ಕೇರಳದ ಕ್ರೀಡಾ ಸಚಿವರಿಂದ ಅವಮಾನ: ಒಲಿಂಪಿಯನ್ ಅಂಜು ಆರೋಪ

Update: 2016-06-09 18:26 GMT

ತಿರುವನಂತಪುರ, ಜೂ.9: ಕೇರಳದ ಕ್ರೀಡಾ ಸಚಿವ ಇ.ಪಿ.ಜಯರಾಜ್ ತನ್ನ ಮೇಲೆ ‘ಭ್ರಷ್ಟಾಚಾರ’ದ ಆರೋಪ ಹೊರಿಸಿ ಅವಮಾನಿಸಿದ್ದಾರೆಂದು ಒಲಿಂಪಿಯನ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತೆ ಅಂಜು ಬಾಬ್ಬಿ ಜಾರ್ಜ್ ಆಪಾದಿಸಿದ್ದಾರೆ. ಈ ಮೂಲಕ ಸಚಿವರು ಮತ್ತೆ ವಿವಾದಕ್ಕೆ ಕಾರಣವಾಗಿದ್ದಾರೆ.

ಕೇರಳ ಕ್ರೀಡಾ ಮಂಡಳಿಯ ಅಧ್ಯಕ್ಷೆಯೂ ಆಗಿರುವ ಅಂಜು, ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ದೂರು ನೀಡಿದ್ದಾರೆ. ಹೊಸ ಸರಕಾರ ರಚನೆ ಯಾದ ಬಳಿಕ ತಾನು ಮಂಡಳಿಯ ಉಪಾಧ್ಯಕ್ಷ ರೊಂದಿಗೆ ಜೂ.7ರಂದು ಕ್ರೀಡಾ ಸಚಿವರನ್ನು ಭೇಟಿಯಾಗಲು ಹೋಗಿದ್ದೆ. ಅವರು, ಕೇರಳದಲ್ಲಿ ಕ್ರೀಡೆಯ ಸ್ಥಿತಿಗತಿಯ ಬಗ್ಗೆ ಕೇಳಬಹುದೆಂದು ತಾವು ಭಾವಿಸಿದ್ದೆವು. ಆದರೆ, ಮೊದಲ ಭೇಟಿಯಲ್ಲೇ ಸಚಿವರು, ‘‘ನೀವೆಲ್ಲ ಹಿಂದಿನ ಸರಕಾರದಿಂದ ಆಯ್ಕೆಯಾದವರು. ಆದ್ದರಿಂದ ನೀವೆಲ್ಲ ಬೇರೆ ಪಕ್ಷದ ಸದಸ್ಯರು. ನೀವು ಮಾಡುವ ಎಲ್ಲ ವರ್ಗಾವಣೆಗಳು ಹಾಗೂ ನೇಮಕಾತಿಗಳು ಕಾನೂನು ಬಾಹಿರವಾಗಿದೆ’’ಎಂದರೆಂದು 2003ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಇತಿಹಾಸ ನಿರ್ಮಿಸಿದ ಕ್ರೀಡಾಳು ತಿಳಿಸಿದ್ದಾರೆ.

ಅಂಜು ಅವರನ್ನು ಕೇರಳದ ಹಿಂದಿನ ಯುಡಿಎಫ್ ಸರಕಾರ ಕ್ರೀಡಾ ಮಂಡಳಿಯ ಅಧ್ಯಕ್ಷೆಯನ್ನಾಗಿ ನೇಮಿಸಿತ್ತು.

ಕ್ರೀಡಾ ಮಂಡಳಿಯ ಸಭೆಗೆ ಹಾಜರಾಗಲು ತಾನಿರುವ ಬೆಂಗಳೂರಿನಿಂದ ತಿರುವನಂತಪುರಕ್ಕೆ ಪಡೆದಿದ್ದ ವಿಮಾನದ ಟಿಕೆಟ್‌ಗೂ ಸಚಿವರು ಆಕ್ಷೇಪ ಸೂಚಿಸಿದರೆಂದು ಅಂಜು ದೂರಿದ್ದಾರೆ.

ಇದೆಲ್ಲವೂ ನಿಯಮಕ್ಕೆ ವಿರುದ್ಧವಾದುದು. ಇದೆಲ್ಲವನ್ನೂ ತಾನು ನಿಲ್ಲಿಸಬಲ್ಲೆನೆಂದು ಜಯರಾಜನ್ ಗುಡುಗಿದರೆಂದೂ ಅವರು ಹೇಳಿದ್ದಾರೆ.
ತನಗೆ ವಿಮಾನ ಟಿಕೆಟ್‌ನ ವೆಚ್ಚ ಪಡೆಯುವುದಕ್ಕೆ ಅನುಮತಿ ನೀಡುವಂತೆ ಹಿಂದಿನ ಸರಕಾರಕ್ಕೆ ತಾನು ಮನವಿ ಸಲ್ಲಿಸಿದ್ದೆ. ಆದರೆ, ಕ್ರೀಡಾ ಸಚಿವರು ಇದೆಲ್ಲ ಭ್ರಷ್ಟಾಚಾರವೆಂದು ಆರೋಪಿಸಿದ್ದರೆಂದು ಅಂಜು ತಿಳಿಸಿದ್ದಾರೆ.

ತಾನಲ್ಲದೆ, ಪ್ರೀಜಾ ಶ್ರೀಧರನ್, ಭಾರತೀಯ ಹಾಕಿ ನಾಯಕ ಆರ್.ಪಿ.ಶ್ರೀಜೇಶ್ ಹಾಗೂ ಕೇರಳ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಟಿ.ಎಂ.ಮ್ಯಾಥ್ಯೂ ಕೇರಳ ಕ್ರೀಡಾ ಮಂಡಳಿಯ ಸದಸ್ಯರಾಗಿದ್ದಾರೆ. ತಾವೆಲ್ಲರೂ ಭ್ರಷ್ಟಾಚಾರದಲ್ಲಿ ಒಳಗೊಂಡಿದ್ದೇವೆಂದು ಜಯರಾಜನ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News