ಸೂರತ್‌ನ ಶ್ರೀ ಸ್ವಾಮಿನಾರಾಯಣನಿಗೆ ಆರೆಸ್ಸೆಸ್ ಸಮವಸ್ತ್ರ: ವಿವಾದ ಸ್ಫೋಟ

Update: 2016-06-08 17:24 GMT

 ಅಹ್ಮದಾಬಾದ್, ಜೂ.8: ಸೂರತ್‌ನ ಸ್ವಾಮಿನಾರಾಯಣ ಮಂದಿರದ ಅಧಿಕಾರಿಗಳು ಶ್ರೀ ಸ್ವಾಮಿನಾರಾಯಣನ ಮೂರ್ತಿಗೆ ಆರೆಸ್ಸೆಸ್‌ನ ಸಮವಸ್ತ್ರ ತೊಡಿಸಿದ್ದುದು ಮಂಗಳವಾರ ವಿವಾದವೊಂದಕ್ಕೆ ಕಾರಣವಾಗಿದೆ.

ಸ್ವಾಮಿನಾರಾಯಣ ಮೂರ್ತಿಯು ಸಂಘದ ಉಡುಪಾದ, ಬಿಳಿ ಅಂಗಿ, ಖಾಕಿ ದೊಗಲೆ ಚಡ್ಡಿ, ಕಪ್ಪು ಟೋಪಿ ಹಾಗೂ ಕಪ್ಪು ಶೂಗಳನ್ನು ತೊಟ್ಟಿದ್ದ ಚಿತ್ರವೊಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುತ್ತತೊಡಗಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಮೂರ್ತಿಯ ಒಂದು ಕೈಯಲ್ಲಿ ರಾಷ್ಟ್ರಧ್ವಜವೂ ಇತ್ತು.

ಸೂರತ್‌ನ ಲಸ್ಕಾನಾ ಪ್ರದೇಶದಲ್ಲಿರುವ ಮಂದಿರದ ಸ್ವಾಮಿ ವಿಶ್ವಪ್ರಕಾಶ್ ಜಿ ಎಂಬವರು, ಈ ಉಡುಪನ್ನು ಕೆಲವು ದಿನಗಳ ಹಿಂದೆ ಭಕ್ರರೊಬ್ಬರು ಸಮರ್ಪಿಸಿದ್ದರು. ತಾವು ದೇವರ ವಿಗ್ರಹಕ್ಕೆ ವಿವಿಧ ಉಡುಪುಗಳನ್ನು ತೊಡಗಿಸುವ ಪದ್ಧತಿಯಿದೆ. ಆರೆಸ್ಸೆಸ್ ಉಡುಪನ್ನು ಭಕ್ತರ ನೀಡಿದ್ದರೆಂಬುದರಿಂದ ತೊಡಿಸಿದ್ದೇವೆಯೇ ಹೊರತು ಅದರಲ್ಲಿ ಯಾವುದೇ ಕಾರ್ಯಸೂಚಿಯನ್ನು ತಾವು ಹೊಂದಿರಲಿಲ್ಲ.ಅದು ವಿವಾದವನ್ನು ಸೃಷ್ಟಿಸಬಹುದೆಂದು ತಾವು ಭಾವಿಸಿರಲಿಲ್ಲ ಎಂದಿದ್ದಾರೆ.
ದೇವಾಲಯದ ಅಧಿಕಾರಿಗಳು ಇದರಲ್ಲಿ ಬಲಪಂಥೀಯ ಸಂಘಟನೆಯನ್ನು ಸಮರ್ಥಿಸುವ ಯಾವುದೇ ಉದ್ದೇಶವಿರಲಿಲ್ಲವೆಂದು ಹೇಳುತ್ತಿದ್ದರೂ, ಕಾಂಗ್ರೆಸ್ ಈ ಕ್ರಮವನ್ನು ಖಂಡಿಸಿದೆ.
ದೇವಾಲಯದ ಅಧಿಕಾರಿಗಳು ಇಂತಹ ಚಟುವಟಿಕೆಗಳಿಂದ ದೂರವಿರಬೇಕು, ದೇವರಿಗೆ ಖಾಕಿ ಚಡ್ಡಿ ತೊಡಿಸಿ ಅವರೇನು ಸಾಬೀತು ಮಾಡಲಿದ್ದಾರೆ? ಅದನ್ನು ಮಾಡಿದವರ ಬಗ್ಗೆ ತನಗೆ ಕನಿಕರವೆನಿಸುತ್ತಿದೆ. ಇಂದು ವಿಗ್ರಹಕ್ಕೆ ಆರೆಸ್ಸೆಸ್ ಸಮವಸ್ತ್ರ ತೊಡಿಸಿದ್ದಾರೆ. ನಾಳೆ ಬಿಜೆಪಿಯ ಉಡುಪು ತೊಡಿಸುತ್ತಾರೆ. ಇದು ಅತ್ಯಂತ ದುರದೃಷ್ಟಕರ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಂಕರಸಿಂಹ ವೇಲಾ ಖಂಡಿಸಿದ್ದಾರೆ.
ಘಟನೆಯ ಕುರಿತು ಗುಜರಾತ್‌ನ ಬಿಜೆಪಿ ಅಧ್ಯಕ್ಷ ವಿಜಯ್ ರೂಪಾನಿಯವರನ್ನು ಪ್ರಶ್ನಿಸಿದಾಗ, ಈ ರೀತಿ ಮಾಡಬಾರದಿತ್ತು. ತನಗೆ ನಿಜಕ್ಕೂ ಆಶ್ಚರ್ಯವಾಗಿದೆ. ಆ ರೀತಿ ಮಾಡಿರುವುದು ಹೌದಾದರೆ, ಅದನ್ನು ತಾನು ಅನುಮೋದಿಸುವುದಿಲ್ಲ ಎಂದಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News