ರೈತರಿಗೆ ರಷ್ಯನ್ ಕ್ರಾಂತಿಯ ಪಾಠ ಮಾಡಿದ ಅರಸು -ಮಾರ್ಗರೆಟ್ ಆಳ್ವ

Update: 2016-06-08 10:37 GMT

'ಯೂ ಮಸ್ಟ್ ಜಾಯಿನ್ ದ ಪಾರ್ಟಿ'

ನಾನು ದೇವರಾಜ ಅರಸು ಅವರ ಶಿಷ್ಯೆ. ರಾಜಕಾರಣದ ಅಂಗಳಕ್ಕೆ ಕರೆತಂದು ದೀಕ್ಷೆ ಕೊಟ್ಟಿದ್ದು, ಸಹಾಯ ಮಾಡಿದ್ದು ಅರಸು. ಅವರಿಂದ ತುಂಬಾನೇ ಕಲಿತಿದ್ದೇನೆ. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ, ಸಿಂಡಿಕೇಟ್-ಇಂಡಿಕೇಟ್ ಎಂದು ಕಾಂಗ್ರೆಸ್ ಎರಡು ಹೋಳಾದಾಗ, ದೇವರಾಜ ಅರಸು ಇಂದಿರಾ ಕಾಂಗ್ರೆಸ್‌ಗೆ ಕನ್ವೀನರ್ ಆಗಿ ನೇಮಕಗೊಂಡರು. ಅರಸು ಕನ್ವೀನರ್ ಆಗಲು ಹಲವರು ಸಹಕರಿಸಿದ್ದರು. ಅದರಲ್ಲಿ ನಮ್ಮ ಮಾವ-ಅತ್ತೆಯರಾದ ಜೋಕಿಮ್ ಆಳ್ವ ಮತ್ತು ವಾಯ್‌ಲೆಟ್ ಆಳ್ವ ಕೂಡ ದಿಲ್ಲಿ ಮಟ್ಟದಲ್ಲಿ ಸಹಕರಿಸಿದ್ದರು. ಹೀಗೆ ಸಹಾಯ ಪಡೆದ ಅರಸು ಅದನ್ನು, ನನ್ನನ್ನು ರಾಜ್ಯಸಭಾ ಸದಸ್ಯೆಯನ್ನಾಗಿ ಮಾಡುವ ಮೂಲಕ ತೀರಿಸಿದರು ಎನ್ನುವುದು ನನ್ನ ಭಾವನೆ. 1969ರ ನವೆಂಬರ್‌ನಲ್ಲಿ ನಮ್ಮ ಅತ್ತೆ ವಾಯ್‌ಲೆಟ್ ಆಳ್ವ ನಿಧನರಾದರು. ಆಗ ನಾನು ದಿಲ್ಲಿಯಲ್ಲಿದ್ದೆ. ನನ್ನ ಪತಿಗೆ ಬೆಂಗಳೂರಿಗೆ ವರ್ಗವಾಯಿತು. ಬೆಂಗಳೂರಿಗೆ ಬಂದೆವು. ಆಗ ಅರಸು ಅವರು, ''ಯೂ ಮಸ್ಟ್ ಜಾಯಿನ್ ದ ಪಾರ್ಟಿ, ನಿಮ್ಮ ಅತ್ತೆಯವರ ಜಾಗದಲ್ಲಿ ನೀವು ಬರಲೇಬೇಕು'' ಎಂದರು. ಪಕ್ಷದಲ್ಲಿ ಒಂದು ಹುದ್ದೆ ಸೃಷ್ಟಿಸಿಕೊಡುವುದಾಗಿ ಆಹ್ವಾನವಿತ್ತರು. ಆಗ ನನಗೆ 27 ವರ್ಷ ವಯಸ್ಸು. ಮೂರು ಮಕ್ಕಳಿದ್ದವು.

