ಇಷ್ರತ್ ಭಯೋತ್ಪಾದಕಿಯಾಗಿದ್ದಳು ಎನ್ನುವುದಕ್ಕೆ ಸರಕಾರದ ಬಳಿ ಸಾಕ್ಷಾಧಾರವೇ ಇಲ್ಲ:ವೃಂದಾ ಗ್ರೋವರ್

Update: 2016-05-28 14:52 GMT

ಹೊಸದಿಲ್ಲಿ,ಮೇ 28: ಗುಜರಾತ್ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಇಷ್ರತ್ ಜಹಾನ್ ಲಷ್ಕರ್-ಎ-ತಯ್ಯಬಾದ ಭಯೋತ್ಪಾದಕಿಯಾಗಿದ್ದಳು ಎನ್ನುವುದಕ್ಕೆ ಸರಕಾರದ ಬಳಿ ಈಗಲೂ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ಆಕೆಯ ಕುಟುಂಬದ ಪರ ವಕಾಲತ್ ವಹಿಸಿಕೊಂಡಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತೆ ವೃಂದಾ ಗ್ರೋವರ್ ಅವರು ಪ್ರತಿಪಾದಿಸಿದ್ದಾರೆ. ಗುಜರಾತ್ ಪೊಲೀಸರು ಇಷ್ರತ್‌ಳನ್ನು ಅಪಹರಿಸಿದ್ದರು ಮತ್ತು ಅಕ್ರಮ ಬಂಧನದಲ್ಲಿರಿಸಿ ಬಳಿಕ ಆಕೆಯನ್ನು ಹತ್ಯೆ ಮಾಡಿದ್ದರು ಎಂದು ಈಗಲೂ ಎಲ್ಲ ಸಾಕ್ಷಾಧಾರಗಳು ಬೆಟ್ಟು ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.
ತನ್ನ ಫೇಸ್‌ಬುಕ್ ಪೇಜಿನಲ್ಲಿ ಕೇಂದ್ರ ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಗ್ರೋವರ್,ಇಷ್ರತ್ ಜಹಾನ್ ಕೊಲೆ ಪ್ರಕರಣದಲ್ಲಿ ಮೋದಿ ಸರಕಾರದ ಸುಳ್ಳುಗಳ ಮತ್ತು ಸತ್ಯವನ್ನು ತಿರುಚುವ ಫ್ಯಾಕ್ಟರಿಗೆ ಅವರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಕುಟುಕಿದ್ದಾರೆ.
ರಿಜಿಜು,ನೀವು ಯಾರ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದೀರಿ..? ಭಾರತೀಯ ಸಂವಿಧಾನದಂತೆಯಂತೂ ಖಂಡಿತವಾಗಿಯೂ ಅಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ರಿಜಿಜು ಶುಕ್ರವಾರ ಇಂಡಿಯಾ ಟುಡೇ ಟಿವಿ ವಾಹಿನಿಯೊಂದಿಗೆ ಮಾತನಾಡುತ್ತ ಇಷ್ರತ್ ಜಹಾನ್ ಲಷ್ಕರ್ ಉಗ್ರಳಾಗಿದ್ದಳು ಎಂದು ಹೇಳಿದ್ದರು.
ಇಷ್ರತ್ ಲಷ್ಕರ್ ಉಗ್ರಳಾಗಿದ್ದಳು ಎನ್ನುವುದು ಸಹಾಯಕ ಗೃಹ ಸಚಿವರಿಗೆ ಹೇಗೆ ಗೊತ್ತು? ಅವರಿಗೆ ಲಭ್ಯವಿರಬಹುದಾದ ಯಾವುದೇ ದಾಖಲೆಗಳು ಅಥವಾ ಕಡತಗಳಿಂದ ಅವರಿಗೆ ಈ ಜ್ಞಾನ ಪ್ರಾಪ್ತಿಯಾಗಿದ್ದಲ್ಲ. ಅವರಿಗೆ ಈ ಜ್ಞಾನವನ್ನು ನೀಡಿದ್ದು 2004ರಲ್ಲಿ ಇಷ್ರತ್‌ಳನ್ನು ಹುತಾತ್ಮಳೆಂದು ಬಣ್ಣಿಸಿದ್ದ ಲಷ್ಕರ್ ಜಾಲತಾಣ. ಆದರೆ ಅದೇ ಜಾಲತಾಣ 2007ರಲ್ಲಿ ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡು ಕ್ಷಮೆಯನ್ನು ಯಾಚಿಸಿತ್ತು ಮತ್ತು ಇಷ್ರತ್ ಲಷ್ಕರ್‌ನ ಭಾಗವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿತ್ತು. ಸಹಾಯಕ ಗೃಹಸಚಿವರು ಈಗೇಕೆ ಲಷ್ಕರ್ ಹೇಳಿಕೆಯನ್ನು ನಂಬುತ್ತಿಲ್ಲ ಎಂದು ಗ್ರೋವರ್ ಪ್ರಶ್ನಿಸಿದ್ದಾರೆ.
