ಭಾರತದಲ್ಲಿ ಮಾನವ ಹಕ್ಕು, ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆ: ಹ್ಯೂಮನ್ ರೈಟ್ಸ್ ವಾಚ್

Update: 2016-06-10 18:14 GMT

 ವಾಷಿಂಗ್ಟನ್, ಜೂ.10: ಮೋದಿ ಸರಕಾರದ ಎರಡು ವರ್ಷಗಳ ಆಡಳಿತದಲ್ಲಿ ಮಾನವ ಹಕ್ಕುಗಳು ಹಾಗೂ ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆಯುಂಟಾಗಿದೆ ಹಾಗೂ ಈ ವಿಚಾರದ ಬಗ್ಗೆ ಭಾರತ-ಅಮೇರಿಕಾ ನಡುವಣ ಮಾತುಕತೆ ವೇಳೆ ಚರ್ಚೆ ನಡೆಯಬೇಕೆಂದು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ಏಷ್ಯಾ ಎಡ್ವಕೆಸಿ ನಿರ್ದೇಶಕ ಜಾನ್ ಸಿಪ್ಟನ್ ಹೇಳಿದ್ದಾರೆ.

  ಟಾಮ್ ಲಾಂಟೋಸ್ ಹ್ಯೂಮನ್ ರೈಟ್ಸ್ ಕಮಿಷನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮೋದಿ ಸರಕಾರ ದುರ್ಬಲ ವರ್ಗಗಳ ಹಿತ ಕಾಯಲು ಪರಿಣಾಮಕಾರಿ ಕ್ರಮಗಳನ್ನು, ಕೈಗೊಳ್ಳದ ಹೊರತ ಭಾರತದಲ್ಲಿ ಮಾನವ ಹಕ್ಕುಗಳಿಗೆ ಧಕ್ಕೆಯುಂಟಾಗುತ್ತಲೇ ಇರುತ್ತದೆ ಎಂದೂ ಅವರು ಹೇಳಿದ್ದಾರೆ.
  ಸರಕಾರಿ ಅಧಿಕಾರಿಗಳನ್ನು ಅವರ ತಪ್ಪುಗಳಿಗೆ ಜವಾಬ್ದಾರರನ್ನಾಗಿಸುತ್ತಿಲ್ಲ, ಪೊಲೀಸ್ ಹಾಗೂ ಇತರ ಸುರಕ್ಷಾ ಪಡೆಗಳು ಮಾನವ ಹಕ್ಕುಗಳ ಉಲ್ಲಂಘನೆ ನಡೆಸಿದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿಲ್ಲ, ಎಂದು ಅವರು ದೂರಿದರು.
ಇಂತಹ ಗಂಭೀರ ವಿಚಾರಗಳನ್ನು ಚರ್ಚಿಸುವಂತೆ ಅಮೆರಿಕದ ಕಾಂಗ್ರೆಸ್ ಸದಸ್ಯರು ಅಲ್ಲಿನ ಸರಕಾರವನ್ನು ಒತ್ತಾಯಿಸಬೇಕು ಎಂದೂ ಅವರು ಆಗ್ರಹಿಸಿದರು.
ಮಾನವ ಹಕ್ಕು ಹಾಗೂ ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆ ಪ್ರಕರಣಗಳಿಗೆ ಭಾರತ ಸರಕಾರವನ್ನು ನೇರವಾಗಿ ಹೊಣೆಯಾಗಿಸುವುದು ಅಸಾಧ್ಯವಾದರೂ ಪ್ರಧಾನಿ ಮೋದಿ ಹಾಗೂ ಸರಕಾರಿ ಅಧಿಕಾರಿಗಳ ವೌನ ಸಹಿಸಲಸಾಧ್ಯ, ಎಂದು ಸಭೆಯಲ್ಲಿ ಮಾತನಾಡಿದ ಇಂಟರ್ ನ್ಯಾಶನಲ್ ಕ್ರಿಶ್ಚಿಯನ್ ಕನ್ಸರ್ನ್ ಇದರ ಅಧ್ಯಕ್ಷ ಜೆಪ್ ಕಿಂಗ್ ಹೇಳಿದ್ದಾರೆ.
 
ನಿರಪರಾಧಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಮುಖ್ಯವಾಗಿ ಉಗ್ರವಾದ ಸಂಬಂಧಿ ಪ್ರಕರಣಗಳಲ್ಲಿ ಬಂಧಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಒಂದು ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಮಾನವ ಹಕ್ಕು ಹೋರಾಟಗಾರ ಹಾಗೂ ಪತ್ರಕರ್ತ ಅಜಿತ್ ಸಾಹಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News