟಿಡಿ ಕಾಯ್ದೆಯಡಿ ಇರುವ ದೊಡ್ಡ ಸಮಸ್ಯೆ ಎಂದರೆ ಅಕ್ರಮ ವಲಸಿಗರನ್ನು ಪತ್ತೆ ಮಾಡುವುದು ಮತ್ತು ಗಡಿಪಾರು ಮಾಡುವುದು ಎನ್ನುವುದನ್ನು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು.

‘‘ಸುಪ್ರೀಂಕೋರ್ಟ್ ಐಎಂಡಿಟಿ ಕಾಯ್ದೆಯನ್ನು ಅನೂರ್ಜಿತಗೊಳಿಸಿದ್ದರಿಂದ, ಅಸ್ಸಾಮಿ ಹಿಂದೂಗಳು ಸೊನೊವಾಲ್ ಅವರನ್ನು ಜಾತೀಯ ನಾಯಕ ಅಥವಾ ಅಸ್ಸಾಮಿ ರಾಷ್ಟ್ರೀಯತೆಯ ಹೀರೊ ಎಂದು ಪರಿಗಣಿಸಿದರು’’ ಎಂದು ಮನೋಜ್ ಕುಮಾರ್‌ನಾಥ್ ತಮ್ಮ, ಕಮ್ಯುನಲ್ ಪೊಲಿಟಿಕ್ಸ್ ಇನ್ ಅಸ್ಸಾಂ: ಗ್ರೋಥ್ ಆಫ್ ಎಐಯುಡಿಎಫ್ ಸಿನ್ಸ್- 2016 ಎಂಬ ಪ್ರಬಂಧದಲ್ಲಿ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರ ಸಮಸ್ಯೆ ಬಗ್ಗೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲದಿದ್ದರೂ ಅದನ್ನು ಪ್ರದರ್ಶಿಸಬೇಕಾಗುತ್ತದೆ. ಆದರೆ ಬಿಜೆಪಿ ಸರಕಾರ ವಲಸೆಯವರ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಸದ್ಯದ ನಿರೀಕ್ಷೆಗಳ ಪ್ರಕಾರ, ಚುನಾವಣಾ ಪ್ರಚಾರದಲ್ಲಿ ಎತ್ತಿದ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

ಪರಿಣಾಮಗಳು
ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹಿಮಾಂತ ವಿಶ್ವ ಶರ್ಮ ಅವರು 2011ರ ಮಾರ್ಚ್‌ನಲ್ಲಿ ರಾಯ್ಟರ್ಸ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 1951ರಿಂದ 1971ರ ನಡುವೆ ವಲಸೆ ಬಂದವರ ಮತಹಕ್ಕನ್ನು ಅನೂರ್ಜಿತಗೊಳಿಸಲಿದೆ ಎಂದು ಹೇಳಿದ್ದರು. 1971ರ ಪೂರ್ವದಲ್ಲಿ ಸುಮಾರು 20 ಲಕ್ಷ ಮಂದಿ ವಲಸೆ ಬಂದಿದ್ದಾರೆ ಎಂದು ಅಂದಾಜು ಮಾಡಲಾಗಿದೆ.
ಬಿಜೆಪಿ ನೇತೃತ್ವದ ಮೈತ್ರಿ ಕೂಟದ ಇತರ ಮುಖಂಡರು ಇನ್ನೂ ಕಠಿಣವಾಗಿದ್ದಾರೆ. ಕೆಲವರ ಪ್ರಕಾರ 1951ರ ಪೂರ್ವದಲ್ಲಿ ಭಾರತಕ್ಕೆ ವಲಸೆ ಬಂದವರನ್ನು ಕೂಡಾ ಹೊರ ಕಳುಹಿಸಬೇಕು. 1951ರಲ್ಲಿ ಭಾರತೀಯ ಪೌರತ್ವ ಪಡೆದ ವಲಸೆಗಾರರಿಗೆ ಕೂಡಾ ಭೂ ವರ್ಗಾವಣೆಯನ್ನು ನಿರ್ಬಂಧಿಸುವಂತೆಯೂ ಸುಪ್ರೀಂಕೋರ್ಟ್‌ನ ಏಕಸದಸ್ಯ ಆಯೋಗ ಶಿಫಾರಸು ಮಾಡಿದ್ದನ್ನು ಮಾಧ್ಯಮಗಳು ಉಲ್ಲೇಖಿಸಿವೆ.

