ಮುಂದುವರಿದ ವಿದೇಶ ಭೇಟಿಗಳೂ, ಮಹತ್ಸಾಧನೆಗಳೂ...

Update: 2016-06-17 17:56 GMT

ಎಲ್ಲ ಬಗೆಯ ಪ್ರಭುತ್ವಗಳಿಗೂ ತಮ್ಮ ಜನಪ್ರಿಯತೆಯನ್ನು ಉಳಿಸಿ ಕೊಳ್ಳುವ ಮತ್ತು ಹೆಚ್ಚಿಸಿಕೊಳ್ಳುವ ಅಪೇಕ್ಷೆ ಇರುತ್ತದೆ. ಆದರೆ ಸರ್ವಾಧಿಕಾರಿ ಪ್ರಭುತ್ವಗಳಿಗೆ ಇದು ತೀರಾ ಅನಿವಾರ್ಯ. ಅವು ತಮ್ಮ ಇರವು ಮತ್ತು ಸಾಧನೆಗಳನ್ನು ತೋರ್ಪಡಿಸದೆ ಇರಲು ಸಾಧ್ಯವೆ ಇಲ್ಲ. ಅಳಿವು ಉಳಿವಿನ ಪ್ರಶ್ನೆ! ಹೀಗಾಗಿ ಅನೇಕ ಜನಪರ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬ ಭ್ರಮೆಯನ್ನು ಬಿತ್ತುತ್ತಲೇ ಇರುತ್ತವೆ. ಕುರ್ಚಿಯನ್ನು ಭದ್ರಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತವೆ. ಅದಕ್ಕೋಸ್ಕರವೆ ಇಂತಹ ಪ್ರಭುತ್ವಗಳಲ್ಲಿ ವಾರ್ತಾ ಮತ್ತು ಪ್ರಸಾರ ವಿಭಾಗಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ. ಮೋದಿ ಸರಕಾರವೂ ಈ ನಿಯಮಕ್ಕೆ ಹೊರತಾಗಿಲ್ಲ. ಎತ್ತ ಕತ್ತು ತಿರುಗಿಸಿದರೂ, ಯಾವ ಪತ್ರಿಕೆ ಕೊಂಡುಕೊಂಡರೂ, ಯಾವುದೆ ಟಿವಿ ಚಾನಲ್ ಹಾಕಿದರೂ, ಸಾಧನೆಗಳ ಜಾಹೀರಾತಿನ ಮಹಾ ಪೂರವೇ ಅಪ್ಪಳಿಸುತ್ತದೆ. ಸೋಷಿಯಲ್ ಮೀಡಿಯವನ್ನೂ ಬಹಳ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಗಣನೀಯವಾಗಿ ಏನನ್ನೂ ಸಾಧಿಸದಿದ್ದರೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ, ನಾನಾ ಸಾಧನೆಗಳನ್ನು ಮಾಡಲಾಗುತ್ತಿದೆ ಎಂದು ಬಿಂಬಿಸಲು ಅಂಕಿಅಂಶಗಳಲ್ಲಿ ಆಟ ಆಡುತ್ತಿರುವುದನ್ನು, ಅತ್ಯುತ್ಪ್ರೇಕ್ಷಿತ ಪ್ರಚಾರದಲ್ಲಿ ತೊಡಗಿರುವುದನ್ನು ನಾವಿಂದು ಕಾಣಬಹುದು. ಉದಾಹರಣೆಗೆ ಜಿಡಿಪಿ ದರಗಳನ್ನೆ ತೆಗೆದುಕೊಳ್ಳಿ. 