ಕೇರಳ ಸಿಡಿಮದ್ದು ದುರಂತ: 70 ಮಂದಿಗೆ 6.2ಕೋಟಿ ರೂ. ವಿತರಣೆ

Update: 2016-05-27 08:45 GMT

ಕೊಲ್ಲಂ,ಮೇ 27: ಪರವೂರ್ ಸಿಡಿಮದ್ದು ದುರಂತದಲ್ಲಿ ಮೃತರಾದವರ ಕುಟುಂಬಕ್ಕೆ ಸರಕಾರ ಘೋಷಿಸಿರುವ ಧನ ಸಹಾಯವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶೈನಾಮೋಳ್ ತಿಳಿಸಿದ್ದಾರೆ. ದುರಂತದಲ್ಲಿ ಕೊಲ್ಲಂ ಜಿಲ್ಲೆಯ ಎಪ್ಪತ್ತೊಂದು ಮಂದಿ ಮೃತರಾಗಿದ್ದು ಇವರಲ್ಲಿ ಐವತ್ತು ಮಂದಿಯ ಕುಟುಂಬಕ್ಕೆ ಸರಕಾರ ಘೋಷಿಸಿದ ತಲಾ ಹತ್ತು ಲಕ್ಷ ರೂಪಾಯಿಯನ್ನು ವಿತರಿಸಲಾಗಿದೆ. ಇಪ್ಪತ್ತು ಮಂದಿಗೆ ತಲಾ ಆರು ಲಕ್ಷ ರೂಪಾಯಿಯಂತೆ ವಿತರಿಸಲಾಗಿದೆ. ಒಂದು ಪ್ರಕರಣದಲ್ಲಿ ಸಹಾಯ ಧನ ಯಾರಿಗೆ ನೀಡಬೇಕೆಂಬ ವಿಚಾರ ವಿವಾದದಲ್ಲಿದ್ದು ನಿಜವಾದ ಹಕ್ಕುದಾರರನ್ನು ನಿಶ್ಚಯಿಸಿ ಎರಡು ದಿವಸಗಳೊಳಗೆ ಹಣವನ್ನು ನೀಡಲಾಗುವುದು. ಈಗಾಗಲೆ ಇವರಿಗೆ ತುರ್ತು ಸಹಾಯವಾಗಿ 10,000 ರೂಪಾಯಿ ವಿತರಿಸಲಾಗಿದೆ.

ಮುಖ್ಯಮಂತ್ರಿಯ ಸಂತ್ರಸ್ತ ಪರಿಹಾರ ನಿಧಿಯಿಂದ ಆರು ಲಕ್ಷ ರೂಪಾಯಿ, ರಾಜ್ಯದ ದುರಂತ ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ರೂಪಾಯಿ ಹೀಗೆ ಒಟ್ಟು ಹತ್ತು ಲಕ್ಷ ರೂಪಾಯಿ ಮೃತರಾದ ಐವತ್ತು ಮಂದಿಯ ಕುಟುಂಬಕ್ಕೆ ನೀಡಲಾಗಿದೆ. ರಾಜ್ಯದ ದುರಂತ ಪರಿಹಾರ ನಿಧಿಯಿಂದ ಜಿಲ್ಲೆಗೆ ಅನುಮತಿಸಲಾದ ಎರಡು ಕೋಟಿ ನಾಲ್ಕು ಲಕ್ಷ ರೂಪಾಯಿಯನ್ನು ವಿತರಿಸಲಾಗಿದ್ದು ಉಳಿದ ಹಣವನ್ನು ಶೀಘ್ರದಲ್ಲಿ ಒದಗಿಸಬೇಕೆಂದು ಸರಕಾರವನ್ನು ವಿನಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬಾಕಿಉಳಿದಿರುವ 21 ಮಂದಿಗೆ ತಲಾ ನಾಲ್ಕು ಲಕ್ಷ ರೂಪಾಯಿಯಂತೆ ವಿತರಿಸಬೇಕಿದ್ದು ದುರಂತದಲ್ಲಿ ಎಲ್ಲಾ ಅಂಗ ಊನಗೊಂಡವರಿಗೆ ತಲಾ ಎರಡು ಲಕ್ಷ ರೂಪಾಯಿಯಂತೆ ವಿತರಿಸಲು ಹಣವನ್ನು ಕೊಲ್ಲಂ ತಹಶೀಲ್ದಾರ್‌ರಿಗೆ ಹಸ್ತಾಂತರಿಸಲಾಗಿದೆ. ವಿತರಣೆಗೆ ಆವಶ್ಯಕವಿರುವ ಎಲ್ಲ ವಿಧಿವಿಧಾನಗಳು ಪೂರ್ತಿಯಾಗಿದ್ದು ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಗಂಭೀರ ಗಾಯಗೊಂಡವರು ಮತ್ತು ಸಾಮಾನ್ಯಗಾಯಗೊಂಡವರ ಪಟ್ಟಿಯನ್ನು ಜಿಲ್ಲಾ ವೈದ್ಯಾಧಿಕಾರಿಯ ನೇತೃತ್ವದಲ್ಲಿ ತಯಾರಿಸಲಾಗಿದೆ. ಆ ಪ್ರಕಾರ ಸರಕಾರ ಅನುಮತಿಸಿರುವ ಹಣವನ್ನು ಕೂಡಲೇ ಅವರಿಗೆ ಹಸ್ತಾಂತರಿಸಲಾಗುವುದು. ತುರ್ತು ನೆರವಾಗಿ ಈಗಾಗಲೇ ಇವರಿಗೆ ತಲಾ ಐದು ಸಾವಿರ ರೂಪಾಯಿ ನೀಡಲಾಗಿದೆ. ತಿರುವನಂತಪುರಂ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ವಿವರಗಳನ್ನು ನೀಡುವಂತೆ ಅಲ್ಲಿನ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.

ಅದು ಸಿಕ್ಕಿದ ಕೂಡಲೇ ಅವರಿಗೂ ಹಣವನ್ನು ವಿತರಿಸಲಾಗುವುದು. ಸಿಡಿಮದ್ದು ದುರಂತದಲ್ಲಿ ತಿರುವನಂತಪುರಂ ಜಿಲ್ಲೆಯ 36 ಮಂದಿ, ಇಡುಕ್ಕಿ, ಪತ್ತನತಿಟ್ಟಂ, ಕಣ್ಣೂರು ಜಿಲ್ಲೆಯ ತಲಾ ಒಬ್ಬರು ಮೃತರಾಗಿದ್ದಾರೆ. ಇವರ ಕುಟುಂಬಕ್ಕೆ ಆಯಾ ಜಿಲ್ಲಾಧಿಕಾರಿಗಳ ಮೂಲಕ ಧನ ಸಹಾಯವನ್ನು ತಲುಪಿಸಲಾಗುವುದು. ಬಿರುಸಿನ ಚುನಾವಣಾ ಚಟುವಟಿಕೆಗಳಿದ್ದರೂ ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಾದಷ್ಟು ಬೇಗನೆ ಪರಿಹಾರಧನವನ್ನು ವಿತರಿಸಲು ಸಾದ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶೈನಾಮೋಳ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News