ದೇಶದೊಳಗಿನ ಕಪ್ಪುಹಣ ಬಿಳಿಯಾಗಿಸಲು ಜೂನ್ 1 ರಿಂದ ಅವಕಾಶ

Update: 2016-05-31 15:06 GMT

ಹೊಸದಿಲ್ಲಿ: ದೇಶೀಯವಾಗಿ ಕಪ್ಪುಹಣ ಹಿಡಿದಿಟ್ಟುಕೊಂಡಿರುವವರು ಘೋಷಣೆ ಮಾಡಿಕೊಳ್ಳುವ ಮೂಲಕ ತೆರಿಗೆ ಹಾಗೂ ದಂಡ ಸೇರಿ ಶೇಕಡ 45 ಹಣವನ್ನು ಪಾವತಿಸಿ ಅದನ್ನು ಸ್ವಚ್ಛ ಹಣವಾಗಿ ಪರಿವರ್ತಿಸಿಕೊಳ್ಳಲು ಅವಕಾಶ ನೀಡುವ ದೇಶೀಯ ಕಪ್ಪುಹಣ ಆಂಗೀಕಾರ ಗವಾಕ್ಷಿ ನಾಳೆ ಆರಂಭವಾಗಲಿದೆ. ಇದು ನಾಲ್ಕು ತಿಂಗಳ ಅವಧಿಗೆ ಜಾರಿಯಲ್ಲಿರುತ್ತದೆ.

ಭ್ರಷ್ಟ ಮಾರ್ಗದ ಮೂಲಕ ಸಂಪನ್ಮೂಲ ಕ್ರೋಢೀಕರಿಸಿದವರಿಗೆ ಈ ಘೋಷಣೆ ಗವಾಕ್ಷಿಯಡಿ ಅದನ್ನು ಸ್ವಚ್ಛಹಣವಾಗಿ ಪರಿವರ್ತಿಸಿಕೊಳ್ಳಲು ಅವಕಾಶ ಇರುವುದಿಲ್ಲ.

ಈ ಆದಾಯ ಘೋಷಣೆ ಯೋಜನೆಯಡಿ, ಅಘೋಷಿತ ಆಸ್ತಿಗಳನ್ನು ಬಹಿರಂಗಪಡಿಸುವವರು, ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇಕಡ 45ರಷ್ಟನ್ನು ತೆರಿಗೆ, ದಂಡ ಹಾಗೂ ಸರ್ಚಾರ್ಜ್ ರೂಪದಲ್ಲಿ ಫಾವತಿಸಲು ನವೆಂಬರ್ 30ರವರೆಗೆ ಅವಕಾಶ ಇರುತ್ತದೆ.

ಕೇಂದ್ರ ಹಣಕಾಸು ಸಚಿವಾಲಯ ಅಧಿಕಾರಿಗಳು ಇದಕ್ಕಾಗಿ ಆನ್‌ಲೈನ್ ಠಾಕತಾನ್ ಸೃಷ್ಟಿಸಿದ್ದು, ಘೋಷಣೆ ಗವಾಕ್ಷಿ ಮೂಲಕ ಅರಿವು ಮೂಡಿಸುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ, ಸಾಮಾನ್ಯವಾಗಿ ಉದ್ಭವಿಸುವ 14 ಪ್ರಶ್ನೆಗಳು ಮತ್ತು ಉತ್ತರಗಳನ್ನು ಪ್ರಕಟಿಸಿದ್ದು, ಇದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನೂ ಹೊರಡಿಸಿದೆ. ಇದರಲ್ಲಿ ಘೋಷಣೆ ಗವಾಕ್ಷಿ ಯೋಜನೆ ಬಗ್ಗೆ ಸಂಪೂರ್ಣ ವಿವರ ನೀಡಲಾಗಿದೆ.

ಈ ಯೋಜನೆಯಡಿ ಮಾಡಿರುವ ಘೋಷಣೆಯನ್ನು ಯಾವುದೇ ಕಾರಣಕ್ಕೆ ಆದಾಯ ತೆರಿಗೆ ಕಾಯ್ದೆ ಅಥವಾ ಸಂಪತ್ತು ತೆರಿಗೆ ವಿಧಿಗಳ ಅನ್ವಯ ಕ್ರಮ ಕೈಗೊಳ್ಳಲು ಬಳಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದರ ಜತೆಗೆ ಬೇನಾಮಿ ವಹಿವಾಟು (ನಿಷೇಧ) ಕಾಯ್ದೆಯಿಂದಲೂ ಇದಕ್ಕೆ ವಿನಾಯ್ತಿ ನೀಡಲಾಗಿದೆ.

