ಮುಂದುವರಿದ ವಿದೇಶ ಭೇಟಿಗಳೂ, ಮಹತ್ಸಾಧನೆಗಳೂ...

Update: 2016-06-18 18:05 GMT

ಅಪಾರ ಪ್ರಮಾಣದ ಅಪಾಯಗಳಿರುವುದರಿಂದಾಗಿ ಇಂದು ಪರಮಾಣು ಚಾಲಿತ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಬೇಡಿಕೆ ಇಲ್ಲ. ಇವತ್ತು ಸೌರ ಮತ್ತು ಪವನ ಚಾಲಿತ ತಂತ್ರಜ್ಞಾನಗಳು ಮುಂಚೂಣಿಯಲ್ಲಿವೆ. ರಶ್ಯಾದ ಚರ್ನೋಬಿಲ್, ಜಪಾನಿನ ಪುಕುಷಿಮಾ, ಅಮೆರಿಕದ ತ್ರೀ ಮೈಲ್ ದ್ವೀಪ ದುರಂತಗಳ ನಂತರ ಚೀನಾ, ರಶ್ಯಾ ಮತ್ತು ಭಾರತ ಬಿಟ್ಟರೆ ಇನ್ಯಾವ ದೇಶವೂ ಹೊಸ ಪರಮಾಣು ಸ್ಥಾವರಗಳನ್ನು ನಿರ್ಮಿಸುತ್ತಿಲ್ಲ. ಖುದ್ದು ಅಮೆರಿಕ ಕೂಡ ಹೊಸ ಪರಮಾಣು ಸ್ಥಾವರಗಳನ್ನು ಸ್ಥಾಪಿಸುತ್ತಿಲ್ಲ. ಹೀಗೆ ಅಮೆರಿಕ, ಯುರೋಪ್‌ಗಳಲ್ಲಿ ಬೇಡಿಕೆ ಇಲ್ಲದ ಪರಿಸ್ಥಿತಿಯಲ್ಲಿ ಅಲ್ಲಿನ ವೆಸ್ಟಿಂಗ್‌ಹೌಸ್, ಜನರಲ್ ಇಲೆಕ್ಟ್ರಿಕ್‌ಗಳಂತಹ ಕಂಪೆನಿಗಳು ಅಳಿವಿನಂಚಿನಲ್ಲಿವೆೆ. ವಿಷಯ ಹೀಗಿರುವಾಗ ಭಾರತ ಆರು ಸ್ಥಾವರಗಳನ್ನು ಖರೀದಿಸುತ್ತಿರುವುದು ಅಪಾಯಕಾರಿ ಉದ್ದಿಮೆಯೊಂದರ ಉಳಿವಿಗೆ ಸಹಕರಿಸಿದಂತೆ. ಅಸಲಿಗೆ ಭಾರತಕ್ಕೆ ಪರಮಾಣು ಇಂಧನ ಲಭ್ಯವಾಗುವಂತೆ ಮಾಡಿರುವುದಕ್ಕೆ ಮತ್ತು ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಸಹಕರಿಸುತ್ತಿರುವುದಕ್ಕೆ ಪ್ರತಿಯಾಗಿ ಅಮೆರಿಕದ ಋಣವನ್ನು ತೀರಿಸುವ ಬಗೆ ಇದಾಗಿದೆ. ಆದರೆ ಈ ನಿರ್ಧಾರದಿಂದಾಗಿ ಭಾರತದ ಜನತೆ ಅಪಾರ ಬೆಲೆ ತೆರಬೇಕಾಗಿ ಬರಬಹುದು. ಒಂದು, ಪರಮಾಣು ಸ್ಥಾವರಗಳ ಜೊತೆಗೆ ಇರುವಂತಹ ಸಂಭಾವ್ಯ ದುರಂತಗಳ ಬುತ್ತಿ. ಎರಡು, ವಿಪರೀತ ದುಬಾರಿಯೂ ಮತ್ತು ತುಂಬಾ ಸಮಯ ತಗಲುವಂಥದ್ದೂ ಆಗಿರುವ ಈ ಯೋಜನೆಗೆ 2.8 ಲಕ್ಷ ಕೋಟಿ ರೂಪಾಯಿಗಳಿಗೂ ಮಿಕ್ಕಿ ವೆಚ್ಚ ಮಾಡಬೇಕಾಗುತ್ತದೆ. ಲೆಕ್ಕ ಹಾಕಿದಾಗ ಇದರಿಂದ ಉತ್ಪಾದನೆಯಾಗುವ ವಿದ್ಯುತ್ತಿನ ಬೆಲೆ ಪ್ರತಿ ಯುನಿಟ್‌ಗೆ ಏನಿಲ್ಲೆಂದರೂ ರೂ 12-14 ಆಗಲಿದೆ. ಸೌರ, ಪವನ ವಿದ್ಯುತ್‌ಗಿಂತ ಎರಡರಿಂದ ಮೂರು ಪಟ್ಟು ದುಬಾರಿಯಾಗಿರುವ ಈ ವಿದ್ಯುತ್ ನಮಗೇಕೆ ಬೇಕು? ಭಾರತವನ್ನು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯೊಳಗೆ (ಎಂಟಿಸಿಆರ್) ಸೇರಿಸಿಕೊಂಡಿರುವುದಕ್ಕೆ ಉಪ್ಪುಖಾರ ಹಚ್ಚಿದ ಮೋದಿ ಸರಕಾರ ಅದೇ ದೊಡ್ಡ ಸಾಧನೆ ಎಂಬಂತೆ ನಗಾರಿ ಬಾರಿಸುತ್ತಿದೆ. ಇಲ್ಲಿಯ ತನಕ ಭಾರತವನ್ನು ಸೇರಿಸಿಕೊಳ್ಳಲು ಒಪ್ಪಿರದ ಇಟಲಿ ತನ್ನ ಆಕ್ಷೇಪವನ್ನು ಹಿಂದೆಗೆದುಕೊಳ್ಳಲು ಭಾರತ ತೆತ್ತ ಬೆಲೆ ಏನು ಗೊತ್ತೇ? ಭಾರತದಲ್ಲಿ ಬಂಧಿಸಲ್ಪಟ್ಟಿದ್ದ ನಾವಿಕರ ಬಿಡುಗಡೆ! ಎಂಟಿಸಿಆರ್ ಸದಸ್ಯತ್ವ ದೊರೆತ ಬಳಿಕ ಎನ್‌ಎಸ್‌ಜಿ ಸದಸ್ಯತ್ವ ಸುಲಭ ಎನ್ನಲಾಗುತ್ತಿದೆ. ಆದರೆ ಚೀನಾದ ಆಕ್ಷೇಪ ಇರುವ ತನಕ ಏನೂ ಮಾಡಲಾಗದು. ಚೀನಾ 2004ರಿಂದಲೂ ಎಂಟಿಸಿಆರ್ ಸದಸ್ಯತ್ವಕ್ಕಾಗಿ ಕಾಯುತ್ತಿದೆ. ಆದುದರಿಂದ ಭಾರತ ಎಂಟಿಸಿಆರ್ ಸದಸ್ಯನಾಗಿರುವುದು ಚೀನಾದ ಮೇಲೆ ಹಿಡಿತ ಸಾಧಿಸಲು ಎಂಬ ಗುಮಾನಿ ಇದೆ. ಏಕೆಂದರೆ ಇದೀಗ ತಿಳಿದುಬಂದಿರುವಂತೆ ಚೀನಾಕ್ಕೆ ಸದಸ್ಯತ್ವದ ಕೊಡುಗೆ ಮತ್ತು ಭಾರತದಲ್ಲಿ ಅಣು ವಿದ್ಯುತ್ ಸ್ಥಾವರಗಳ ನಿರ್ಮಾಣ ಸೇರಿದಂತೆ ನಾನಾ ಆಮಿಷಗಳನ್ನು ಒಡ್ಡಲಾಗುತ್ತಿದೆ. ಆದರೆ ಈ ತಂತ್ರಗಳು ಎಷ್ಟರ ಮಟ್ಟಿಗೆ ಫಲಿಸಬಹುದೆಂದು ಹೇಳಬರುವುದಿಲ್ಲ.

