ಪ್ರಿಯಾಂಕಾ ಕಾಂಗ್ರೆಸ್‌ನ ರಕ್ಷಕಿ?

Update: 2016-06-11 18:23 GMT

ಪ್ರಿಯಾಂಕಾ ಕಾಂಗ್ರೆಸ್‌ನ ರಕ್ಷಕಿ?
ಪ್ರಿಯಾಂಕಾ ಗಾಂಧಿ ಈಗಲೂ ಕೂಡಾ ಕಾಂಗ್ರೆಸ್ ಪಕ್ಷದ ಕಣ್ಮಣಿಯಾಗಿ ಮುಂದುವರಿದಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಪ್ರಿಯಾಂಕಾ ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕೆಂದು ವಸ್ತುಶಃ ಪ್ರತಿಯೊಬ್ಬ ಕಾಂಗ್ರೆಸಿಗನೂ, ಬಯಸುತ್ತಿದ್ದಾನೆ. ಕೆಲವು ವರದಿಗಳ ಪ್ರಕಾರ ಸೋನಿಯಾಗಾಂಧಿ ಅವರು ತನ್ನ ಕುಟುಂಬಕ್ಕೆ ಕಳಂಕ ತರಲು ನಡೆಯುತ್ತಿರುವ ‘ಸಂಚಿನ’ ವಿರುದ್ಧ ಪ್ರತಿಭಟನೆ ನಡೆಸುವಂತೆ ತನ್ನ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ರಾಬರ್ಟ್ ವಾದ್ರಾರನ್ನು ಸಮರ್ಥಿಸಬೇಕೆಂಬ ಕೋರಿಕೆಯ ಸಂದೇಶ ಇದಾಗಿದೆಯೆಂದು ಪಕ್ಷದ ಕೆಲವು ಪದಾಧಿಕಾರಿಗಳು ಅರ್ಥೈಸಿದ್ದಾರೆ. ಇಷ್ಟಕ್ಕೂ ಪ್ರಿಯಾಂಕಾ ಸುಮ್ಮನೆ ಕುಳಿತಿಲ್ಲ. ತೆರೆಯಮರೆಯಲ್ಲೇ ಆಕೆ ಕಾಂಗ್ರೆಸ್ ಕಾರ್ಯಕರ್ತರ ಸಣ್ಣ ಪುಟ್ಟ ಗುಂಪುಗಳನ್ನು ಭೇಟಿಯಾಗುತ್ತಿದ್ದು, ತನ್ನ ಸಹೋದರ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷನಾಗಲು ಬೆಂಬಲ ನೀಡುವಂತೆ ಕೋರುತ್ತಿದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಪ್ರಿಯಾಂಕಾ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆಂಬ ಹಾಗೂ ರಾಹುಲ್ ಟೀಮ್‌ನ ಅವಿಭಾಜ್ಯ ಅಂಗವಾಗಲಿದ್ದಾರೆಂಬ ಭರವಸೆಯನ್ನು ಇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಈ ಬೇಡಿಕೆ ಈಡೇರುವುದೇ ಎಂಬುದನ್ನು ಕಾಲವಷ್ಟೇ ಹೇಳಲಿದೆ.

ವರುಣ್ ಮುಖ್ಯಮಂತ್ರಿ ಅಭ್ಯರ್ಥಿ?