''ಚಿಕ್ಕ ಮಕ್ಕಳಿವೆ, ಬಿಟ್ಟು ಬರಲಿಕ್ಕಾಗುವುದಿಲ್ಲ'' ಅಂದೆ. ಆದರೂ ಅವರು ಬಿಡಲಿಲ್ಲ. ಕೊನೆಗೆ ಕಾಂಗ್ರೆಸ್ ಪಕ್ಷ ಸೇರಿದೆ, ಅರಸು ಜೊತೆಯಲ್ಲಿ ಕೆಲಸ ಮಾಡತೊಡಗಿದೆ. ಹೀಗೆ ಎರಡು ವರ್ಷ ಕಳೆದ ನಂತರ, 1972ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾದರು. ಆಗ ನನ್ನನ್ನು ಕರ್ನಾಟಕ ಮಹಿಳಾ ಕಾಂಗ್ರೆಸ್ ಕನ್ವೀನರ್ ಮಾಡಿದರು. ಆರು ತಿಂಗಳಲ್ಲಿಯೇ ಮರುಚುನಾವಣೆ ಬಂತು. ಪಾರ್ಟಿ ಪ್ರೆಸಿಡೆಂಟ್ ಆಗಿದ್ದ ಅರಸು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಹಾಗಾಗಿ ಹುಣಸೂರಿನಿಂದ ಡಿ.ಕರಿಯಪ್ಪನವರು ಗೆದ್ದಿದ್ದರು. ಅವರಿಂದ ರಾಜೀನಾಮೆ ಕೊಡಿಸಿ, ಅರಸು ಅಲ್ಲಿಂದ ಸ್ಪರ್ಧಿಸಿದರು. ನಾವೆಲ್ಲ ಹುಣಸೂರಿನಲ್ಲಿ 10 ದಿನಗಳ ಕ್ಯಾಂಪ್ ಮಾಡಿ, ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡೆವು. ಅರಸು ಗೆದ್ದರು. ಅದು ನಮ್ಮ ಗೆಲುವಾಗಿತ್ತು. ಮೊದಲ ಬಾರಿಗೆ ರಾಜ್ಯಸಭಾ ಸದಸ್ಯೆ

ನನಗಿನ್ನೂ ನೆನಪಿದೆ, ಮನೆಯಲ್ಲಿ ಏನೋ ಕೆಲಸದಲ್ಲಿ ಬ್ಯುಸಿಯಾಗಿದ್ದೆ, ಮೇಯರ್ ಅನಂತಕೃಷ್ಣ ಫೋನ್ ಮಾಡಿ, ''ನಿಮ್ಮ ಹೆಸರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದವರ ಪಟ್ಟಿಯಲ್ಲಿ ಪ್ರಕಟವಾಗಿದೆ, ಪಿಟಿಐ ನ್ಯೂಸ್‌ನಲ್ಲಿ ಬಂದಿದೆ'' ಎಂದರು. ಮೊದಲಿಗೆ ನಂಬದಾದೆ. ಏಕೆಂದರೆ ನನ್ನನ್ನು ರಾಜ್ಯಸಭಾ ಸದಸ್ಯೆಯನ್ನಾಗಿ ಮಾಡಿ ಎಂದು ಯಾರನ್ನೂ ಕೇಳಿಕೊಂಡಿದ್ದಿಲ್ಲ, ಲಾಬಿ ಮಾಡಿಲ್ಲ, ಪ್ರಭಾವ ಬಳಸಿಲ್ಲ, ಒತ್ತಡವನ್ನೂ ಹಾಕಿಲ್ಲ. ಇನ್ನೂ ಸೋಜಿಗದ ಸಂಗತಿ ಎಂದರೆ, ನನ್ನದು ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯ. ನಮ್ಮನ್ನು ಯಾರು ಕೇಳುತ್ತಾರೆ. ಆ ಸಂದರ್ಭದ ಕರ್ನಾಟಕದ ರಾಜಕಾರಣದಲ್ಲಿ ಬಲಾಢ್ಯ ಮತ್ತು ಬಹುಸಂಖ್ಯಾತ ಜಾತಿಗಳಾದ ಲಿಂಗಾಯತ-ಒಕ್ಕಲಿಗರದೇ ಕಾರುಬಾರು. ಅಲ್ಲಿಯವರೆಗೆ ಆದ ಮುಖ್ಯಮಂತ್ರಿಗಳೂ ಆ ಜಾತಿಗೆ ಸೇರಿದವರೇ. ಹಾಗಿರುವಾಗ ನಮ್ಮಂತಹ ಅಲ್ಪಸಂಖ್ಯಾತರತ್ತ ಯಾರು ನೋಡುತ್ತಾರೆ.

