ಮೋದಿ ಆಡಳಿತದಲ್ಲಿ ಭಾರತ ಪತನಗೊಳ್ಳಲಿರುವ ವಿಮಾನದ ಸ್ಥಿತಿಯಲ್ಲಿದೆ: ನ್ಯಾ. ಕಾಟ್ಜು

Update: 2016-06-20 11:49 GMT

ಎರಡು ವರ್ಷದ ಆಳ್ವಿಕೆಯ ನಂತರ ಈಗ ಮೋದಿ ಆಡಳಿತದ ಬಗ್ಗೆ ಸತ್ಯ ನುಡಿಯುವ ಕಾಲ ಬಂದಿದೆ ಎಂದು ನ್ಯಾಯಮೂರ್ತಿ ಕಾಟ್ಜು ಹೇಳಿದ್ದಾರೆ.
 
ಈಗಿನ ಬಿಜೆಪಿ ಸರಕಾರ ಎಲ್ಲಾ ಆಯಾಮಗಳಲ್ಲೂ ವಿಫಲ ಆಡಳಿತ. ಅಂಕಿ ಅಂಶಗಳನ್ನು ತಿರುಚಿ ಜುಮ್ಲಾ ತೋರಿಸಿ ವೈಫಲ್ಯವನ್ನು ಮುಚ್ಚಲಾಗುತ್ತಿದೆ. ಬಹಳ ಪ್ರಾಂತಗಳಲ್ಲಿ ಕೋಮು ವೈಷಮ್ಯ ಕಂಡಿದೆ. ದೇಶ ನಿಧಾನವಾಗಿ ನಿಯಂತ್ರಣವಿಲ್ಲದ ವಿಮಾನದಂತೆ ಪ್ರಗತಿಯ ಪಥದಿಂದ ದೂರ ಸರಿಯುತ್ತಿದೆ. ಯಾವಾಗ ಅದು ಅಪಘಾತಕ್ಕೀಡಾಗಲಿದೆ ಎನ್ನುವುದು ತಿಳಿದಿಲ್ಲ. ಮೋದಿ ತಮ್ಮ ವಿದೇಶೀ ಪ್ರವಾಸ ಮತ್ತು ಜಿಡಿಪಿ ಏರಿಕೆಯನ್ನೇ ಭಾರತದ ಅರ್ಥವ್ಯವಸ್ಥೆಯ ಸಾಧನೆಯಾಗಿ ಮುಂದಿಡುತ್ತಿದ್ದಾರೆ.
ಮಾರ್ಕ್ ತ್ವೈನ್ ಪ್ರಕಾರ ಮೂರು ರೀತಿಯ ಸುಳ್ಳುಗಳನ್ನು ಹೇಳಲಾಗಿದೆ.: ಸುಳ್ಳುಗಳು, ಅತೀ ಸುಳ್ಳುಗಳು ಮತ್ತು ಅಂಕಿ ಅಂಶಗಳು
ಅಂಕಿ ಅಂಶಗಳ ಮೂಲಕ ಯಾರು ಬೇಕಾದರೂ ತಮ್ಮ ಸಾಧನೆಯನ್ನು ರಂಗು ರಂಗಾಗಿ ಮುಂದಿಡಬಹುದು. ಸರಕಾರದ ಅಧಿಕಾರಿಗಳು ಭಾರತ ಕೊನೆಯ ಚಾತುರ್ಮಾಸಿಕ ಅವಧಿಯಲ್ಲಿ ಶೇ. 