ಮತ್ತೊಬ್ಬ ಗಾಂಧಿ!

Update: 2016-06-18 18:31 GMT

ಮತ್ತೊಬ್ಬ ಗಾಂಧಿ!
ನೆಹರೂ- ಗಾಂಧಿ ಕುಟುಂಬಕ್ಕೆ ಸಂಘ ಪರಿವಾರದ ಉತ್ತರವಾಗಿದ್ದ ವರುಣ್‌ಗಾಂಧಿ ಇದೀಗ ಬಿಜೆಪಿಯಲ್ಲಿ ಮೂಲೆಗುಂಪಾಗುತ್ತಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವಿಚಾರದಲ್ಲಂತೂ ಇದು ಅಕ್ಷರಶಃ ನಿಜ. ಸುಲ್ತಾನಪುರ ಸಂಸದರಾಗಿರುವ ವರುಣ್ ಗಾಂಧಿಗೆ ಅಕ್ಷರಶಃ ಲಕ್ಷ್ಮಣರೇಖೆ ಎಳೆದಿದ್ದು, ಪಕ್ಷಕ್ಕೆ ಮಾಹಿತಿ ನೀಡದೆ, ಅವರ ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಯಾವುದೇ ಪ್ರಯೋಗಕ್ಕೆ ಕೈಹಾಕದಂತೆ ಪಕ್ಷದ ನಾಯಕತ್ವ ತಾಕೀತು ಮಾಡಿದೆ. ಉತ್ತರ ಪ್ರದೇಶ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗುವ ಕನಸು ಕಾಣುತ್ತಿರುವ ವರುಣ್‌ಗಾಂಧಿ, ಇತ್ತೀಚೆಗೆ ಅಲಹಾಬಾದ್‌ನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ವೇಳೆ, ರಾಜ್ಯದ ಉದ್ದಗಲಕ್ಕೂ ಕನಿಷ್ಠ ಪೋಸ್ಟರ್‌ಗಳಲ್ಲಿ ವಿಜೃಂಭಿಸಿದ್ದರು. ಇದು ಪಕ್ಷದ ವರಿಷ್ಠರ ಕೆಂಗಣ್ಣಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ವರುಣ್‌ಗಾಂಧಿ ಸ್ವತಃ ಚುನಾವಣಾ ಸಮೀಕ್ಷೆಗಳನ್ನು ಮಾಡಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಬಿಜೆಪಿಯಲ್ಲಿ ತಾವೇ ಸಮರ್ಥ ಹಾಗೂ ಜನಪ್ರಿಯ ಆಯ್ಕೆ ಎಂದು ಬಿಂಬಿಸಿಕೊಂಡಿದ್ದಾರೆ. ಆದರೆ ಪಕ್ಷದ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಮಿತ್ ಶಾ ಅವರಿಗೆ ಇದು ರುಚಿಸಿಲ್ಲ. ವರುಣ್‌ಗಾಂಧಿ ಬೆಂಬಲಿಗರು ಗಾಂಧಿಯನ್ನು ಬಿಂಬಿಸುವುದು ಅವರಿಗೆ ಪಥ್ಯವಾಗಿಲ್ಲ. ಆದರೆ ತಾಯಿ ಮೋದಿ ಸಂಪುಟದಲ್ಲಿ ಸಚಿವೆಯಾಗಿರುವುದರಿಂದ ಕೊನೆಕ್ಷಣದಲ್ಲಿ ವರುಣ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಸಂಪುಟ ಪುನಾರಚನೆ?
