ನನ್ನ ಗೆಲುವಿಗಾಗಿ ಕೈ ಮುಗಿದು ನಿಂತಅರಸು
1978, ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ. ದೇವರಾಜ ಅರಸರು ನನ್ನನ್ನು ಕರೆದು, ‘‘ದಿಲ್ಲಿಯಿಂದ ಮೇಡಂ ಬರ್ತಾರೆ, ಅವರ ಜೊತೆ ನೀವಿರಬೇಕು. ಚಿಕ್ಕಮಗಳೂರು ಎಲೆಕ್ಷನ್ ಇನ್‌ಚಾರ್ಜ್ ನಿಮ್ಮದೇ. ಮೇಡಂ ಎಲ್ಲಿ ವಾಸ್ತವ್ಯ ಹೂಡಬೇಕು, ಎಲ್ಲಿ ಭಾಷಣ ಮಾಡಬೇಕು, ಆ ಪ್ರದೇಶದ ಹಿನ್ನೆಲೆ ಏನು, ಯಾರ್ಯಾರನ್ನು ಸಂಘಟಿಸಬೇಕು ಎಂಬುದೆಲ್ಲವನ್ನು ನೀವೇ ಮುಂದೆ ನಿಂತು ಮಾಡಬೇಕು’’ ಎಂದಿದ್ದರು. ದೇವರಾಜ ಅರಸು ಅವರು ತುಂಬಾ ರಿಸ್ಕ್ ತೆಗೆದುಕೊಂಡು ಓಡಾಡಿದರು. ನಾವು ಒಂದಷ್ಟು ಮಹಿಳಾ ಕಾರ್ಯಕರ್ತರು ಇಂದಿರಾ ಗಾಂಧಿಯವರ ಜೊತೆಯಲ್ಲಿಯೇ ಇರುತ್ತಿದ್ದೆವು. ಚಿಕ್ಕಮಗಳೂರು ಕ್ಷೇತ್ರದ ಯಾವ ಮೂಲೆಗೆ ಹೋದರೂ, ಇಂದಿರಾರನ್ನು ನೋಡಲು, ಕೈ ಮುಟ್ಟಲು, ಅವರ ಭಾಷಣ ಕೇಳಲು ಜನ ಮುಗಿ ಬೀಳುತ್ತಿದ್ದರು. ಇಂದಿರಾ ವಿರುದ್ಧ ವೀರೇಂದ್ರ ಪಾಟೀಲ್ ನಿಂತಿದ್ದರು. ಅವರಿಗೆ ಬೆಂಬಲವಾಗಿ ಕೇಂದ್ರ ಸರಕಾರವೇ ಚಿಕ್ಕಮಗಳೂರಿನಲ್ಲಿತ್ತು. ಅವರೆಲ್ಲರ ಭಾಷಣದಲ್ಲಿ ಇಂದಿರಾ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯೇ ಮುಖ್ಯವಾಗಿತ್ತು. ಆಗಿನ ಯಂಗ್ ಟರ್ಕ್ ಜಾರ್ಜ್ ಫೆರ್ನಾಂಡಿಸ್ ಆ ಚುನಾವಣೆಯ ಉಸ್ತುವಾರಿ ಹೊತ್ತಿದ್ದರು.