ಇಷ್ರತ್ ಎನ್‌ಕೌಂಟರ್ ಹತ್ಯೆಯ ತನಿಖೆಯನ್ನು ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಲಷ್ಕರ್ ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡ ಸಮಯದಲ್ಲಿ(2007) ಪ್ರಭಾರ ಕರ್ತವ್ಯದ ಮೇರೆಗೆ ಸಿಬಿಐಗೆ ನಿಯೋಜಿಸಲಾಗಿತ್ತು ಎಂದು ರಿಜಿಜು ಹೇಳಿದ್ದರು.
ಅದೊಂದು ನಕಲಿ ಎನ್‌ಕೌಂಟರ್ ಎಂದು 2013ರಲ್ಲಿ ಎತ್ತಿ ಹಿಡಿದಿದ್ದ ಸಿಬಿಐ,ಗುಜರಾತ್ ಪೊಲೀಸರು ಐಬಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಇಷ್ರತ್ ಮತ್ತು ಇತರ ಮೂವರನ್ನು ಕ್ರೂರವಾಗಿ ಕೊಂದಿದ್ದರು ಎಂದು ಹೇಳಿತ್ತು.
ಯುಪಿಎ ಲಷ್ಕರ್ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿತ್ತು ಎಂದು ರಿಜಿಜು ಹೇಳಿದ್ದು ಇದನ್ನು ಇಂಡಿಯಾ ಟಿವಿಯು ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡಿತ್ತು. ಅವರ ಹೇಳಿಕೆಯ ಸತ್ಯಾಸತ್ಯೆಯನ್ನು ಪರಿಶೀಲಿಸುವ ಗೋಜಿಗೂ ಇಂಡಿಯಾ ಟುಡೇ ಹೋಗಿರಲಿಲ್ಲ ಎಂದು ಟೀಕಿಸಿರುವ ಗ್ರೋವರ್, ನಮಗೆ ಲಭ್ಯವಿಲ್ಲದ ಮಾಹಿತಿಗಳ ಕಡತಗಳು ಸಹಾಯಕ ಗೃಹಸಚಿವರಾಗಿ ರಿಜಿಜು ಅವರಿಗೆ ಲಭ್ಯವಿವೆ ಎಂದು ವಾಹಿನಿಯು ಪದೇಪದೇ ಹೇಳಿಕೊಂಡಿದೆ. ನಿಜಕ್ಕೂ ಇದು ಹೌದಾ? ಈ ಸ್ಫೋಟಕ ಮಾಹಿತಿ ರಿಜಿಜು ಅವರಿಗೆ ಗೊತ್ತಾಗಿದ್ದು ಈ ರೀತಿಯಾಗಿಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ತನ್ನ ಪ್ರತಿಪಾದನೆಗೆ ಸಮರ್ಥನೆಯಾಗಿ ಗ್ರೋವರ್ ಕೆಲವು ಪ್ರಮುಖ ಅಂಶಗಳನ್ನು ಮತ್ತು ದಿನಾಂಕಗಳನ್ನು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಗುಜರಾತ್ ಉಚ್ಚ ನ್ಯಾಯಾಲಯದಿಂದ ನೇಮಕಗೊಂಡಿದ್ದ ವಿಶೇಷ ತನಿಖಾ ತಂಡ(ಸಿಟ್)ವು ಅದೊಂದು ನಕಲಿ ಎನ್‌ಕೌಂಟರ್ ಎಂದು ನಿರ್ಧರಿಸಿತ್ತು ಮತ್ತು ಪೊಲೀಸ್ ಅಧಿಕಾರಿ ಸತೀಶ ವರ್ಮಾ ಸಿಟ್‌ನ ಭಾಗವಾಗಿದ್ದರು. ಗುಜರಾತ್ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ 2012ರಲ್ಲಿ ಪ್ರಕರಣದ ತನಿಖೆಯನ್ನು ಅಂತಿಮವಾಗಿ ಸಿಬಿಐಗೆ ಒಪ್ಪಿಸಲಾಗಿತ್ತು.