ಇನ್ನು ಎಪಿಇಸಿ ಸದಸ್ಯತ್ವದ ವಿಚಾರಕ್ಕೆ ಬಂದರೆ ಒಕ್ಕೂಟವನ್ನು ಆರಂಭಿಸಿದಾಗಲೇ ಭಾರತವನ್ನು ಸೇರಿಸಿಕೊಳ್ಳಬೇಕಾಗಿತ್ತಾದರೂ ಅದಾಗಿಲ್ಲ. ತದನಂತರ ಹತ್ತು ವರ್ಷಗಳ ಕಾಲ ಹೊಸ ಸದಸ್ಯರನ್ನು ಸೇರಿಸಲು ಅವಕಾಶ ಇಲ್ಲವೆಂಬ ನಿಯಮವನ್ನೂ ಜಾರಿಗೊಳಿಸಲಾಯಿತು. ಈಗ ಆ ಅವಧಿ ಮುಗಿದಿದ್ದರೂ ಭಾರತವನ್ನು ಆಹ್ವಾನಿಸುವ ಸೂಚನೆಗಳಿನ್ನೂ ಕಂಡುಬಂದಿಲ್ಲ. ಇಂತಹ ಗುಂಪನ್ನು ಸೇರುವುದರಿಂದ ಸಿಗಬಹುದೆನ್ನಲಾದ ಪ್ರತಿಷ್ಠೆ ಬಿಟ್ಟರೆ ಭಾರತಕ್ಕೇನೂ ಲಾಭವಿಲ್ಲ. ಅಮೆರಿಕ-ಭಾರತ ಜಂಟಿ ಹೇಳಿಕೆಯಲ್ಲಿ ಅಮೆರಿಕದ ಸೈನ್ಯ ಭಾರತದ ಮಿಲಿಟರಿ ನೆಲೆಗಳನ್ನು ಬಳಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದ ಲೆಮಾ ಒಪ್ಪಂದ ಅಂತಿಮಗೊಂಡಿರುವುದನ್ನು ಉಭಯ ದೇಶಗಳು ಸ್ವಾಗತಿಸಿವೆ ಎಂದಷ್ಟೆ ಹೇಳಲಾಗಿದೆ. ಗಮನಾರ್ಹ ಅಂಶವೆಂದರೆ ಒಪ್ಪಂದಕ್ಕೆ ಸಹಿ ಹಾಕಲಾಗಿಲ್ಲ. ಆಲಿಪ್ತ ನೀತಿಯನ್ನು ಅನುಸರಿಸುತ್ತ ಬಂದಿರುವ ಭಾರತ ಇದುವರೆಗೆ ಇಂತಹ ಮಿಲಿಟರಿ ಮೈತ್ರಿಗಳಿಂದ ದೂರ ಉಳಿದಿದೆ. ಒಂದು ವೇಳೆ ಇಂತಹದೊಂದು ಮೈತ್ರಿ ಏರ್ಪಟ್ಟರೆ ಪ್ರಾದೇಶಿಕ ಭದ್ರತಾ ವಾತಾವರಣ ಬದಲಾಗಿ ಅನೇಕ ರಾಷ್ಟ್ರಗಳೊಂದಿಗಿನ ಸಂಬಂಧಗಳು ಹಳಸಬಹುದು. ಈ ಎಲ್ಲ ಕಾರಣಗಳಿಗಾಗಿ ಲೆಮಾ ಒಪ್ಪಂದಕ್ಕೆ ಭಾರತದಲ್ಲಿ ಭಾರೀ ಪ್ರತಿರೋಧ ಏಳಲಿರುವುದು ಖಚಿತ. ಹೀಗಾಗಿ ಇದರಲ್ಲೇನೊ ಒಳಒಪ್ಪಂದ ಆಗಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಎನ್ನಾರೈಗಳು ಮೋದಿ ಸರಕಾರದ ಮೇಲೆ ಹೊಂದಿರುವ ಪ್ರಭಾವವನ್ನು ಬಳಸಿಕೊಂಡು ಮುಂದೊಂದು ದಿನ ಲೆಮಾ ಒಪ್ಪಂದಕ್ಕೆ ಸಹಿ ಹಾಕಿಸುವ ನಿರೀಕ್ಷೆ ಅಮೆರಿಕದ್ದೆಂದು ತೋರುತ್ತದೆ. ಭಾರತದ ಕಾರ್ಪೊರೇಟ್ ಕುಳಗಳು ಮತ್ತಿತರ ಗಣ್ಯ ವ್ಯಕ್ತಿಗಳ ಸಲುವಾಗೆಂದೇ ಉಭಯ ದೇಶಗಳ ನಡುವೆ ಒಂದು ಅನೌಪಚಾರಿಕ ಒಪ್ಪಂದಕ್ಕೆ ಸಹಿಹಾಕಲಾಗಿದೆ. ‘ಜಾಗತಿಕ ಪ್ರವೇಶಾಧಿಕಾರ ಯೋಜನೆ’ಯನ್ನು ಪರಿಪೂರ್ಣಗೊಳಿಸುವ ಒಪ್ಪಂದವಿದು. ಅಮೆರಿಕದ ವತಿಯಿಂದ ಕೆಲವು ಕ್ರಿಯಾಸರಣಿಗಳು ಪೂರ್ಣಗೊಂಡ ನಂತರ ಕೆಲವೊಂದು ‘ಆಯ್ದ’ ಭಾರತೀಯರು ಅಮೆರಿಕದ ಯಾವುದೇ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ತಕ್ಷಣ ಹೊರಗೆ ಹೋಗುವ ಸವಲತ್ತು ಅವರಿಗೆ ದೊರೆಯಲಿದೆ. ಅಮೆರಿಕದ ಸಂಸತ್ತಿನ 18 ಸದಸ್ಯರು ಅಲ್ಲಿನ ಸ್ಪೀಕರ್‌ಗೆ ಒಂದು ಪತ್ರ ಬರೆದು ಭಾರತದಲ್ಲಿ ದಶಕಗಳಿಂದಲೂ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತಿದ್ದು ಈಗಲೂ ಅದು ಮುಂದುವರಿದಿರುವುದರಿಂದ ಮೋದಿ, ಒಬಾಮ ನಡುವಿನ ಮಾತುಕತೆಗಳ ಸಮಯ ಆ ವಿಚಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ಒತ್ತಾಯಿಸಿದ್ದರು. ವಾಸ್ತವದಲ್ಲಿ ಮಾತುಕತೆಗಳ ವೇಳೆ ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಸರಕಾರೇತರ ಸಂಸ್ಥೆಗಳ ಮೇಲೆ ನಿರ್ಬಂಧ ವಿಧಿಸಿರುವ ವಿಷಯವನ್ನು ಎತ್ತಲಾಗಿದೆಯೆಂದು ಅಮೆರಿಕದ ಮೂಲಗಳು ತಿಳಿಸಿವೆ. ಅಷ್ಟೆ ಅಲ್ಲ, ಭಾರತದಲ್ಲಿ ಮಾನವಹಕ್ಕುಗಳ ಪ್ರಸಕ್ತ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲೆಂದು ಸಂಸತ್ತಿನಿಂದ ನೇಮಿಸಲ್ಪಟ್ಟ ಟಾಮ್ ಲಾಂಟೊಸ್ ಸಮಿತಿಯೂ ತನ್ನ ವಿಚಾರಣೆಯನ್ನು ಪ್ರಾರಂಭಿಸಿದೆ. ಭಾರತದ ಮತಾಂತರ ವಿರೋಧಿ ಕಾನೂನುಗಳು, ಕೋಮುವಾದಿಗಳಿಗೆ ಶಿಕ್ಷೆಯಿಂದ ರಕ್ಷೆ, ಮತೀಯವಾದಿಗಳ ಚರ್ಚ್ ದಾಳಿಗಳನ್ನು ಮೋದಿ ಸ್ಪಷ್ಟ ವಾಕ್ಯಗಳಲ್ಲಿ ಖಂಡಿಸದಿರುವುದು ಇವೇ ಮುಂತಾದ ವಿಷಯಗಳು ಸಮಿತಿಯ ಮುಂದೆ ಪ್ರಸ್ತಾಪವಾಗಿವೆ.

