ಜೂ.18ಕ್ಕೆ ಐಎಎಫ್‌ಗೆ ಯುದ್ಧ ವಿಮಾನ

Update: 2016-06-09 18:01 GMT

ಹೊಸದಿಲ್ಲಿ, ಜೂ.9: ಮೂವರು ಕೆಡೆಟ್‌ಗಳನ್ನೊಳಗೊಂಡ ‘ಯುದ್ಧ ವಿಮಾನ ಚಾಲಕಿಯರ’ ಮೊದಲ ತಂಡವನ್ನು ಜೂ.18ರಂದು ಭಾರತೀಯ ವಾಯುದಳದಲ್ಲಿ ನಿಯೋಜಿಸಲಾಗುವುದು.

ಪ್ರಾಥಮಿಕ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಮೂವರು ಮಹಿಳಾ ಪೈಲೆಟ್‌ಗಳನ್ನು ಈ ವರ್ಷದ ಜೂ.18ರಂದು ಯುದ್ಧ ವಿಮಾನ ವಿಭಾಗದಲ್ಲಿ ಸೇವೆಗೆ ನಿಯೋಜಿಸಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಆ ಬಳಿಕ, ಅವರಿಗೆ ಒಂದು ವರ್ಷದ ಮುಂದುವರಿದ ತರಬೇತಿ ನೀಡಲಾಗುವುದು. 2017ರ ಜೂನ್‌ನೊಳಗಾಗಿ ಯುದ್ಧ ವಿಮಾನದ ಕಾಕ್‌ಪಿಟ್‌ಗೆ ಈ ಚಾಲಕಿಯರು ಪ್ರವೇಶಿಸಲಿದ್ದಾರೆ.
ಭಾವನಾ ಕಾಂತ್, ಮೋಹನಾ ಸಿಂಗ್ ಹಾಗೂ ಅವನಿ ಚತುರ್ವೇದಿ ಎಂಬವರು ಯುದ್ಧ ವಿಮಾನ ವಿಭಾಗಕ್ಕೆ ಅರ್ಹತೆ ಪಡೆದವರಾಗಿದ್ದಾರೆ. 2015ರ ಅಕ್ಟೋಬರ್‌ನಲ್ಲಿ ಈ ವಿಭಾಗವನ್ನು ಮಹಿಳೆಯರಿಗೆ ಮುಕ್ತಗೊಳಿಸಲಾಗಿತ್ತು.
ಈ ಮೂವರು ಶಬ್ದಾತೀತ ವೇಗದ ಯುದ್ಧ ವಿಮಾನಗಳಲ್ಲಿ ಹಾರುವ ಮೊದಲು, ಅತ್ಯಾಧುನಿಕ ಹಾಕ್ ತರಬೇತಿ ವಿಮಾನದಲ್ಲಿ ಒಂದು ವರ್ಷದ ಹಂತ-3ರ ತರಬೇತಿಗಾಗಿ 2016ರ ಜೂನ್‌ನಲ್ಲಿ ಕರ್ನಾಟಕದ ಬೀದರ್‌ಗೆ ಬರಲಿದ್ದಾರೆ.
ಯುದ್ಧ ವಿಮಾನಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡುವ ಐಎಎಫ್‌ನ ಯೋಜನೆಗೆ ಸರಕಾರವು ಅಕ್ಟೋಬರ್‌ನಲ್ಲಿ ಮಂಜೂರಾತಿ ನೀಡಿ ಹೊಸ ಮೈಲುಗಲ್ಲೊಂದನ್ನು ಸ್ಥಾಪಿಸಿದ ಬಳಿಕ 6 ಮಂದಿ ಮಹಿಳೆಯರು ಯುದ್ಧ ವಿಮಾನ ಚಾಲಕಿಯರಾಗುವ ಸ್ಪರ್ಧೆಯಲ್ಲಿದ್ದರು. ಆದರೆ, ಕೇವಲ ಮೂವರಷ್ಟೇ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News