ಹ್ಯಾರಿ ಪಾಟರ್ ಚಿತ್ರದ ಪ್ರಮುಖ ಪಾತ್ರ ತಿರಸ್ಕರಿಸಿದ ನಾಸಿರುದ್ದೀನ್ ಶಾ !

Update: 2016-06-08 12:46 GMT

ಮುಂಬೈ, ಜೂ 8 : ಭಾರತದ ಹಿರಿಯ ನಟ ನಾಸಿರುದ್ದೀನ್ ಶಾ ಅವರು ಬ್ಲಾಕ್ ಬಸ್ಟರ್ ಹ್ಯಾರಿ ಪಾಟರ್ ಸಿನಿಮಾ ಸರಣಿಯ ಖ್ಯಾತ ಪಾತ್ರ ಪ್ರೊಫೆಸರ್ ಅಲ್ಬಸ್ ಡಂಬಲ್ ಡೋರ್ ಪಾತ್ರವನ್ನು ತಿರಸ್ಕರಿಸಿ ಸಿನಿ ಜಗತ್ತಿನ ಹುಬ್ಬೇರಿಸಿದ್ದಾರೆ. 

ಟೈಮ್ಸ್ ಆಫ್ ಇಂಡಿಯಾ ಎಂಟರ್ ಟೆನ್ ಮೆಂಟ್ ನಡೆಸಿದ ಟ್ವಿಟ್ಟರ್ ಸಂದರ್ಶನದಲ್ಲಿ ಅವರು ಇದನ್ನು ಖಚಿತಪಡಿಸಿದ್ದಾರೆ. ಲೇಖಕಿ ಜೆ ಕೆ ರೌಲಿಂಗ್ ಅವರ ವಿಶ್ವ ವಿಖ್ಯಾತ ಪುಸ್ತಕ ಸರಣಿ ಆಧರಿತ ಸಿನಿಮಾ ಕೂಡ ಅಷ್ಟೇ ಖ್ಯಾತಿ ಗಳಿಸಿದೆ. ಅದರಲ್ಲಿ ಒಂದು ಮುಖ್ಯ ಪಾತ್ರ   ಪ್ರೊಫೆಸರ್ ಅಲ್ಬಸ್ ಡಂಬಲ್ ಡೋರ್ ಎಂಬದು.  ಮೊದಲ ಎರಡು ಆವೃತ್ತಿಯಲ್ಲಿ ಐರಿಶ್ ನಟ ರಿಚರ್ಡ್ ಹ್ಯಾರಿಸ್  ಆ ಪಾತ್ರವನ್ನು ನಿರ್ವಹಿಸಿದ್ದರು. ಅವರ ನಿಧನದ ಬಳಿಕ ನಾಸಿರುದ್ದೀನ್ ಶಾ ಅವರಿಗೆ ಈ ಪಾತ್ರ ಮಾಡುವ ಆಹ್ವಾನ ಬಂದಿದೆ. 

ಆದರೆ ಒಂದು ಷರತ್ತು ಇತ್ತು. ಪಾತ್ರಕ್ಕೆ ಶಾ ಆಡಿಶನ್ ( ನಟನೆಯ ಪರೀಕ್ಷೆ ) ನೀಡಬೇಕಿತ್ತು. ಇದನ್ನು ಶಾ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.  ಆ ಪಾತ್ರಕ್ಕೆ ನಾನು ಸಿದ್ಧವಿದ್ದೆ. ಆದರೆ ಅದಕ್ಕಾಗಿ ಆಡಿಶನ್ ನೀಡಲು ತಯಾರಿರಲಿಲ್ಲ. ಹಾಗಾಗಿ ನೋ ಎಂದು ಬಿಟ್ಟೆ ಎಂದು ಈ ಹಿರಿಯ ನಟ ಹೇಳಿದ್ದಾರೆ. 

ಕೊನೆಗೆ ಆ ಪಾತ್ರ ನಟ ಮೈಕಲ್ ಗ್ಯಾಮ್ಬನ್ ಪಾಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News