ಈ ಜಾರ್ಜ್ ಫೆರ್ನಾಂಡಿಸ್ ಇದಾರಲ್ಲ... ಇವರು ಏನು ಮಾಡೋರು ಅಂದರೆ, ನಾವು ಇಂದಿರಾ ಮೇಡಂ ಭಾಷಣ ಎಲ್ಲಿ ಮಾಡಬೇಕು ಎಂಬುದನ್ನು ಮೊದಲೇ ಫಿಕ್ಸ್ ಮಾಡುತ್ತಿದ್ದೆವು. ಸ್ಥಳೀಯ ನಾಯಕರ ಬೆಂಬಲದಿಂದ ಜನರನ್ನು ಕರೆತಂದು ದೊಡ್ಡ ಮಟ್ಟದ ಜಮಾವಣೆ ಮಾಡುತ್ತಿದ್ದೆವು. ಅಲ್ಲಿ ಇಂದಿರಾ ಗಾಂಧಿಯವರ ಭಾಷಣವಿರುತ್ತಿತ್ತು. ನಮ್ಮ ಪಕ್ಷದ ಚುನಾವಣಾ ಪ್ರಚಾರ ಭಾಷಣ ನಡೆಯುತ್ತಿದ್ದಾಗ, ದೂರದ ಪೆಟ್ಟಿಗೆ ಅಂಗಡಿಯ ಮುಂದೆ ಜಾರ್ಜ್ ಫೆರ್ನಾಂಡಿಸ್ ಒಬ್ಬರೇ ಕೂತು ಟೀ ಕುಡಿಯುತ್ತಿದ್ದರು. ನಾವು ಭಾಷಣ ಮುಗಿಸಿ ಹೊರಟ ತಕ್ಷಣ, ನಮ್ಮದೇ ಜಾಗದಲ್ಲಿ, ನಮ್ಮದೇ ವೇದಿಕೆಯಲ್ಲಿ, ನಾವು ಕರೆತಂದ ನಮ್ಮದೇ ಜನಕ್ಕೆ, ನಮ್ಮ ವಿರುದ್ಧವೇ ಭಾಷಣ ಮಾಡುತ್ತಿದ್ದರು. ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿ ಮತ್ತು ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ಮುಖ್ಯವಾಗಿಟ್ಟುಕೊಂಡು ತುಳು, ಕೊಂಕಣಿ, ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್.. ಹೀಗೆ ಎಲ್ಲ ಭಾಷೆಗಳಲ್ಲಿ ಭಾಷಣ ಬಿಗಿದು ನಮ್ಮ ಮತದಾರರನ್ನು ಮರುಳು ಮಾಡುತ್ತಿದ್ದರು. ಮೊದಲಿಗೆ ಇದು ನಮ್ಮನ್ನು ಕಕ್ಕಾಬಿಕ್ಕಿಯಾಗಿಸಿತು. ಜನತಾ ಕಿಡಿಗೇಡಿತನ, ಅರಸು ತಾಳ್ಮೆ
ಇದಾದ ಮೇಲೆ ಮತ್ತೊಂದು ಶಾಕ್ ಕಾದಿತ್ತು ನಮಗೆ. ಅದೇನೆಂದರೆ, ಹೀಗೆ ನಾವು ಇಂದಿರಾ ಮೇಡಂ ಜೊತೆ ಊರೂರು ಸುತ್ತುವಾಗ ಹೆಚ್ಚಿಗೆ ಜನ, ಅದರಲ್ಲೂ ಕಾಂಗ್ರೆಸ್ ಬಾವುಟಗಳನ್ನು ಹಿಡಿದು ನಿಂತ ಗುಂಪು ಕಂಡರೆ, ನಮ್ಮ ಕಾರುಗಳನ್ನು ನಿಲ್ಲಿಸಿ, ಮೇಡಂ ಭಾಷಣ ಮಾಡುತ್ತಿದ್ದರು. ಇದಕ್ಕೂ ಜನತಾದವರು ಬೇರೆಯದೇ ಪ್ಲಾನ್ ಮಾಡಿದ್ದರು. ಬಾವುಟ ಹಿಡಿದು ನಿಂತ ಗುಂಪು ಕಂಡ ತಕ್ಷಣ ನಮ್ಮ ಕಾರುಗಳು ನಿಲ್ಲುತ್ತಿದ್ದಂತೆ, ಬಾವುಟಗಳನ್ನು ಕಳಚಿ, ದೊಣ್ಣೆಯಿಂದ ನಮ್ಮ ಕಾರುಗಳ ಮೇಲೆ ಪ್ರಹಾರ ಮಾಡಿ, ಕಾರಿನ ಗ್ಲಾಸ್‌ಗಳನ್ನು ಪುಡಿ ಪುಡಿ ಮಾಡಿ ನಮ್ಮನ್ನು ದಿಗ್ಭ್ರಾಂತರನ್ನಾಗಿಸುತ್ತಿದ್ದರು. ಆ ಪ್ರಹಾರದಲ್ಲಿ ನಮಗಿರಲಿ, ಇಂದಿರಾ ಮೇಡಂ ಪ್ರಾಣಕ್ಕೂ ಕಂಟಕವಿತ್ತು. ಎರಡು ಮೂರು ಸಲ ಹೀಗೆ ಆದಮೇಲೆ ಎಚ್ಚೆತ್ತುಕೊಂಡ ನಾವು ಇಂದಿರಾ ಮೇಡಂರನ್ನು ಸಣ್ಣ ಕಾರಿನಲ್ಲಿ ಕೂರಿಸಿ, ಹಿಂದೆ ಬರುವಂತೆ ಮಾಡಿ, ದೊಡ್ಡ ಕಾರನ್ನು ಮುಂದೆ ಬಿಡುತ್ತಿದ್ದೆವು. ದೊಡ್ಡ ಕಾರಿನ ಗಾಜು ಪುಡಿಯಾಗುತ್ತಿದ್ದಂತೆ, ಇಂದಿರಾ ಮೇಡಂ ಇದ್ದ ಕಾರನ್ನು ತಕ್ಷಣ ಹಿಂದಿರುಗಿಸಿಕೊಂಡು ಹೋಗಿಬಿಡುತ್ತಿದ್ದೆವು. ಇದಾದ ಮೇಲೆ ಇನ್ನೊಂದು, ತುರ್ತು ಪರಿಸ್ಥಿತಿಯಲ್ಲಿ ಬಲಿಯಾದ ಮಹಿಳೆಯ ಶವವಿಟ್ಟು ಊರೂರು ಮೆರವಣಿಗೆ ಮಾಡಿದರು. ಮೂಡುಬಿದಿರೆಯಲ್ಲಿ ದೊಡ್ಡ ಗಲಾಟೆಯಾಯಿತು.
