‘ಉಡ್ತಾ ಪಂಜಾಬ್’ ಹಿಂದಿ ಚಿತ್ರವೇ ಅಲ್ಲ !

Update: 2016-06-08 08:06 GMT

ಮುಂಬೈ, ಜೂ.8: ಸೆನ್ಸಾರ್ ಮಂಡಳಿಯ ಹಲವಾರು ಮಾರ್ಗಸೂಚಿಗಳನ್ನು ‘ಉಡ್ತಾ ಪಂಜಾಬ್’ ಚಿತ್ರ ಉಲ್ಲಂಘಿಸಿರುವುದರಿಂದ ಹಾಗೂ ಚಿತ್ರದ 98 ಶೇ. ಭಾಗ ಪಂಜಾಬಿ ಭಾಷೆಯಲ್ಲಿರುವುದರಿಂದ ಅದು ಹಿಂದಿ ಚಲನಚಿತ್ರ ಅಲ್ಲವೇ ಅಲ್ಲ ಎಂದು ಹೇಳಿ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅದಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆಂದು ‘ದಿ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

‘‘ಚಿತ್ರದಲ್ಲಿ ಪಂಜಾಬಿನ 70 ಶೇ. ಜನರು ಡ್ರಗ್ಸ್ ಸೇವಿಸುತ್ತಾರೆಂಬಂತೆ ತೋರಿಸಲಾಗಿದೆ ಹಾಗೂ ಪಂಜಾಬನ್ನು ಕೆಟ್ಟ ದೃಷ್ಟಿಯಲ್ಲಿ ಚಿತ್ರಿಸಲಾಗಿದೆ,’’ ಎಂದು ಕರೀನಾ ಕಪೂರ್-ಶಾಹಿದ್ ಕಪೂರ್ ಅಭಿನಯದ ಈ ಚಿತ್ರಕ್ಕೆ ಹಲವಾರು ಕಡೆ ಕತ್ತರಿ ಪ್ರಯೋಗ ನಡೆಸಿದ್ದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಅಭಿಷೇಕ್ ಚೌಬೆ ನಿರ್ದೇಶನದ ಈ ಚಿತ್ರವನ್ನು ಬಿಡುಗಡೆಗೊಳಿಸಲು ಅನುಮತಿಸಿದರೆ ಅದು ಇಡೀ ಸಮಾಜಕ್ಕೆ ಕೆಟ್ಟ ಹೆಸರು ತರುವುದು ಎಂದೂ ಅವರು ಹೇಳಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಚಿತ್ರದ ಸಹ ನಿರ್ಮಾಪಕ ಅನುರಾಗ್ ಕಶ್ಯಪ್ ‘‘ತಮ್ಮ ಚಿತ್ರಗಳೆಡೆಗೆ ಜನರು ಗಮನ ಹರಿಸುವಂತೆ ಮಾಡಲು ಅವರು ಪ್ರತಿ ಬಾರಿ ಇಂತಹ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ,’’ ಎಂದು ನಿಹಲಾನಿಯವರನ್ನು ಗುರಿಯಾಗಿಸಿ ಹೇಳಿದ್ದಾರೆ.

ಮಾದಕ ವ್ಯಸನದ ಬಗ್ಗೆ ಕೇಂದ್ರೀಕೃತವಾಗಿರುವ ಈ ಚಿತ್ರದಲ್ಲಿ ಪಂಜಾಬ್, ರಾಜಕೀಯ ಹಾಗೂ ಚುನಾವಣೆಗಳ ಉಲ್ಲೇಖಗಳನ್ನು ತೆಗೆದು ಹಾಕುವಂತೆ ಹಾಗೂ 89 ಕಡೆ ಕತ್ತರಿ ಪ್ರಯೋಗಿಸುವಂತೆ ಸಲಹೆಯನ್ನು ನಿಹಲಾನಿ ನೀಡಿದ್ದರು. ಆದರೆ ಚಿತ್ರದ ಶೀರ್ಷಿಕೆಗೆ ಅನುಮತಿಸಲಾಗಿದೆ. ಈ ಚಿತ್ರವನ್ನು ಫ್ಯಾಂಟಮ್ ಫಿಲ್ಮ್ಸ್ ಮತ್ತು ಬಾಲಾಜಿ ಟೆಲಿಫಿಲ್ಮ್ಸ್ ನಿರ್ಮಿಸಿದೆ.

ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ ನಿರ್ಮಾಪಕರು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಪಂಜಾಬಿನ ಆಡಳಿತ ಪಕ್ಷವಾದ ಶಿರೋಮಣಿ ಅಕಾಲಿ ದಳ್ ಈಗಾಗಲೇ ಈ ಚಿತ್ರಕ್ಕೆ ತನ್ನ ಆಕ್ಷೇಪಣೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News