ಯಚೂರಿಗೆ ಪಕ್ಷದೊಳಗೆಯೇ ಶತ್ರುಗಳು!

Update: 2016-05-28 19:09 GMT

ಯಚೂರಿಗೆ ಪಕ್ಷದೊಳಗೆಯೇ ಶತ್ರುಗಳು!
 ಪಶ್ಚಿಮ ಬಂಗಾಳದಲ್ಲಿ ಸಿಪಿಎಂನ ಘೋರ ಪರಾಭವಕ್ಕಾಗಿ, ಸೀತಾರಾಮ ಯಚೂರಿಯ ವಿರುದ್ಧ ಚೂರಿಗಳನ್ನು ಈಗಾಗಲೇ ಹೊರಗೆಳೆದಿರುವ ಹಾಗೆ ಕಾಣುತ್ತಿದೆ. ರಾಜ್ಯದಲ್ಲಿ ಹಿಂದೆಂದಿಗಿಂತಲೂ ಸಿಪಿಎಂನ ಅತ್ಯಂತ ಕಳಪೆ ಸಾಧನೆಗೆ ಕಾಂಗ್ರೆಸ್ ಜೊತೆಗಿನ ಮೈತ್ರಿಯೇ ಕಾರಣವಾಗಿದ್ದು, ಈ ವಿಷಯದಲ್ಲಿ ಪಕ್ಷವು ಆತುರದಿಂದ ವರ್ತಿಸಿದೆಯೆಂದು ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಗೊಣಗುತ್ತಿದ್ದಾರೆನ್ನಲಾಗಿದೆ. ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರಿಸುವ ಯಚೂರಿಯ ಉತ್ಸಾಹಕ್ಕೆ ಭವಿಷ್ಯದಲ್ಲಿ ನಡೆಯಲಿರುವ ಪಾಲಿಟ್‌ಬ್ಯೂರೊ ಸಭೆಗಳಲ್ಲಿ ಕಡಿವಾಣ ಹಾಕುವ ಸಾಧ್ಯತೆಯಿದೆ. ಇನ್ನೊಂದೆಡೆ ಯಚೂರಿಯ ಬಳಿ ಕೂಡಾ, ಪಕ್ಷದ ಹಿಂದಿನ ಪ್ರಧಾನ ಕಾರ್ಯದರ್ಶಿಗಳು ಈ ಹಿಂದೆ ಕೈಗೊಂಡಿದ್ದ ತಪ್ಪು ನಿರ್ಧಾರಗಳ ದೀರ್ಘ ಪಟ್ಟಿಯೇ ಇದೆಯಂತೆ. ಹೀಗಾಗಿ ಪಕ್ಷವು ಪಾಲಿಟ್‌ಬ್ಯೂರೋ ಸಭೆಗಳಲ್ಲಿ ಎತ್ತಬಹುದಾದ ಪ್ರಶ್ನೆಗಳ ಬಗ್ಗೆ ಯಚೂರಿ ತಲೆಕೆಡಿಸಿಕೊಂಡಿಲ್ಲ. ಒಟ್ಟಾರೆ ಇದೊಂದು ಕುತೂಹಲಕಾರಿ ಸಮರವಾಗಲಿದೆ.

