ಮಾಲಿನ್ಯದಿಂದಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿರುವ ತಾಜ್‌ಮಹಲ್: ಕೇಂದ್ರಕ್ಕೆ ಎನ್‌ಜಿಟಿ ನೋಟಿಸ್

Update: 2016-06-01 16:32 GMT

ಹೊಸದಿಲ್ಲಿ,ಜೂ.1: ಆಗ್ರಾ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಘನ ತ್ಯಾಜ್ಯವನ್ನು ದಹಿಸಲಾಗುತ್ತಿದ್ದು,ಇದರ ಪರಿಣಾವಾಗಿ ಜಗತ್ಪ್ರಸಿದ್ಧ ಸ್ಮಾರಕ ತಾಜಮಹಲ್ ಹಳದಿ ಬಣ್ಣಕ್ಕೆ ತಿರುಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಹಾಗೂ ಪರಿಸರ ಕಾರ್ಯಕರ್ತ ಡಿ.ಕೆ.ಜೋಶಿ ಎನ್ನುವವರು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ಕೇಂದ್ರಕ್ಕೆ ನಿರ್ದೇಶ ನೀಡಿದೆ.

 ಆಗ್ರಾದಲ್ಲಿ ಮತ್ತು ತಾಜಮಹಲ್ ಟ್ರಾಪಿಝಿಯಂ ವಲಯದ ಸುತ್ತಲೂ ಬಯಲು ಪ್ರದೇಶದಲ್ಲಿ ಘನತ್ಯಾಜ್ಯ ಮತ್ತು ಇತರ ತ್ಯಾಜ್ಯಗಳನ್ನು ಸುಡದಂತೆಯೂ ನ್ಯಾಯಾಧಿಕರಣವು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ನಿರ್ಬಂಧಿಸಿದೆ.
ಎನ್‌ಜಿಟಿ ಅಧ್ಯಕ್ಷ ನ್ಯಾ.ಸ್ವತಂತರ್ ಕುಮಾರ್ ನೇತೃತ್ವದ ಪೀಠವು ಪರಿಸರ ಮತ್ತು ಅರಣ್ಯ ಸಚಿವಾಲಯ,ನಗರಾಭಿವೃದ್ಧಿ ಸಚಿವಾಲಯ,ಉತ್ತರ ಪ್ರದೇಶ ಸರಕಾರ,ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇತರರಿಗೆ ನೋಟಿಸುಗಳನ್ನು ಹೊರಡಿಸಿದ್ದು, ಎರಡು ವಾರಗಳಲ್ಲಿ ಉತ್ತರಿಸುವಂತೆ ನಿರ್ದೇಶ ನೀಡಿದೆ.
 ಕಂದು ಮತ್ತು ಕಪ್ಪು ಇಂಗಾಲದ ಮತ್ತು ಧೂಳಿನ ಕಣಗಳಿಂದಾಗಿ ತಾಜಮಹಲ್ ಹಳದಿಬಣ್ಣಕ್ಕೆ ತಿರುಗುತ್ತಿದೆ ಎನ್ನುವುದನ್ನು ಐಐಟಿ-ಕಾನಪುರ, ಜಾರ್ಜಿಯಾ ಇನ್‌ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ ಮತ್ತು ವಿಸ್ಕಿನ್‌ಸನ್ ವಿವಿ ಜಂಟಿಯಾಗಿ ನಡೆಸಿ ದ ಸಮೀಕ್ಷೆಯು ಬೆಳಕಿಗೆ ತಂದಿದೆ ಎಂದು ಜೋಶಿ ತನ್ನ ಅರ್ಜಿಯಲ್ಲಿ ಬೆಟ್ಟು ಮಾಡಿದ್ದಾರೆ. ಈ ವರದಿಯನ್ನು ಆಧರಿಸಿ ಪರಿಸರ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ನಗರದಲ್ಲಿ ಮಾಲಿನ್ಯವನ್ನು ನಿಯಂತ್ರಿಸುವಂತೆ ಆಗ್ರಾ ಆಡಳಿತಕ್ಕೆ ಹಲವಾರು ನಿರ್ದೇಶನಗಳನ್ನು ನೀಡಿತ್ತು ಎಂದೂ ಅವರು ಉಲ್ಲೇಖಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News