ತರಕಾರಿ ಬೆಲೆಗಳಲ್ಲಿ ಏರಿಕೆಯಿಂದಾಗಿ ಶೇ.0.79ಕ್ಕೆ ಜಿಗಿದ ಹಣದುಬ್ಬರ

Update: 2016-06-14 14:53 GMT

ಹೊಸದಿಲ್ಲಿ,ಜೂ.14: ತರಕಾರಿ ಬೆಲೆಗಳಲ್ಲಿ ಎರಡಂಕಿಗಳ ಏರಿಕೆಯಿಂದಾಗಿ ಮೇ ತಿಂಗಳಿನ ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇ.0.79ಕ್ಕೆ ಜಿಗಿದಿದ್ದು, ಪೂರೈಕೆಯಲ್ಲಿನ ಅಡೆತಡೆಗಳನ್ನು ನಿವಾರಿಸಲು ನೀತಿಕ್ರಮವೊಂದಕ್ಕಾಗಿ ಉದ್ಯಮರಂಗವು ಆಗ್ರಹಿಸಿದೆ.

 ಸಗಟು ಮತ್ತು ಚಿಲ್ಲರೆ ಹಣದುಬ್ಬರಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಉತ್ಪಾದನೆ ಕುಂಠಿತಗೊಂಡಿದ್ದರೂ ಆರ್‌ಬಿಐ ಬಡ್ಡಿದರ ಕಡಿತವನ್ನು ವಿಳಂಬಗೊಳಿಸಬಹುದು.

ಎಪ್ರಿಲ್‌ನಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರ ಶೇ.0.34ರಷ್ಟಿದ್ದರೆ,ಕಳೆದ ವರ್ಷದ ಮೇ ತಿಂಗಳಿನಲ್ಲಿ ಅದು (-)2.20 ಶೇ.ದಷ್ಟಿತ್ತು.

ತರಕಾರಿಗಳ ಬೆಲೆಗಳಲ್ಲಿ ಶೇ.12.94ರಷ್ಟು ತೀವ್ರ ಏರಿಕೆಯಾಗಿದೆ. ಎಪ್ರಿಲ್‌ನಲ್ಲಿ ಈ ಏರಿಕೆ ಶೇ.2.21ರಷ್ಟಿತ್ತು. ಬೇಳೆಕಾಳುಗಳ ಬೆಲೆ ಏರಿಕೆ ಪ್ರಮಾಣ ಶೇ.35.36ರಲ್ಲಿ ಸ್ಥಿರವಾಗಿದೆ.

 ಸರಕಾರವು ಬಿಡುಗಡೆಗೊಳಿಸಿರುವ ಅಂಕಿಅಂಶಗಳಂತೆ ಎಪ್ರಿಲ್‌ನಲ್ಲಿ ಶೇ.4.23ರಷ್ಟಿದ್ದ ಆಹಾರ ಹಣದುಬ್ಬರವು ಮೇ ತಿಂಗಳಿನಲ್ಲಿ ಶೇ.7.88ಕ್ಕೆ ಜಿಗಿದಿದೆ.

ಬೇಳೆಕಾಳುಗಳು,ಆಹಾರ ವಸ್ತುಗಳು,ದ್ವಿದಳ ಧಾನ್ಯಗಳು,ಗೋದಿ ಮತ್ತು ಇತರ ಸಾಮಗ್ರಿಗಳಂತಹ ಸರಕುಗಳ ನಿರಂತರ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕಾನೂನು ರೂಪಕರು ಪೂರೈಕೆ ಕ್ಷೇತ್ರದಲ್ಲಿನ ಅಡೆತಡೆಗಳನ್ನು ನಿವಾರಿಸುವ ಅಗತ್ಯವಿದೆ ಎಂದು ಅಸೋಚಾಮ್ ಮಹಾ ಕಾರ್ಯದರ್ಶಿ ಡಿ.ಎಸ್.ರಾವತ್ ಹೇಳಿದರು.

ಜಾಗತಿಕ ಸರಕು ಬೆಲೆಗಳು ಸಗಟು ಬೆಲೆ ಆಧಾರಿತ ಹಣದುಬ್ಬರದ ಪಥವನ್ನು ನಿರ್ಧರಿಸುತ್ತವೆ. ಕಚ್ಚಾ ತೈಲದ ಬೆಲೆಗಳು ಈಗಿನ ಮಟ್ಟದಲ್ಲಿಯೇ ಸ್ಥಿರಗೊಂಡರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಾಸರಿ ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇ.3ನ್ನು ಮೀರುವ ಸಾಧ್ಯತೆಯಿದೆ ಎಂದು ಐಸಿಆರ್‌ಎ ಹಿರಿಯ ಆರ್ಥಿಕ ತಜ್ಞರಾದ ಅದಿತಿ ನಾಯರ್ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News