 ಮೇನಕಾ ಗಾಂಧಿ ಪುತ್ರ ವರುಣ್‌ಗಾಂಧಿ ಇತ್ತೀಚಿನ ದಿನಗಳಲ್ಲಿ ತುಂಬಾ ಸಂತಸದಿಂದಿದ್ದಾರೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಬಿಜೆಪಿಯ ‘ಮುಖ’ವಾಗಿ ಬಿಂಬಿಸುವ ಸಾಧ್ಯತೆಯಿದೆಯೆಂಬ ವದಂತಿಗಳು ಕೇಳಿಬರುತ್ತಿವೆ. ಉತ್ತರಪ್ರದೇಶದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವರುಣ್‌ರನ್ನು ಅಧಿಕೃತವಾಗಿ ಘೋಷಿಸುವ ಮುನ್ನ ಮುಂಬರುವ ಸಂಪುಟ ಪುನಾರಚನೆಯ ವೇಳೆ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಲಾಗುವುದೆಂಬ ಆಶಾವಾದವನ್ನು ಅವರು ಹೊಂದಿದ್ದಾರೆಂದು, ಈ ಸಂಸದನಿಗೆ ನಿಕಟವಾಗಿರುವ ಮೂಲಗಳು ಹೇಳಿವೆ. ಆದರೆ ಬಿಜೆಪಿಯಲ್ಲಿರುವ ಎಲ್ಲರೂ ವರುಣ್ ಅವರ ಆಶಾವಾದವನ್ನು ಹಂಚಿಕೊಳ್ಳಲು ತಯಾರಿಲ್ಲ. ಮೇನಕಾ ಗಾಂಧಿ ಈಗಾಗಲೇ ಕೇಂದ್ರ ಸಂಪುಟದ ಸದಸ್ಯೆಯಾಗಿದ್ದಾರೆ. ಹೀಗಿರುವಾಗ, ತಾಯಿ ಮತ್ತು ಮಗನನ್ನು ಒಂದೇ ಟೀಮ್‌ನಲ್ಲಿ ಹೊಂದಲು ಪ್ರಧಾನಿ ಉತ್ಸುಕರಾಗಿಲ್ಲವೆಂದು, ಕೆಲವು ‘ನಕಾರಾತ್ಮಕ’ವಾದಿಗಳ ಅಂಬೋಣ. ಮುಂದೇನಾಗುವುದು ಎಂಬುದನ್ನು ಕಾದು ನೋಡಬೇಕಾಗಿದೆ.

ಶಾ ಮೆಚ್ಚುಗೆ ಗಳಿಸಲು
  ಇತ್ತೀಚಿನ ವಿಧಾನಸಭಾ ಚುನಾವಣೆಗಳ ಗೆಲುವಿನ ಬಳಿಕ ಶಾ ಅವರ ಮೆಚ್ಚುಗೆ ಗಳಿಸಲು ಬಿಜೆಪಿ ನಾಯಕರು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಮಧ್ಯಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ನಡೆದ ಘಟನೆಯೊಂದು ತಾಜಾ ಉದಾಹರಣೆಯಾಗಿದೆ. ಮಧ್ಯಪ್ರದೇಶದ ಶಾಸಕಿ ನೀಲಂ ಮಿಶ್ರಾ ಇತ್ತೀಚೆಗೆ ಲಂಡನ್‌ನಲ್ಲಿರುವ ತನ್ನ ಪುತ್ರನನ್ನು ಭೇಟಿಯಾಗಲು ಭೋಪಾಲ್‌ನಿಂದ ಏರ್‌ಇಂಡಿಯಾ ಏರ್‌ಬಸ್ಸನ್ನು ಹತ್ತುವವರಿದ್ದರು. ಆಗ ಅಲ್ಲಿಗೆ ರಾಜ್ಯದ ಬಿಜೆಪಿ ಅಧ್ಯಕ್ಷ ನಂದಕುಮಾರ್ ಚೌಹಾಣ್ ಓಡೋಡಿ ಬಂದು, ವಿಮಾನವೇರದಂತೆ ತಡೆದಿದ್ದರು. ಮಧ್ಯಪ್ರದೇಶದಲ್ಲಿ ಜೂನ್ 11ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಒಂದೊಂದು ಮತ ಕೂಡಾ ಬಿಜೆಪಿ ಅಭ್ಯರ್ಥಿಯ ಭವಿಷ್ಯವನ್ನು ನಿರ್ಧರಿಸಬಹುದಾಗಿದೆ. ಈ ಕಾರಣದಿಂದಾಗಿ ನಂದಕುಮಾರ್ ಅವರು ಶಾಸಕಿ ನೀಲಂ ಮಿಶ್ರಾ ಅವರ ಲಂಡನ್ ಪ್ರವಾಸವನ್ನು ಸ್ಥಗಿತಗೊಳಿಸಿದ್ದರು. ‘‘ಮಧ್ಯಪ್ರದೇಶದಿಂದ ಕಾಂಗ್ರೆಸ್ ಒಂದೇ ಒಂದೇ ಸ್ಥಾನ ಕೂಡಾ ಗೆಲ್ಲದಂತೆ ನೋಡಿಕೊಳ್ಳಬೇಕೆಂದು ಅಮಿತ್ ಶಾ ನಮಗೆ ಸೂಚನೆ ನೀಡಿದ್ದಾರೆ’’ ಎಂದು ನಾಯಕರೊಬ್ಬರು ತಿಳಿಸಿದ್ದಾರೆ. ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿವೇಕ್ ಟಾಂಖಾ ಅವರನ್ನು ಬೆಂಬಲಿಸಿದ್ದರೆ, ಬಿಜೆಪಿಯು ತನ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನೋದ್ ಗೋಟಿಯಾ ಅವರನ್ನು ಬೆಂಬಲಿಸಿದೆ. ಇಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ತನ್ನ ಅಧಿಕೃತವಾಗಿ ನಾಮಕರಣಗೊಂಡ ಅಭ್ಯರ್ಥಿಗಳಾದ ಎಂ.ಜೆ.ಅಕ್ಬರ್ ಹಾಗೂ ಅನಿಲ್ ದಾವೆ ಅವರ ಎರಡು ಸ್ಥಾನಗಳು ಬಿಜೆಪಿಗೆ ದೊರೆಯುವುದು ಖಚಿತವಾಗಿದೆ. ಈಗ ಮೂರನೆ ಸೀಟಿಗಷ್ಟೇ ಪ್ರಬಲವಾದ ಸ್ಪರ್ಧೆ ನಡೆಯುತ್ತಿದೆ. ಆದರೆ ಅಂತಿಮವಾಗಿ ಇದು ಅಮಿತ್ ಶಾ ಅವರ ಸಮರವಾಗಿದೆ ಮತ್ತು ಅದರಲ್ಲಿ ಅವರು ಗೆಲುವಿನ ಕನಸು ಕಾಣುತ್ತಿದ್ದಾರೆ. ಕನಿಷ್ಠ ಪಕ್ಷ ಬಿಜೆಪಿ ನಾಯಕರಾದರೂ ಅವರನ್ನು ವಿಜಯಿಯೆಂದು ಪರಿಗಣಿಸಿಯಾರು.

ನಿರ್ಮಲಾ ಸೀತಾರಾಮನ್‌ರ ಭಕ್ತಿ!
 ವಾಣಿಜ್ಯ ಹಾಗೂ ಕೈಗಾರಿಕಾ ಖಾತೆಯ ಸಹಾಯಕ ಸಚಿವೆ ನಿರ್ಮಲಾ ಸೀತಾರಾಮನ್, ಮೋದಿ ಸಂಪುಟದಲ್ಲಿ ಅತ್ಯಂತ ಪರಿಶ್ರಮದಿಂದ ಕೆಲಸ ಮಾಡುತ್ತಿರುವ ಸಚಿವರಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಆದರೆ ಇತ್ತೀಚೆಗೆ ಮಹಿಳಾ ಪತ್ರಕರ್ತರಿಗಾಗಿಯೇ ನಡೆದ ಸಮಾವೇಶದಲ್ಲಿ, ಸೀತಾರಾಮನ್ ಅವರು, ಕೇವಲ ಪರಿಶ್ರಮದೊಂದಿಗೆ ದುಡಿಯುವುದು ಮಾತ್ರವಲ್ಲ, ಪ್ರತಿಯೊಂದು ವಿಷಯದಲ್ಲೂ ಮೋದಿಗೆ ಪ್ರಾಶಸ್ತ್ಯ ನೀಡುವುದು ಕೂಡಾ ಅಷ್ಟೇ ಮುಖ್ಯವೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಮಾವೇಶದಲ್ಲಿ ಅವರು ಎನ್‌ಡಿಎ ಸರಕಾರದ ಮಹಿಳಾ ಕೇಂದ್ರಿತ ಕಾರ್ಯಕ್ರಮಗಳ ಬಗ್ಗೆ ವಿಸ್ತೃತವಾದ ವಿವರಣೆಗಳನ್ನು ನೀಡುವಾಗ, ಪ್ರದರ್ಶಿಸಲಾದ ವಿವಿಧ ಸ್ಲೈಡ್‌ಗಳಲ್ಲಿ ಮೋದಿಯ ಚಿತ್ರಗಳೇ ತುಂಬಿದ್ದವು. ಅವುಗಳಲ್ಲಿ ನಿರ್ಮಲಾ ಅಥವಾ ಇನ್ನಾವುದೇ ಮಹಿಳಾ ಸಚಿವರ ಒಂದೇ ಒಂದು ಭಾವಚಿತ್ರ ಕೂಡಾ ಇರಲಿಲ್ಲ.ಸೀತಾರಾಮನ್ ಅವರು ಇಷ್ಟೊಂದು ದೊಡ್ಡ ಭಕ್ತೆಯೆಂದು ನಾವು ಅಂದುಕೊಂಡಿರಲಿಲ್ಲವೆಂದು ಸಮಾವೇಶದಲ್ಲಿ ಮಹಿಳಾ ಪತ್ರಕರ್ತರು ಗೊಣಗುತ್ತಿದ್ದುದು ಕೇಳಿಸುತ್ತಿತ್ತು..