ವರ್ಮಾ ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದರು ಮತ್ತು ಆಗಿದ್ದಾರೆ. ಅವರನ್ನೆಂದೂ ಕೇಂದ್ರ ಸರಕಾರದ ಸೇವೆಯ ಮೇಲೆ ಕಳುಹಿಸಿರಲಿಲ್ಲ. ಗುಜರಾತ್ ಉಚ್ಚ ನ್ಯಾಯಾಲಯದ ನಿರ್ದೇಶಗಳ ಮೇರೆಗೆ ಅವರು ಸಿಬಿಐ ತನಿಖೆಯಲ್ಲಿ ನೆರವಾಗಿದ್ದರು.
ತನಿಖೆಯನ್ನು ಸಿಬಿಐ ನಡೆಸಿತ್ತು ಮತ್ತು 11 ಗುಜರಾತ ಪೊಲೀಸ್ ಅಧಿಕಾರಿಗಳ ವಿರುದ್ಧ 2013,ಜುಲೈನಲ್ಲಿ ಮತ್ತು ನಾಲ್ವರು ಐಬಿ ಅಧಿಕಾರಿಗಳ ವಿರುದ್ಧ 2014,ಫೆಬ್ರುವರಿಯಲ್ಲಿ ಆರೋಪ ಪಟ್ಟಿಗಳನ್ನು ಸಲ್ಲಿಸಿತ್ತು.
ಇದರೊಂದಿಗೆ,ಭಾರತೀಯ ದಾಖಲೆಗಳು,ಗುಜರಾತ ಉಚ್ಚ ನ್ಯಾಯಾಲಯದ ತೀರ್ಪುಗಳು ಮತ್ತು ಸಿಬಿಐ ಆರೋಪ ಪಟ್ಟಿಯನ್ನು ಓದಿಕೊಳ್ಳುವಂತೆ ರಿಜಿಜು ಅವರಿಗೆ ವಿನಂತಿಸಿಕೊಂಡಿರುವ ಗ್ರೋವರ್, ಭಾರತೀಯ ನ್ಯಾಯಾಲಯಗಳಲ್ಲಿ ವಿಶ್ವಾಸವಿರಿಸುವಂತೆ ಅವರಿಗೆ ಸೂಚಿಸಿದ್ದಾರೆ.
2007 ಮತ್ತು 2012ರ ನಡುವೆ ಐದು ವರ್ಷಗಳ ಅಂತರವಿದೆ. ನೀವು ಸುಳ್ಳುಗಳನ್ನು ಹೇಳುವುದರೊಂದಿಗೆ ವಾಸ್ತವಾಂಶಗಳನ್ನು ತಿರುಚುತ್ತಿದ್ದೀರಿ ಮತ್ತು ನಿಮ್ಮ ಅಧಿಕಾರ ಸ್ಥಾನವನ್ನು ದುರುಪಯೋಗಿಸಿಕೊಳ್ಳುತ್ತಿದ್ದೀರಿ. ಇನ್ನೊಮ್ಮೆ ಹೇಳುತ್ತೇನೆ,ಇಷ್ರತ್ ಭಯೋತ್ಪಾದಕಿಯಾಗಿದ್ದಳು ಎನ್ನುವುದಕ್ಕೆ ನಿಮ್ಮ ಬಳಿ ಈಗಲೂ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ಗ್ರೋವರ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News