ದೇ ದೇವರಾಜ ಅರಸು. ನಮ್ಮಂತಹವರ ಪೊಲಿಟಿಕಲ್ ಗಾಡ್‌ಫಾದರ್. ನಿರ್ಲಕ್ಷಿತ ಸಮುದಾಯಗಳನ್ನು, ಕಡೆಗಣಿಸಲ್ಪಟ್ಟ ಕಡಿಮೆ ಸಂಖ್ಯೆಯ ಜಾತಿಯ ಜನರನ್ನು, ರಾಜಕಾರಣದಿಂದ ಮಾರುದೂರವಿದ್ದ ಮೈನ್ಯೂಟ್ ಕಮ್ಯುನಿಟಿಯ ಜನರನ್ನು ಹುಡುಕಿ ಹುಡುಕಿ ರಾಜಕೀಯಕ್ಕೆ ಕರೆದು ತಂದರು. ಅಧಿಕಾರದ ಸ್ಥಾನಗಳನ್ನು ನೀಡಿದರು. ಆ ನಂತರ ಆ ಸಮುದಾಯಗಳಲ್ಲಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಬದಲಾವಣೆಗೆ ಕಾರಣರಾದರು. ಆ ವರ್ಗದ ಜನರ ಅಭಿವೃದ್ಧಿಗೆ, ನಾಡಿನ ಅಭಿವೃದ್ಧಿಗೆ ಅಸ್ತಿಭಾರ ಹಾಕಿದರು. ದಟ್ಸ್ ದ ಡೆಮಾಕ್ರಸಿ.
ನಾನೊಬ್ಬ ಸಾಮಾನ್ಯ ಗೃಹಿಣಿ, ದಿಲ್ಲಿ ಮಟ್ಟದ ರಾಜಕಾರಣದಲ್ಲಿ, ಘಟಾನುಘಟಿ ನಾಯಕರ ನಡುವಿನಲ್ಲಿ ನಿಂತು ಕರ್ನಾಟಕವನ್ನು ಪ್ರತಿನಿಧಿಸುವಾಗಲೆಲ್ಲ ದೇವರಾಜ ಅರಸು ನೆನಪಾಗುತ್ತಿದ್ದರು. ಅಂತಹ ಮಹಾನ್ ವ್ಯಕ್ತಿಯನ್ನು ಮರೆಯಲು ಸಾಧ್ಯವೇ ಇಲ್ಲ.

ರೈತರಿಗೆ ರಷ್ಯನ್ ಕ್ರಾಂತಿ

 ನಾನು ಸ್ಟೇಟ್ ಮಹಿಳಾ ವಿಂಗ್ ಕನ್ವೀನರ್ ಆಗಿದ್ದಾಗ ಅವರ ಜೊತೆ ಟೂರ್ ಹೋಗುತ್ತಿದ್ದೆ. ಅಲ್ಲಿ ಕಂಡ ಕೆಲವು ಘಟನೆಗಳು ನೆನಪಾಗುತ್ತಿವೆ... ಎಲ್ಲೋ ಒಂದು ಕಡೆ ಕಾರು ನಿಲ್ಲಿಸಿದರು. ಒಂದಷ್ಟು ರೈತರು ಬಂದು ಕೈ ಮುಗಿದು ನಿಂತರು. ಅಲ್ಲೆ, ಆ ಜಾಗದಲ್ಲೇ ಅವರನ್ನು ಉದ್ದೇಶಿಸಿ ಅರಸು ಭಾಷಣ. ಅದನ್ನು ಭಾಷಣ ಎನ್ನುವುದಕ್ಕಿಂತ ಪಾಠ ಎಂದರೆ ಸರಿಯೇನೋ. ''ಭೂ ಸುಧಾರಣೆ ಕಾಯ್ದೆ ಗೊತ್ತಾ ನಿಮಗೆ... ಮಳೆ, ಗಾಳಿ, ಬಿಸಿಲು ನೋಡದೆ ಬೆವರು ಸುರಿಸ್ತೀರ, ಭೂಮಿ ನಿಮ್ಮದಲ್ಲ, ಬೆಳೆ ನಿಮ್ಮದಲ್ಲ. ವರ್ಷವೆಲ್ಲ ದುಡಿದರೂ ಒಂದು ಪಲ್ಲ ಭತ್ತ, ರಾಗಿ, ಜೋಳ ಸಿಗಲ್ಲ. ನಿಮ್ಮ ಕುಟುಂಬದ ಹೊಟ್ಟೆ ತುಂಬಲ್ಲ. ಬಡವರು ಬಡವರಾಗ್ತಾನೇ ಹೋಗ್ತಾರೆ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗ್ತಾರೆ. ಶ್ರೀಮಂತರ ಧಿಮಾಕು ಅತಿಯಾಗುತ್ತೆ, ಬಡವರ ಹಸಿವು ಸಿಟ್ಟು ತರಿಸುತ್ತೆ. ರಷ್ಯಾದಲ್ಲಿ ಇದೇ ಆಗಿದ್ದು. ಕೊನೆಗೊಂದು ದಿನ ಬಡವರೆಲ್ಲ ಸೇರಿ ಶ್ರೀಮಂತರನ್ನು ಕೊಂದು ಹಾಕಿದರು. ರಕ್ತಪಾತವಾಯಿತು. ಶ್ರೀಮಂತರ ಭೂಮಿಯನ್ನೆಲ್ಲ ಬಡವರು ಕಿತ್ತುಕೊಂಡರು.