ಅಘೋಷಿತ ಆಸ್ತಿ ಹೊಂದಿರುವವರು ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ, ಸೀಮಿತ ಅವಧಿಗೆ ಇರುವ ಈ ಅವಕಾಶವನ್ನು ಬಳಸಿಕೊಂಡು ತಮ್ಮ ಅಘೋಷಿತ ಆಸ್ತಿಯ ವಿವರಗಳನ್ನು ಬಹಿರಂಗಪಡಿಸಬೇಕು. ಈ ಯೋಜನೆ ನಾಳೆಯಿಂದ ಆರಂಭವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲೆ ಸೋಮವಾರ ಪ್ರಕಟಿಸಿದ್ದರು.

ಆದರೆ ಈ ಘೋಷಣೆಗಳು ಬಂಡವಾಳ ಪ್ರಯೋಜನ ತೆರಿಗೆ ಕಾಯ್ದೆಗೆ ಅನುಗುಣವಾಗಿದ್ದು, ಭವಿಷ್ಯದಲ್ಲಿ ಇದರಿಂದ ಉತ್ಪತ್ತಿಯಾಗುವ ಪ್ರಯೋಜನಗಳಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ ಭ್ರಷ್ಟಾಚಾರ ಕಾಯ್ದೆ-1983 ಅನ್ವಯ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದ ಆಸ್ತಿಗಳಿಗೆ ಇದು ಅನ್ವಯವಾಗುವುದಿಲ್ಲ. ಭ್ರಷ್ಟಾಚಾರದ ಮೂಲಕ ಕ್ರೋಢೀಕರಿಸಿದ ಸಂಪತ್ತನ್ನು ಈ ಯೋಜನೆಯಡಿ ಘೋಷಿಸಬಹುದೇ ಎಂದು ಕೇಳಿದ ಪ್ರಶ್ನೆಗೆ ಇಲಾಖೆ ಅಧಿಕಾರಿಗಳು ಇಲ್ಲ ಎಂಬ ಸ್ಪಷ್ಟ ಉತ್ತರ ನೀಡಿದ್ದಾರೆ.

ವಿದೇಶಿ ಆಸ್ತಿ ಅಥವಾ ಕಪ್ಪುಹಣ ಹೊಂದಿರುವ ನಾಗರಿಕರಿಗೆ ಅನ್ವಯವಾಗುವ ಎಲ್ಲ ಷರತ್ತುಗಳು ದೇಶೀಯವಾಗಿ ಕಪ್ಪುಹಣ ಹೊಂದಿರುವವರಿಗೂ ಅನ್ವಯವಾಗುತ್ತದೆ. ವ್ಯಕ್ತಿಗಳು, ಸಂಸ್ಥೆಗಳು, ಕಂಪನಿಗಳು ಹಾಗೂ ಘಟಕ ಅಥವಾ ಸಂಘ ಸಂಸ್ಥೆಗಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡು ಅಘೋಷಿತ ಆದಾಯ ಮೂಲವನ್ನು ಘೋಷಿಸುವ ಮೂಲಕ ದೇಶೀಯ ಹಣಕಾಸು ವ್ಯವಸ್ಥೆಯಿಂದ ಕಪ್ಪುಹಣ ತೊಡೆದುಹಾಕಲು ಯೋಜನೆ ರೂಪಿಸಲಾಗುತ್ತದೆ ಎಂದು ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.

ಸಿಬಿಡಿಟಿ ಸುತ್ತೋಲೆಯ ಪ್ರಕಾರ, ನವೆಂಬರ್ ಕೊನೆಯ ಒಳಗಾಗಿ ತೆರಿಗೆ, ಸರ್ಚಾರ್ಜ್ ಹಾಗೂ ದಂಡ ಪಾವತಿಸದಿದ್ದರೆ, ಈ ಘೋಷಣೆ ರದ್ದಾಗುತ್ತದೆ.

ಈಗಾಗಲೇ ತೆರಿಗೆ ವ್ಯಾಪ್ತಿಗೆ ಒಳಪಟ್ಟು ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿರುವ ಪ್ರಕರಣಗಳಿಗೂ ಇದು ಅನ್ವಯವಾಗುವುದಿಲ್ಲ. ಈ ಅಘೋಷಿತ ಆಸ್ತಿಯ ಮೌಲ್ಯವು, ಘೋಷಿಸುವ ವ್ಯಕ್ತಿಯ ಯಾವುದೇ ಮೌಲ್ಯಮಾಪನ ವರ್ಷದಲ್ಲಿ ತೋರಿಸಿದ ಆದಾಯಕ್ಕಿಂತ ಹೊರತಾಗಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News