‘ಬಾಂಬ್ ಭೀತಿಯ’ ಹಿನ್ನೆಲೆಯಲ್ಲಿ ವೈದ್ಯ ವಿದ್ಯಾರ್ಥಿನಿ ಪೊಲೀಸ್ ವಶಕ್ಕೆ

Update: 2016-06-18 18:37 GMT

ಹೊಸದಿಲ್ಲಿ, ಜೂ.18: ಶ್ರೀನಗರಕ್ಕೆ ಹೊರಟಿದ್ದ ಕಾಶ್ಮೀರದ ವೈದ್ಯ ವಿದ್ಯಾರ್ಥಿನಿಯೊಬ್ಬಳ ಚೀಲದಲ್ಲಿ ‘ಬಾಂಬ್ ಸಾಗಿಸುತ್ತಿದ್ದಾಳೆ’ ಎಂದು ಬರೆದಿದ್ದ ಚೀಟಿಯೊಂದಿತ್ತು ಎಂದು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ಬಂದಿದ್ದ ಕಾರಣಕ್ಕಾಗಿ ಆಕೆಯನ್ನು ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ವಶಪಡಿಸಿಕೊಂಡ ಘಟನೆ ನಡೆದಿದೆ.
ನಿನ್ನೆ ಬೆಳಗ್ಗೆ 11ರ ಸುಮಾರಿಗೆ ಈ ಹುಡುಗಿ ತನ್ನ ಮೂವರು ಸ್ನೇಹಿತೆಯರೊಂದಿಗೆ ಢಾಕಾದಿಂದ ಕೋಲ್ಕತಾದ ಮೂಲಕ ದಿಲ್ಲಿಗೆ ಬರುವ ವಿಮಾನದಲ್ಲಿ ಬಂದಿಳಿದ ವೇಳೆ ಈ ಪ್ರಸಂಗ ನಡೆದಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಡುಗಿಯ ಚೀಲದಲ್ಲಿ ‘ಬಾಂಬ್ ಸಾಗಿಸುತ್ತಿದ್ದಾಳೆ’ ಎಂದು ಬರೆದಿದ್ದ ಚೀಟಿಯೆಂದು ಯಾರೋ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿದ್ದ ಭದ್ರತಾ ಸಂಸ್ಥೆಗಳನ್ನು ಎಚ್ಚರಿಸಿದ್ದಾನೆ. ಆಕೆಯನ್ನು ಬಳಿಕ ದಿಲ್ಲಿ ಪೊಲೀಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ವಿಚಾರಣೆಯ ವೇಳೆ ಯಾವುದೇ ಅನುಮಾನಾಸ್ಪದ ವಿಚಾರ ಪತ್ತೆಯಾಗಿಲ್ಲ. ಯಾರೋ ಆಕೆಗೆ ಕೀಟಲೆ ಮಾಡಲು ಈ ರೀತಿ ಮಾಡಿದ್ದರೆಂದು ಶಂಕಿಸಲಾಗಿದೆಯೆಂದು ಅಧಿಕಾರಿಗಳು ವಿವರಿಸಿದ್ದಾರೆ.
ಕೆಲವು ತಾಸುಗಳ ಕಾಲ ಪ್ರಶ್ನಿಸಿದ ಬಳಿಕ ದಿಲ್ಲಿ ಪೊಲೀಸರು ಹುಡುಗಿಯನ್ನು ಬಿಡುಗಡೆಗೊಳಿಸಿದರು. ಈ ಗೊಂದಲದ ನಡುವೆ ಹುಡುಗಿಯರಿಗೆ ದಿಲ್ಲಿಯಿಂದ ಶ್ರೀನಗರಕ್ಕೆ ಹೋಗುವ ವಿಮಾನ ತಪ್ಪಿತು. ಅವರು ನಾಳೆ ಹೋಗಲಿದ್ದಾರೆಂದು ಅವರು ತಿಳಿಸಿದ್ದಾರೆ.
ಆ ಹುಡುಗಿಯರು ಢಾಕಾದ ಕಾಲೇಜೊಂದರಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯರಾಗಿದ್ದಾರೆ. ಅವರು ಶ್ರೀನಗರ ರಾಜಬಾಗ್ ಪ್ರದೇಶದ ನಿವಾಸಿಗಳೆಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಸಹಾಯ ಮಾಡಬೇಕೆಂದು ಇದೇ ವೇಳೆ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News