ಆಫ್ರಿಕನ್ ದಿನಾಚರಣೆ ಬಹಿಷ್ಕರಿಸಲು ಮುಂದಾದ ರಾಯಭಾರಿಗಳು

Update: 2016-05-26 03:32 GMT

ಹೊಸದಿಲ್ಲಿ, ಮೇ 26: ದೇಶದಲ್ಲಿ ಆಫ್ರಿಕನ್ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜತಾಂತ್ರಿಕ ಬಿಕ್ಕಟ್ಟನ್ನು ನಿರ್ವಹಿಸಲು ಹೆಣಗಾಡುತ್ತಿದೆ. ಕಾಂಗ್ಲೋಲೇಸ್ ವಿದ್ಯಾರ್ಥಿ ಮಸೋಂಡಾ ಒಲಿವರ್ ಹತ್ಯೆ ಬಳಿಕ ಮಿಂಚಿನ ಮುಷ್ಕರ ನಡೆಸಿದ ಆಫ್ರಿಕನ್ ರಾಜತಾಂತ್ರಿಕರು, ಇಂಥ ದಾಳಿ ತಡೆಯದಿದ್ದರೆ ಆಫ್ರಿಕನ್ ದಿನಾಚರಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಆಫ್ರಿಕಾ ದೇಶಗಳ ರಾಜತಾಂತ್ರಿಕರನ್ನು ಭೇಟಿ ಮಾಡಿದ ಗೃಹಖಾತೆ ರಾಜ್ಯಸಚಿವ ವಿ.ಕೆ.ಸಿಂಗ್ ಅವರು ಘಟನೆಯನ್ನು ಖಂಡಿಸಿದರಲ್ಲದೇ, ಇಂಥ ದಾಳಿ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇದಾದ ಬಳಿಕ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಬಳಿ ಒಯ್ದರು. ಈ ವಿಷಯದಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ವೈಯಕ್ತಿಕ ಆಸಕ್ತಿ ವಹಿಸುವುದಾಗಿ ಸುಷ್ಮಾ ಭರವಸೆ ನೀಡಿದರು. ಇಂಥ ಜನಾಂಗೀಯ ದಾಳಿ ಹಾಗೂ ಆಫ್ರೋಫೋಬಿಯಾ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಫ್ರಿಕನ್ ರಾಜತಾಂತ್ರಿಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಭೀತಿ ಹಾಗೂ ಅಭದ್ರತೆಯ ವಾತಾವರಣದಲ್ಲಿ, ಇನ್ನು ಮುಂದೆ ಭಾರತಕ್ಕೆ ಯಾವುದೇ ವಿದ್ಯಾರ್ಥಿಗಳನ್ನು ಕಳುಹಿಸದಂತೆ ತಮ್ಮ ದೇಶಗಳ ಸರ್ಕಾರಗಳಿಗೆ ಶಿಫಾರಸ್ಸು ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗುರುವಾರ ನಡೆಯುವ ಆಫ್ರಿಕನ್ ದಿನಾಚರಣೆಯನ್ನು ಬಹಿಷ್ಕರಿಸುವುದಾಗಿ ರಾಜತಾಂತ್ರಿಕರು ಭರವಸೆ ನೀಡಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಶುಭ ಹಾರೈಸಿದ್ದಾರೆ. ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಅವರು ಮನವಿ ಮಾಡಿದ್ದಾರೆ. ವಿ.ಕೆ.ಸಿಂಗ್ ಅವರು ಮತ್ತೆ ರಾಜತಾಂತ್ರಿಕರಿಗೆ ಮನವಿ ಮಾಡಿ, ಹಳೆಯ ಸಂಪ್ರದಾಯವನ್ನು ಮುಂದುವರಿಸಬೇಕು. ಕೇಂದ್ರ ಸರ್ಕಾರ ನಿಮ್ಮ ಸಲಹೆಯ ಆಧಾರದಲ್ಲೇ ಹೆಜ್ಜೆ ಇಡಲಿದೆ ಎಂದು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News