ಇನ್ಸೂರೆನ್ಸ್ ಕಂಪೆನಿಗೆ 58 ಲಕ್ಷ ರೂ. ಪಂಗನಾಮ
ಹೊಸದಿಲ್ಲಿ, ಜೂ.16: ನಕಲಿ ಮೆಡಿಕಲ್ ಕ್ಲೈಮ್ ಹಾಗೂ ಖೋಟಾ ಮೆಡಿಕಲ್ ಪತ್ರಗಳ ಮೂಲಕ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಗೆ ಪಂಗನಾಮ ಹಾಕಿರುವ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯನ್ನು ವಿಶಾಲ್ ಗುಪ್ತಾ(40 ವರ್ಷ) ಎಂದು ಗುರುತಿಸಲಾಗಿದೆ. ಗುಪ್ತನಿಗೆ ಸಹಕರಿಸುತ್ತಿದ್ದ ಗಣೇಶ್ ಕುಮಾರ್(32), ಡಾ. ಪಂಕಜ್ ಭಾರಧ್ವಾಜ್(28), ದೀಪಕ್ ಶರ್ಮ(38), ಅಮಿತ್ ಕುಮಾರ್(22) ಹಾಗೂ ನಿಕುಂಜ್ ಕುಮಾರ್(25) ಅವರನ್ನು ಬಂಧಿಸಲಾಗಿದ್ದು, ಇವರು 66 ಮೆಡಿಕಲ್ ಕ್ಲೈಮ್‌ಗಳನ್ನು ಫೋರ್ಚರಿ ಮಾಡಿ ಇನ್ಸೂರೆನ್ಸ್ ಕಂಪೆನಿಯಿಂದ 58 ಲಕ್ಷ ರೂ. ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನ್ನ ಕಂಪೆನಿಯ ಹೆಸರಲ್ಲಿ ಯಾರೋ ಅಪರಿಚಿತರು ತಪ್ಪು ಮೆಡಿಕಲ್ ಕ್ಲೈಮ್‌ಗಳನ್ನು ಸಲ್ಲಿಸಿ 56 ಲಕ್ಷ ರೂ. ಪಡೆದಿದ್ದಾರೆ ಎಂದು ವಿಪುಲ್ ಮೆಡ್ ಕ್ಯಾಪ್ ಟಿಪಿಎ ಪ್ರೈ.ಲಿ. ನಿರ್ದೇಶಕ ಆರ್. ಸುಬ್ರಹ್ಮಣ್ಯಂ ಎಂಬುವವರು ದೂರು ಸಲ್ಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ದಿಡೀರನೆ ಮೆಡಿಕಲ್ ಕ್ಲೈಮ್ ಹೆಚ್ಚಳವಾದ ಬಳಿಕ ಕಂಪೆನಿಗೆ ಈ ವಿಷಯ ಗೊತ್ತಾಗಿದೆ.
ತನಿಖೆಯ ವೇಳೆ ಯಾರೂ ಮೆಡಿಕಲ್ ಕ್ಲೈಮ್‌ಗಾಗಿ ಅರ್ಜಿ ಸಲ್ಲಿಸಿದ್ದು ಕಂಡು ಬಂದಿಲ್ಲ. ಸಂಬಂಧಿತ ಆಸ್ಪತ್ರೆಗಳು ಸಲ್ಲಿಸಿದ ಕ್ಲೈಮ್ ಬಿಲ್‌ಗಳು ನಕಲಿಯಾಗಿದ್ದವು. ಯುನೈಟೆಡ್ ಇನ್ಸೂರೆನ್ಸ್ ಕಂಪೆನಿಯಲ್ಲಿ ದೀಪಕ್ ಶರ್ಮ ಹಾಗೂ ಅಮಿತ್ ಕುಮಾರ್ ಅವರ ಖಾತೆಯಲ್ಲಿ ವ್ಯವಹಾರ ನಡೆದಿದ್ದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.