2015-16ರ ಅವಧಿಯಲ್ಲಿ ಭಾರತದ ಜಿಡಿಪಿ (ನಿವ್ವಳ ಸ್ವದೇಶೀ ಉತ್ಪನ್ನ) ಶೇಕಡಾ 7.6ಕ್ಕೆ ಏರಿದೆಯೆಂದು ಕೊಚ್ಚಿಕೊಳ್ಳಲಾಗಿದೆ. ಆದರೆ ನೆಲದ ವಾಸ್ತವಗಳನ್ನು ಗಮನಿಸುತ್ತಿರುವವರಿಗೆಲ್ಲ ಇವು ದಗಲಬಾಜಿ ಅಂಕಿ ಅಂಶಗಳು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಏಕೆಂದರೆ ಸ್ಥಿರ ಬಂಡವಾಳದ ಸೃಷ್ಟಿ ಇರಲಿ, ಉದ್ಯೋಗಗಳ ಸೃಷ್ಟಿ ಇರಲಿ, ಸರಕಾರದ ಖರ್ಚುವೆಚ್ಚಗಳಿರಲಿ, ಉದ್ದಿಮೆಗಳ ಬೆಳವಣಿಗೆ ಇರಲಿ, ಔದ್ಯಮಿಕ ಉತ್ಪಾದನೆ ಇರಲಿ ಎಲ್ಲವೂ ಇಳಿಮುಖವಾಗಿವೆ, ಆಹಾರಧಾನ್ಯಗಳ ಉತ್ಪಾದನೆ ಹೆಚ್ಚು ಕಡಿಮೆ ಸ್ಥಗಿತಗೊಂಡಿದೆ. ಪರಿಣಾಮವಾಗಿ ಜಿಡಿಪಿ ಮತ್ತು ಜಿಡಿಐ (ನಿವ್ವಳ ಸ್ವದೇಶೀ ಆದಾಯ) ನಡುವಿನ ಪರಕು (discrepancy) ದೊಡ್ಡ ಏರಿಕೆ ಕಂಡು ಶೇಕಡಾ 2.4ರಷ್ಟಾಗಿದೆ. ಆದುದರಿಂದ ಅಸಲಿ ಜಿಡಿಪಿ ದರ = ಶೇ. 7.6- ಶೇ. 2.4 ಅಂದರೆ ಬರೀ ಶೇ. 5.2! ಅಭಿವೃದ್ಧಿಯ ಹೆಸರೇಳಿ ಅಧಿಕಾರದ ಗದ್ದುಗೆಯೇರುವವರು ಮತದಾರರನ್ನು ವಂಚಿಸುವ ಪರಿ ನೋಡಾ!!

ಇನ್ನೊಂದು ಒಳ್ಳೆ ಉದಾಹರಣೆ ಎಂದರೆ ವಿದೇಶ ವ್ಯವಹಾರಗಳಲ್ಲಿ ಆಗಿರುವುದೆನ್ನಲಾದ ತಥಾಕಥಿತ ‘ಮಹತ್ಸಾಧನೆ’ಗಳು. ಹೆಸರಿಗೊಬ್ಬರು ವಿದೇಶ ವ್ಯವಹಾರಗಳ ಸಚಿವೆ ಇದ್ದರೂ ಅದು ಬರೀ ದಾಖಲೆಗೋಸ್ಕರ ಎಂದಾಗಿದೆ. ಹೆಚ್ಚುಕಡಿಮೆ ಎಲ್ಲಾ ಪ್ರಧಾನ ವಿದೇಶ ಸಂಚಾರಗಳನ್ನು ಮಾಡುತ್ತಿರುವುದು ಪ್ರಧಾನಿ ಮೋದಿಯೊಬ್ಬರೆ. ಆತ ವಿದೇಶಗಳ ಮುಖ್ಯಸ್ಥರನ್ನು ಖುದ್ದಾಗಿ ಭೇಟಿ ಮಾಡುತ್ತಿರುವುದರ ಹಿಂದೆ, ಅವರ ಜೊತೆ ಫೊಟೋಗೆ ಪೋಸ್ ಕೊಡುತ್ತಿರುವುದರ ಹಿಂದೆ, ಬರಾಕ್ ಎಂದು ಸಂಬೋಧಿಸುವುದರ ಹಿಂದೆ ಕೀಳರಿಮೆಯ ಭಾವನೆಯೊಂದು ಇರುವಂತಿದೆ. ಅಷ್ಟೊಂದು ಉತ್ತಮ ಹಿನ್ನೆಲೆಯಿಂದ ಬಂದಿರದ ನಾಯಕ ನೊಬ್ಬ ವಿಶ್ವದ ಗಣ್ಯಾತಿಗಣ್ಯರೊಂದಿಗೆ ಹಸ್ತಲಾಘವ, ಮಾತುಕತೆ ಇತ್ಯಾದಿ ನಡೆಸುವುದೇ ಬಹುಶಃ ಒಂದು ವಿಧದ ಧನ್ಯತಾ ಮನೋಭಾವವನ್ನು ತಂದುಕೊಡುತ್ತಿರಬಹುದು. ಈ ಎಲ್ಲ ಭೇಟಿಗಳ ವೇಳೆ ಹೇಳಿಕೊಳ್ಳುವಂತಹ ಸಾಧನೆಗಳೇನೂ ಇರದಿದ್ದರೂ ಸರಕಾರದ ಪ್ರಚಾರಯಂತ್ರದ ಮೂಲಕ ಅವೆಲ್ಲ ಅತ್ಯಂತ ಫಲಪ್ರದ ಭೇಟಿಗಳೆಂದು ಟಾಂಟಾಂ ಮಾಡಲಾಗುತ್ತಿದೆ. ಹ್ಞಾಂ, ಭಟ್ಟಂಗಿ ಕಾರ್ಪೊರೇಟುಗಳಿಗೆ ಫಲಪ್ರದವಿರಬಹುದೇನೊ! ಈಗಾಗಲೆ ಇರಾನ್ ಜತೆಗಿನ ಒಪ್ಪಂದದ ಪೊಳ್ಳುತನ ಬಟಾಬಯಲಾಗಿದೆ. ಇತ್ತೀಚೆಗೆ ಸಂಯುಕ್ತ ಅರಬ್ ಸಂಸ್ಥಾನಗಳ (ಯುಎಇ) ಆಡಳಿತ ಪ್ರತಿ ವರ್ಷವೂ ಮಾಡುವಂತೆ ಈ ಬಾರಿಯೂ ರಮಝಾನ್‌ಗೆ ಮುನ್ನ ಹಲವಾರು ಭಾರತೀಯ ಖೈದಿಗಳನ್ನು ಬಿಡುಗಡೆಗೊಳಿಸಿತು. ಕಾಕತಾಳೀಯವಾಗಿ ಮೋದಿ ಮಹಾಶಯರೂ ಅಲ್ಲೇ ಇದ್ದ ಸಮಯ ಅದಾಗಿತ್ತು. ಆ ಕೂಡಲೆ ಕೈದಿಗಳ ಬಿಡುಗಡೆಗೆ ಮೋದಿ ಭೇಟಿಯೇ ಕಾರಣ ವೆಂದು ಟ್ವೀಟ್ ಮಾಡಿದ ಸುಷ್ಮಾಜಿ ತನ್ನ ತಪ್ಪಿನ ಅರಿವಾಗುತ್ತಲೆ ಅದನ್ನು ಅಳಿಸಿದರು. ಇದರ ಹಿಂದೆ ಮುಜುಗರ ಉಂಟುಮಾಡುವ ಉದ್ದೇಶವೂ ಇರಬಹುದು. ಅಡ್ವಾಣಿ ಬಣಕ್ಕೆ ಸೇರಿದ ಸುಷ್ಮಾ ಮತ್ತು ಮೋದಿ ನಡುವಿನ ಬಾಂಧವ್ಯ ಅಷ್ಟಕ್ಕಷ್ಟೆ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ. 