ಡಿ.ಬಿ.ಚಂದ್ರೇಗೌಡರಿಗೆ ಏಟು ಬಿತ್ತು. ಧರ್ಮಸ್ಥಳದಲ್ಲಿ ಕರ್ಫ್ಯೂ ಹೇರಲಾಯಿತು. ಆಗ ದೇವರಾಜ ಅರಸು ನನ್ನನ್ನು ಧರ್ಮಸ್ಥಳಕ್ಕೆ ಕಳುಹಿಸಿದರು. ನಾನೊಬ್ಬಳೇ ಹೋದೆ, ರಾತ್ರಿಯಾಗಿತ್ತು, ಊರು ಸ್ಮಶಾನದಂತಿತ್ತು. ಅಲ್ಲಿನ ಅಧಿಕಾರಿಗಳ ಸಹಾಯ ಪಡೆದು ಕರ್ಫ್ಯೂ ತೆಗೆಸಿ ಯಥಾಸ್ಥಿತಿಗೆ ತಂದೆ. ಇಲ್ಲಿ ನಿಮಗೆ ಹೇಳಲೇಬೇಕಾದ ಒಂದು ಮುಖ್ಯವಾದ ಸಂಗತಿ ಇದೆ... ಜನತಾ ಪಾರ್ಟಿಯವರ ಈ ಸರಣಿ ಕಿಡಿಗೇಡಿ ಕೃತ್ಯಗಳನ್ನೆಲ್ಲ ಅರಸರಿಗೆ ತಿಳಿಸಿದೆ. ಆಗ ಅರಸು, ‘‘ಯಾವುದೇ ಸಮಯದಲ್ಲಾದರೂ ಸರಿ, ಎಂತಹ ಕಷ್ಟ ಎದುರಾದರೂ ಸರಿ ತಾಳ್ಮೆ ಕಳೆದುಕೊಳ್ಳಬೇಡಿ, ಜನತಾ ಪಕ್ಷದವರಿಗೆ ಈ ಚುನಾವಣೆ ಬೇಕಾಗಿಲ್ಲ. ಈ ಒಂದು ಸೀಟಿನಿಂದ ಅವರ ಸರಕಾರಕ್ಕೇನು ನಷ್ಟವಿಲ್ಲ. ಆದರೆ ಈ ಚುನಾವಣೆ ಮತ್ತು ಗೆಲುವು ನಮಗೆ ಬಹಳ ಮುಖ್ಯ. ಅದರಿಂದ ರಾಷ್ಟ್ರ ರಾಜಕಾರಣದಲ್ಲಾಗುವ ಬದಲಾವಣೆ ಊಹೆಗೂ ನಿಲುಕದ್ದು. ಆದಕಾರಣ, ಅವರು ಏನಾದರೂ ಒಂದು ತಕರಾರು ತೆಗೆದು ಚುನಾವಣೆಯನ್ನು ಮುಂದೂಡುವ ಯೋಚನೆಯಲ್ಲಿದ್ದಾರೆ. ನೀವು ಸಹನೆಯಿಂದಿರಿ. ಇದನ್ನೇ ನಮ್ಮೆಲ್ಲ ಕಾರ್ಯಕರ್ತರಿಗೂ ಹೇಳಿ’’ ಎಂದರು. ಅರಸರ ಸಹನೆ, ತಾಳ್ಮೆ, ಶಾಂತಿ, ಸಮಾಧಾನವನ್ನು ಎಷ್ಟು ಹೇಳಿದರೂ ಸಾಲದು. ಜೊತೆಗೆ ಅವರ ಮುಂದಾಲೋಚನೆಯೂ...
ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ಗೆದ್ದರು. ಗೆದ್ದ ದಿನ ಅರಸು, ಮೇಡಂ ಮುಂದೆ ಚಿಕ್ಕ ಮಗುವಿನಂತೆ ಅತ್ತರು. ಆ ಸಂದರ್ಭದಲ್ಲಿ ಅವರಾಡಿದ ಮಾತು ಇವತ್ತಿಗೂ ನನ್ನ ನೆನಪಿನಲ್ಲಿದೆ, ‘‘ಐ ಹ್ಯಾಡ್ ಸ್ಟೇಕ್ ಮೈ ಪೊಲಿಟಿಕಲ್ ಫ್ಯೂಚರ್ ಇನ್ ದಿಸ್ ವಿಕ್ಟರಿ’’. ನನ್ನ ಅನುಭವದಲ್ಲಿ, ಅರಸು ಅತ್ತಿದ್ದನ್ನು ನಾನೆಂದೂ ಕಂಡಿರಲಿಲ್ಲ. ಅಷ್ಟು ದೊಡ್ಡ ಲೀಡರ್, ಹಾಗೆ ಮಗುವಿನಂತೆ ಅತ್ತಿದ್ದು, ಆ ಗೆಲುವಿಗಾಗಿ ಅವರೆಷ್ಟು ಎಫರ್ಟ್ ಹಾಕಿದ್ದರು ಎಂಬುದನ್ನು ಹೇಳುತ್ತಿತ್ತು. ದುರದೃಷ್ಟಕರ ಸಂಗತಿ ಎಂದರೆ, ಅರಸರ ಆ ನಿಷ್ಠೆ ಇಂದಿರಾ ಗಾಂಧಿಯವರಿಗೆ ಅರ್ಥವೇ ಆಗಲಿಲ್ಲ!
ಅರಸು ಅವರು ಹೀಗೆ ಮಗು ಥರಾ ಅತ್ತದ್ದು ಇನ್ನೊಂದು ಸಲ... ಅವರ ಎರಡನೆ ಮಗಳು ನಾಗರತ್ನರ ಮೃತದೇಹವನ್ನು ನೋಡಿದಾಗ. ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತರು. ಯಾರು ಎಷ್ಟೇ ತಡೆದರೂ ನಿಲ್ಲಿಸಲಿಲ್ಲ. ಅವರು ಅಳುವುದನ್ನು ನೋಡಿ ನಮಗೂ ಅಳು ಬಂದು, ನಾವೆಲ್ಲ ಅತ್ತಿದ್ದೆವು. ವೆರಿ ಎಮೋಷನಲ್ ಮ್ಯಾನ್... ರಿಯಲ್ ಫಾದರ್... ಆತುರದ ಅರಸು, ಮೊಂಡು ಮೇಡಂ
ಇಂದಿರಾ ಗಾಂಧಿಯವರ ಗೆಲುವಿಗಾಗಿ ಅಷ್ಟೆಲ್ಲ ಕಷ್ಟಪಟ್ಟ ದೇವರಾಜ ಅರಸರಿಗೆ, ಕಾಂಗ್ರೆಸ್ ಹೈಕಮಾಂಡ್‌ನಿಂದ ಗೆಲುವಿಗೆ ತಕ್ಕ ಗೌರವ ಸಿಗಲಿಲ್ಲ. ಗೌರವವಿರಲಿ, ಮುಖ್ಯಮಂತ್ರಿಯಾಗಿ ಮುಂದುವರಿಯಲೂ ಬಿಡಲಿಲ್ಲ. ರಾಜಕೀಯ ಪುನರ್ಜನ್ಮ ನೀಡಿದ ಅರಸು ಮೇಲೆ ಅನುಮಾನ ಶುರುವಾಯಿತು. ಅದಕ್ಕೆ ತಕ್ಕಂತೆ ಅರಸು ವಿರುದ್ಧವಿದ್ದ ನಮ್ಮದೇ ಪಕ್ಷದ ಕೆಲ ನಾಯಕರು ಇಲ್ಲಸಲ್ಲದ ಚಾಡಿ ಹೇಳುವುದು ಹೆಚ್ಚಾಯಿತು. ಸಂಜಯ್ ಗಾಂಧಿಗೆ ಅರಸು ಕಂಡರೆ ಕೊಂಚ ಅಸಮಾಧಾನವಿತ್ತು. ಕೆಲವರ ಚಿತಾವಣೆಯಿಂದ ಅದು ಇನ್ನಷ್ಟು ಗಟ್ಟಿಗೊಳ್ಳತೊಡಗಿತು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ- ಎರಡೂ ಹುದ್ದೆಯಲ್ಲಿದ್ದ ದೇವರಾಜ ಅರಸು ಅವರಿಗೆ, ಒಂದು ಸ್ಥಾನ ತೆರವು ಮಾಡಿ ಎಂದು ಹೇಳಿದ್ದರೆ, ಖಂಡಿತ ಮಾಡುತ್ತಿದ್ದರು. ಆದರೆ ಇಂದಿರಾ ಗಾಂಧಿಯವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಪರೋಕ್ಷವಾಗಿ ಒತ್ತಡ ಹೇರತೊಡಗಿದರು. ಅರಸು ಹಠಕ್ಕೆ ಬಿದ್ದು ಮಾಡಲ್ಲ ಎಂದರು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎನ್ನುವುದು ನಮ್ಮೆಲ್ಲರ ಬೇಡಿಕೆಯಾಗಿತ್ತು.
