ಬಿಪಿಎಲ್ ಪಟ್ಟಿಯಲ್ಲಿ ಶಾಸಕರು: ತಹಶೀಲ್ದಾರ್ ಅಮಾನತು

Update: 2016-06-10 18:13 GMT

ಶ್ರೀನಗರ, ಜೂ.10: ಶಾಸಕನೊಬ್ಬನನ್ನು ಬಡತನ ರೇಖೆಗಿಂತ ಕೆಳಗಿನವರ (ಬಿಪಿಎಲ್) ಪಟ್ಟಿಗೆ ಸೇರಿಸಿದುದಕ್ಕಾಗಿ ಒಬ್ಬ ಕಂದಾಯ ಅಧಿಕಾರಿ ಹಾಗೂ ಇತರ ಕೆಲವರನ್ನು ಜಮ್ಮು-ಕಾಶ್ಮೀರ ಸರಕಾರವು ಶುಕ್ರವಾರ ಅಮಾನತುಗೊಳಿಸಿದೆ.
ಒಬ್ಬ ತಹಶೀಲ್ದಾರ್ ಹಾಗೂ ಕಂದಾಯ ಮತ್ತು ಗ್ರಾಹಕ ವ್ಯವಹಾರ ಹಾಗೂ ಸಾರ್ವಜನಿಕ ವಿತರಣೆಯ (ಸಿಎಪಿಡಿ) ಕೆಲವು ನೌಕರರನ್ನು ಅಮಾನತು ಮಾಡಲಾಗಿದೆಯೆಂದು ಸರಕಾರಿ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಬಿಜೆಪಿ ಶಾಸಕ ಕೃಷ್ಣನ್ ಭಗತ್‌ರ ಹೆಸರು ಬಿಪಿಎಲ್ ಪಡಿತರ ಕಾರ್ಡುದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆಯೆಂಬ ವರದಿ ಪ್ರಕಟವಾದ ಬಳಿಕ, ರಾಜ್ಯ ವಿಧಾನಸಭೆಯಲ್ಲೂ ಕೋಲಾಹಲ ಉಂಟಾಯಿತು.
ಇನ್ನೊಬ್ಬ ಶಾಸಕ ಇಂಜಿನಿಯರ್ ರಶೀದ್‌ರ ಹೆಸರೂ ಪಟ್ಟಿಯಲ್ಲಿದೆಯೆಂಬುದು ಬಳಿಕ ಬೆಳಕಿಗೆ ಬಂದಿದೆ.

..........................


ದಿಲ್ಲಿ ಪೊಲೀಸರಿಂದ 17 ಮಂದಿ ಶಂಕಿತ ಉಗ್ರರ ವಿರುದ್ಧ ಆರೋಪ ಪಟ್ಟಿ
ಹೊಸದಿಲ್ಲಿ, ಜೂ.10: ಭಾರತದಲ್ಲಿ ಭಯೋತ್ಪಾದಕರ ಗುಂಪಿಗೆ ಸೇರುವಂತೆ ಜನರನ್ನು ಪ್ರಚೋದಿಸುತ್ತಿರುವ ಆರೋಪದಲ್ಲಿ ವೌಲಾನಾ ಅಂಝಾರ್ ಶಾ ಎಂಬಾತ ಸೇರಿದಂತೆ 17 ಮಂದಿ ಶಂಕಿತ ಅಲ್ ಖಾಯ್ದಿ ಸದಸ್ಯರ ವಿರುದ್ಧ ದಿಲ್ಲಿ ಪೊಲೀಸರು ಶುಕ್ರವಾರ ಆರೋಪ ಪಟ್ಟಿ ದಾಖಲಿಸಿದ್ದಾರೆ.

ಹೆಚ್ಚುವರಿ ಸತ್ರ ನ್ಯಾಯಾಧೀಶ ರಿತೇಶ್ ಸಿಂಗ್‌ರ ನ್ಯಾಯಾಲಯದಲ್ಲಿ ಈ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಮುಂದಿನ ವಿಚಾರಣೆಯನ್ನು ಜು.14ಕ್ಕೆ ನಿಗದಿಗೊಳಿಸಲಾಗಿದೆ.
ದಿಲ್ಲಿ ಪೊಲೀಸ್‌ನ ವಿಶೇಷ ಘಟಕವು ಶಾ, ಅಬ್ದುಲ್ ಸಮಿ, ಝಫರ್ ಮಸೂದ್ ಅಬ್ದುಲ್ ರಹ್ಮಾನ್ ಹಾಗೂ ಮುಹಮ್ಮದ್ ಆಸಿಫ್ ಎಂಬ ಭಾರತ ಉಪಖಂಡದ ಅಲ್-ಖಾಯ್ದಾ (ಎಕ್ಯುಐಎಸ್) ಐವರು ಬಂಧಿತ ಸದಸ್ಯರ ವಿರುದ್ಧ ಆರೋಪ ಪಟ್ಟಿ ದಾಖಲಿಸಿದೆ.
ಪೊಲೀಸರು, ತಲೆ ಮರೆಸಿಕೊಂಡಿರುವ ಇತರ 12 ಮಂದಿ ಶಂಕಿತ ಉಗ್ರರ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಿದೆ. ಅವರ ವಿರುದ್ಧ ಕಾನೂನು, ಬಾಹಿರ ಚಟುವಟಿಕೆ (ತಡೆ) ಕಾಯ್ದೆಯನ್ವಯ ಪ್ರಕರಣ ಹೂಡಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News