ಮೋದಿಯ ಇತ್ತೀಚೆಗಿನ ಅಮೆರಿಕ ಭೇಟಿಯನ್ನೂ ಮಾಧ್ಯಮಗಳ ಮೂಲಕ ಅತಿಯಾಗಿ ವೈಭವೀಕರಿಸಲಾಗಿದೆ. ಭಾರತ-ಅಮೆರಿಕ ಮಾತುಕತೆಗಳ ತರುವಾಯದ ಸುದೀರ್ಘ ಜಂಟಿ ಹೇಳಿಕೆಯನ್ನು ನೋಡಿದಾಗ ಮೇಲ್ನೋಟಕ್ಕೆ ಅದೇನೋ ಮಹತ್ತರ ಸಾಧನೆಗಳಾಗಿರುವಂತೆ ತೋರಿಬರಬಹುದು. ನಿಜವಾಗಿ ಅಲ್ಲಿ ಹೇಳಿಕೊಳ್ಳುವಂತಹ ಸಾಧನೆ ಏನೂ ಆಗಿಲ್ಲ. ಒಂದೇ ಒಂದು ಗಮನಾರ್ಹ ಅಂಶವೆಂದರೆ ಕಳ್ಳಸಾಗಣೆ ಮೂಲಕ ಅಮೆರಿಕ ತಲುಪಿದ್ದ ಕೆಲವೊಂದು ಅಮೂಲ್ಯ ಮೂರ್ತಿಗಳನ್ನು ಭಾರತಕ್ಕೆ ಹಿಂದಿರುಗಿಸಲಾಗಿದೆ. ವಾಸ್ತವದಲ್ಲಿ ಜಂಟಿ ಹೇಳಿಕೆ ಬರಡುಬರಡಾಗಿದೆ. ವಿಶ್ವ ವಾಣಿಜ್ಯ ಮಂಡಳಿಯ ಪ್ರಸ್ತಾಪವನ್ನೇ ಮಾಡಲಾಗಿಲ್ಲ. ಮಾಲಿನ್ಯರಹಿತ ಮತ್ತು ಸೌರಶಕ್ತಿ ಕಾರ್ಯಕ್ರಮಗಳು, ಭಾರತವನ್ನು ಪ್ರಮುಖ ರಕ್ಷಣಾ ಸಹಭಾಗಿ ಎಂದು ಗುರುತಿಸಿರುವುದು, ಸಾಗಣೆ ವಿಮಾನ ತಂತ್ರಜ್ಞಾನದಲ್ಲಿನ ಸಹಕಾರದ ವ್ಯಾಪ್ತಿಗೆ ಮಾಹಿತಿ ವಿನಿಮಯದ ಸೇರ್ಪಡೆ, ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗಳಲ್ಲಿ ಇನ್ನಷ್ಟು ಸಹಕಾರ, ಎನ್‌ಎಸ್‌ಜಿ (NSG, ಪರಮಾಣು ಪೂರೈಕೆದಾರರ ಗುಂಪು), ಎಪಿಇಸಿ (APEC ಏಶ್ಯಾ ಪೆಸಿಫಿಕ್ ಆರ್ಥಿಕ ಸಹಕಾರ) ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗಳ ಸದಸ್ಯತ್ವ ಪಡೆಯಲು ಅಮೆರಿಕದ ಬೆಂಬಲ ಇವೇ ಆ ಮಹತ್ಸಾಧನೆಗಳು! ಆದರೆ ಇದರಿಂದಾಗಿ ಭಾರತದ ಮಾರುಕಟ್ಟೆ ಅಮೆರಿಕದ ಕಾರ್ಪೊರೇಟುಗಳ ಆಡುಂಬೊಲವಾಗಲಿದೆ ಮತ್ತು ಭಾರತಕ್ಕೆ ಶಸ್ತ್ರಾಸ್ತ್ರಗಳ ಮಾರಾಟ ಇನ್ನಷ್ಟು ವೃದ್ಧಿಸಲಿದೆ. ಇದರರ್ಥ ಈ ಜಂಟಿ ಒಪ್ಪಂದ ಭಾರತಕ್ಕಿಂತಲೂ ಅಮೆರಿಕಕ್ಕೇ ಹೆಚ್ಚು ಲಾಭದಾಯಕವಾಗಲಿದೆ.