ನಮ್ಮನ್ನು ಪಾರ್ಟಿಯಿಂದ ಎಕ್ಸ್‌ಪೆಲ್ ಮಾಡಿದರು. ಅರಸರಿಗೆ ಹರ್ಪಿಸ್ ಆಗಿ ಮನೆಯಲ್ಲಿ ಮಲಗಿದ್ದರು. ಆ ಸಮಯದಲ್ಲಿ, ಅಮಾನವೀಯವಾಗಿ ಶೋಕಾಸ್ ನೋಟಿಸ್ ಇಷ್ಯೂ ಮಾಡಿದರು. ಆ ನೋಟಿಸ್ ಅರಸರಿಗೆ ತಲುಪುವುದಕ್ಕೂ ಮೊದಲೇ ದಿಲ್ಲಿಯಲ್ಲಿ ಆ ಪತ್ರವನ್ನು ಪ್ರೆಸ್‌ಗೆ ರಿಲೀಸ್ ಮಾಡಿದರು. ಇದು ಅರಸರಿಗೆ ಸಿಕ್ಕಾಪಟ್ಟೆ ಸಿಟ್ಟು ತರಿಸಿತು. ‘‘ಏನು ಮಾಡ್ತಾರೋ ಮಾಡ್ಲಿ’’ ಎಂದು ಹಠಕ್ಕೆ ಬಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ಬಂಗಾರಪ್ಪನವರನ್ನು ಪಾರ್ಟಿ ಪ್ರೆಸಿಡೆಂಟ್ ಎಂದು ನೇಮಕ ಮಾಡಿದರು. ಆತುರಕ್ಕೆ ಬಿದ್ದ ಅರಸು ಹೊಸ ಪಕ್ಷ ರಚಿಸಿದರು. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಆ ಸಮಯದಲ್ಲಿ ನಾನು ಅರಸು ಬಳಿಗೆ ಹೋಗಿ, ‘‘ನಿನ್ನೆಯವರೆಗೆ ನಾವು ಇಂದಿರಾ ಗಾಂಧಿಯವರ ಪರವಾಗಿದ್ದು, ಅವರನ್ನು ಹಾಡಿ ಹೊಗಳಿದ್ದೇವೆ. ಅವರ ಕಾರ್ಯಕ್ರಮಗಳನ್ನು ತಲೆ ಮೇಲೆ ಹೊತ್ತು ತಿರುಗಿದ್ದೇವೆ. ಈಗ ಅವರ ವಿರುದ್ಧ ನಿಂತು, ತೆಗಳಿ ಮಾತನಾಡುವುದು ಕಷ್ಟವಿದೆ. ಹಾಗೆ ಮಾತನಾಡಿದರೂ ಜನ ನಮ್ಮನ್ನೇ ತಪ್ಪು ತಿಳಿಯುವ ಸಂಭವವಿದೆ. ದಯವಿಟ್ಟು ಈ ಹೊಸ ಪಾರ್ಟಿ, ಚುನಾವಣೆ ಯಾವುದೂ ಬೇಡ’’ ಎಂದು ಪರಿ ಪರಿಯಾಗಿ ಬೇಡಿಕೊಂಡೆ.