ದಿಲ್ಲಿಯ ಗಾಳಿ ಸುದ್ದಿಗಳು ಮತ್ತೆ ಗರಿಗೆದರಿವೆ. ದಿಲ್ಲಿಯ ವದಂತಿಗಳಿಗೆ ಅನುಗುಣವಾಗಿ ತಾವು ನಡೆದುಕೊಳ್ಳುವುದಿಲ್ಲ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸಾಬೀತುಪಡಿಸಿದ್ದಾರೆ. ಆದರೆ ಈ ಬಾರಿ ಅದು ವಿಭಿನ್ನ. ಈ ತಿಂಗಳ ಕೊನೆಯ ಒಳಗಾಗಿ ಸಂಪುಟ ಸರ್ಜರಿಗೆ ಮುಂದಾಗಿರುವುದು ಬಹುತೇಕ ನಿಚ್ಚಳ. ಆದರೆ ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಪ್ರಮುಖ ಖಾತೆಗಳಲ್ಲಿ ಬದಲಾವಣೆ ಸಾಧ್ಯತೆ ಕ್ಷೀಣ. ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಮತ್ತೆ ಗೋವಾ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ವದಂತಿಯನ್ನು ಕೆಲವರು ತಳ್ಳಿಹಾಕಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಪಂಜಾಬ್ ರಾಜ್ಯಗಳ ಚುನಾವಣೆ ಜತೆ ಗೋವಾದಲ್ಲೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಗೋವಾದಿಂದ ಸೃಷ್ಟಿಯಾಗಿರುವ ಸುದ್ದಿಗಳ ಪ್ರಕಾರ, ಪಾರಿಕ್ಕರ್ ಅವರು ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ಅವರ ಸ್ಥಾನವನ್ನು ಅಲಂಕರಿಸುವುದು ಖಚಿತ. ಆದರೆ ಈಗ ಎಲ್ಲರ ಗಮನ ಇರುವುದು ಉತ್ತರ ಪ್ರದೇಶದ ಬಗ್ಗೆ. ಈಗಾಗಲೇ ಕೇಂದ್ರ ಸಂಪುಟದಲ್ಲಿ ಸಿಂಹಪಾಲು ಪಡೆದಿರುವ ಉತ್ತರಪ್ರದೇಶ, 26 ಸಂಪುಟ ದರ್ಜೆ ಸಚಿವರ ಪೈಕಿ, ಪ್ರಧಾನಿ ಸೇರಿದಂತೆ ಆರು ಮಂದಿ ಈ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಗೃಹ ಮತ್ತು ರಕ್ಷಣಾ ಸಚಿವರೂ ಈ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಈ ರಾಜ್ಯದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಿರುವುದರಿಂದ ಹಾಗೂ ಮುಂದಿನ ವರ್ಷದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ರಾಜ್ಯಕ್ಕೆ ಮತ್ತಷ್ಟು ಪ್ರಾತಿನಿಧ್ಯ ಸಿಗುವ ಸೂಚನೆಗಳಿವೆ. ಈ ಬಾರಿಯಾದರೂ ಪ್ರಧಾನಿ ಸಂಪುಟ ಪುನಾರಚಿಸುತ್ತಾರೆಯೇ? ಕಾದು ನೋಡಿ.

ಮುಂಬೈ ಕಾಂಗ್ರೆಸ್ ಮತ್ತು ಕಾಮತ್
ಮುಂಬೈನಲ್ಲಿ ಕಾಂಗ್ರೆಸ್ ಪಕ್ಷ ಬಹುತೇಕ ಗಂಟುಮೂಟೆ ಕಟ್ಟಿದೆ ಎಂದು ಹೇಳಲಾಗುತ್ತಿದೆ. ಪಕ್ಷಕ್ಕೆ ಇತ್ತೀಚೆಗಿನ ಹಿನ್ನಡೆ ಎಂದರೆ, ಹಿರಿಯ ಮುಖಂಡ ಗುರುದಾಸ್ ಕಾಮತ್ ಅವರ ರಾಜೀನಾಮೆ. ಕಾಮತ್ ಎಐಸಿಸಿ ಕಾರ್ಯದರ್ಶಿಯಾಗಿ ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮಹಾರಾಷ್ಟ್ರದಲ್ಲಿ ಅವರ ಸ್ಥಾನ ಮುರಳಿ ದಿಯೋರಾ ಅವರಿಗೆ ಸರಿಸಾಟಿ. ರಾಜ್ಯ ಘಟಕದಲ್ಲಿ ಪ್ರಭಾವಿ ಮುಖಂಡರಾಗಿರುವ ಸಂಜಯ್ ನಿರುಪಮ್‌ಅವರು ಕಾಮತ್ ಬೆಂಬಲಿಗರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಮತ್‌ಗೆ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಉಂಟಾಯಿತು. 61 ವರ್ಷ ಯಾವುದೇ ಭಾರತೀಯ ರಾಜಕಾರಣಿಗಳಿಗೆ ನಿವೃತ್ತಿಯ ವಯಸ್ಸಲ್ಲದಿರುವುದರಿಂದ, ಇತರ ಪಕ್ಷಗಳು ಕಾಮತ್ ಅವರನ್ನು ಸೆಳೆಯುವ ಎಲ್ಲ ಸಾಧ್ಯತೆಗಳೂ ಇವೆ. ಈ ಆತಂಕ ಪಕ್ಷಾಧ್ಯಕ್ಷೆಯಾದ ಸೋನಿಯಾ ಅವರನ್ನೂ ಕಳವಳಕ್ಕೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಮತ್ ಅವರನ್ನು ಮತ್ತೆ ಪಕ್ಷದ ತೆಕ್ಕೆಗೆ ಬರುವಂತೆ ಮನವೊಲಿಸುವ ಪ್ರಯತ್ನ ನಡೆದಿದೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ನಗರಮಟ್ಟದಲ್ಲಿ ದೊಡ್ಡ ಬೆಂಬಲ ಹೊಂದಿರುವ ಕಾಮತ್ ಅವರಂಥ ನಾಯಕರಿಲ್ಲದಿದ್ದರೆ ನಿಜಕ್ಕೂ ಪಕ್ಷದ ಭವಿಷ್ಯ ಕರಾಳ.