ಅದೇ ರಷ್ಯನ್ ಕ್ರಾಂತಿ. ಅದು ನಮ್ಮಲ್ಲೂ ಆಗಬೇಕಾ? ನಮ್ಮ ಜಮೀನ್ದಾರರು ಒಳ್ಳೆಯವರು, ಬಡವರ ಕಷ್ಟವನ್ನು ಅವರಿಗೆ ಮನದಟ್ಟು ಮಾಡಿಸೋಣ, ನಾವು ಪ್ರೀತಿಯಿಂದ, ಸಮಾಧಾನದಿಂದ ಈ ತಾರತಮ್ಯವನ್ನು ಸರಿಪಡಿಸೋಣ. ಶಾಂತಿ, ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳೋಣ....'' ಹೀಗೆ ಅವರಾಡುವ ಭಾಷೆಯಲ್ಲಿ, ಅವರಿಗೆ ತಿಳಿಯುವ ರೀತಿಯಲ್ಲಿ, ಮಕ್ಕಳಿಗೆ ಮೇಸ್ಟ್ರು ಪಾಠ ಮಾಡುವ ಬಗೆಯಲ್ಲಿ ಹೇಳೋರು. ಅವತ್ತು ಅರಸು ಐದಲ್ಲ, ಹತ್ತಲ್ಲ... ಸುಮಾರು ಒಂದೂವರೆ ಗಂಟೆಗಳ ಕಾಲ ರೈತರೊಂದಿಗೆ ರೈತರಾಗಿ ಮಾತನಾಡಿದರು. ಬಹಳ ದೊಡ್ಡ ಸೋಷಿಯಲ್ ರೀಫಾರ್ಮರ್, ಪೊಲಿಟಿಕಲ್ ಥಿಂಕರ್.