ಬಂಗಾಳದಲ್ಲಿ ದೀದಿ ವಂಶಾಡಳಿತ
   ಮುಖ್ಯಮಂತ್ರಿಯಾಗಿ ತನ್ನ ದ್ವಿತೀಯ ಅಧಿಕಾರಾವಧಿಯಲ್ಲಿ ತಾನು, ಪಕ್ಷದ ಸಂಘಟನೆಗೆ ಮೊದಲನೆ ಅವಧಿಗಿಂತ ಹೆಚ್ಚು ಸಮಯವನ್ನು ಮೀಸಲಿಡುವೆ ಹಾಗೂ ತನ್ನ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್‌ನ ಯುವಘಟಕದ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿಯನ್ನು ಪಕ್ಷದ ವ್ಯವಹಾರಗಳಲ್ಲಿ ತೊಡಗಿಸುವುದಾಗಿ ಮಮತಾ ಬ್ಯಾನರ್ಜಿ ತನ್ನ ಪಕ್ಷದ ಸದಸ್ಯರಿಗೆ ತಿಳಿಸಿದ್ದಾರೆ. ಮಮತಾ ಅವರ ಮೊದಲ ಅಧಿಕಾರಾವಧಿಯಲ್ಲಿ ಪಕ್ಷದ ಬಹುತೇಕ ವ್ಯವಹಾರಗಳು ತೃಣಮೂಲ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಮುಕುಲ್ ಬ್ಯಾನರ್ಜಿಯವರ ಕೈಯಲ್ಲಿದ್ದವು. ‘‘ದೀದಿ ಕ್ರಮೇಣ ಪಕ್ಷದ ಜವಾಬ್ದಾರಿಗಳನ್ನು ಅಭಿಷೇಕ್‌ಗೆ ವಹಿಸಲಿರುವುದು ಸ್ಪಷ್ಟವಾಗಿದೆ. ತೃಣಮೂಲ ಕಾಂಗ್ರೆಸ್‌ನಲ್ಲಿ ಅವರು ಯಾವುದೇ ಹುದ್ದೆಯನ್ನು ಹೊಂದಿರುವುದಿಲ್ಲ. ಆದರೆ ಪಕ್ಷಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅವರ ಅಭಿಪ್ರಾಯಗಳಿಗೆ ಮಹತ್ವವನ್ನು ನೀಡಲಾಗುತ್ತಿದೆಯೆಂದು ತೃಣಮೂಲ ಕಾಂಗ್ರೆಸ್‌ನ ಮೂಲವೊಂದು ಪತ್ರಿಕೆಯೊಂದರಲ್ಲಿ ತಿಳಿಸಿದೆ. ಆದಾಗ್ಯೂ ಮಮತಾ ತನಗೆ ವಂಶಾಡಳಿತದ ರಾಜಕೀಯದಲ್ಲಿ ನಂಬಿಕೆಯಿಲ್ಲವೆಂದು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಮತಾ ತನ್ನ ಸೋದರಳಿಯನನ್ನು ಮಾತ್ರವೇ ನಂಬತೊಡಗಿದ್ದಾರೆ ಹಾಗೂ ನಿಕಟಭವಿಷ್ಯದಲ್ಲಿ ಅವರಿಗೆ ಪಕ್ಷದ ಮಹತ್ವದ ಹುದ್ದೆಗಳನ್ನು ನೀಡಿದರೆ ಆಶ್ಚರ್ಯವೇನೂ ಇಲ್ಲವೆಂದು ಅದು ಹೇಳಿದೆ.