ವಿದೇಶಗಳಿಗೆ ಹೋಗಿ ಸ್ವದೇಶದ ಹಳೆ ಸರಕಾರಗಳನ್ನು ಹೀಗಳೆಯುವ ದುಷ್ಟ ಸಂಪ್ರದಾಯ ಪ್ರಾರಂಭಿಸಿ ಭಾರತದ ಮರ್ಯಾದೆಯನ್ನು ಹರಾಜಿಗಿಟ್ಟ ಮೋದಿ ಅಮೆರಿಕದಲ್ಲೂ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ. ಅಷ್ಟು ಮಾತ್ರವಲ್ಲ, ಈ ಬಾರಿ ಇದುವರೆಗೆ ಹಿಂದಿನ ಯಾವೊಬ್ಬ ಪ್ರಧಾನಿಯೂ ಮಾಡಿರದ ಇನ್ನೂ ಒಂದು ‘ಘನ’ ಕಾರ್ಯವನ್ನು ಮಾಡಿ ಭಾರತದ ಮಾನವನ್ನು ಸಂಪೂರ್ಣ ಬೀದಿಪಾಲು ಮಾಡಿದ್ದಾರೆ. ಆರ್ಲಿಂಗ್ಟನ್ ರಾಷ್ಟ್ರೀಯ ಸಮಾಧಿಗೆ ಹೋಗಿ ವಿಯೆಟ್ನಾಂ ಯುದ್ಧದಲ್ಲಿ ಮೃತಪಟ್ಟ ಅಜ್ಞಾತ ಸೈನಿಕರ ನೆನಪಿನಲ್ಲಿ ನಿರ್ಮಿಸಲಾದ ‘ಅಜ್ಞಾತರ ಸ್ಮಾರಕ’ಕ್ಕೆ ಹೂವಿನ ಹಾರ ಸಮರ್ಪಿಸಿದ್ದಾರೆ! ಬಳಿಕ ಅಮೆರಿಕದ ಸಂಸತ್ತಿನಲ್ಲಿ ಮಾತನಾಡುತ್ತಾ ‘‘ನಮ್ಮ ಸಂಬಂಧಗಳು ಇತಿಹಾಸದ ಅನಿಶ್ಚಯತೆಗಳನ್ನು ಜಯಿಸಿವೆ.’’ ಎಂದು ಸಾರಿದ್ದಾರೆ. ಅಮೆರಿಕದ ಅನ್ಯಾಯಯುತ ಆಕ್ರಮಣವನ್ನು ಸಮರ್ಥಿಸುವಂತಿರುವ ಮೋದಿಯ ನಡವಳಿಕೆ ಭಾರತಕ್ಕಷ್ಟೆ ಅಲ್ಲ, ಇಡೀ ವಿಶ್ವಕ್ಕೆ ಒಂದು ಕೆಟ್ಟ ಸಂದೇಶ ನೀಡಿದೆ. ಈಗ ಹೇಳಿ, ಇವೆಲ್ಲವೂ ಮಹತ್ಸಾಧನೆಗಳೇ?
***
(ಆಧಾರ: 11.6.2016ರ ಉ ಸಂಪಾದಕೀಯ; 9.6.2016ರ ‘ದ ಹಿಂದೂ’ನಲ್ಲಿ ಟಿ.ಪಿ. ಶ್ರೀನಿವಾಸನ್, ವರ್ಗೀಸ್ ಜಾರ್ಜ್; ಠ್ಚ್ಟಟ್ಝ್ಝ.ಜ್ಞಿನಲ್ಲಿ ಎಂ.ಕೆ.ಭದ್ರಕುಮಾರ್; ಘೆಛಿಡಿಠ್ಚ್ಝಜ್ಚಿನಲ್ಲಿ ಪ್ರಬೀರ್ ಪುರಕಾಯಸ್ಥರ ಲೇಖನಗಳು)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News