ಆದರೆ ಅರಸು ಸುತ್ತ ಇದ್ದವರು ಅವರನ್ನು ಆಗಲೇ ಆಕ್ರಮಿಸಿಕೊಂಡಿದ್ದರು. ಅದಕ್ಕೆ ತಕ್ಕಂತೆ ಇಂದಿರಾ ಗಾಂಧಿಯವರು ಕೂಡ ಮೊಂಡುತನಕ್ಕೆ ಬಿದ್ದು ಅರಸರನ್ನು ಅವಮಾನಿಸಿದರು. ನಾನು ಅವರ ಬಳಿಯೂ, ಅರಸರನ್ನು ಹೀಗೆ ನಡೆಸಿಕೊಂಡಿದ್ದು ಸರಿಯೇ ಎಂದು ಪ್ರಶ್ನಿಸಿದೆ. ಆದರೆ ಇಂದಿರಾ ಗಾಂಧಿಯವರು ಉತ್ತರವನ್ನೇ ಕೊಡಲಿಲ್ಲ. ಅಷ್ಟೇ ಅಲ್ಲ, ಅರಸರ ವಿಷಯದಲ್ಲಿ ತುಂಬಾ ಒರಟಾಗಿ ನಡೆದುಕೊಂಡರು. ಕೊನೆಗೆ ಎಲೆಕ್ಷನ್‌ನಲ್ಲಿ ಅರಸು ಪಕ್ಷಕ್ಕೆ ಸೋಲಾಯಿತು, ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅಲ್ಲಿಗೆ ಇಂದಿರಾ-ಅರಸರ ಸುವರ್ಣ ಯುಗ ಮುಗಿದು, ಗುಂಡೂರಾವ್-ಎಫ್.ಎಂ.ಖಾನ್‌ಗಳ ಕರಾಳ ಕಾಲ ಶುರುವಾಗಿತ್ತು. ಅಂದು ಅರಸು ಜೊತೆ ಇದ್ದವರು ಡಿ.ಬಿ.ಚಂದ್ರೇಗೌಡ, ಸಚ್ಚಿದಾನಂದಸ್ವಾಮಿ, ಹಾವನೂರು, ಎಚ್.ಆರ್.ಬಸವರಾಜು, ಆರ್.ಎಂ.ದೇಸಾಯಿ ಮತ್ತು ನಾನು... ಇಷ್ಟೇ ಜನ.
ಕೈ ಮುಗಿದು ನಿಂತ ಅರಸು
ನನ್ನನ್ನು ಮೊದಲ ಬಾರಿಗೆ 1974 ರಲ್ಲಿ ರಾಜ್ಯಸಭೆಗೆ ಕಳುಹಿಸಿದ ಅರಸು, ನನ್ನ ಅವಧಿ ಮುಗಿಯುವಷ್ಟರಲ್ಲಿ, 1980ರಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದರು. ಆಗ ಅವರ ಹಿಂದೆ ಬೆರಳೆಣಿಕೆಯಷ್ಟು ಶಾಸಕರಿದ್ದರು. ಅವಧಿ ಮುಗಿದಿದ್ದರಿಂದ ನಾನು ದಿಲ್ಲಿಯ ಮನೆ ಖಾಲಿ ಮಾಡಿ, ಸರಕು ಸರಂಜಾಮುಗಳನ್ನು ಕಟ್ಟಿ, ಬೆಂಗಳೂರಿಗೆ ಬರಲು ತಯಾರಿ ನಡೆಸುತ್ತಿದ್ದೆ. ಅದು ಹೇಗೋ ದೇವರಾಜ ಅರಸರಿಗೆ ತಿಳಿದು, ಅವರಿಂದ ಫೋನ್ ಬಂತು, ‘‘ಏನು, ವಾಪಸ್ ಬರ್ತಿದೀರಂತೆ, ಪ್ಯಾಕೇನೂ ಮಾಡಬೇಡಿ, ನಾನು ದಿಲ್ಲಿಗೆ ಬರ್ತಿದೀನಿ ಇರಿ’’ ಎಂದರು. ‘‘ನೀವು ರಾಜ್ಯಸಭೆಗೆ ಯುನೈಟೆಡ್ ಅಪೊಸಿಷನ್ ಕ್ಯಾಂಡಿಡೇಟ್ ಆಗಿ ನಾಮಿನೇಷನ್ ಫೈಲ್ ಮಾಡಿ, ಯೂ ಸ್ಟುಡ್ ಬೈ ಮಿ, ಐ ವಿಲ್ ಸ್ಟಾಂಡ್ ಬೈ ಯೂ’’ ಅಂದರು. ನಾನು ಗೆಲ್ಲುವುದು ಯಾವ ರಾಜಕೀಯ ಲೆಕ್ಕಾಚಾರದಿಂದಲೂ ಸಾಧ್ಯವಿಲ್ಲ ಎನ್ನುವುದು ನನಗೆ ಗೊತ್ತಿತ್ತು. ಆದರೆ ಅರಸರ ಆತ್ಮವಿಶ್ವಾಸದ ಮುಂದೆ ನನ್ನದೇನೂ ನಡೆಯುವಂತಿರಲಿಲ್ಲ. ಅವರ ಆ ಖಡಕ್ ಮಾತಿಗೆ ಕಟ್ಟುಬಿದ್ದು ಅನ್ಯಮನಸ್ಕಳಾಗಿಯೇ ನಾಮಿನೇಷನ್ ಫೈಲ್ ಮಾಡಿದೆ.