ರಾಹುಲ್ ಅವರ ತಪ್ಪಾದ ಲೆಕ್ಕಾಚಾರ
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ದಯನೀಯ ಸೋಲು ಕಾಂಗ್ರೆಸ್‌ನಲ್ಲಿ ‘ರಾಹುಲ್ ಹಠಾವೋ, ಪ್ರಿಯಾಂಕಾ ಲಾವೋ’ ಘೋಷಣೆಯ ಹುಟ್ಟಿಕೊಳ್ಳಲು ಕಾರಣವಾಗಿದೆ. ಪಕ್ಷದ ಉಪಾಧ್ಯಕ್ಷರಾಗಿ ಹಲವಾರು ರಾಜ್ಯಗಳಲ್ಲಿ ವಾಸ್ತವಿಕ ಸನ್ನಿವೇಶವನ್ನು ಅರಿತುಕೊಳ್ಳುವಲ್ಲಿ ಅಸಮರ್ಥರಾದುದಕ್ಕಾಗಿ ಅವರು ಟೀಕೆಗೊಳಗಾಗಿದ್ದಾರೆ. ವಿಧಾನಸಭಾ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಟಿಎಂಸಿ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿಯನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಆಸಕ್ತಿ ವಹಿಸಿದ್ದರೆಂದು ಕಾಂಗ್ರೆಸ್‌ನ ಒಂದು ವರ್ಗವು ಹೇಳಿಕೊಂಡಿದೆ. ನಿತೀಶ್ ಕುಮಾರ್ ಅವರ ನಿವಾಸದಲ್ಲಿ ರಾಹುಲ್ ಅವರನ್ನು ಭೇಟಿಯಾಗುವ ಅವಕಾಶ ದೊರೆತಿತ್ತು. ಈ ಸಂದರ್ಭದಲ್ಲಿ ಆಕೆ ಹಾಗೂ ರಾಹುಲ್ ಖಾಸಗಿಯಾಗಿ ಮಾತುಕತೆ ನಡೆಸಿದ್ದರೆನ್ನಲಾಗಿದೆ. ಟಿಎಂಸಿ ಜೊತೆ ಕೈಜೋಡಿಸುವ ಮೂಲಕ ಕಾಂಗ್ರೆಸ್ ಎಡರಂಗವನ್ನು ವಿರೋಧಿಸಬೇಕೆಂದು ಮಾತುಕತೆಯಲ್ಲಿ ಮಮತಾ ಬಲವಾಗಿ ವಾದಿಸಿದ್ದರೆನ್ನಲಾಗಿದೆ. ಆದರೆ ರಾಹುಲ್ ಈ ಪ್ರಸ್ತಾಪವನ್ನು ತಳ್ಳಿಹಾಕಿದ್ದರು. ಅಸ್ಸಾಂನಲ್ಲಿ ಹಾಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಸವಿಯುಂಡ ಹೇಮಂತ್ ಕುಮಾರ್ ಬಿಶ್ವ ಶರ್ಮಾ ಅವರು, ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವುದಾಗಿ ಬೆದರಿಕೆ ಹಾಕಿದಾಗಲೂ, ರಾಹುಲ್ ಮುಖ್ಯಮಂತ್ರಿಯನ್ನು ಬದಲಾಯಿಸಲು ನಿರಾಕರಿಸುವ ಮೂಲಕ ಮಹಾಪ್ರಮಾದವೆಸಗಿದ್ದರು.


ಅವಕಾಶಕ್ಕಾಗಿ ಅರಸುತ್ತಿರುವ
ಅಜಿತ್ ಸಿಂಗ್ 

 ಅಜಿತ್ ಸಿಂಗ್ ಅವರು ರಾಜಕೀಯದಲ್ಲಿ ‘ಸಮೃದ್ಧ ಹಸಿರು ಹುಲ್ಲುಗಾವಲು’ಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ರಾಷ್ಟ್ರೀಯ ಲೋಕದಳ ವರಿಷ್ಠರಾದ ಅಜಿತ್‌ಸಿಂಗ್ ಪ್ರಭಾವಿ ವ್ಯಕ್ತಿಗಳು ವಾಸವಾಗಿರುವ ದಿಲ್ಲಿಯ ಲುತ್ಯೆನ್ಸ್ ಪ್ರದೇಶದಲ್ಲಿ ಮನೆಗಾಗಿ ಹುಡುಕಾಡುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ರಾಜ್ಯಸಭೆಗೆ ಆಯ್ಕೆಯಾದಲ್ಲಿ ಮಾತ್ರ ಅವರಿಗೆ ಈ ಭಾಗ್ಯ ದೊರೆಯಲಿದೆ. ಸಿಂಗ್ ಅವರು ಉತ್ತರಪ್ರದೇಶದ ರಾಜಕೀಯದಲ್ಲಿ ಪ್ರಭಾವ ಬೀರಬೇಕೆಂಬ ವಿಷಯದಲ್ಲಿ ಜನತಾದಳ ತೀವ್ರ ಆಸಕ್ತಿಯನ್ನು ಹೊಂದಿದೆ. ಆದರೆ ಈ ಹಿರಿಯ ನಾಯಕನಿಗೆ ರಾಜ್ಯಸಭಾ ಸ್ಥಾನವನ್ನು ನೀಡಲು ಅದು ಇಚ್ಛಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಪ್ರಸಕ್ತ ಬಲಾಬಲವನ್ನು ಪರಿಗಣಿಸಿದರೆ, ಅದರ ಬಳಿ ಕೆಲವೇ ಕೆಲವು ರಾಜ್ಯಸಭಾ ಸೀಟುಗಳಿದ್ದು, ಅದಕ್ಕೆ ದೊಡ್ಡ ಸಂಖ್ಯೆಯ ಆಕಾಂಕ್ಷಿಗಳಿದ್ದಾರೆ. ಇತ್ತ ಬಿಜೆಪಿಯು, ಅಜಿತ್ ಅವರು ಪಕ್ಷವನ್ನು ತನ್ನಲ್ಲಿ ವಿಲೀನಗೊಳಿಸಬೇಕೆಂದು ಆಗ್ರಹಿಸುತ್ತಿದೆ. ಆದರೆ ರಾಜ್ಯಸಭಾ ಸ್ಥಾನವನ್ನು ನೀಡುವ ಭರವಸೆಗೆ ತಕ್ಕಂತೆ ಬಿಜೆಪಿ ನಡೆದುಕೊಳ್ಳುವುದೇ ಎಂಬುದರ ಬಗ್ಗೆ ಅಜಿತ್‌ಸಿಂಗ್‌ಗೆ ಇನ್ನೂ ಖಾತರಿಯಿಲ್ಲ. ಒಟ್ಟಿನಲ್ಲಿ ಅವರಿಗೆ ಕತ್ತಲ ಸುರಂಗದಲ್ಲಿ ಬೆಳಕು ಕಾಣಿಸುತ್ತಿಲ್ಲ.

ರಾಮ್‌ದೇವ್:1, ಶ್ರೀ ಶ್ರೀ:0
 ಗುರುಗಳ ಮಹಾಯುದ್ಧದಲ್ಲಿ ರಾಮದೇವ್ ಅವರು ಶ್ರೀ ಶ್ರೀ ರವಿಶಂಕರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಒಂದು ತಿಂಗಳಕಾಲ ಉಜ್ಜಯಿನಿಯಲ್ಲಿ ನಡೆದ ಸಿಂಹಾಸ್ತ ಕುಂಭಮೇಳವು, ಈ ಮಹಾ ಯುದ್ಧಕ್ಕೆ ವೇದಿಕೆಯಾಗಿತ್ತು. ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಮತ್ತಿತರ ಗಣ್ಯರು ಭಾಗವಹಿಸಿದ್ದ ಅಂತಾರಾಷ್ಟ್ರೀಯ ವಿಚಾರಸಂಕಿರಣಕ್ಕೆ ‘ಆರ್ಟ್ ಆಫ್ ಲಿವಿಂಗ್’ನ ವರಿಷ್ಠರಾದ ರವಿಶಂಕರ್‌ರನ್ನು ಆಹ್ವಾನಿಸದೇ ಇದ್ದುದಕ್ಕಾಗಿ ಅವರ ಬೆಂಬಲಿಗರು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಜೊತೆ ಮುನಿಸಿಕೊಂಡಿದ್ದರು. ಕೆಲವು ವದಂತಿಗಳ ಪ್ರಕಾರ ಮೋದಿ ಹಾಗೂ ಭಾಗವತ್‌ರ ನಂತರ ಹೆಚ್ಚಿನ ಪ್ರಚಾರ ಪಡೆದುಕೊಳ್ಳುತ್ತಿರುವ ರಾಮ್‌ದೇವ್, ಕಾರ್ಯಕ್ರಮಕ್ಕೆ ತನ್ನ ಎದುರಾಳಿಯ ಆಗಮನವನ್ನು ತಡೆಯಲು ಕಾರಣರಾಗಿದ್ದಾರೆ. ಪ್ರಾಯಶಃ ಮಧ್ಯಪ್ರದೇಶದಲ್ಲಿ ಬೃಹತ್ ಘಟಕವೊಂದನ್ನು ಸ್ಥಾಪಿಸುವ ರಾಮ್‌ದೇವ್‌ರ ಘೋಷಣೆಯು, ಅವರ ಪರ ಸಿಎಂ ಚೌಹಾಣ್ ವಾಲುವುದಕ್ಕೆ ಕಾರಣವಾಗಿರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News