ರೇಖಾ ಮಿಸ್!
 ಕೇಂದ್ರ ಆಹಾರ ಹಾಗೂ ಸಾರ್ವಜನಿಕ ವಿತರಣೆ ಸಚಿವ ರಾಮ್‌ವಿಲಾಸ್ ಪಾಸ್ವಾನ್, ರೇಖಾ ಬಗ್ಗೆ ತುಸು ಕೋಪಗೊಂಡಿರುವಂತೆ ಕಾಣುತ್ತದೆ. ತಾನು ಏರ್ಪಡಿಸಿದ್ದ ಭೋಜನಕೂಟವನ್ನು ಈ ಬಾಲಿವುಡ್ ನಟಿ ತಪ್ಪಿಸಿಕೊಂಡಿರುವುದು ಅವರನ್ನು ಬೇಸರಕ್ಕೀಡು ಮಾಡಿತ್ತು. ಈ ಕಾರ್ಯಕ್ರಮಕ್ಕೆ ಅವರು ಆಹಾರ, ನಾಗರಿಕ ಪೂರೈಕೆ ಹಾಗೂ ಸಾರ್ವಜನಿಕ ವಿತರಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿರುವ ಎಲ್ಲ ಎಂಪಿಗಳನ್ನು ಆಹ್ವಾನಿಸಿದ್ದರು. ಈ ಭೋಜನಕೂಟದಲ್ಲಿ ರೇಖಾ ಪಾಲ್ಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವಂತೆ ಸಚಿವರು ತನ್ನ ಸಹಾಯಕರಿಗೆ ತಿಳಿಸಿದ್ದರು. ಸಿನೆಮಾ ತಾರೆಯರು, ಸಿಲೆಬ್ರಿಟಿಗಳು ವಿವಿಧ ಉತ್ಪನ್ನಗಳ ಪ್ರಚಾರ ಮಾಡುವುದು ಹಾಗೂ ಅವುಗಳಿಗೆ ರೂಪದರ್ಶಿಗಳಾಗುವ ಸಾಧಕ ಬಾಧಕಗಳ ಬಗ್ಗೆ ರೇಖಾ ಅವರ ಅಭಿಪ್ರಾಯಗಳನ್ನು ಕೇಳಲು ಪಾಸ್ವಾನ್ ಆಸಕ್ತರಾಗಿದ್ದರೆನ್ನಲಾಗಿದೆ. ಆದರೆ ರಾಜ್ಯಸಭೆಗೆ ನಾಮಕರಣಗೊಂಡ ಸದಸ್ಯೆಯಾದ ರೇಖಾ ಈ ಭೋಜನಕೂಟಕ್ಕೆ ಗೈರುಹಾಜರಾಗಿದ್ದರು. ಈ ನಟಿಯು ಇತರ ಪೂರ್ವನಿರ್ಧರಿತ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದರಿಂದ ಭೋಜನಕೂಟಕ್ಕೆ ಬರಲಾಗಲಿಲ್ಲವಂತೆ. ಆದರೆ ರೇಖಾಗೆ ಸಭಾಕಂಪನದ ಸಮಸ್ಯೆಯಿರುವುದರಿಂದ ಆಕೆ ತಪ್ಪಿಸಿಕೊಂಡಿದ್ದಾರೆಂದು ಎದುರಾಳಿಗಳ ವಾದವಾಗಿದೆ. ಅದೇನಿದ್ದರೂ ಭೋಜನಕೂಟಕ್ಕೆ ರೇಖಾ ಅವರ ಗೈರು ಹಾಜರಿ ಮಾತ್ರ ಪಾಸ್ವಾನ್‌ಗೆ ನಿರಾಶೆ ಮೂಡಿಸಿರುವುದು ಮಾತ್ರ ನಿಜ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News