ನನ್ನನ್ನು ಸೋಲಿಸಲು ಮುಖ್ಯಮಂತ್ರಿ ಗುಂಡೂರಾವ್ ಮತ್ತೊಬ್ಬ ಮಹಿಳೆ, ಸರೋಜಿನಿ ಮಹಿಷಿಯನ್ನು ಫೀಲ್ಡ್ ಮಾಡಿದ್ದರು- ಓಟ್ ಡಿವೈಡ್ ಮಾಡಲಿಕ್ಕೆ. ಆದರೆ ಅರಸು ಲೆಕ್ಕಾಚಾರವೇ ಬೇರೆ ಇತ್ತು. ಆಡಳಿತ ಪಕ್ಷ ಕಾಂಗ್ರೆಸ್ಸನ್ನು ಬಿಟ್ಟು ಮಿಕ್ಕೆಲ್ಲ ವಿರೋಧ ಪಕ್ಷಗಳ ನಾಯಕರೊಂದಿಗೆ ಒನ್ ಟು ಒನ್ ಮಾತನಾಡಿ, ಮನವಿ ಮಾಡಿಕೊಂಡರು. ದಿಲ್ಲಿಯಿಂದ ಜಾರ್ಜ್ ಫೆರ್ನಾಂಡಿಸ್ ನನ್ನ ಬೆಂಬಲಿಸಿ, ‘‘10 ಜನ ಮಹಿಷಿಗಿಂತ ಒಬ್ಬ ಮಾರ್ಗರೆಟ್ ಆಳ್ವ ಮುಖ್ಯ’’ ಎಂದು ದೇವೇಗೌಡರಿಗೆ ಟೆಲಿಗ್ರಾಂ ಕೊಟ್ಟರು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ನನ್ನನ್ನು ಅಲ್ಲಾಡಿಸಿದ ಸಂದರ್ಭ ಎಂದರೆ, ಮತದಾನದ ದಿನ. ವಿಧಾನಸೌಧದಲ್ಲಿ ಮತಗಟ್ಟೆಯ ಹೊರಗೆ ಅರಸು ನನ್ನನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು, ಕೈ ಮುಗಿದು ನಿಂತದ್ದು. ಎಂಟು ವರ್ಷ ರಾಜ್ಯವನ್ನಾಳಿದ ಮುಖ್ಯಮಂತ್ರಿಯೊಬ್ಬರು ಒಬ್ಬ ಮಹಿಳೆಯ ಗೆಲುವಿಗಾಗಿ ಹೀಗೆ ಕೈ ಮುಗಿದು ನಿಂತದ್ದು, ರಾಷ್ಟ್ರ ರಾಜಕಾರಣದ ಇತಿಹಾಸದಲ್ಲಿಯೇ ಇಲ್ಲ ಎನಿಸುತ್ತದೆ. ಸಾಲಾಗಿ ಮತ ಚಲಾಯಿಸಲು ಬರುತ್ತಿದ್ದ ಶಾಸಕರಿಗೆ, ಅರಸರಿಂದಲೇ ರಾಜಕಾರಣಕ್ಕೆ ಬಂದ ವ್ಯಕ್ತಿಗಳಿಗೆ ದೇವರಾಜ ಅರಸರು, ‘‘ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ’’ ಎಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದರು. ಆ ಶಾಸಕರಿಗೆ ಮುಖವೇ ಇಲ್ಲ, ಅರಸರ ಮುಖ ನೋಡಲಿಕ್ಕೆ ಧೈರ್ಯವೇ ಇಲ್ಲ. ನಾಚಿಕೆಯಿಂದ ಕುಗ್ಗಿಹೋಗಿದ್ದರು. ಕತ್ತು ಬಗ್ಗಿಸಿಕೊಂಡೇ ಅವರ ಕಾಲುಗಳನ್ನು ಮುಟ್ಟಿ ನಮಸ್ಕರಿಸಿ ಹೋಗುತ್ತಿದ್ದರು. ಅರಸು ಅಂದರೆ ವ್ಯಕ್ತಿಯೋ, ಶಕ್ತಿಯೋ ಎನ್ನುವುದು ನನಗೆ ಅವತ್ತು ಅರ್ಥವಾಯಿತು. ನನಗಾಗಿ ಅರಸರು ಕೈ ಮುಗಿದು ನಿಂತದ್ದು ನನ್ನ ಜೀವನದ ಅವಿಸ್ಮರಣೀಯ ಸಂದರ್ಭ, ನಾನು ಎಂದೆಂದಿಗೂ ಮರೆಯುವುದಿಲ್ಲ.
