ಮಾಧ್ಯಮಗಳ ಬಗ್ಗೆ ರಾಜನ್ ವ್ಯಂಗ್ಯ

Update: 2016-06-07 18:00 GMT

ಮುಂಬೈ,ಜೂ.7: ಎರಡನೆ ಅವಧಿಗೆ ತನ್ನ ಮುಂದುವರಿಕೆಯ ಬಗ್ಗೆ ಕುತೂಹಲವನ್ನು ಸಜೀವವಾಗಿಸಿರುವ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು, ಈ ಬಗ್ಗೆ ಊಹಾಪೋಹಗಳನ್ನು ಸೃಷ್ಟಿಸುವ ಮೂಲಕ ಮಾಧ್ಯಮಗಳು ಪಡೆಯುತ್ತಿರುವ ಮೋಜನ್ನು ಹಾಳು ಮಾಡುವಷ್ಟು ‘ಕ್ರೂರಿ’ ತಾನಲ್ಲ ಎಂದು ಮಂಗಳವಾರ ಇಲ್ಲಿ ಹೇಳಿದರು. ಇದೇ ವೇಳೆ ಅವರು ಆರ್ಥಿಕ ಸೇರ್ಪಡೆಯ ಮತ್ತು ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಲೆಕ್ಕಪುಸ್ತಕಗಳ ಶುದ್ಧೀಕರಣದ ‘ಅಪೂರ್ಣ ಕಾರ್ಯಸೂಚಿ ’ಯ ಬಗ್ಗೆ ಮಾತನಾಡಿದರು.

ಹಣಕಾಸು ನೀತಿ ಪ್ರಕಟಣೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತನ್ನ ಅಧಿಕಾರಾವಧಿಯ ಮುಂದುವರಿಕೆ ಕುರಿತು ದಟ್ಟವಾಗಿರುವ ವದಂತಿಗಳ ನಡುವೆಯೇ ಈ ಬಗ್ಗೆ ಸಿದ್ಧ ಹೇಳಿಕೆಯನ್ನು ಹಿಡಿದುಕೊಂಡೇ ಹಾಜರಾಗಿದ್ದರು ರಾಜನ್, ಸೆಪ್ಟಂಬರ್-ಅಕ್ಟೋಬರ್ ಅವಧಿಯಲ್ಲಿ ನೀವು ಹುದ್ದೆಯಲ್ಲಿರುತ್ತೀರಾ ಎಂಬ ಪ್ರಶ್ನೆಗೆ ಉತ್ತರವಾಗಿ ಈ ಹೇಳಿಕೆಯನ್ನು ಓದಿದರು.
ಸೆ.4ರ ಬಳಿಕ ನಾನು ಈ ಹುದ್ದೆಯಲ್ಲಿ ಮುಂದುವರಿಯುವ ಕುರಿತು ಪ್ರಶ್ನೆಗೆ ಸ್ಪಷ್ಟ ಉತ್ತರವನ್ನು ನೀಡಿದರೆ ವದಂತಿಗಳನ್ನು ಸೃಷ್ಟಿಸುವ ಮೂಲಕ ಮಾಧ್ಯಮಗಳು ಅನುಭವಿಸುತ್ತಿರುವ ಮೋಜನ್ನು ಹಾಳು ಮಾಡಿದ ಕ್ರೌರ್ಯವನ್ನು ಮೆರೆದಂತಾಗುತ್ತದೆ ಎಂದು ರಾಜನ್ ನುಡಿದರು. ಆರ್‌ಬಿಐ ಗವರ್ನರ್ ಆಗಿ ಅವರ ಅಧಿಕಾರಾವಧಿಯು ಸೆ.3ಕ್ಕೆ ಅಂತ್ಯಗೊಳ್ಳಲಿದೆ.
ಸರಕಾರ ಮತ್ತು ತನ್ನ ನಡುವೆ ಚರ್ಚೆಗಳ ಬಳಿಕ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಅದು ಸುದ್ದಿಯಾದಾಗ ನಿಮಗೇ ಗೊತ್ತಾಗುತ್ತದೆ. ವಿತ್ತ ಸಚಿವರು ಮತ್ತು ಪ್ರಧಾನ ಮಂತ್ರಿಗಳ ಹೇಳಿಕೆಗಳತ್ತ ನಿಮ್ಮ ಗಮನವನ್ನು ಸೆಳೆಯುವುದನ್ನು ಬಿಟ್ಟು ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ವಾರ ಟೋಕಿಯೋದಲ್ಲಿ ಸುದ್ದಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ರಾಜನ್ ವಿರುದ್ಧ ವ್ಯಕ್ತಿಗತ ಟೀಕೆಗಳನ್ನು ಖಂಡಿಸಿದ್ದರೆ, ಆರ್‌ಬಿಐ ಗವರ್ನರ್ ನೇಮಕವು ಆಡಳಿತಾತ್ಮಕ ವಿಷಯವಾಗಿದ್ದು,ಮಾಧ್ಯಮಗಳಿಗೆ ಅದು ಸಂಬಂಧಿಸಿದ್ದಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News