ಮೋದಿಗೆ ಸೋಶಿಯಲ್ ಮೀಡಿಯಾ ರಿಪೋರ್ಟ್
ಗೃಹ ಸಚಿವಾಲಯದಲ್ಲಿ ನೋಂದಾಯಿತ ಪತ್ರಕರ್ತರಿಗೆ ಸಚಿವಾಲಯ ಇತ್ತೀಚೆಗೆ ಒಂದು ಇ-ಮೇಲ್ ಕಳುಹಿಸಿತು. ಒಂದು ವಾರದಲ್ಲಿ ಸಚಿವಾಲಯ ಇಂಟರ್‌ನೆಟ್ ಬಳಕೆಯಲ್ಲಿ ಎಷ್ಟು ಕ್ಷಮತೆ ಸಾಧಿಸಿದೆ ಎಂದು ವಿವರಿಸುವ ಸಂದೇಶ ಅದು. ಅದರಲ್ಲಿ ಸಚಿವಾಲಯದ ಬಗೆಗಿನ ಧನಾತ್ಮಕ ಹಾಗೂ ಋಣಾತ್ಮಕ ವರದಿಯ ವಿವರಗಳು ಇದ್ದವು. ರಾಜನಾಥ್ ಸಿಂಗ್ ಬಗೆಗಿನ ಟ್ವಿಟ್ಟರ್ ಕಾಮೆಂಟ್‌ಗಳು ಮತ್ತಿತರ ವಿವರಗಳಿದ್ದವು. ಇಂಥ ವರದಿ ಮಾಧ್ಯಮಗಳನ್ನು ದಂಗುಬಡಿಸಿತು. ತಕ್ಷಣ ಹಳೆಯ ಸಂದೇಶವನ್ನು ನಿರ್ಲಕ್ಷಿಸುವಂತೆ ಕೋರುವ ಮತ್ತೊಂದು ಇ-ಮೇಲ್ ಬಂತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀ ಸಚಿವಾಲಯಗಳ ಸಾಧನೆ ಏನು ಎಂಬ ಬಗ್ಗೆ ಪ್ರತೀ ವಾರ ವರದಿ ನೀಡುವಂತೆ ಪ್ರಧಾನಿ ಕಚೇರಿ ಸೂಚನೆ ನೀಡಿದ್ದು, ಆ ಬಳಿಕ ತಿಳಿದುಬಂತು. ಪ್ರತೀ ಸಚಿವಾಲಯ ಆನ್‌ಲೈನ್ ಅನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿವೆ ಎಂಬುದನ್ನು ನೋಡುವ ಸಲುವಾಗಿ ಈ ಹೊಸ ವರದಿ. ಈ ರಿಪೋರ್ಟ್ ಸಿದ್ಧಪಡಿಸಲು ಪ್ರತ್ಯೇಕ ಉನ್ನತಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಏನು ಚರ್ಚೆ ನಡೆಯುತ್ತಿದೆ ಎಂಬುದನ್ನು ತಿಳಿಯುವ ಬಗ್ಗೆ ಮೋದಿ ನಿಜವಾಗಿಯೂ ಗಂಭೀರ ಗಮನ ಹರಿಸಿದ್ದಾರೆ.
ಸ್ಮತಿ ಅವಕಾಶಗಳು
ಅತ್ಯಧಿಕ ಜನಸಂಖ್ಯೆಯ ಹಾಗೂ ರಾಜಕೀಯವಾಗಿ ಮಹತ್ವದ ರಾಜ್ಯ ಉತ್ತರ ಪ್ರದೇಶದ ಲೋಕಸಭಾ ಸ್ಥಾನಗಳನ್ನು ಕಳೆದ ಚುನಾವಣೆಯಲ್ಲಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ, ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಇದೇ ಸಾಧನೆ ಮಾಡುವ ವಿಶ್ವಾಸದಲ್ಲಿದೆ. ಅದಾಗ್ಯೂ ಪ್ರಶ್ನಾರ್ಥಕ ಚಿಹ್ನೆ ಇರುವುದು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದು. ಸಹಜವಾಗಿಯೇ ಪಕ್ಷದ ನಾಯಕತ್ವಕ್ಕೆ ಮನವರಿಕೆಯಾಗಿರುವ ವಿಚಾರವೆಂದರೆ, ಇಡೀ ರಾಜ್ಯದಲ್ಲಿ ಚಿರಪರಿಚಿತ ಹಾಗೂ ಜನಪ್ರಿಯ ಮುಖ ಎಂದರೆ ಯೋಗಿ ಆದಿತ್ಯನಾಥ್ ಹಾಗೂ ವರುಣ್ ಗಾಂಧಿ. ಆದರೆ ಘಟಾನುಘಟಿಗಳಾದ ಮಾಯಾವತಿ ಹಾಗೂ ಮುಲಾಯಂ ಸಿಂಗ್ ಅವರ ಎದುರು ಈ ಮುಖಂಡರು ತೀರಾ ಸಪ್ಪೆಎನಿಸುತ್ತಾರೆ. ಕೆಲ ಚುನಾವಣಾ ತಂತ್ರಗಾರರು, ಸ್ಮತಿ ಇರಾನಿಯವರನ್ನು ಅಚ್ಚರಿಯ ಕೊಡುಗೆಯಾಗಿ ಪರಿಚಯಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ಬಣರಾಜಕೀಯ ಇಣುಕು ಹಾಕಿದ್ದು, ಚುನಾವಣಾ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಈಗಾಗಲೇ ಒಂದು ಬಣದ ಬೆಂಬಲವನ್ನು ಕ್ರೋಡೀಕರಿಸುವಲ್ಲಿ ಇರಾನಿ ಯಶಸ್ವಿಯಾಗಿದ್ದು, ಅವರು ಇದೀಗ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಕ್ಷ ತನ್ನನ್ನು ಕಣಕ್ಕೆ ಇಳಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತಾಳಿದರೆ, ಚುನಾವಣೆಗೆ ಅಗತ್ಯವಾದ ಮೂಲಭೂತ ಕೆಲಸವನ್ನು ಆರಂಭಿಸಲು ಅನುಕೂಲವಾಗುತ್ತದೆ ಎಂಬ ಆಲೋಚನೆ ಇರಾನಿಯವರದ್ದು.