ಭಾರತದ ರಾಜಕಾರಣದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮು ದಾಯದ ಪಾತ್ರ ಬೆರಳೆಣಿಕೆಯಷ್ಟು. ಅದರಲ್ಲೂ ಮಹಿಳೆಯರಂತೂ ತೀರಾ ವಿರಳ. ಪುರುಷರ ಪೈಕಿ ಜಾರ್ಜ್ ಫೆರ್ನಾಂಡಿಸ್, ಆಸ್ಕರ್ ಫೆರ್ನಾಂಡಿಸ್, ವೈ.ಎಸ್.ರಾಜಶೇಖರರೆಡ್ಡಿ, ಓಮನ್ ಚಾಂಡಿ, ಎ.ಕೆ.ಆಂಟನಿ, ಎ.ಜೆ.ಜಾನ್, ಲಾಲ್ ತನ್ಹಾವಾಲಾರು ಅಗ್ರಗಣ್ಯರು. ಇವರು ಮುಖ್ಯಮಂತ್ರಿ, ಕೇಂದ್ರ ಮಂತ್ರಿಗಳಂತಹ ಉನ್ನತ ಸ್ಥಾನಗಳನ್ನು ಅಲಂಕರಿಸಿ, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಆದರೆ ಕ್ರಿಶ್ಚಿಯನ್ ಸಮುದಾಯದ ಮಹಿಳೆಯರ ಪೈಕಿ ದಕ್ಷಿಣ ಭಾರತದಿಂದ ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸಿದವರು ಮಾರ್ಗರೆಟ್ ಆಳ್ವ ಒಬ್ಬರೆ. ಮಾರ್ಗರೆಟ್ ಆಳ್ವರು ರಾಜ್ಯ ಮಹಿಳಾ ಕಾಂಗ್ರೆಸ್ ಕನ್ವೀನರ್ ಆಗಿ; ನಾಲ್ಕು ಬಾರಿ ರಾಜ್ಯಸಭಾ (1974ರಿಂದ 1998ರವರೆಗೆ), ಒಂದು ಬಾರಿ ಲೋಕಸಭಾ (1999ರಿಂದ 2004)ಸದಸ್ಯರಾಗಿ; ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್‌ರ ಕೇಂದ್ರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಮಂತ್ರಿಯಾಗಿದ್ದವರು. ಹತ್ತು ಹಲವು ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ರಾಜಕೀಯ ವಲಯದಲ್ಲಿ ಹೆಸರು ಮಾಡಿದವರು. ಆನಂತರ ಹಿರಿತನ, ಅನುಭವದ ಆಧಾರದ ಮೇಲೆ ಎಐಸಿಸಿ ಜನರಲ್ ಸೆಕ್ರೆಟರಿಯಾಗಿ ಐದು ವರ್ಷ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪಕ್ಷ ಸಂಘಟನೆಗಾಗಿ ದುಡಿದವರು. ಅಲ್ಲದೆ ಗುಜರಾತ್, ರಾಜಾಸ್ತಾನ್, ಗೋವಾ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಗೌರವಾನ್ವಿತ ರಾಜ್ಯಪಾಲ ಹುದ್ದೆ ಅಲಂಕರಿಸಿ, ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಈಗ ಬೆಂಗಳೂರಿನ ಕೂಕ್ ಟೌನ್‌ನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ಆಳವಾದ ಅಧ್ಯಯನ, ಅಪಾರ ರಾಜಕೀಯ ಅನುಭವಗಳಿಂದ ಮಾಗಿದ ಮಾರ್ಗರೆಟ್ ಆಳ್ವರು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಒತ್ತಿದವರು. ಅನಗತ್ಯ ಮಾತು, ವಿವಾದ, ಹಗರಣಗಳಿಂದ ದೂರವೇ ಉಳಿದು ಹೆಸರು ಕೆಡಿಸಿಕೊಳ್ಳದವರು. ತತ್ವ ಸಿದ್ಧಾಂತಗಳಿಗೆ ಬದ್ಧರಾದವರು. ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದರೂ ಕೈ ಬಾಯಿ ಶುದ್ಧವಾಗಿಟ್ಟುಕೊಂಡವರು. ದೇಶ ಕಂಡ ಕೆಲವೇ ಕೆಲವು ಸುಸಂಸ್ಕೃತ ರಾಜಕಾರಣಿಗಳ ಪೈಕಿ ಇವರೂ ಒಬ್ಬರು. ಇಂತಹ ಮಾರ್ಗರೆಟ್ ಆಳ್ವರು ಹುಟ್ಟಿದ್ದು (1942) ಮಂಗಳೂರಿನಲ್ಲಿ. ಬೆಂಗಳೂರಿನ ವೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕಲಾ ಪದವಿ, ಸರಕಾರಿ ಲಾ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದವರು. ವೃತ್ತಿಯಲ್ಲಿ ವಕೀಲರು. ಕಾನೂನು ಕಲಿಯುವಾಗ ಪರಿಚಯವಾದ ನಿರಂಜನ್ ಆಳ್ವರೊಂದಿಗೆ ವಿವಾಹವಾಗಿ, ನಾಲ್ಕು (ಮೂವರು ಹೆಣ್ಣು, ಒಂದು ಗಂಡು) ಮಕ್ಕಳ ತಾಯಿಯಾದವರು. ಹಾಗೆ ನೋಡಿದರೆ, ಮಾರ್ಗರೆಟ್ ಆಳ್ವರಿಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ಆದರೆ ಗಂಡ ನಿರಂಜನ್ ಆಳ್ವರ ಮನೆ ಕಡೆಯಿಂದ ಮಾವ ಜೋಕ್ಹಿಮ್ ಆಳ್ವ, ಅತ್ತೆ ವಾಯ್‌ಲೆಟ್ ಆಳ್ವ- ಇಬ್ಬರೂ ಸಂಸತ್ ಸದಸ್ಯರು. ಒಬ್ಬರು ಲೋಕಸಭೆ, ಇನ್ನೊಬ್ಬರು ರಾಜ್ಯಸಭಾ ಸದಸ್ಯರಾಗಿದ್ದವರು. ಈ ಹಿನ್ನೆಲೆಯ ಮಾರ್ಗರೆಟ್ ಆಳ್ವರಿಗೆ ಮೊತ್ತ ಮೊದಲ ಬಾರಿಗೆ ರಾಜಕೀಯ ದೀಕ್ಷೆ ನೀಡಿದವರು, ಅಧಿಕಾರದ ಸ್ಥಾನವನ್ನು ಕಲ್ಪಿಸಿಕೊಟ್ಟವರು ದೇವರಾಜ ಅರಸು. ಮೊದಲಿಗೆ 1974ರಲ್ಲಿ, ಮತ್ತೊಂದು ಸಲ 1980ರಲ್ಲಿ, ಎರಡು ಸಲ ಮಾರ್ಗರೆಟ್ ಆಳ್ವರನ್ನು ಅರಸರು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ದಿಲ್ಲಿಗೆ ಕಳುಹಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಸಲ ಬಹುಮತವಿದ್ದು, ಮುಖ್ಯಮಂತ್ರಿಯಾಗಿದ್ದು, ಸರಕಾರವಿದ್ದಾಗ ಆಯ್ಕೆ ಮಾಡಿದ್ದಾದರೆ; ಎರಡನೆ ಸಲ ಅಧಿಕಾರವಿಲ್ಲದಾಗ, ಶಾಸಕರ ಬೆಂಬಲವಿಲ್ಲದಾಗ ಆಯ್ಕೆ ಮಾಡಿ ಕಳುಹಿಸಿದರು. ಇದು ದೇವರಾಜ ಅರಸರ ವರ್ಚಸ್ವಿ ರಾಜಕಾರಣಕ್ಕೊಂದು ಅತ್ಯುತ್ತಮ ನಿದರ್ಶನ. ಇದನ್ನು ಮಾರ್ಗರೆಟ್ ಆಳ್ವರಿಂದಲೇ ಕೇಳಿ...