ಹಿಂದುತ್ವ ದೃಷ್ಟಿಕೋನದಿಂದ ಅಕ್ರಮ ವಲಸಿಗರು ಪೂರ್ವಪಾಕಿಸ್ತಾನ ಅಥವಾ ಬಾಂಗ್ಲಾದೇಶದಿಂದ ಬಂದ ಮುಸ್ಲಿಮರು. ನೆರೆಯ ರಾಷ್ಟ್ರಗಳಿಂದ ವಲಸೆ ಬಂದ ಹಿಂದೂಗಳನ್ನು ಈ ವ್ಯಾಖ್ಯೆಯಿಂದ ಹೊರಗಿಡಲಾಗಿದೆ. ಹಿಂದಿನ ದಶಕಗಳಲ್ಲಿ ಅಸ್ಸಾಮಿನ ಮಧ್ಯಮವರ್ಗ, ಬೆಂಗಾಲಿ ಹಿಂದೂಗಳನ್ನು ಅಪಾಯ ಎಂದು ಪರಿಗಣಿಸಿದ್ದರು. ಇವರು ಸುಶಿಕ್ಷಿತರಾಗಿರುವುದರಿಂದ ಉದ್ಯೋಗಕ್ಕೆ ಪೈಪೋಟಿ ಹೆಚ್ಚುತ್ತದೆ ಎನ್ನುವುದು ಅವರ ಭೀತಿಯಾಗಿತ್ತು.
‘‘ಅಕ್ರಮ ವಲಸಿಗರ ಪಟ್ಟಿಯಲ್ಲಿ ಹಿಂದೂಗಳನ್ನು ಸೇರಿಸುವುದನ್ನು ಆರೆಸ್ಸೆಸ್ ನಿರಂತರವಾಗಿ ವಿರೋಧಿಸುತ್ತಲೇ ಬಂದಿದೆ. ಪೂರ್ವ ವಲಯದ ಸಂಘಟನಾ ಮುಖ್ಯಸ್ಥ ಏಕನಾಥ್ ರಾನಡೆ 1950ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ, ಅಸ್ಸಾಂನಲ್ಲಿ ಸಮಸ್ಯೆ ಎಂದರೆ ಪ್ರಾಂತೀಯ ಸಂಕುಚಿತ ದೃಷ್ಟಿಕೋನ. ಬೆಂಗಾಲಿ ನಿರಾಶ್ರಿತರಿಗೆ ಅಸ್ಸಾಂನಲ್ಲಿ ಅವಕಾಶ ನೀಡುತ್ತಿಲ್ಲ. ಜನ ಅವರನ್ನೂ ಹೊರಗಿನವರಂತೆ ಕಾಣುತ್ತಾರೆ ಹಾಗೂ ಅವರನ್ನು ಓಡಿಸಬೇಕು’’ ಎಂದು ಬಯಸುತ್ತಾರೆ ಎಂದು ಹೇಳಿದ್ದನ್ನು ಭಟ್ಟಾಚಾರ್‌ಜಿ ಉಲ್ಲೇಖಿಸಿದ್ದಾರೆ.