 ಭಾರತ-ಅಮೆರಿಕ ಒಪ್ಪಂದದ ಫಲವಾಗಿ ಭಾರತಕ್ಕೆ ‘ಪ್ರಮುಖ ರಕ್ಷಣಾ ಸಹಭಾಗಿ’ ಸ್ಥಾನಮಾನ ದೊರೆಯಲಿದೆಯಂತೆ. ಅರ್ಥಾತ್ ಭಾರತ ಅಮೆರಿಕದ ಮಿತ್ರರಾಷ್ಟ್ರಗಳ ಸಾಲಿಗೆ ಸೇರಲಿದೆಯಂತೆ. ಲೆಕ್ಕ ಪ್ರಕಾರ ಯಾವುದೆ ‘ಪ್ರಮುಖ ರಕ್ಷಣಾ ಸಹಭಾಗಿ’ ದೇಶಕ್ಕೆ ಶಸ್ತ್ರಾಸ್ತ್ರಗಳು ಹಾಗೂ ಸಂಬಂಧಪಟ್ಟ ತಂತ್ರಜ್ಞಾನಗಳ ಖರೀದಿ ಮತ್ತು ಸಹಕಾರದ ವಿಷಯದಲ್ಲಿ ಪ್ರಾಶಸ್ತ್ಯ ದೊರೆಯಬೇಕು. ಆದರೂ ಬೆಲೆಗಳ ವಿಷಯದಲ್ಲಿ ಯಾವುದೆ ರಿಯಾಯಿತಿ ಇರುವುದಿಲ್ಲ ಮತ್ತು ತಂತ್ರಜ್ಞಾನವನ್ನೂ ಮುಕ್ತವಾಗಿ ನೀಡಲಾಗುವುದಿಲ್ಲ. ವಾಸ್ತವ ಏನೆಂದರೆ ಅಮೆರಿಕ ತನ್ನ ನಾಟೊ ಮಿತ್ರರಾಷ್ಟ್ರಗಳಿಗೇ ತಂತ್ರಜ್ಞಾನವನ್ನು ಸರಿಯಾಗಿ ಒದಗಿಸಿಲ್ಲ. ಹೀಗಿರುವಾಗ ಭಾರತದೊಂದಿಗೆ ಜಂಟಿ ವಿನ್ಯಾಸ, ಜಂಟಿ ಉತ್ಪಾದನೆಗಳ ಮಾತಂತೂ ಗಗನಕುಸುಮವಾಗುಳಿಯುವ ಸಾಧ್ಯತೆಗಳೇ ಹೆಚ್ಚು. ಇದೀಗ ಅಮೆರಿಕದ ಸಂಸತ್ತು ಭಾರತಕ್ಕೆ ‘ಪ್ರಮುಖ ರಕ್ಷಣಾ ಸಹಭಾಗಿ’ ಸ್ಥಾನಮಾನ ನೀಡಲು ನಿರಾಕರಿಸಿರುವುದು ಬಾನೆತ್ತರಕ್ಕೆ ಏರಿದ್ದ ಅಂತೆಕಂತೆಗಳ ಬಲೂನಿಗೆ ಸೂಜಿ ಚುಚ್ಚಿದಂತಾಗಿದೆ!

ಎನ್‌ಎಸ್‌ಜಿ, ಎಪಿಇಸಿ, ಭದ್ರತಾ ಮಂಡಳಿಗಳ ಸದಸ್ಯತ್ವ ಪಡೆಯಲು ಅಮೆರಿಕ ನಮಗೆ ಬೆಂಬಲ ನೀಡುವ ವಿಷಯದಲ್ಲಿ ಹೊಸದೇನೂ ಇಲ್ಲ. ಹಿಂದಿನ ಜಂಟಿ ಹೇಳಿಕೆಗಳಲ್ಲಿ ಇರುವುದನ್ನೇ ಇಲ್ಲಿ ಪುನರುಚ್ಚರಿಸಲಾಗಿದೆ ಅಷ್ಟೆ. ಅಮೆರಿಕದಿಂದ ಇವೆಲ್ಲವುಗಳ ಸದಸ್ಯತ್ವದ ಖಾತರಿ ನೀಡಲು ಸಾಧ್ಯವಿಲ್ಲ ಅಥವಾ ಮನಸ್ಸಿರಲಿಕ್ಕಿಲ್ಲ. ಚೀನಾ ಅಂತೂ ಭಾರತದ ಸದಸ್ಯತ್ವವನ್ನು ವಿರೋಧಿಸುವುದು ಖಚಿತ. 

ನಿರ್ದಿಷ್ಟವಾಗಿ ಎನ್‌ಎಸ್‌ಜಿ ವಿಷಯಕ್ಕೆ ಬಂದರೆ ಅದೊಂದು ಅನೌಪಚಾರಿಕ ಗುಂಪು. ಅದು ಪರಮಾಣು ಅಸ್ತ್ರಗಳ ತಯಾರಿಕೆಗೆ ಬಳಸಬಹುದಾದ ಸಾಮಗ್ರಿ, ಸಲಕರಣೆ, ತಂತ್ರಜ್ಞಾನಗಳ ನಿರ್ಯಾತವನ್ನು ನಿಯಂತ್ರಿಸುವ ಮೂಲಕ ಪರಮಾಣು ಅಸ್ತ್ರಗಳ ಪ್ರಸರಣವನ್ನು ತಡೆಯಲೆತ್ನಿಸುತ್ತದೆ. ಅದರ ಹುಟ್ಟಿಗೆ ಭಾರತವೆ ಕಾರಣ! 1974ರ ಪೋಕ್ರಾನ್ ಪರೀಕ್ಷೆಯ ನಂತರ ಭಾರತ ಪರಮಾಣು ಅಸ್ತ್ರಗಳನ್ನು ಉತ್ಪಾದಿಸದಂತೆ ತಡೆಯುವುದಕ್ಕೋಸ್ಕರ ಎನ್‌ಎಸ್‌ಜಿಯನ್ನು ಸ್ಥಾಪಿಸಲಾ ಯಿತು. ಅದರ ಸದಸ್ಯರೆಲ್ಲರೂ (ಪ್ರಸಕ್ತ 48) ಪರಮಾಣು ಪ್ರಸರಣ ತಡೆ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕುವುದು ಕಡ್ಡಾಯ. ಅಲ್ಲಿ ಸದಸ್ಯತ್ವವನ್ನು ಮತ ಚಲಾವಣೆ ಮೂಲಕ ನಿರ್ಧರಿಸುವ ಕ್ರಮ ಇಲ್ಲ. ಹೊಸ ಸದಸ್ಯರ ಸೇರ್ಪಡೆ ಒಳಗೊಂಡಂತೆ ಎಲ್ಲ ನಿರ್ಣಯಗಳನ್ನು ಒಮ್ಮತದಿಂದ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಸ್ವಿಝರ್‌ಲ್ಯಾಂಡ್, ಮೆಕ್ಸಿಕೊದಂತಹ ದೇಶಗಳು ವೈಯಕ್ತಿಕವಾಗಿ ಯಾವುದೇ ಪ್ರಭಾವ ಬೀರಲಾರವು. ಇದನ್ನೆಲ್ಲ ಬದಲಾಯಿಸಲು ಅಮೆರಿಕಕ್ಕೆ ಸಾಧ್ಯವಿಲ್ಲದಿದ್ದುದರಿಂದ ನೇರವಾಗಿ ಅದೇನು ಮಾಡಬಲ್ಲುದೆಂದು