7.9ರ ಗತಿಯಲ್ಲಿ ಜಿಡಿಪಿ ಪ್ರಗತಿ ಸಾಧಿಸಿದೆ ಎಂದಿರುವುದೂ ಅಂತಹುದೇ ಸುಳ್ಳು. ಜರ್ಮನಿಯ ರೇಡಿಯೊ ಕೊನೆ ಕ್ಷಣದವರೆಗೂ ವಿಶ್ವಯುದ್ಧ ಗೆಲ್ಲುತ್ತೇವೆ ಎಂದು ಜನರನ್ನು ಮೋಸ ಮಾಡುತ್ತಲೇ ಹೋಗಿ ಕೊನೆಗೆ ಸೋತಿದ್ದ ಉದಾಹರಣೆಯೇ ಇದು. ಸರ್ಕಾರದ ಪ್ರಕಾರ ಭಾರತೀಯ ಅರ್ಥವ್ಯವಸ್ಥೆ ಚೀನಾದ ಶೇ. 6.9 ದರವನ್ನು ಮೀರಿಸಿ ವೇಗವಾಗಿ ಬೆಳೆಯುತ್ತಿದೆ. ಆದರೆ 2014 ಏಪ್ರಿಲ್- ಅಕ್ಟೋಬರ್ ಅವಧಿಯಲ್ಲಿ 187.29 ಶತಕೋಟಿ ಡಾಲರುಗಳಷ್ಟು ಇದ್ದ ರಫ್ತು 2015 ಏಪ್ರಿಲ್ ಅಕ್ಟೋಬರ್ ಅವಧಿಗೆ 156.29 ಶತಕೋಟಿ ಡಾಲರುಗಳಿಗೆ ಇಳಿದಿದೆ. ಅಂದರೆ ಶೇ. 17.6 ಇಳಿಕೆ. ಜಿಡಿಪಿ ಪ್ರಗತಿ ಯಾರಿಗೆ ನೆರವಾಗುತ್ತಿದೆ? ಕೆಲವೇ ಉದ್ಯಮಿಗಳಿಗೆಯೇ?
ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿಕೆ ಪ್ರಕಾರ ಬಹುತೇಕ ಕಾರ್ಖಾನೆಗಳು ತಮ್ಮ ಸಾಮರ್ಥ್ಯದ ಶೇ. 70ರಷ್ಟೇ ಕೆಲಸ ಮಾಡುತ್ತಿದೆ. 2011-12ರಲ್ಲಿ ಅವು ಶೇ. 80ರಷ್ಟು ಸಾಮರ್ಥ್ಯದಲ್ಲಿದ್ದವು. ಇದು ಉತ್ಪಾದನಾ ಕ್ಷೇತ್ರದ ಇಳಿಕೆ ತೋರಿಸಿದೆ. ಮತ್ತೊಂದು ವರದಿ ಪ್ರಕಾರ ಕಾರ್ಪೋರೇಟ್ ಲಾಭವು ಸರಾಸರಿ ಶೇ. 1ರಷ್ಟು ಇಳಿದಿದೆ. ಸರ್ಕಾರವು ಹೇಳಿರುವಂತೆ ರಫ್ತು ಇಳಿದು ಉತ್ಪಾದನೆ ಶೇ. 9 ರಷ್ಟು ಏರಿದಲ್ಲಿ ಹೆಚ್ಚಿದ ಸರಕುಗಳನ್ನು ಎಲ್ಲಿ ಮಾರಲಾಗಿದೆ? ದೇಶಿ ಮಾರುಕಟ್ಟೆಯಲ್ಲಿಯೇ? ಭಾರತ ಬಡ ದೇಶ. ಇಲ್ಲಿನ ಶೇ. 80ರಷ್ಟು ಮಂದಿಗೆ ಖರೀದಿ ಶಕ್ತಿ ಇಲ್ಲ. ಆಹಾರ ಬೆಲೆ ಏರಿಕೆಯಿಂದ ನಿಜವಾದ ಆದಾಯ ಇಳಿದಿದೆ.