ಕೇಜ್ರಿವಾಲ್ ಸರ್ವಾಧಿಕಾರಿ?
ದಿಲ್ಲಿ ಕಾರ್ಮಿಕ ಸಚಿವ ಗೋಪಾಲ್ ರಾಯ್ ಅವರ ಸಂಸದೀಯ ಕಾರ್ಯದರ್ಶಿ ಅಲ್ಕಾ ಲಂಬಾ ಅವರನ್ನು ಮಂಗಳವಾರ ರಾತ್ರಿ ಪಕ್ಷದ ವಕ್ತಾರ ಹುದ್ದೆಯಿಂದ ಕಿತ್ತೆಸೆಯಲಾಗಿದೆ. ಲಂಬಾ ವಿಶ್ಲೇಷಣೆಯೊಂದರಲ್ಲಿ ಪಕ್ಷದ ಚಿದಂಬರ ರಹಸ್ಯವನ್ನು ಬಹಿರಂಗಗೊಳಿಸಿದ್ದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸಾರಿಗೆ ಸಚಿವ ರಾಯ್, ಅನಾರೋಗ್ಯ ಕಾರಣ ನೀಡಿ ತಮ್ಮ ಹುದ್ದೆ ತ್ಯಜಿಸಿದ್ದಾರೆ. ಭ್ರಷ್ಟಾಚಾರ ವಿರೋಧಿ ಘಟಕಕ್ಕೆ ರಾಯ್ ಜತೆ ಆಗಮಿಸಿದ್ದ ಲಂಬಾ, ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆಗೆ ಅವಕಾಶ ಮಾಡಿಕೊಡುವ ಸಲುವಾಗಿ ರಾಯ್ ರಾಜೀನಾಮೆ ನೀಡಿದ್ದಾಗಿ ಘೋಷಿಸಿದ್ದಾರೆ. ಆದರೆ ಬೆನ್ನುಹುರಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ರಾಯ್, ವಿಶ್ರಾಂತಿಗಾಗಿ ಹುದ್ದೆ ತ್ಯಜಿಸಿದ್ದಾರೆ ಎನ್ನುವುದು ಪಕ್ಷದ ವಿವರಣೆ. ಕಳೆದ ವರ್ಷ ಆಮ್ ಆದ್ಮಿ ಪಕ್ಷ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಇಬ್ಬರು ಸಚಿವರು ಲಂಚ ಆರೋಪದಲ್ಲಿ ಪದತ್ಯಾಗ ಮಾಡಿದ್ದಾರೆ. ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ ದಿಲ್ಲಿ ಘಟಕದ ಸಂಚಾಲಕ ದಿಲೀಪ್ ಪಾಂಡೆ, ಲಂಬಾರನ್ನು ಪಕ್ಷದ ವಕ್ತಾರರಾಗಿ ಉಳಿಸಬೇಕೇ ಅಥವಾ ಬೇಡವೇ ಎನ್ನುವುದನ್ನು ಪಕ್ಷದ ನಿರ್ಧಾರಕ್ಕೆ ಬಿಟ್ಟುಬಿಡಿ ಎಂದು ಪ್ರತಿಕ್ರಿಯಿಸಿದರು. ಆದರೆ ಈಗಾಗಲೇ ಕೆಲವರು ಕೇಜ್ರೀವಾಲ್ ಅವರ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸುತ್ತಿದ್ದಾರೆ. ತಮ್ಮ ಯೋಚನಾ ಲಹರಿಗೆ ವಿರುದ್ಧವಾಗಿರುವವರನ್ನು ನಿರ್ವಹಿಸುವ ವಿಚಾರದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಒಬ್ಬರಂತೂ ಪತ್ರಕರ್ತರ ಜತೆ ಮಾತನಾಡುತ್ತಾ, ಕೇಜ್ರಿವಾಲ್ ಸರ್ವಾಧಿಕಾರಿ. ಅವರ ಚಿಂತನೆಗೆ ವಿರುದ್ಧವಾಗಿ ನಡೆಯುವ ಯಾರೂ ಉಳಿಯಲಾರರು ಎಂದು ಹೇಳಿದ್ದಾರೆ. ಲಂಬಾ ಇತ್ತೀಚಿನ ಬಲಿಯೇ?