ಕೇರಳ ಪತ್ರಕರ್ತರ ಮೇಲೆ
ಕಾರಟ್‌ಗೆ ನಂಬಿಕೆ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋಲು ಅನುಭವಿಸಿದೆ. ಇದು ಕೇವಲ ಸೋಲಲ್ಲ; ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೂ ಘನಘೋರ ಸೋಲು ಅಥವಾ ನಾಮಾವಶೇಷದ ಸ್ಥಿತಿ. ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಪಾಲಿಟ್‌ಬ್ಯೂರೊ ಸದಸ್ಯ ಪ್ರಕಾಶ್ ಕಾರಟ್ ಇತೀಚೆಗೆ ಪತ್ರಕರ್ತರ ಒಂದು ತಂಡದ ಜೊತೆ ಮಾತನಾಡುತ್ತಾ, ‘‘ಕೇವಲ ನಮ್ಮ ಪಕ್ಷದ ಮುಖಂಡರು ಚುನಾವಣಾ ಜಯದ ಕನಸು ಕಾಣುತ್ತಿದ್ದುದು ಮಾತ್ರವಲ್ಲದೇ, ರಾಜ್ಯದ ಮಾಧ್ಯಮ ದಿಗ್ಗಜರನ್ನೊಳಗೊಂಡಂತೆ ಮಾಧ್ಯಮಗಳು ಕೂಡಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದವು. ಆದರೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇರಳ ಪತ್ರಕರ್ತರ ತಂಡ ಮಾತ್ರ ಸ್ಪಷ್ಟ ಹಾಗೂ ನಿಖರವಾದ ಚಿತ್ರಣ ನೀಡಿತ್ತು. ಕೇರಳ ಮಾಧ್ಯಮ ಮಿತ್ರರು ನಮ್ಮೆಂದಿಗೆ ಮಾತನಾಡುತ್ತಾ, ಮಮತಾ ಬ್ಯಾನರ್ಜಿಯವರಿಗೆ ವಿಜಯ ಸುಲಭದ ತುತ್ತು ಎಂದು ಹೇಳಿದ್ದರು. ಆದರೆ ನಮ್ಮ ಮುಖಂಡರು ವಿಭಿನ್ನ ಲೋಕದಲ್ಲಿದ್ದರು. ಅವರು ಅಧಿಕಾರಕ್ಕೆ ಮರಳುವ ಹಾಗೂ ಸಚಿವ ಹುದ್ದೆಯ ಕನಸೂ ಕಾಣುತ್ತಿದ್ದರು’’ ಎಂದು ಕಾರಟ್ ಹೇಳಿದರು ಎನ್ನಲಾಗಿದೆ. ಆದ್ದರಿಂದ ಮುಂದೆ ಸ್ಪಷ್ಟ ಚಿತ್ರಣದ ಬಗ್ಗೆ ವಿಶ್ವಾಸ ಇಡುವುದು ಹೊರ ರಾಜ್ಯಗಳ ಪತ್ರಕರ್ತರ ಬಗ್ಗೆ ಮಾತ್ರ!
