ವಿಮಾನ ನಿಲ್ದಾಣಕ್ಕೆ ತಲುಪಲು ವಿಶೇಷ ರೈಲಿನಲ್ಲಿ ಹೋದರು ಬಿಜೆಪಿ ಸಂಸದೆ ಪೂನಮ್ ಮಹಾಜನ್ !

Update: 2016-06-02 14:58 GMT

ಭೋಪಾಲ್, ಜೂ 2: ಮಹಾರಾಷ್ಟ್ರದ ಬಿಜೆಪಿ ಸಂಸದೆ ಹಾಗು ಮಾಜಿ ಕೇಂದ್ರ ಸಚಿವ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ ಪೂನಂ ಮಹಾಜನ್ ಅವರು ಎರಡು ದಿನಗಳ ಹಿಂದೆ ನಿಗದಿತ ಸಮಯದಲ್ಲಿ ವಿಮಾನ ನಿಲ್ದಾಣ ತಲುಪಲು ವಿಶೇಷ ರೈಲು ಬಳಸಿದ್ದರು ಎಂದು ತಿಳಿದು ಬಂದಿದೆ. ಪೂನಂ ಮಧ್ಯ ಪ್ರದೇಶದ ಬಿನಾ ಎಂಬ ಸ್ಥಳದ ಸಮೀಪದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ಮನೋಜ್ ಸಿನ್ಹ ಅವರೊಂದಿಗೆ ರೈಲ್ವೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ನಿಂದ ಮುಂಬೈಗೆ ಹೋಗುವ ವಿಮಾನಕ್ಕೆ ಸರಿಯಾದ ಸಮಯಕ್ಕೆ ತಲುಪಲು  ಪೂನಂ ಬಿನಾದಿಂದ ಭೋಪಾಲ್ ಗೆ ವಿಶೇಷ ರೈಲು ಬಳಸಿ ಪ್ರಯಾನಿಸಿದ್ದಾರೆ ಎಂದು ವರದಿಯಾಗಿದೆ. 
ಮೇ 31 ರಂದು ರಾತ್ರಿ 9 ಗಂಟೆಗೆ ಪೂನಂ ಭೋಪಾಲ್ ನಲ್ಲಿ ವಿಮಾನ ಏರಬೇಕಿತ್ತು. ಅದಕ್ಕಾಗಿ ಅವರನ್ನು ಬಿನಾದಿಂದ ವಿಶೇಷ ರೈಲಿನಲ್ಲಿ ಕಳುಹಿಸಿ ಭೋಪಾಲ್ ಗೆ ಕೇವಲ 90 ನಿಮಿಷಗಳಲ್ಲಿ ತಲುಪಿಸಲಾಗಿದೆ. ಮಾತ್ರವಲ್ಲ, ಪೂನಂ ಪ್ರಯಾಣಿಸುತ್ತಿದ್ದ ವಿಶೇಷ ರೈಲು ಸಮಯಕ್ಕೆ ಸರಿಯಾಗಿ ಭೋಪಾಲ್ ತಲುಪಲಿಕ್ಕಾಗಿ ಆ ಮಾರ್ಗದಲ್ಲಿ ಹಲವೆಡೆ ವಿವಿಧ ರೈಲುಗಳನ್ನು ತಡೆಯಲಾಗಿತ್ತು. ರೈಲ್ವೆ ನಿಯಮಗಳ ಪ್ರಕಾರ ಯಾವುದೇ ಸಂಸದರಿಗೆ ಹೀಗೆ ವಿಶೇಷ ರೈಲು ಸೌಲಭ್ಯ ನೀಡುವ ಅವಕಾಶ ಇಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. 
ಆದರೆ ಪಶ್ಚಿಮ್ ಮಧ್ಯ ರೈಲ್ವೆಯ ಮಹಾಪ್ರಬಂದಕ ರಮೇಶ್ ಚಂದ್ರ ಅವರ ಪ್ರಕಾರ " ಪೂನಂ ಅವರಿಗಾಗಿ ನಿಯಮ ಉಲ್ಲಂಘಿಸಿ ವಿಶೇಷ ರೈಲು ನೀಡಲಾಗಿಲ್ಲ. ಕಾರ್ಯಕ್ರಮಕ್ಕೆ ಬಂದಿದ್ದ ರೈಲ್ವೆ ರಾಜ್ಯ ಸಚಿವ ಮನೋಜ್ ಸಿನ್ಹ ಅವರು ವಿಶೇಷ ರೈಲಿನಲ್ಲಿ ಬಂದಿದ್ದರು. ಅವರು ಅದರಲ್ಲೇ ಭೋಪಾಲ್ ಗೆ ಮರಳಿ ಅಲ್ಲಿಂದ ವಿಮಾನದ ಮೂಲಕ ದಿಲ್ಲಿಗೆ ಹೋಗಬೇಕಿತ್ತು. ಆದರೆ ಕಾರ್ಯಕ್ರಮ ತಡವಾದ್ದರಿಂದ ಅವರು ಬಿನಾ ದಿಂದಲೇ ರೈಲು ಮೂಲಕ ದಿಲ್ಲಿಗೆ ಪ್ರಯಾನಿಸಿದರು. ಆದರೆ ಭೋಪಾಲ್ ನಿಂದ  ಬಂದಿದ್ದ ವಿಶೇಷ ರೈಲು ಹೇಗೂ ವಾಪಸ್ ಹೋಗಲೇಬೇಕಿತ್ತು. ಅದರಲ್ಲಿ ಪೂನಂ ಹಾಗು ಪಶ್ಚಿಮ್ ಮಧ್ಯ ರೈಲ್ವೆಯ ಮುಖ್ಯ ಸುರಕ್ಷತಾ ಅಧಿಕಾರಿ ಪ್ರಯಾಣಿಸಿದರು ಅಷ್ಟೇ." 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News