ನಿರಾಶ್ರಿತರು- ವಲಸಿಗರು
ದಶಕಗಳ ಬಳಿಕ ಆರೆಸ್ಸೆಸ್ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಅವರು ಬಾಂಗ್ಲಾದಿಂದ ಬಂದ ಹಿಂದೂಗಳನ್ನು ನಿರಾಶ್ರಿತರೆಂದೂ, ಅವರನ್ನು ಬಾಂಗ್ಲಾದೇಶದ ಇಸ್ಲಾಮಿಕ್ ಆಡಳಿತ ಹೊರಗಟ್ಟಿದೆ ಎಂದು ವಾದ ಮಂಡಿಸಿದರು. ಆದರೆ ಬಾಂಗ್ಲಾದೇಶದಿಂದ ವಲಸೆ ಬಂದ ಮುಸ್ಲಿಮರು, ಉದ್ದೇಶಪೂರ್ವಕವಾಗಿಯೇ ಇಲ್ಲಿಗೆ ವಲಸೆ ಬಂದಿದ್ದು, ಅಸ್ಸಾಂ ರಾಜ್ಯವನ್ನು ಮುಸ್ಲಿಂ ಬಾಹುಳ್ಯದ ರಾಜ್ಯವಾಗಿ ಪರಿವರ್ತಿಸುವುದು ಅವರ ಉದ್ದೇಶ ಎಂದು ಪ್ರತಿಪಾದಿ ಸಿದರು. ಅಸ್ಸಾಂನಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೆ ಯಾವ ಸಮಸ್ಯೆ ಎದುರಾಗುತ್ತದೆ ಎಂಬ ಬಗ್ಗೆ ಎಚ್ಚರಿಕೆಯನ್ನೂ ಅವರು ನೀಡಿದರು.
ಆರೆಸ್ಸೆಸ್ ಇದೇ ಸಂದರ್ಭದಲ್ಲಿ ‘ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್’ ಎಂಬ ಸಂಘಟನೆಯನ್ನೂ ಹುಟ್ಟುಹಾಕಿತು. ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡುವ ಸಂಬಂಧದ ಚಳವಳಿಯನ್ನೂ ಅದು ರೂಪಿಸಿತು. ಆರೆಸ್ಸೆಸ್ ಈಗಾಗಲೇ ಬೆಂಗಾಲಿಗಳಲ್ಲಿ ಪ್ರಬಲ ಹಿನ್ನೆಲೆ ಹೊಂದಿದೆ. ಪೂರ್ವ ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದ ಹಿಂದೂಗಳಿಗೆ ಪರಿಹಾರ ನೀಡಿರುವುದು ಮಾತ್ರವಲ್ಲದೆ, ಅವರು ಉದ್ಯೋಗಗಳನ್ನು ಪಡೆಯಲೂ ಅದು ಸಹಕರಿಸಿದೆ. ವಿದೇಶಿ ವಿರೋಧಿ ಚಳವಳಿ ದೃಷ್ಟಿಯಿಂದ ಅವರನ್ನು ರಕ್ಷಿಸುವುದು ಆರೆಸ್ಸೆಸ್ ಧ್ಯೇಯ.
ಆದಾಗ್ಯೂ 1985ರ ಚುನಾವಣೆಯಲ್ಲಿ, ಅಸ್ಸಾಂ ಒಪ್ಪಂದಕ್ಕೆ ಸಹಿ ಮಾಡಿದ ಹಿನ್ನೆಲೆಯಲ್ಲಿ, ಮುಸ್ಲಿಂ ಸಂಘಟನೆ ಹಾಗೂ ಭಾಷಾ ಅಲ್ಪಸಂಖ್ಯಾತ ಗುಂಪುಗಳು ‘ಯುನೈಟೆಡ್ ಮೈನಾರಿಟೀಸ್ ಫ್ರಂಟ್’ ಎಂಬ ಸಂಘಟನೆ ಹುಟ್ಟುಹಾಕಿದರು. ಇದು 17 ಸ್ಥಾನಗಳನ್ನು ಗೆದ್ದು, ಶೇಕಡ 10.85 ಮತಗಳನ್ನು ಪಡೆಯಿತು. ಮುಂದೆ ಭಿನ್ನಮತದಿಂದಾಗಿ ಇದು ಛಿದ್ರವಾಯಿತು.