ಪಕ್ಷ ಸಂಘಟಿಸಲು ಫಂಡಿಂಗ್ 1977ರ ತುರ್ತು ಪರಿಸ್ಥಿತಿಯ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಕಾಂಗ್ರೆಸ್ ಧೂಳೀಪಟವಾಯಿತು. ದೇಶದಲ್ಲಿ ಹೊಸ ರಾಜಕೀಯ ಗಾಳಿ ಬೀಸತೊಡಗಿತು. ಇಂದಿರಾ ಗಾಂಧಿಯವರು ಸೋತು ಅವಮಾನದಿಂದ ಕುಗ್ಗಿಹೋಗಿದ್ದರು. ಅದೇ ಸಮಯದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಶುರುವಾಗಿ, ಪಕ್ಷ ಇಬ್ಭಾಗವಾಗಿ, ಬ್ರಹ್ಮಾನಂದರೆಡ್ಡಿಯವರದೇ ಒಂದು ಪಕ್ಷವಾಯಿತು. ಬಹಳಷ್ಟು ನಾಯಕರು ಪಕ್ಷ ತೊರೆದು ರೆಡ್ಡಿಯವರ ಹಿಂದೆ ಹೋದರು. ಆ ಸಂಕಷ್ಟದ ಸಮಯದಲ್ಲಿ ಪಕ್ಷಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು, ಇಂದಿರಾ ಗಾಂಧಿಯವರ ಬೆಂಬಲಕ್ಕೆ ನಿಂತವರು, ಸೋತು ಸೊರಗಿದ್ದ ಪಕ್ಷಕ್ಕೆ ಮತ್ತೆ ಚೈತನ್ಯ ತುಂಬಿದವರು ದೇವರಾಜ ಅರಸು. ನನಗಿನ್ನೂ ನೆನಪಿದೆ... ದಿಲ್ಲಿಯಲ್ಲಿ ಪಕ್ಷ ಸಂಘಟಿಸಲು, ಕಾರ್ಯಕರ್ತರನ್ನು ಹುರಿದುಂಬಿಸಲು, ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಮುಖ್ಯ ಕಾರಣಕರ್ತರು ದೇವರಾಜ ಅರಸು. ಇಂದಿರಾ ಗಾಂಧಿ ಸೇರಿದಂತೆ ಇತರ ರಾಜ್ಯಗಳ ನಾಯಕರನ್ನು ದಿಲ್ಲಿಗೆ ಕರೆಸುವುದು, ಅವರ ಯೋಗಕ್ಷೇಮ ವಿಚಾರಿಸುವುದು, ಸಭೆ ಕರೆದು ಚರ್ಚಿಸುವುದು, ಅವರ ಖರ್ಚು-ವೆಚ್ಚ ನಿಭಾಯಿಸುವುದು ಎಲ್ಲದರ ಉಸ್ತುವಾರಿ ಹೊತ್ತವರು ದೇವರಾಜ ಅರಸು. ದಿಲ್ಲಿಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶಕ್ಕೆ ಬೇಕಾದ ದೊಡ್ಡ ಮೊತ್ತದ ಫಂಡಿಂಗ್ ಮಾಡಿದ್ದು ಅರಸು. ಆ ಹಣದ ಉಸ್ತುವಾರಿಯನ್ನು ದಿಲ್ಲಿಯಲ್ಲಿದ್ದ ನನಗೆ, ಸಚ್ಚಿದಾನಂದಸ್ವಾಮಿ ಮತ್ತು ಕೆಂಪರಾಜ ಅರಸರಿಗೆ ವಹಿಸಿಕೊಟ್ಟಿದ್ದರು. ಅಂದರೆ, ಅರಸುಗೆ ಇಂದಿರಾ ಮೇಡಂ ಬಗ್ಗೆ ಅಪಾರ ಪ್ರೀತಿ. ಅವರನ್ನು ಮತ್ತೆ ರಾಜಕಾರಣದ ರಿಂಗ್‌ಗೆ ಕರೆತರಬೇಕು, ಪಕ್ಷವನ್ನು ಸಂಘಟಿಸಿ ಮತ್ತೆ ಪ್ರಧಾನಿಯನ್ನಾಗಿ ನೋಡಬೇಕೆಂಬ ಆಸೆ ಇತ್ತು.

ದಕಾರಣ ಅವರನ್ನು ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರೇರೇಪಿಸಿದ್ದೂ ಅಲ್ಲದೆ, ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು, ಹಾಲಿ ಎಂಪಿ ಡಿ.ಬಿ.ಚಂದ್ರೇಗೌಡರಿಂದ ರಾಜೀನಾಮೆ ಪಡೆದರು. ಚುನಾವಣೆಯ ಸಂಪೂರ್ಣ ಉಸ್ತುವಾರಿ ಹೊತ್ತರು. ಮಾಜಿ ಪ್ರಧಾನಿಯನ್ನು ಕರ್ನಾಟಕಕ್ಕೆ ಕರೆತಂದು ಗೆಲ್ಲಿಸುವ ಮೂಲಕ ರಾಜಕೀಯ ಪುನರ್ಜನ್ಮಕ್ಕೆ ಹಾಗೂ ರಾಷ್ಟ್ರ ರಾಜಕಾರಣದ ಮಹತ್ವದ ಬೆಳವಣಿಗೆಗೆ ಕಾರಣರಾದರು.
(ಮುಂದುವರೆಯುವುದು)

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News