ಆಝಾದ್‌ಗೆ ಭಡ್ತಿಯೋ, ಹಿಂಭಡ್ತಿಯೋ?
ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಝಾದ್ ಅವರಿಗೆ ಉತ್ತರ ಪ್ರದೇಶ ಉಸ್ತುವಾರಿ ಹೊಣೆ ವಹಿಸಿದ್ದರೂ, ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮುಂದುವರಿದಿರುವ ಬಗ್ಗೆ ಪಕ್ಷದ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಆದರೆ ರಾಜ್ಯಸಭೆಗೆ ಪಿ.ಚಿದಂಬರಂ ಅವರು ಪ್ರವೇಶಿಸಿರುವುದರಿಂದ ಸದನದ ಹುದ್ದೆಯ ಎತ್ತರವೂ ಬದಲಾಗುತ್ತದೆ ಎಂಬ ಊಹೆಗಳು ಹುಟ್ಟಿಕೊಂಡಿವೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಆಝಾದ್ ಅವರನ್ನು ಈ ಪ್ರಭಾವಿ ಹುದ್ದೆಯಿಂದ ಬದಲಿಸುವುದು ಪಕ್ಷಾಧ್ಯಕ್ಷೆ ಸೋನಿಯಾಗಾಂಧಿಯವರಿಗೂ ಬಹುಶಃ ಕಷ್ಟದ ವಿಚಾರ. ಆದರೆ ಹೊಸ ಸಂಘಟನಾತ್ಮಕ ಜವಾಬ್ದಾರಿ ವಹಿಸಿರುವುದರಿಂದ ಬದಲಾವಣೆಗೆ ವಾತಾವರಣ ಪೂರಕವಾಗಿದೆ ಎಂದೂ ಹೇಳಲಾಗುತ್ತಿದೆ. ಆಝಾದ್ ಅವರಿಗೆ ಹಿಂಭಡ್ತಿ ನೀಡಲಾಗಿದೆ ಎಂದು ಹೇಳುವ ಬದಲು ಪಕ್ಷ, ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಪುನಶ್ಚೇತನ ನೀಡುವ ಮಹತ್ವದ ಜವಾಬ್ದಾರಿ, ರಾಜ್ಯಸಭೆಯಲ್ಲಿ ಸರಕಾರದ ಜತೆ ಗುದ್ದಾಡುವುದಕ್ಕಿಂತ ಹೆಚ್ಚು ಸವಾಲಿನ ಕೆಲಸ ಎಂದು ಹೇಳಬಹುದು. ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ತತ್ವವೂ ಇದೆ. ಈ ಕಾರಣದಿಂದ ಸೋನಿಯಾ ಹಾಗೂ ರಾಹುಲ್, ವಿರೋಧ ಪಕ್ಷದ ನಾಯಕ ಹುದ್ದೆಗೆ ಹೊಸ ಮುಖಂಡರನ್ನು ಆಯ್ಕೆ ಮಾಡುವ ಅನಿವಾರ್ಯತೆಗೆ ಸಿಲುಕಬಹುದು. ಬಹುಶಃ ಆ ಅದೃಷ್ಟ ಚಿದಂಬರಂಗೆ ಒಲಿಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News