ಆ ವೇಳೆಗೆ ಅಕ್ರಮ ವಲಸಿಗರ ಸಮಸ್ಯೆಯನ್ನು ಧಾರ್ಮಿಕ ಪರಿಭಾಷೆಯಲ್ಲಿ ಪರಿಗಣಿಸಲಾಯಿತು. ಅಂದರೆ ಅಕ್ರಮ ವಲಸಿಗರು ಎಂದರೆ ಮುಸ್ಲಿಮರಷ್ಟೇ ಎಂಬ ನಿರ್ಧಾರಕ್ಕೆ ಬರಲಾಯಿತು. 1961ರಲ್ಲಿ ಅಸ್ಸಾಂನಲ್ಲಿದ್ದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಸಂಖ್ಯೆ ಶೇ. 69.75 ಇದ್ದುದು 2011ರಲ್ಲಿ ಶೇ. 61.46ಕ್ಕೆ ಕುಸಿಯಿತು. ಇದೇ ವೇಳೆ ಮುಸ್ಲಿಂ ಜನಸಂಖ್ಯೆ ಶೇಕಡ 24.90ಯಿಂದ 34.22ಕ್ಕೆ ಬೆಳೆಯಿತು ಎಂದು ಜನಗಣತಿ ವರದಿ ಹೇಳುತ್ತದೆ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಬಹಿರಂಗವಾಗಿ, ‘‘ಹಿಂದೂ ವಲಸೆಯನ್ನು ಸ್ವಾಗತಿಸಲಾಗುವುದು ಮತ್ತು ಅವರನ್ನು ಭಾರತದಲ್ಲಿ ಸೇರಿಸಿಕೊಳ್ಳಲಾಗುವುದು’’ ಎಂದು ಘೋಷಿಸಿದ್ದರು. ಆದರೆ ಅದಕ್ಕೆ ಮುನ್ನವೇ, 2011ರಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ಅವರ ಭಾಷೆ ಹಾಗೂ ಪ್ರಾಂತೀಯ ಭಿನ್ನತೆಯ ಹೊರತಾಗಿಯೂ ಅಸ್ಸಾಮಿ ಹಿಂದೂಗಳನ್ನು ಉತ್ತೇಜಿಸಿ ಜೊತೆಗೆ ಗುರುತಿಸಿಕೊಳ್ಳುವಂತೆ ಸೂಚಿಸಿತು.

ಪರಿಣಾಮ ಇಲ್ಲ
ವಿಚಿತ್ರವೆಂದರೆ ಇಂಥವರನ್ನು ಅಸ್ಸಾಂ ಸಮುದಾಯದ ಜತೆ ಜೋಡಿಸಲು ಕಾರಣೀಕರ್ತರಾದವರು ಹಿಂದಿನ ಮುಖ್ಯಮಂತ್ರಿ ತರುಣ್ ಗೊಗೋಯ್. ಎಐಯುಡಿಎಫ್ ಪಕ್ಷವನ್ನು ಮೂಲೆಗುಂಪು ಮಾಡಲು ಅಥವಾ ವಿಭಜಿಸಲು ವಿಫಲವಾದ ಅವರು, 2011ರ ತಮ್ಮ ಚುನಾವಣಾ ಪ್ರಚಾರದಲ್ಲಿ, ‘‘ಬದ್ರುದ್ದೀನ್ ಯಾರು?’’ (ಬದ್ರುದ್ದೀನ್ ಅಜ್ಮಲ್ ಎಐಯುಡಿಎಫ್ ಮುಖಂಡ) ಎಂದು ಬೆಂಬಲಿಗರ ಗುಂಪನ್ನು ಪ್ರಶ್ನಿಸುತ್ತಿದ್ದರು. ಅಜ್ಮಲ್ ಅವರ ಧಾರ್ಮಿಕ ಗುರುತಿಸುವಿಕೆಗೆ ಒತ್ತು ನೀಡಿ, ಮುಸ್ಲಿಂ ವಲಸೆಯವರಿಂದ ಬಲ ಪಡೆದರು.