ಅವತ್ತು ಸಂಜೆಯೇ ಫಲಿತಾಂಶ ಪ್ರಕಟವಾಯಿತು. ನಾನು ಗೆದ್ದಿದ್ದೆ. ಗೆದ್ದ ಖುಷಿಯಲ್ಲಿ ಅರಸರನ್ನು ನೋಡಲು ಅವರ ಮನೆಗೆ ಹೋದೆ. ಆಗ ಸಂಜೆ 5:30. ಅರಸರು ಊಟ ಮಾಡಿರಲಿಲ್ಲ. ನನ್ನನ್ನು ನೋಡಿದವರೆ, ‘‘ಬನ್ನಿ ಬನ್ನಿ ಸ್ವಲ್ಪ ಊಟ ಮಾಡೋಣ’’ ಅಂತ ಹೇಳಿ, ಅವರೇ ಅನ್ನ ಸಾರು ಬಡಿಸಿ ಕೊಟ್ಟರು. ಊಟ ಮಾಡುವಾಗ, ‘‘ನೀವು ಮನೆಗೆ ಹೋಗುವುದಕ್ಕೆ ಮುಂಚೆ, ಎಚ್. ಡಿ.ದೇವೇಗೌಡರನ್ನು ಕಂಡು, ಸ್ವೀಟ್ಸ್, ಫ್ಲವರ್ ಬೊಕೆ ಕೊಟ್ಟು ಥ್ಯಾಂಕ್ಸ್ ಹೇಳಿ’’ ಎಂದರು. ‘ಅಹಿಂದ’ ಅಂತ ಇವತ್ತೆಲ್ಲ ಹೇಳ್ತಿದಾರಲ್ಲ, ಅದನ್ನು ಮೊದಲು ಕನ್ಸಾಲಿಡೇಟ್ ಮಾಡಿದ್ದೇ ಅರಸು. ಆ ವರ್ಗಗಳಿಂದ ಬಂದ ನಾಲ್ಕು ಜನ ಮುಖ್ಯಮಂತ್ರಿಯಾಗಲು ಕಾರಣಕರ್ತರೇ ಅರಸು. ಎಲ್ಲ ಜಾತಿ ಧರ್ಮಗಳನ್ನು ಸಮಾನವಾಗಿ ಕಂಡವರು ಅರಸು. ಸ್ನೇಹಜೀವಿ. ಟೋಟಲಿ ಡಿಫರೆಂಟ್ ಪರ್ಸನಾಲಿಟಿ. ಆಲ್‌ವೇಸ್ ಸ್ಮೈಲಿಂಗ್. ವೆರಿ ಗುಡ್ ಲಿಸನರ್. ಭವಿಷ್ಯದ ಬಗ್ಗೆ ವಿಷನ್ ಇದ್ದ ಮಾಸ್ ಲೀಡರ್. ‘ಇವತ್ತು ಸಿಎಂ ಆಗಿ ಮನೆಗೆ ಹೋಗೋದಲ್ಲ, ನಾಳೆಗೂ ಉಳಿಯಬೇಕು, ಅದು ಮುಖ್ಯ’ ಎನ್ನುತ್ತಿದ್ದರು ಮತ್ತು ಅದಕ್ಕೆ ಬದ್ಧರಾಗಿ ನಡೆದುಕೊಂಡರು. ನನ್ನ ಪ್ರಕಾರ ದೇವರಾಜ ಅರಸು ಆಧುನಿಕ ಕರ್ನಾಟಕದ ನಿರ್ಮಾತೃ.