ಜಿತನ್‌ರಾಮ್ ಮಾಂಝಿ ವಿರುದ್ಧ ಉದ್ರಿಕ್ತ ಜನರಿಂದ ಹಲ್ಲೆ ಯತ್ನ!

Update: 2016-05-27 04:53 GMT

ಗಯಾ, ಮೇ 27: ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ರಾಂ ಮಾಂಝಿಯ ವಿರುದ್ಧ ಜನರ ಗುಂಪು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಜಿತನ್‌ರಾಂ ಪಾರಾದರೂ ಭದ್ರತಾ ಭಟರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾವೊವಾದಿಗಳಿಂದ ಹತರಾಗಿರುವ ಎಲ್‌ಜೆಪಿ ನಾಯಕ ಸುಂದರೇಶ್ ಪಾಸ್ವಾನ್ ಮತ್ತು ಅವರ ಅಳಿಯನ ಮೃತದೇಹವನ್ನು ನೋಡಲು ಬಂದಾಗ ಮಾಂಝಿ ವಿರುದ್ಧ ಹಲ್ಲೆಗೆ ಯತ್ನಿಸಲಾಗಿದೆ. ರಕ್ಷಣಾ ಭಟರು ಮಾಂಝಿಯನ್ನು ರಕ್ಷಿಸಲು ಯತ್ನಿಸಿದಾಗ ಗಾಯಗೊಂಡರೆಂದು ಮಗತ್ ರೇಂಜ್ ಡಿಐಜಿ ಸೌರಭ್ ಕುಮಾರ್ ಹೇಳಿದ್ದಾರೆ.

ಕೊಲೆಗಡುಕರನ್ನು ಶೀಘ್ರ ಬಂಧಿಸಬೇಕೆಂದು ಪ್ರತಿಭಟನಾ ಕಾರರು ಮೊರ್ ನಗರದಲ್ಲಿ ರಸ್ತೆ ತಡೆ ನಡೆಸಿದರು. ಆ ಸಂದರ್ಭದಲ್ಲಿ ಆ ದಾರಿಯಿಂದ ಸಾಗುತ್ತಿದ್ದ ಮಾಂಝಿಯ ವಾಹನಕ್ಕೆ ಪ್ರತಿಭಟನಾಕಾರರು ಕಲ್ಲೆಸೆದು, ಸುರಕ್ಷಾ ಭಟರ ವಾಹನಗಳನ್ನು ಉರಿಸಿಹಾಕಿದ್ದಾರೆ. ಅಲ್ಲದೆ ಎರಡು ಬೈಕ್‌ಗಳಿಗೂ ಪ್ರತಿಭಟಕಾರರು ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರು ಮೊದಲಿಗೆ ಮೃತ ಎಲ್‌ಜೆಪಿ ನಾಯಕರಿಬ್ಬರ ಮೃತದೇಹಗಳನ್ನು ಪೊಲೀಸರಿಗೆ ಬಿಟ್ಟುಕೊಡಲು ಸಿದ್ಧರಾಗಲಿಲ್ಲ. ಜಿಲ್ಲಾಮ್ಯಾಜಿಸ್ಟ್ರೇಟ್ ಬಂದು ಪ್ರತಿಭಟನಾಕಾರರೊಂದಿಗೆ ಮಾತಾಡಿದ ಬಳಿಕ ಪೊಸ್ಟ್ ಮಾರ್ಟಂ ನಡೆಸಲು ಅವಕಾಶ ಮಾಡಿಕೊಟ್ಟರು. ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಘ್ನಪರಿಸ್ಥಿತಿ ತಲೆದೋರಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News