ತಿಳಿದಿಲ್ಲ. ನಿಜ ಹೇಳಬೇಕೆಂದರೆ ಎನ್‌ಎಸ್‌ಜಿ ಹೇಳಿಕೊಳ್ಳುವಷ್ಟು ಪರಿಣಾಮಕಾರಿ ಆಗಿಲ್ಲ. ಚೀನಾದಿಂದ ಎರಡು ಹೊಸ ರಿಯಾಕ್ಟರ್‌ಗಳು ಪಾಕಿಸ್ತಾನಕ್ಕೆ ರವಾನೆಯಾದಾಗ ಅದನ್ನು ಪ್ರಶ್ನಿಸಲಾಗಿಲ್ಲ. ತಂತ್ರಜ್ಞಾನ ಪ್ರಸರಣವನ್ನು ತಡೆಯುವಲ್ಲಿಯೂ ಎನ್‌ಎಸ್‌ಜಿ ಅಷ್ಟೊಂದು ಯಶಸ್ವಿಯಾಗಿಲ್ಲ. ಭಾರತ ಸೇರಬಯಸುತ್ತಿರುವುದು ಪಾಕಿಸ್ತಾನವನ್ನು ಹೊರಗಿಡುವ ಸಲುವಾಗಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಲಾಗಿದೆ. 

ಭಾರತ ಕಳೆದ ಸುಮಾರು 30 ವರ್ಷಗಳಿಂದಲೂ ಸದಸ್ಯತ್ವಕ್ಕಾಗಿ ಪ್ರಯತ್ನಿಸುತ್ತಿದೆ. ಒಂದು ವೇಳೆ ಸದಸ್ಯತ್ವ ಸಿಕ್ಕಿತೆಂದು ಇಟ್ಟುಕೊಂಡರೂ ಅದರಿಂದ ವಿಶೇಷ ಪ್ರಯೋಜನವೇನೂ ಇಲ್ಲ. ಯುರೇನಿಯಂ ಇಂಧನ ಖರೀದಿ ವಿಚಾರದಲ್ಲಿ ಈಗಾಗಲೆ ಅಮೆರಿಕದ ಸಹಾಯದಿಂದ ರಿಯಾ ಯಿತಿ ದೊರಕಿಸಿಕೊಂಡಾಗಿದೆ. ತಂತ್ರಜ್ಞಾನವನ್ನು ಹೊರದೇಶಗಳಿಗೆ ವರ್ಗಾಯಿಸುವುದಿಲ್ಲವೆಂದು ವಾಗ್ದಾನ ಮಾಡಿರುವುದರಿಂದ ಸದಸ್ಯತ್ವ ಸಿಕ್ಕಿದಾಕ್ಷಣ ಪರಮಾಣು ಸಾಮಗ್ರಿ, ಸ್ಥಾವರ ಹಾಗೂ ತಂತ್ರಜ್ಞಾನಗಳಲ್ಲಿ ವ್ಯಾಪಾರ, ವಹಿವಾಟು ಪ್ರಾರಂಭಿಸುವ ಹಾಗಿಲ್ಲ. ಇದಲ್ಲದೆ ಭಾರತದಲ್ಲಿರುವ ಪರಮಾಣು ವಿದಳನ ವಸ್ತುಗಳ ದಾಸ್ತಾನಿನ ಮೇಲೂ ನಿರ್ಬಂಧಗಳನ್ನು ಹೇರಲಾಗುವುದು. ಮತ್ತೊಂದು ಸಂಗತಿ ಏನೆಂದರೆ ಭಾರತ ಇದುವರೆಗೂ ಪರಮಾಣು ಪ್ರಸರಣ ತಡೆ ಒಪ್ಪಂದಕ್ಕೆ ಸಹಿಹಾಕಲು ನಿರಾಕರಿಸಿದೆ. ಇದಕ್ಕೆ ಚೀನಾ ಮತ್ತು ಇತರ ದೇಶಗಳು ಆಕ್ಷೇಪ ಎತ್ತಿವೆ. ಎನ್‌ಎಸ್‌ಜಿ ಸದಸ್ಯನಾಗುತ್ತಿದ್ದಂತೆ ಭಾರತದ ಮೇಲೆ ಎನ್‌ಪಿಟಿ ಮಾತ್ರವಲ್ಲ ಸಿಟಿಬಿಟಿಗೂ (CTBT ಸಮಗ್ರ ಪರೀಕ್ಷ್ಷಾ ನಿಷೇಧ ಒಡಂಬಡಿಕೆ) ಸಹಿಹಾಕಲು ಒತ್ತಡ ಪ್ರಾರಂಭವಾಗಲಿದೆ.