ಸಿನೆಮಾ ರಾಜಕಾರಣಿಗಳ ಚಿತ್ರದ ಕನಸು
ಭೋಜಪುರಿ ನಟ ಹಾಗೂ ರಾಜಕಾರಣಿ ಮನೋಜ್ ತಿವಾರಿ ಇದೀಗ ಹೊಸ ಕನಸು ಕಾಣುತ್ತಿದ್ದಾರೆ. ಅದೆಂದರೆ, ಸಿನೆಮಾ ಕ್ಷೇತ್ರದಿಂದ ಬಂದು ಇದೀಗ ಸಂಸದರಾಗಿರುವ ಎಲ್ಲರನ್ನೂ ಸೇರಿಸಿ ಒಂದು ಸಿನೆಮಾ ತೆಗೆಯುವುದು. ಈ ಬಣ್ಣದ ತೆರೆ ಹಿನ್ನೆಲೆಯ ರಾಜಕಾರಣಿಗಳ ಪಟ್ಟಿಯಲ್ಲಿ ರೇಖಾ, ಜಯಾ ಬಚ್ಚನ್, ಮೂನ್ ಮೂನ್ ಸೇನ್, ಕಿರಣ್ ಖೇರ್, ರಾಜ್ ಬಬ್ಬರ್, ಪ್ರಕಾಶ್ ರಾವಲ್, ಹೇಮಾ ಮಾಲಿನಿ, ಬಬೂಲ್ ಸುಪ್ರಿಯೊ, ಮಿಥುನ್ ಚಕ್ರವರ್ತಿ ಮುಂತಾದವರಿದ್ದಾರೆ. ಅಮರ್ ಸಿಂಗ್ ಅವರನ್ನೂ ಈ ಕೂಟದಲ್ಲಿ ಸೇರಿಸಿಕೊಳ್ಳಲು ಮನೋಜ್ ಬಯಸಿದ್ದಾರೆ. ಆದರೆ ಬಚ್ಚನ್ ಹಾಗೂ ಬಬ್ಬರ್, ಸಿಂಗ್ ಅತಿಥಿ ನಟರಾಗಿ ಭಾಗವಹಿಸುವುದನ್ನೂ ಆಕ್ಷೇಪಿಸಿದ್ದಾರೆ. ದಿಲ್ಲಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ತಿವಾರಿ, ಇದೀಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಲೂ ಇಲ್ಲ. ಅವರು ಹೆಚ್ಚಿನ ಚಿತ್ರಗಳಲ್ಲೇ ಮತ್ತೆ ಬ್ಯುಸಿ ಆಗಿದ್ದಾರೆ ಎಂಬ ಆರೋಪ ಜನರದ್ದು. ಆದರೆ ಇದೀಗ ಅವರಿಗೆ ತಮ್ಮದೇ ವಿಶಿಷ್ಟ ಯೋಚನೆ ಇದೆ ಎಂದು ಹೇಳಬಹುದು.
ಕಿರಣ್ ರಿಜಿಜುರವರ ಮೋದಿ ಭಕ್ತಿ
ಮೋದಿಯವರು ಈ ದೇಶಕ್ಕೆ ದೇವರು ಕೊಟ್ಟ ವರ ಎಂಬ ಹೇಳಿಕೆಯನ್ನು ಮೊದಲು ವೆಂಕಯ್ಯ ನಾಯ್ಡು ನೀಡಿದಾಗ, ಕೆಲ ಹಿರಿಯ ಪತ್ರಕರ್ತರು ಇದು, ಮುಖಸ್ತುತಿಯ ಪರಮಾವಧಿ ಎಂದು ಟೀಕಿಸಿದ್ದರು. ಇದೀಗ ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರ ಸರದಿ. ಆರೋಗ್ಯವಂತ ಭಾರತಕ್ಕಾಗಿ, ಮೋದಿಯವರ ಆರೋಗ್ಯಕ್ಕೆ ತಮ್ಮ ಎಲ್ಲ ಟ್ವಿಟ್ಟರ್ ಅನುಯಾಯಿಗಳು ಪ್ರಾರ್ಥಿಸುವಂತೆ ರಿಜಿಜು ಇತ್ತೀಚೆಗೆ ಕೋರಿದ್ದರು. ಉನ್ನತ ಅಧಿಕಾರಿಗಳು ಮೋದಿಯವರ ಎಡೆಬಿಡದ ಕಾರ್ಯಕ್ರಮಗಳ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ಉಲ್ಲೇಖಿಸುವ ಬ್ಲಾಗ್ ಒಂದನ್ನು ಉದಾಹರಿಸಿದ್ದರು. ಕಿರಣ್ ಟ್ವೀಟ್ ಹೀಗಿತ್ತು: ‘‘ಯಾವ ರಾಜಕೀಯವೂ ಇಲ್ಲ; ಯಾವ ಪಕ್ಷಪಾತವೂ ಇಲ್ಲ; ಕೇವಲ ಮೂರು ನಿಮಿಷಗಳ ಕಾಲ ದಯವಿಟ್ಟು ಓದಿ. ಆರೋಗ್ಯವಂತ ಭಾರತಕ್ಕಾಗಿ ಮೋದಿಯವರ ಆರೋಗ್ಯಕ್ಕೆ ನಾವೆಲ್ಲರೂ ಬೇಡಿಕೊಳ್ಳೋಣ.’’ ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಾಮಾಜಿಕ ಜಾಲತಾಣ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಖಚಿತವಾದ ಬಳಿಕ ಅದನ್ನು ಮೋದಿಗೂ ಟ್ಯಾಗ್ ಮಾಡುವಷ್ಟು ರಿಜಿಜು ಚಾಣಕ್ಯ.