ಮೋದಿ ತವರಲ್ಲೇ ಸವಾಲಿಗೆ ಕೇಜ್ರಿವಾಲ್ ಸಜ್ಜು: ಗುಜರಾತ್ ಚುನಾವಣಾ ಕಣಕ್ಕೆ ಎಎಪಿ

Update: 2016-06-18 18:37 GMT

ಹೊಸದಿಲ್ಲಿ, ಜೂ.18: ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತಿನಲ್ಲಿ 2017ರ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸ್ಪರ್ಧಿಸಲು ಸಜ್ಜಾಗಿದೆಯೆಂದು ಪಕ್ಷದ ಮೂಲಗಳು ತಿಳಿಸಿವೆ.

ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಎರಡು ದಿನಗಳ ಭೇಟಿಗಾಗಿ ಜುಲೈ 8 ಹಾಗೂ 9ರಂದು ಗುಜರಾತ್‌ಗೆ ಆಗಮಿಸಲಿದ್ದಾರೆ. ಸೌರಾಷ್ಟ್ರದಲ್ಲಿರುವ ಸೋಮನಾಥ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ 182 ಸ್ಥಾನಗಳಿರುವ ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಪ್ರಚಾರ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.
ತಮ್ಮ ಎರಡು ದಿನಗಳ ಭೇಟಿ ಸಂದರ್ಭ ಕೇಜ್ರಿವಾಲ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ. ಅವರೊಂದಿಗೆ ಎಎಪಿ ರಾಜ್ಯ ಸಂಚಾಲಕ ಕನುಬಾಯಿ ಕನ್ಸರಿಯಾ ಕೂಡ ಇರಲಿದ್ದಾರೆ. ಕನುಬಾಯಿ ಮಾಜಿ ಬಿಜೆಪಿ ಶಾಸಕರಾಗಿದ್ದು ಒಂದು ಕಾಲದಲ್ಲಿ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆತ್ಮೀಯರೂ ಆಗಿದ್ದರು.
ಗುಜರಾತ್ ರಾಜ್ಯದಲ್ಲಿ ತನ್ನ ಪ್ರಭಾವ ಬೀರಲು ಸರ್ವ ಪ್ರಯತ್ನಗಳನ್ನು ನಡೆಸುತ್ತಿರುವ ಎಎಪಿ, ದಿಲ್ಲಿ ಶಾಸಕ ಗುಲಾಬ್ ಸಿಂಗ್ ಅವರನ್ನು ಪಕ್ಷದ ಗುಜರಾತ್ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News