ಅಖ್ಲಕ್ ಹತ್ಯೆ ಆರೋಪಿಗಳಿಗೆ ಬೆಂಬಲ ನೀಡಲು ವಿಎಚ್ ಪಿ ನಿರ್ಧಾರ

Update: 2016-06-05 07:40 GMT

ನೋಯ್ಡಾ: ದಾದ್ರಿ ಗೋಮಾಂಸ ಸೇವನೆ ವದಂತಿ ಹಿನ್ನೆಲೆಯಲ್ಲಿ ಮಹ್ಮದ್ ಅಖ್ಲಕ್ ಎಂಬಾತನ ಹತ್ಯೆ ಮಾಡಿದ ಪ್ರಕರಣದ ಆರೋಪಿಗಳಿಗೆ ಕಾನೂನು ಹಾಗೂ ಹಣಕಾಸು ನೆರವು ನೀಡಲು ಬದ್ಧ ಎಂದು ವಿಶ್ವಹಿಂದೂ ಪರಿಷತ್ ಪ್ರಕಟಿಸಿದೆ. ಗೋಹತ್ಯೆ ಮಾಡಿದ್ದಕ್ಕಾಗಿ ಅಖ್ಲಕ್ ಕುಟುಂಬ ಸದಸ್ಯರ ಮೇಲೆ ಪ್ರಕರಣ ದಾಖಲಿಸುವಂತೆಯೂ ಆಗ್ರಹಿಸಿದೆ.
ಘಟನೆ ಸಂಬಂಧ ಈಗಾಗಲೇ ಬಂಧಿಸಲಾಗಿರುವ 18 ಮಂದಿಯ ಪರವಾಗಿ ವಾದ ಮಂಡಿಸಲು ನಮ್ಮ ಸಂಘಟನೆ ಈಗಾಗಲೇ ಉತ್ತಮ ವಕೀಲರ ಜತೆ ಮಾತುಕತೆ ನಡೆಸಿದೆ. ದಾದ್ರಿಯ ಬಿಸಾದ ಗ್ರಾಮದಲ್ಲಿರುವ ಅವರ ಕುಟುಂಬ ಸದಸ್ಯರನ್ನೂ ಸಂಪರ್ಕಿಸಿ, ನೆರವಿನ ಭರವಸೆ ನೀಡಲಾಗಿದೆ ಎಂದು ವಿಶ್ವಹಿಂದೂ ಪರಿಷತ್ತಿನ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು ಪ್ರಕಟಿಸಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್ 28ರಂದು, ಅಖ್ಲಕ್ ಕುಟುಂಬ ಗೋಮಾಂಸ ಭಕ್ಷಿಸುತ್ತಿದೆ ಎಂಬ ವಂದತಿ ಹಿನ್ನೆಲೆಯಲ್ಲಿ ಈ ಗುಂಪು ಬಿಸಾದ ಗ್ರಾಮದಲ್ಲಿ ಅಖ್ಲಕ್ ಅವರನ್ನು ಹೊಡೆದು ಸಾಯಿಸಿತ್ತು. ಆರೋಪಿಗಳ ಪೈಕಿ ಒಬ್ಬ ಬಾಲಾಪರಾಧಿ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದಾನೆ.
ಆರೋಪಿಗಳ ಕುಟುಂಬ ಸದಸ್ಯರು ಶನಿವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಅವರು ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮಖಂಡ ಹಾಗೂ ಆರೋಪಿ ವಿಶಾಲ್ ಎಂಬಾತನ ತಂದೆ ಸಂಜಯ್ ಬಾಬಾ ಪ್ರಕಟಿಸಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ, ಅಖ್ಲಕ್ ಮನೆಯಲ್ಲಿ ಇದ್ದುದು ಗೋಮಾಂಸ ಎನ್ನುವುದು ಖಚಿತವಾಗಿ ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ ಅಖ್ಲಕ್ ಕುಟುಂಬದ ವಿರುದ್ಧ ಗೋಹತ್ಯೆ ಪ್ರಕರಣ ದಾಖಲಿಸಬೇಕು ಎಂದು ಜೈನ್ ಈ ಸಂದರ್ಭದಲ್ಲಿ ಒತ್ತಾಯಿಸಿದರು. ಉತ್ತರ ಪ್ರದೇಶ ಸರಕಾರ ಕುಟುಂಬಕ್ಕೆ ನೀಡಿದ ಪರಿಹಾರವನ್ನು ವಾಪಾಸು ಪಡೆಯಬೇಕು ಎಂದೂ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News