ಹದಿಹರೆಯದವರದೇ ಸಿಂಹಪಾಲು

Update: 2016-06-01 16:36 GMT

ಹೊಸದಿಲ್ಲಿ, ಜೂ.1: ಹದಿಹರೆಯದವರು ವೈಫೈ ಅಥವಾ ಸೆಲ್ಯುಲರ್ ಡೇಟಾ ಮೂಲಕ ಪ್ರಸಾರವಾಗುವ ಸ್ಮಾರ್ಟ್‌ಫೋನ್ ವೀಡಿಯೊ ಡಾಟಾಗಳ ಪ್ರಮುಖ ಗ್ರಾಹಕರಾಗಿದ್ದಾರೆಂದು ನೂತನ ಅಧ್ಯಯನ ವರದಿಯೊಂದು ತಿಳಿಸಿದೆ. ಕಳೆದ 15 ತಿಂಗಳುಗಳಲ್ಲಿ,(2014-15) ಸ್ಮಾರ್ಟ್ ಫೋನ್ ವಿಡಿಯೋಗಾಗಿ ಸೆಲ್ಯುಲರ್ ಡೇಟಾ ಖರೀದಿಸುವ ಹದಿಹರೆಯದವರ ಸಂಖ್ಯೆಯಲ್ಲಿ ಶೇ. 127ರಷ್ಟು ಏರಿಕೆಯಾಗಿದೆಯೆಂದು ಎರಿಕ್ಸನ್ ಮೊಬಿಲಿಟಿ ಸಂಸ್ಥೆಯ ನೂತನ ಆವೃತ್ತಿಯ ವರದಿಯು ಹೇಳಿದೆ.

 
 ‘‘ ಕಳೆದ ನಾಲ್ಕು ವರ್ಷಗಳಿಂದ (2011-15) ಟಿವಿ ಪರದೆಯಲ್ಲಿ ವೀಡಿಯೊಗಳನ್ನು ವೀಕ್ಷಿಸುವ ಹದಿಹರೆಯದವರ ಸಂಖ್ಯೆಯಲ್ಲಿ ಶೇ.50ರಷ್ಟು ಇಳಿಕೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ವೀಡಿಯೊಗಳನ್ನು ವೀಕ್ಷಿಸುವವರ ಸಂಖ್ಯೆಯಲ್ಲಿ ಶೇ.85ರಷ್ಟು ಹೆಚ್ಚಳವಾಗಿದೆ. ಸ್ಮಾರ್ಟ್‌ಫೋನ್ ಚಂದಾದಾರರ ಸಂಖ್ಯೆಯಲ್ಲಿಯೂ ಭಾರೀ ಏರಿಕೆಯಾಗಲಿದೆಯೆಂದು ಅಧ್ಯಯನವು ಗಮನಸೆಳೆದಿದೆ. ಸ್ಮಾರ್ಟ್‌ಫೋನ್‌ಗಳು ಪ್ರಸಕ್ತ ವಿತ್ತ ವರ್ಷದ ಮೂರನೆ ತ್ರೈಮಾಸಿಕದಲ್ಲಿ ಬಳಕೆಯಲ್ಲಿ ಮೂಲಭೂತ (ಬೇಸಿಕ್) ಫೋನ್‌ಗಳನ್ನು ಹಿಂದಿಕ್ಕಲಿದೆಯೆಂದು ಅದು ಹೇಳಿದೆ.
 ಈ ಮಧ್ಯೆ, ತುಲನಾತ್ಮಕವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಮೊಬೈಲ್ ತಂತ್ರಜ್ಞಾನವು ಅದ್ಭುತವಾದ ಬೆಳವಣಿಗೆಯನ್ನು ಸಾಧಿಸಿದ್ದು, ಪ್ರಸ್ತುತ ಜಗತ್ತಿನಾದ್ಯಂತ 500 ಕೋಟಿಗೂ ಅಧಿಕ ಬಳಕೆದಾರರಿರುವುದಾಗಿ ವರದಿ ತಿಳಿಸಿದೆ. ಪ್ರಸ್ತುತ 3.4 ಶತಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರಿದ್ದು, 2021ರ ವೇಳೆಗೆ ಹೆಚ್ಚುಕಡಿಮೆ ಎರಡು ಪಟ್ಟು ಅಧಿಕ ಅಂದರೆ 6.3 ಶತಕೋಟಿಗೆ ಏರಲಿದೆ. 2021ರ ವೇಳೆಗೆ ಭಾರತದಲ್ಲಿ ಮೊಬೈಲ್ ಡೇಟಾ ಟ್ರಾಫಿಕ್ 15 ಪಟ್ಟು ಏರಿಕೆಯಾಗಲಿದೆಯೆಂದು ಅಧ್ಯಯನ ವರದಿ ತಿಳಿಸಿದೆ.
  2018ರ ವೇಳೆಗೆ ‘ಇಂಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ವ್ಯವಸ್ಥೆಯು 2018ರ ವೇಳೆಗೆ ಸಂಪರ್ಕಿತ ಸಾಧನ ಶ್ರೇಣಿಗಳಲ್ಲಿಯೇ ಸಿಂಹಪಾಲನ್ನು ಪಡೆಯಲಿದ್ದು, ಸಂಪರ್ಕ ದಲ್ಲಿ ಮೊಬೈಲ್ ಫೋನ್‌ಗಳನ್ನೂ ಹಿಂದಿಕ್ಕಲಿದೆ ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.
 ಮಾನವರಿಂದ ಮಾನವರಿಗೆ ಅಥವಾ ಮಾನವರಿಂದ ಕಂಪ್ಯೂಟರ್ ಸಂವಹನದ ಆವಶ್ಯಕತೆಯಿಲ್ಲದೆ ದತ್ತಾಂಶ (ಡಾಟಾ)ಗಳನ್ನು ವರ್ಗಾಯಿಸುವ ಸಾಮರ್ಥ್ಯ ಹೊಂದಿರುವ ಗಣಕ ಸಾಧನಗಳು, ಯಾಂತ್ರಿಕ ಹಾಗೂ ಡಿಜಿಟಲ್ ಯಂತ್ರಗಳು ಇತ್ಯಾದಿಗಳನ್ನೊಳಗೊಂಡ ವ್ಯವಸ್ಥೆಯನ್ನು ಐಓಟಿ ಎಂದು ಕರೆಯಲಾಗುತ್ತದೆ.
   ಈ ಅಧ್ಯಯನದ ಪ್ರಕಾರ 2015 ಹಾಗೂ 2021ರ ನಡುವೆ ಪ್ರತಿ ವರ್ಷ ಐಓಟಿ ಸಂಪರ್ಕಿತ ಉಪಕರಣಗಳ ಸಂಖ್ಯೆಯು ಪ್ರತಿ ವರ್ಷ ಶೇ.23ರಷ್ಟು ಏರಿಕೆಯಾಗಲಿದೆ. ಈ ಪೈಕಿ ಸೆಲ್ಯುಲರ್ ಐಓಟಿ ಅತ್ಯಧಿಕ ಬೆಳವಣಿಗೆ ದರವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News