ಭಾರತವನ್ನು ಎನ್‌ಎಸ್‌ಜಿಗೆ ಸೇರಿಸುವ ಪ್ರಸ್ತಾಪವನ್ನು ಅಮೆರಿಕ 2010ರಷ್ಟು ಹಿಂದೆಯೆ ಮುಂದಿಟ್ಟಿದೆ. ವಾಸ್ತವವಾಗಿ ಇದರ ಹಿಂದೆ ಅಮೆರಿಕದ ಸ್ವಾರ್ಥ ಅಡಗಿದೆ. ಭಾರತಕ್ಕೆ ಪರಮಾಣು ಸ್ಥಾವರಗಳು ಮತ್ತಿತರ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿದಂತೆ ಹಲವಾರು ಗುತ್ತಿಗೆಗಳನ್ನು ತನ್ನದಾಗಿಸುವುದೇ ಅದರ ಮುಖ್ಯ ಉದ್ದೇಶವಾಗಿತ್ತು. ಈ ಹೊತ್ತಿನ ಜಂಟಿ ಹೇಳಿಕೆ ಇದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ. ಅದರ ಪ್ರಕಾರ ಭಾರತದಲ್ಲಿ ಆರು ಹೊಸ ಪರಮಾಣು ಸ್ಥಾವರಗಳ ಸ್ಥಾಪನೆಗೆ ಪೂರ್ವಭಾವಿ ಸಿದ್ಧತೆಗಳನ್ನು ಪ್ರಾರಂಭಿಸಲಾಗುವುದು. ಇದನ್ನು ಭಾರೀ ದೊಡ್ಡ ಸಾಧನೆ ಎಂಬಂತೆ ಮಾಧ್ಯಮಗಳ ಮೂಲಕ ತುತ್ತೂರಿ ಊದಲಾಗಿದೆ. ವಾಸ್ತವ ಏನೆಂದರೆ ಸ್ಥಾವರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ 8 ವರ್ಷಗಳಿಂದ ವೆಸ್ಟಿಂಗ್‌ಹೌಸ್ ಸಂಸ್ಥೆ ಜೊತೆ ಮಾತುಕತೆಗಳು ನಡೆಯುತ್ತಿವೆ. ಸ್ಥಾವರದ ಜಾಗವನ್ನು ಇತ್ತೀಚೆಗೆ ಗುಜರಾತ್‌ನಿಂದ ಆಂಧ್ರಕ್ಕೆ ಬದಲಾಯಿಸಲಾಗಿದೆ. ಈಗ ಈ ಹೊಸ ಜಾಗಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಪೂರ್ವಭಾವಿ ಕೆಲಸ ಪ್ರಾರಂಭಿಸಲಾಗುವುದು ಅಷ್ಟೆ. ವೆಸ್ಟಿಂಗ್‌ಹೌಸ್ ಕಂಪೆನಿಯ ರಿಯಾಕ್ಟರ್‌ಗಳು ಐದನೆ ಪೀಳಿಗೆಯವು ಎಂದು ಬಂಬಡಾ ಬಜಾಯಿಸಲಾಗಿದೆ. ವಾಸ್ತವದಲ್ಲಿ ಇವು ಮೂರನೆ ಪೀಳಿಗೆಯವು.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News