ಬಾಕಿ 4.75 ಕೋಟಿ ಪಾವತಿಸಲು ಆರ್ಟ್ ಆಫ್ ಲಿವಿಂಗ್‌ಗೆ ಎನ್‌ಜಿಟಿ ತಾಕೀತು

Update: 2016-05-31 16:53 GMT

ಹೊಸದಿಲ್ಲಿ, ಮೇ 31: ಯಮುನಾ ನದಿ ಹಬ್ಬ ಹಮ್ಮಿಕೊಂಡಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದಾಗಿ ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಪರಿಸರ ಪರಿಹಾರ ಶುಲ್ಕವಾಗಿ ಪಾವತಿಸಬೇಕಿದ್ದ ಹಣಕ್ಕೆ ನೀಡಿದ್ದ ಬ್ಯಾಂಕ್ ಗ್ಯಾರೆಂಟಿಯನ್ನು ಸ್ವೀಕರಿಸಬೇಕು ಎಂದು ಮಾಡಿಕೊಂಡಿದ್ದ ಮನವಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಿರಸ್ಕರಿಸಿದ್ದು, ನಗದು ರೂಪದಲ್ಲಿ 4.75 ಕೋಟಿ ರೂಪಾಯಿ ನೀಡುವುದು ಆರ್ಟ್ ಆಫ್ ಫೌಂಡೇಷನ್‌ಗೆ ಅನಿವಾರ್ಯವಾಗಲಿದೆ.

ಯಮುನಾ ನದಿ ದಂಡೆಯಲ್ಲಿ ಈ ಬೃಹತ್ ಮೇಳ ಆಯೋಜಿಸುವ ಸಂದರ್ಭದಲ್ಲಿ ಆದ ಪರಿಸರ ಹಾನಿಗಾಗಿ ಪರಿಹಾರವಾಗಿ ನೀಡಬೇಕಿದ್ದ ಮೊತ್ತದಲ್ಲಿ 4.75 ಕೋಟಿ ರೂಪಾಯಿ ಬಾಕಿ ಉಳಿದುಕೊಂಡಿತ್ತು. ಬುಧವಾರದಿಂದ ಎನ್‌ಜಿಟಿಯ ಬೇಸಿಗೆ ರಜೆ ಆರಂಭವಾಗಲಿದ್ದು, ಈ ಹಣವನ್ನು ನೀಡುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಫೌಂಡೇಷನ್ ಹಲವು ಅರ್ಜಿಗಳನ್ನು ಸಲ್ಲಿಸುವ ನಾಟಕವಾಡುತ್ತಿದೆ ಎಂದು ಛೀಮಾರಿ ಹಾಕಿದೆ.
ನಿಮ್ಮ ಆತ್ಮಸಾಕ್ಷಿ ಶುದ್ದವಾಗಿರಬೇಕು. ಜನ ತಮಗೆ ಅನಿಸಿದಂತೆ ಏನು ಬೇಕಾದರೂ ಹೇಳಲಿ. ನಿಮ್ಮ ಬದ್ಧತೆಯನ್ನು ನೀವು ಪೂರ್ಣಗೊಳಿಸಿ ಎಂದು ಆರ್ಟ್ ಆಫ್ ಲಿವಿಂಗ್ ವಕೀಲರಿಗೆ ಹಸಿರುಪೀಠ ತಾಕೀತು ಮಾಡಿತು.
ಯಮುನಾ ನದಿ ದಂಡೆಯನ್ನು ಸಮತಟ್ಟುಗೊಳಿಸುವುದರಿಂದ ಈ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಧಕ್ಕೆಯಾಗುತ್ತದೆ. ಇದು ಹಕ್ಕಿಗಳು ಗೂಡುಕಟ್ಟುವ ಪ್ರದೇಶವಾಗಿದ್ದು, ಕಟ್ಟಡ ಅವಶೇಷಗಳನ್ನು ಸುರಿಯುವುದರಿಂದ ಮತ್ತಷ್ಟು ಹಾನಿಯಾಗುತ್ತದೆ. ಈ ಕಾರಣದಿಂದ ಮೇಳ ನಡೆಸಲು ಅವಕಾಶ ನೀಡಬಾರದು ಎಂದು ಹಲವು ಮಂದಿ ಪರಿಸರಾಸಕ್ತರು ಎನ್‌ಜಿಟಿಗೆ ಮನವಿ ಸಲ್ಲಿಸಿದ್ದರು.
ದೇಶದಲ್ಲಿ ದೊಡ್ಡ ಗದ್ದಲ ಎಬ್ಬಿಸಿದ ಈ ಮೇಳ ಆಯೋಜಿಸಲು ಅನುಮತಿ ನೀಡುವ ಮುನ್ನ ಎನ್‌ಜಿಟಿ, ಪರಿಸರಕ್ಕೆ ಆಗುವ ಹಾನಿಗೆ ಆರಂಭಿಕ ಪರಿಹಾರವಾಗಿ ಐದು ಕೋಟಿ ರೂಪಾಯಿ ಪಾವತಿಸುವಂತೆ ಶ್ರೀ ಶ್ರೀ ರವಿಶಂಕರ ಗುರೂಜಿಯವರಿಗೆ ಸೂಚಿಸಿತ್ತು. ಉಳಿದ ಪರಿಹಾರ ಮೊತ್ತವನ್ನು ತಜ್ಞರ ಸಮಿತಿ ಹಾನಿ ಅಂದಾಜು ಮಾಡಿದ ಬಳಿಕ ಪಾವತಿಸುವಂತೆ ಸೂಚಿಸಿತ್ತು.

ಆದರೆ ಫೌಂಡೇಷನ್ ಕೇವಲ 25 ಲಕ್ಷ ರೂಪಾಯಿ ಪಾವತಿಸಿ, ಉಳಿದ ಹಣವನ್ನು ಸಮಾರಂಭದ ಬಳಿಕ ಪಾವತಿಸುವುದಾಗಿ ಆಶ್ವಾಸನೆ ನೀಡಿತ್ತು. ನ್ಯಾಯಮೂರ್ತಿ ಸ್ವತಂತ್ರ್ಯ ಕುಮಾರ್ ಅವರ ನೇತೃತ್ವದ ಹಸಿರುಪೀಠ, ಪರಿಸರಕ್ಕೆ ಆದ ಹಾನಿಯ ಪ್ರಮಾಣ ಅಂದಾಜು ಮಾಡಲು ಸಮಿತಿಯನ್ನು ನೇಮಕ ಮಾಡಿತ್ತು. ಮೇ 25ರಂದು ವಿಚಾರಣೆ ವೇಳೆ, ಎನ್‌ಜಿಟಿ, ಪರಿಹಾರ ಮೊತ್ತವನ್ನು ಠೇವಣಿ ಇಡಲಾಗಿದೆಯೇ ಎಂದು ಪ್ರಶ್ನಿಸಿತ್ತು. ಬಾಕಿ ಹಣ ಪಾವತಿಸುವ ಬದಲು ಬ್ಯಾಂಕ್ ಗ್ಯಾರೆಂಟಿ ಸಲ್ಲಿಸಿದ್ದಾಗಿ ಫೌಂಡೇಷನ್ ವಕೀಲರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News