ಹೈದರಾಬಾದ್: ಲಸಿಕೆಯಿಂದ ಪಡೆದ ಪೋಲಿಯೊ ವೈರಸ್

Update: 2016-06-15 16:56 GMT

ಹೊಸದಿಲ್ಲಿ, ಜೂ.15: ಹೈದರಾಬಾದ್‌ನ ಚರಂಡಿಯೊಂದರಲ್ಲಿ ಪೋಲಿಯೊ ವೈರಸ್(ಪಿ2 ಸ್ಪ್ರೇನ್) ಪತ್ತೆಯಾದ ಕುರಿತು ಕಳವಳದ ನಡುವೆಯೇ, ಅದೊಂದು ಲಸಿಕೆಯಿಂದ ಪಡೆದ ವೈರಸ್ಸಾಗಿದೆ. ಅದು ಭಾರತದ ಪೋಲಿಯೊ ಮುಕ್ತ ಸ್ಥಾನಮಾನವನ್ನು ಬದಲಾಯಿಸುವುದಿಲ್ಲವೆಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಹೇಳಿದೆ.

ಆದಾಗ್ಯೂ, ಸಚಿವಾಲಯವು ಮುನ್ನೆಚ್ಚರಿಕೆಯ ಕ್ರಮವಾಗಿ ತೆಲಂಗಾಣದ ಹೆಚ್ಚು ಅಪಾಯದ ಪ್ರದೇಶಗಳಲ್ಲಿ ವಿಶೇಷ ಲಸಿಕೆ ಅಭಿಯಾನವೊಂದನ್ನು ನಡೆಸಲಿದೆ.
ಭಾರತವು ಪೋಲಿಯೊ ವೈರಸ್‌ಗಳನ್ನು ಸಂಪೂರ್ಣವಾಗಿ ನಾಶಗೊಳಿಸಿದೆ. ಅದು ಪೋಲಿಯೊ ಮುಕ್ತವಾಗಿಯೇ ಮುಂದುವರಿದಿದೆ. 2011ರ ಜ.13ರಂದು ಪೋಲಿಯೊದ ಕೊನೆಯ ಪ್ರಕರಣ ಪತ್ತೆಯಾಗಿತ್ತು. ಆಮೇಲೆ 5 ವರ್ಷಗಳಿಗೂ ಹೆಚ್ಚು ಕಾಲದಿಂದ ಪೋಲಿಯೊ ವೈರಸ್ ಪತ್ತೆಯಾಗಿಲ್ಲವೆಂದು ಆರೋಗ್ಯ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸಿಕಂದರಾಬಾದ್‌ನ ರೈಲು ನಿಲ್ದಾಣದ ಬಳಿ ಒಳ ಚರಂಡಿಯೊಂದರಲ್ಲಿ ಪತ್ತೆಯಾಗಿರುವ ಪೋಲಿಯೊ ವೈರಸ್‌ನ ಅಂಶವು ಲಸಿಕೆಯಿಂದ ಪಡೆದ ಪೋಲಿಯೊ ವೈರಸ್ಸಾಗಿದೆ.
ಲಸಿಕೆಯಿಂದ ಪಡೆದ ಪೋಲಿಯೊ ವೈರಸ್‌ಗಳು ಪೋಲಿಯೊ ಹನಿಗಳಲ್ಲಿರುವ ತುಣುಕುಗಳಿಂದ ಜೈವಿಕವಾಗಿ ಪರಿವರ್ತಿತವಾದ ಪೋಲಿಯೊ ವೈರಸ್‌ಗಳ ವಿರಳ ತುಣುಕುಗಳಾಗಿವೆ.
ಪೋಲಿಯೊ ಲಸಿಕೆಯಲ್ಲಿದ್ದ ಜೀವಂತ ವೈರಸ್‌ಗಳು ಪೋಲಿಯೊ ಹನಿ ನೀಡಲಾದ ಮಕ್ಕಳ ಮಲದ ಮೂಲಕ ಚರಂಡಿಗೆ ಸೇರಿವೆ.
ಪೋಲಿಯೊ ಹನಿ ಮಕ್ಕಳಿಗೆ ರಕ್ಷಣೆ ನೀಡುತ್ತದೆ. ಆದರೆ, ಮಲದ ಮೂಲಕ ಹೊರ ಬಿದ್ದ ವೈರಸ್ ಕಣಗಳು ಕಾಲಾಂತರದಲ್ಲಿ ನರ ವ್ಯವಸ್ಥೆಯ ಕಾಯಿಲೆಗೆ ಕಾರಣವಾಗುವ ಸಾಮರ್ಥ್ಯ ಪಡೆಯಲೂ ಬಹುದು. ಅವು ಮಲಿನ ಕುಡಿಯುವ ನೀರಿನ ಮೂಲಕ ಶರೀರವನ್ನು ಸೇರಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು.
ಲಸಿಕೆಯಿಂದ ಪಡೆದ ಪೋಲಿಯೊ ವೈರಸ್ ಪತ್ತೆಯಾದ ಪ್ರದೇಶದ ಮಕ್ಕಳು ಅವುಗಳಿಂದ ಬಾಧಿತವಾದುದು ಕಂಡು ಬಂದಿಲ್ಲ. 17 ವರ್ಷಗಳ ಹಿಂದೆ, 1999ರಲ್ಲಿ 2ನೆ ಮಾದರಿಯ ಪೋಲಿಯೊ ವೈರಸ್‌ನ ಪ್ರಕರಣ ಕೊನೆಯದಾಗಿ ದೇಶದಲ್ಲಿ ಪತ್ತೆಯಾಗಿತ್ತೆಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News