ದಿಲ್ಲಿಯಲ್ಲಿ ಆಫ್ರಿಕಾ ಪ್ರಜೆಗಳ ಮೇಲೆ ಹಲ್ಲೆ ಪ್ರಕರಣ:ಐವರ ಸೆರೆ

Update: 2016-05-29 13:43 GMT

ಹೊಸದಿಲ್ಲಿ,ಮೇ 29: ಗುರುವಾರ ರಾತ್ರಿ ದಕ್ಷಿಣ ದಿಲ್ಲಿಯ ಮೆಹರೌಲಿ ಪ್ರದೇಶದಲ್ಲಿ ಆರು ಆಫ್ರಿಕನ್ ಪ್ರಜೆಗಳ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಐವರನ್ನು ಬಂಧಿಸಲಾಗಿದೆ. ವಾರದ ಹಿಂದಷ್ಟೇ ರಾಷ್ಟ್ರ ರಾಜಧಾನಿಯಲ್ಲಿ ದುಷ್ಕರ್ಮಿಗಳ ಗುಂಪೊಂದು ಕಾಂಗೋ ಪ್ರಜೆಯೋರ್ವನನ್ನು ಥಳಿಸಿ ಕೊಂದಿತ್ತು.

ಇವೆಲ್ಲ ಬಿಡಿ ಘಟನೆಗಳಾಗಿದ್ದು,ಜನಾಂಗೀಯ ದ್ವೇಷದಿಂದ ನಡೆದ ದಾಳಿಗಳಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಗುರುವಾರ ರಾತ್ರಿ ಮೂರು ಪ್ರತ್ಯೇಕ ಹಲ್ಲೆ ಪ್ರಕರಣಗಳಲ್ಲಿ ಆಫ್ರಿಕಾದ ಪ್ರಜೆಗಳು ಗಾಯಗೊಂಡಿದ್ದು, ದೂರುದಾರರಲ್ಲಿ ಉಗಾಂಡಾ ಮತ್ತು ದ.ಆಫ್ರಿಕಾದ ಇಬ್ಬರು ಮಹಿಳೆಯರು ಮತ್ತು ಓರ್ವ ನೈಜೀರಿಯನ್ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಇವು ಯೋಜಿತ ದಾಳಿಗಳು ಎನ್ನುವುದನ್ನು ನಿರಾಕರಿಸಿದ್ದಾರೆ. ಪ್ರದೇಶದಲ್ಲಿ ತಡರಾತ್ರಿ ದೊಡ್ಡದಾಗಿ ಸಂಗೀತ ಮತ್ತು ಮದ್ಯಪಾನಕ್ಕೆ ಸಂಬಂಧಿಸಿದಂತೆ ವಾಗ್ವಾದಗಳ ಬಳಿಕ ಹಲ್ಲೆಗಳು ನಡೆದಿವೆ ಎಂದು ಅವರು ಹೇಳಿದ್ದಾರೆ.

ಹಲ್ಲೆಗಳನ್ನು ಖಂಡಿಸಿರುವ ಗೃಹಸಚಿವ ರಾಜನಾಥ ಸಿಂಗ್ ಅವರು,ತಾನು ಈಬಗ್ಗೆ ದಿಲ್ಲಿ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿರುವುದಾಗಿ ಟ್ವೀಟಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರೂ ಹಲ್ಲೆಗಳ ಕುರಿತು ಗೃಹಸಚಿವರು ಮತ್ತು ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ನಜೀಬ್ ಜಂಗ್ ಅವರೊಂದಿಗೆ ಮಾತನಾಡಿದ್ದಾರೆ.

ಹಲ್ಲೆಗಳನ್ನು ವಿರೋಧಿಸಿ ಮಂಗಳವಾರ ದಿಲ್ಲಿಯಲ್ಲಿ ಪ್ರತಿಭಟನೆಯನ್ನು ನಡೆಸಲು ಆಫ್ರಿಕನ್ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವಂತೆ ಸಹಾಯಕ ಸಚಿವ ಜವಿ.ಕೆ.ಸಿಂಗ್ ಮತ್ತು ಕಾರ್ಯದರ್ಶಿ ಅಮರ ಸಿನ್ಹಾ ಅವರಿಗೆ ಸುಷ್ಮಾ ಸೂಚಿಸಿದ್ದಾರೆ.

ತಾನು ಈ ಬಗ್ಗೆ ದಿಲ್ಲಿ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿದ್ದು,ಸಣ್ಣಪುಟ್ಟ ಜಗಳಗಳನ್ನು ಮಾಧ್ಯಮಗಳು ಆಫ್ರಿಕಾ ಪ್ರಜೆಗಳ ಮೇಲೆ ಹಲ್ಲೆ ಎಂದು ದೊಡ್ಡದಾಗಿ ಬಿಂಬಿಸುತ್ತಿವೆ. ಜವಾಬ್ದಾರಿಯುತ ನಾಗರಿಕರಾಗಿ ನಾವು ಮಾಧ್ಯಮಗಳನ್ನು ಮತ್ತು ಅವುಗಳ ಉದ್ದೇಶಗಳನ್ನು ಪ್ರಶ್ನಿಸಬೇಕಾಗಿದೆ ಎಂದು ಸಿಂಗ್ ಹೇಳಿದರು.

ಮೇ 20ರಂದು ವಸಂತಕುಂಜ್ ಪ್ರದೇಶದಲ್ಲಿ ಆಟೋರಿಕ್ಷಾ ಬಾಡಿಗೆಯ ವಿವಾದದಲ್ಲಿ ಕಾಂಗೋ ಪ್ರಜೆ ಮಸಂಡಾ ಕೆಟಾಡಾ ಆಲಿವರ್(29) ಎಂಬಾತನನ್ನು ಥಳಿಸಿ ಹತ್ಯೆಗೈಯ್ಯಲಾಗಿತ್ತು.

ತನ್ಮಧ್ಯೆ, ಆತನ ಮೃತದೇಹವನ್ನು ಸ್ವದೇಶಕ್ಕೆ ಒಯ್ಯಲು ಆತನ ಕುಟುಂಬದ ಭಾರತ ಪ್ರವಾಸಕ್ಕೆ ತಾನು ನೆರವಾಗುವುದಾಗಿ ಸರಕಾರವು ರವಿವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News