ಆಸ್ತಿವಿವಾದ: ತಂದೆಯನ್ನು ಕೊಂದ ಪುತ್ರ!

Update: 2016-05-29 08:53 GMT

ಚೆಂಙನ್ನೂರ್, ಮೇ 29: ಇತ್ತೀಚೆಗೆ ಅಮೆರಿಕದಿಂದ ಊರಿಗೆ ಬಂದಿದ್ದ ತಂದೆಯನ್ನು ಸ್ವಂತ ಮಗನೆ ಕೊಂದು ಹಾಕಿದ ಘಟನೆ ಕೇರಳದ ಚೆಂಙನ್ನೂರ್ ಎಂಬಲ್ಲಿಂದ ವರದಿಯಾಗಿದೆ. ಚೆಂಙನ್ನೂರ್‌ನಿಂದ ತಿರುವನಂತಪುರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಾರಿ ಮಧ್ಯೆ ಆಸ್ತಿವಿವಾದ ಭುಗಿಲೆದ್ದ ಪರಿಣಾಮ ತಂದೆಯನ್ನೆ ಹಿಂದು ಮುಂದು ನೋಡದೆ ಪುತ್ರಮಹಾಶಯನೊಬ್ಬ ಕೊಂದು ಹಾಕಿದ್ದಾನೆ ಎಂದು ಸ್ಥಳೀಯ ಠಾಣಾ ಪೊಲೀಸರು ತಿಳಿಸಿದ್ದಾರೆ.

ಅಮೆರಿಕದಿಂದ ಇತ್ತೀಚೆಗೆ ಊರಿಗೆ ಬಂದಿದ್ದ ಅನಿವಾಸಿ ಕೇರಳಿಗ ವಾಯಾರ್‌ಮಂಗಳಂನ ಜೋಯಿ ವಿ. ಜೋನ್‌ರನ್ನು (68) ಅವರ ಪುತ್ರ ಶೆರಿನ್ ಜೋನ್(36)ಕೊಂದು ಹಾಕಿ ತದನಂತರ ತಂದೆಯ ಮೃತದೇಹವನ್ನು ಸುಟ್ಟಿದ್ದು ಅದರ ಉಳಿದ ಅವಶೇಷಗಳನ್ನು ಪಂಪಾ ನದಿಗೆಸೆದುದಾಗಿ ಪೊಲೀಸ್ ವಿಚಾರಣೆಯಲ್ಲಿ ಶೆರಿನ್ ತಿಳಿಸಿದ್ದಾನೆ.

ಅಮೆರಿಕದಿಂದ ಊರಿಗೆ ಬಂದ ಅನಿವಾಸಿ ಮಲಿಯಾಳಿಯಾದ ತಂದೆ ಮತ್ತು ಅವನ ಪುತ್ರ ಕಾಣೆಯಾಗಿದ್ದಾರೆ ಎಂದು ಪತ್ರಿಕೆಗಳಲ್ಲಿ ಈ ಹಿಂದೆ ವರದಿಯಾಗಿದ್ದವು. ಆನಂತರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಕೋಟ್ಟಯಂ ಖಾಸಗಿ ಹೋಟೆಲ್‌ನಲ್ಲಿ ಅಡಗಿ ಕೂತಿದ್ದ ಶೆರಿನ್‌ನನ್ನು ಪೊಲೀಸರು ಬಂಧಿಸಿದ್ದರು. ಶೆರಿನ್ ಟಕ್ನೊಪಾರ್ಕ್ ಉದ್ಯೋಗಿಯಾಗಿದ್ದು ಮೇ 25ನೆ ತಾರೀಕಿನಂದು ತಂದೆ ಮಗ ಇಬ್ಬರೂ ಕಾರಿನ ಎಸಿ ರಿಪೇರಿಗಾಗಿ ತಿರುವನಂತಪುರಂಗೆ ಹೋಗುವುದೆಂದು ಮನೆಯಲ್ಲಿ ಹೇಳಿ ಕಾರಿನಲ್ಲಿ ಹೊರಟಿದ್ದರು. ಅವರಿಬ್ಬರ ನಡುವೆ ದಾರಿಯಲ್ಲಿ ಆಸ್ತಿಯ ಕುರಿತು ವಿವಾದ ಉದ್ಭವಿಸಿತ್ತು. ಆಗ ತಂದೆ ತನಗೆ ಬಂದೂಕು ತೋರಿಸಿದರು ಅದನ್ನು ಕಿತ್ತುಕೊಂಡು ತಂದೆಗೆ ಗುಂಡಿಟ್ಟೆ ಎಂದು ಶಿರಿನ್ ತಪ್ಪೊಪ್ಪಿಕೊಂಡಿದ್ದಾನೆ. ನಂತರ ತಂದೆಯ ಶವಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿ ಅವಶೇಷಗಳನ್ನು ಪಂಪಾನದಿಗೆಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ . ಕೃತ್ಯಕ್ಕೆ ಬಳಸಿದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತ ಜೋಯಿಯ ಪತ್ನಿ ಮರಿಯಮ್ಮ ನೀಡಿದ ದೂರಿನ ಪ್ರಕಾರ ಪೊಲೀಸರು ತನಿಖೆ ನಡೆಸಿದ್ದು, ಪತಿ ಜೋಯಿ ಮತ್ತು ಪುತ್ರ ಜೋನ್ ಬುಧವಾರದಿಂದ ಕಾಣೆಯಾಗಿದ್ದಾರೆಂದು ಮರಿಯಮ್ಮ ಪೊಲೀಸರಿಗೆ ದೂರು ನೀಡಿದ್ದರು. ಈ ಮೊದಲು ಶೆರೀನ್ ತಂದೆ ಪ್ರಮಾದದಿಂದ ಕೊಲೆಯಾಗಿದ್ದಾರೆ ಎಂದು ತನ್ನ ತಾಯಿಗೆ ಫೋನ್ ಮಾಡಿ ತಿಳಿಸಿದ್ದ. ತಂದೆಯ ಮಾಲಕತ್ವದ ಚೆಂಙನ್ನೂರ್ ಮಾರ್ಕೆಟ್ ರಸ್ತೆಯಲ್ಲಿರುವ ಕಟ್ಟಡದ ಗೊಡೌನ್‌ನಲ್ಲಿ ಮಾನವ ಮಾಂಸ ಸುಟ್ಟುದರ ಅವಶೇಷಗಳು ಮತ್ತು ರಕ್ತದ ಕಲೆಗಳನ್ನು ಪೊಲೀಸರು ಪತ್ತೆಹಚ್ಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News