ಜೀವ ಹೋದರೂ ಪಾನನಿಷೇಧ ವಾಪಸ್ ಇಲ್ಲ: ನಿತೀಶ್

Update: 2016-06-15 03:30 GMT

ಪಾಟ್ನಾ, ಜೂ.15: ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ’ವಿಕಾಸ ಪರ್ವ’ವನ್ನು ಲೇವಡಿ ಮಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರಧಾನಿ ಕನಿಷ್ಠ ಬಿಜೆಪಿ ಆಡಳಿತ ರಾಜ್ಯಗಳಲ್ಲಾದರೂ ಪಾನ ನಿಷೇಧ ಜಾರಿಗೊಳಿಸಿದರೆ ಆಗ ನಿಜವಾದ ವಿಕಾಸ ಪರ್ವ ಆಚರಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ದೇಶಾದ್ಯಂತ ವಿಕಾಸ ಪರ್ವ ಆಚರಿಸುತ್ತಿದೆ. ಆದರೆ ಇದು ನಕಲಿ. ಆದರೆ ರಾಜ್ಯದಲ್ಲಿ ಸಂಪೂರ್ಣ ಪಾನನಿಷೇಧ ಹೇರಿದ ದಿನದಿಂದ ಬಿಹಾರದ ಪ್ರತಿ ಕುಟುಂಬಗಳು ಕೂಡಾ ಅಸಲಿ ವಿಕಾಸ ಪರ್ವವನ್ನು ಆಚರಿಸುತ್ತಿವೆ. ಬಿಹಾರದ ಈ ವಿಕಾಸ ಪರ್ವ ಮಾದರಿಯಲ್ಲಿ ಪ್ರಧಾನಿ ದೇಶಾದ್ಯಂತ ಅನುಸರಿಸಲಿ. ಕನಿಷ್ಠ ಬಿಜೆಪಿ ಆಡಳಿತದ ರಾಜ್ಯಗಳಲ್ಲಾದರೂ ಅನುಸರಿಸಲಿ ಎಂದು ಹೇಳಿದರು.

ಶ್ರೀಕೃಷ್ಣ ಸ್ಮಾರಕ ಭವನದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ವಿಭಾಗಮಟ್ಟದ ಸಮಾವೇಶದಲ್ಲಿ ಮಾಡಿದ ಅವರ ಭಾಷಣಕ್ಕೆ ಗ್ರಾಮೀಣ ಮಹಿಳೆಯರಿಂದ ಅದ್ಭುತ ಸ್ಪಂದನೆ ದೊರಕಿತು.

ಯಾವುದೇ ಕಾರಣಕ್ಕೆ ಪಾನನಿಷೇಧ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜೀವ ಹೋದರೂ ಪಾನನಿಷೇಧ ರದ್ದು ಮಾಡುವುದಿಲ್ಲ. ಶರಾಬುಮುಕ್ತ ಸಮಾಜ ನನ್ನ ಗುರಿ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News