ಮುಸಲ್ಮಾನರ ಮತದಾನದ ಹಕ್ಕು ಕಿತ್ತುಹಾಕುವ ಅಥವಾ ಅವರಿಗೆ ಭೂಮಿ ಹೊಂದುವ ಅವಕಾಶ ನಿರಾಕರಿಸುವ ಇಲ್ಲವೇ, ಅವರನ್ನು ಸಾರಾಸಗಟಾಗಿ ಗಡಿಪಾರು ಮಾಡಿದರೆ, ಅಸ್ಸಾಂ ತತ್ತರಿಸುತ್ತದೆ. ಸಂಘ ಪರಿವಾರದ ಬಿಸಿರಕ್ತದ ಮುಖಂಡರು ತಮ್ಮ ಶಕ್ತಿಯನ್ನು ವಿಸ್ತರಿಸಿಕೊಳ್ಳಬಹುದು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ದೇಶದ ಇತರೆಡೆಗಳಲ್ಲಿ ಸೃಷ್ಟಿಸಿದ ಪರಿಸ್ಥಿತಿಯನ್ನು ಇಲ್ಲೂ ಸೃಷ್ಟಿಸಬಹುದು.
ಎಐಯುಡಿಎಫ್‌ನ ಕೃಪೆಯಡಿ ಮಾತ್ರ ಮುಸಲ್ಮಾನರು ಪ್ರತಿರೋಧ ವ್ಯಕ್ತಪಡಿಸಲು ಸಾಧ್ಯ ಎಂದು ನಿರೀಕ್ಷಿಸಲಾಗಿದೆ. ಎಐಯುಡಿಎಫ್ ಜಮಾಅತೆ ಹಿಂದ್ ಸಂಘಟನೆಯ ಪ್ರತಿಫಲವಾಗಿದ್ದು, ಸಂಘಟನಾತ್ಮಕವಾಗಿ ಮತ್ತು ಸೈದ್ಧಾಂತಿಕವಾಗಿ ಆರೆಸ್ಸೆಸ್‌ಗೆ ವ್ಯತಿರಿಕ್ತವಾಗಿರುವಂಥದ್ದು. ಮುಸ್ಲಿಂ ವಲಸೆಯವರಲ್ಲಿ ಬಿಗಿ ಹಿಡಿತವನ್ನು ಈ ಪಕ್ಷ ಹೊಂದಿದೆ. ಇದೀಗ ಸ್ವದೇಶಿ ಮುಸ್ಲಿಂ ಸಮುದಾಯದಲ್ಲೂ ಹಿಡಿತ ಹೊಂದಿದೆ. ಇದು ಅವರ ಸಂರಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದೆ.
ಆರೆಸ್ಸೆಸ್‌ನ ಇನ್ನೊಂದು ಪ್ರಮುಖ ಯೋಜನೆಯೆಂದರೆ, ಕ್ರೈಸ್ತ ಮಿಷನರಿಗಳನ್ನು ಗುರಿಮಾಡುವುದು. 1950ರ ದಶಕದಲ್ಲೇ, ಅದರ ಎರಡನೆ ಸರಸಂಘಚಾಲಕ ಎಂ.ಎಸ್.ಗೋಳ್ವಾಲ್ಕರ್, ಕ್ರೈಸ್ತ ಮಿಷನರಿಗಳ ವಿರುದ್ಧ ಧ್ವನಿ ಎತ್ತಿದ್ದರು. ‘‘ಹಿಂದೂಗಳು ಎನಿಸಿದ ಬುಡಕಟ್ಟು ಜನಾಂಗದವರನ್ನು ವಂಚಿಸಲು ಮಿಷನರಿಗಳು ಮುಂದಾಗಿವೆ’’ ಎಂದು ಆಪಾದಿಸಿದ್ದರು.

ಆರೆಸ್ಸೆಸ್ ಶಾಲೆ ಹಾಗೂ ಆರೋಗ್ಯ ಕೇಂದ್ರಗಳನ್ನು ಗುಡ್ಡಗಾಡು ಪ್ರದೇಶದಲ್ಲಿ ಆರಂಭಿಸುವ ಮೂಲಕ ಕ್ರೈಸ್ತ ಧರ್ಮಪ್ರಚಾರ ಸಂಸ್ಥೆಗಳ ಪ್ರಯತ್ನ ವಿಫಲಗೊಳಿಸಿತು. ಬುಡಕಟ್ಟು ಜನಾಂಗಗಳನ್ನು ಒಗ್ಗೂಡಿಸುವ ಪ್ರಯತ್ನವನ್ನೂ ಮಾಡಿತು ಮತ್ತು ಇವೆಲ್ಲ ಸಮುದಾಯಗಳನ್ನು ಹಿಂದೂ ಸಮಾಜದ ಭಾಗವಾಗಿ ಪರಿವರ್ತಿಸಲು ಮುಂದಾಯಿತು. 1967ರಲ್ಲಿ ಗುವಾಹಟಿಯಲ್ಲಿ ನಡೆದ ವಿಶ್ವಹಿಂದೂ ಪರಿಷತ್ ಸಮಾವೇಶದಲ್ಲಿ, ಗೋಳ್ವಾಲ್ಕರ್ ಹಾಗೂ ದ್ವಾರಕಪೀಠದ ಶಂಕರಾಚಾರ್ಯರ ನಡುವೆ, ಬುಡಕಟ್ಟು ಜನರನ್ನು ಹಿಂದೂಗಳೆಂದು ಪರಿಗಣಿಸಬಹುದೇ ಎಂಬ ವಿಷಯದ ಬಗ್ಗೆ ದೊಡ್ಡ ಚರ್ಚೆಯೇ ನಡೆಯಿತು. ವಿಭಜನೆ ರೇಖೆ
ಶಂಕರಾಚಾರ್ಯರು ಹಾಗೂ ಬೆಂಬಲಿಗರು ಸಾಧ್ಯವಿಲ್ಲ ಎಂಬ ವಾದ ಮಂಡಿಸಿದರು. ಏಕೆಂದರೆ, ಬುಡಕಟ್ಟು ಜನಾಂಗದವರು ಗೋಮಾಂಸ ಭಕ್ಷಕರು ಎನ್ನುವುದು ಅವರ ವಾದವಾಗಿತ್ತು. ಅದಕ್ಕೆ ಗೋಳ್ವಾಲ್ಕರ್, ‘‘ಬುಡಕಟ್ಟು ಜನಾಂಗದವರಿಗೆ ಹಿಂದೂ ಸಂಪ್ರದಾಯದ ಅರಿವು ಇಲ್ಲ. ಹಿಂದೂ ಪ್ರಜ್ಞಾವಂತರು ಅವರಲ್ಲಿ ಅರಿವು ಮೂಡಿಸದೇ ಇರುವ ಕಾರಣ ಅವರು ಹಸುವನ್ನು ಪವಿತ್ರ ಎಂದು ಪರಿಗಣಿಸುತ್ತಿಲ್ಲ’’ ಎಂದು ಪ್ರತಿವಾದ ಮಂಡಿಸಿದರು.ಬಳಿಕ ಶಂಕರಾಚಾರ್ಯರು, ಬುಡಕಟ್ಟು ಜನಾಂಗದವರನ್ನು ಹಿಂದೂಗಳೆಂದು ಘೋಷಿಸಿದರು. ಆರ್ಥಿಕ ಅಗತ್ಯತೆ ಕಾರಣದಿಂದ ಅವರು ಗೋಮಾಂಸ ಭಕ್ಷಣೆ ಮಾಡುತ್ತಿದ್ದಾರೆ. ಬೆಟ್ಟಪ್ರದೇಶದಲ್ಲಿ ಹಾಗೂ ಗುಡ್ಡಗಾಡುಗಳಲ್ಲಿ ಆಹಾರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಈ ಆಹಾರ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮತಾಂತರ ಹಾಗೂ ಮುಸ್ಲಿಂ ನುಸುಳುವಿಕೆಯನ್ನು ಅಸ್ಸಾಂಗೆ ಸೀಮಿತವಾದಂತೆ ಆರೆಸ್ಸೆಸ್ ಒಗ್ಗೂಡಿಸಿತು. ಈಗ ಆರೆಸ್ಸೆಸ್ ಮುಖ್ಯಸ್ಥರಾಗಿರುವ ಮೋಹನ್ ಭಾಗವತ್ 2005ರಲ್ಲಿ, ‘‘ಸುನಾಮಿಯ ದೈತ್ಯ ಅಲೆಗಳು ಪ್ರಾಕೃತಿಕ ವಿಕೋಪ. ಅದು ಯಾವಾಗ ದಾಳಿ ಮಾಡುತ್ತದೆ ಎಂದು ಯಾರೂ ಊಹಿಸಲಾಗದು. ನಮಗೆಲ್ಲ ನುಸುಳುವಿಕೆ ಹಾಗೂ ಮತಾಂತರದ ಬಗ್ಗೆ ಅರಿವು ಇದೆ. ಇದು ಅತ್ಯಂತ ಯೋಜಿತವಾಗಿ ನಡೆಯುತ್ತಿದೆ. ಇದರ ಪರಿಣಾಮ ಸುನಾಮಿಗಿಂತಲೂ ಅಪಾಯಕಾರಿ’’ ಎಂದು ವಿಶ್ಲೇಷಿಸಿದ್ದರು.
ಈ ಸುನಾಮಿಯ ಅಪಾಯವನ್ನು ಎದುರಿಸುವ ಸಲುವಾಗಿ, ಮುನ್ನೆಚ್ಚರಿಕೆ ಕ್ರಮವಾಗಿ, ಮುನ್ಸೂಚನೆ ವ್ಯವಸ್ಥೆಯನ್ನು ತೆಗೆದುಕೊಂಡಿತು. ಇದೀಗ ಸಂಘ ಪರಿವಾರ, ಭಾಗವತ್ ಅವರು ಎಚ್ಚರಿಕೆ ನೀಡಿದ 11 ವರ್ಷಗಳ ಬಳಿಕ ಇದಕ್ಕಾಗಿ ಅಸ್ಸಾಂನ ಬಿಜೆಪಿ ಸರಕಾರಕ್ಕೆ ಕಡಿವಾಣ ಹಾಕಬಹುದು. ವಲಸೆ ಹಾಗೂ ಮತಾಂತರ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ರಾಜ್ಯ ಸಾಕ್ಷಿಯಾಗಬಹುದು.
ವಿಸ್ತೃತವಾಗಿ 2014ರ ಮೇ ಬಳಿಕ ದೇಶದಲ್ಲಿ ನಡೆದದ್ದನ್ನು ಗಮನಿಸಿದರೆ, ವಾಸ್ತವಿಕ ನೆಲೆ ಉದಾರವಾಗಿರುವ ಸಾಧ್ಯತೆ ಇಲ್ಲ.

Writer - ಎಜಾಝ್ ಅಶ್ರಫ್

contributor

Editor - ಎಜಾಝ್ ಅಶ್ರಫ್

contributor

Similar News