 
ಬ್ಯಾಂಕುಗಳಲ್ಲಿ ಕಟ್ಟದ ಸಾಲಗಳ ಹೊರೆ ಏರುತ್ತಿದೆ. 2015 ಜುಲೈ- ಸೆಪ್ಟೆಂಬರ್ ತಿಂಗಳಲ್ಲಿ ಜಡ ಆಸ್ತಿಗಳ ಪ್ರಮಾಣ ರೂ. 3.37 ಲಕ್ಷ ಕೋಟಿಗಳಿಗೆ ಬಂದಿದೆ. ಅಂದರೆ ರು. 71,000 ಕೋಟಿಗಳಷ್ಟು ಏರಿದೆ. ಈ ಸಾಲ ಬಹುತೇಕ ಉತ್ಪಾದನಾ ಮತ್ತು ಮೂಲ ಸೌಕರ್ಯ ಕ್ಷೇತ್ರಕ್ಕೆ ಸೇರಿದೆ. ಅವುಗಳು ಉಳಿವಿಗೆ ಕಷ್ಟಪಡುತ್ತಿದೆ. ರಿಯಲ್ ಎಸ್ಟೇಟ್ ಕ್ಷೇತ್ರವೂ ಬಿದ್ದು ಹೋಗಿವೆ. ಹೊಸ ಕಟ್ಟಡ ನಿರ್ಮಾಣ ಕಡಿಮೆಯಾಗಿದೆ. ಹಳೇ ಮನೆಗಳು ಮಾರಾಟವಾಗುತ್ತಿಲ್ಲ. ಆಂಡಿ ಮುಖರ್ಜೀ ರ್ಯೂಟರ್ಸ್‌ ಅಲ್ಲಿ ಬರೆದ ಲೇಖನ ಪ್ರಕಾರ ಭಾರತದ ಅರ್ಥವ್ಯವಸ್ಥೆಯ ಜಿಡಿಪಿ ಪ್ರಗತಿ ಬಾಗಶಃ ಶೇ. 5ರಷ್ಟಿರಬಹುದು. ಭಾರತೀಯ ಅಧಿಕಾರಿಗಳು ಹೇಳಿದಂತೆ ಶೇ. 7.4 ಇಲ್ಲ. ಇತ್ತೀಚೆಗೆ ಭಾರತ ಜಿಡಿಪಿ ಲೆಕ್ಕ ಮಾಡುವ ರೀತಿ ಬದಲಾಯಿಸಿದೆ. ಭಾರತ ಹೇಳುವಂತೆ ಇಲ್ಲಿನ ಜಿಡಿಪಿ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿರುವುದು ವಿಶ್ವಾಸಾರ್ಹವಲ್ಲ. ಆರ್‌ಬಿಐ ಬೆಂಚ್‌ಮಾರ್ಕ್ ಬಡ್ಡಿದರ ಕಡಿತಗೊಳಿಸಿದ ಮೇಲೆ ಹೂಡಿಕೆದಾರರು ಭಾರತೀಯ ಆಸ್ತಿಯನ್ನು ಬಿಟ್ಟಿದ್ದಾರೆ. ಜಿಡಿಪಿ ಪ್ರಗತಿಯನ್ನು ಸರ್ಕಾರ ತೋರಿಸಿದ ಐದೇ ದಿನಗಳಲ್ಲಿ ರಾಜನ್ ಏಕೆ ಬಡ್ಡಿದರ ಕಡಿತದ ನಿರ್ಧಾರ ಕೈಗೊಂಡರು ಎನ್ನುವುದು ಯಕ್ಷಪ್ರಶ್ನೆ.
ಭಾರತೀಯ ಅರ್ಥವ್ಯವಸ್ಥೆಯಲ್ಲಿ ನಿಜವಾದ ಜಿಡಿಪಿ ಪ್ರಗತಿ ಎಂದರೇನು? ವಾಣಿಜ್ಯ ಲಾಭ, ಅಟೋ ಮಾರಾಟ ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಆಮದು ಇತ್ಯಾದಿ! ಇವುಗಳನ್ನು ಮಿಶ್ರಮಾಡಿದ ಸೂಚ್ಯಂಕವು ಪ್ರಗತಿಯನ್ನು ಶೇ. 5 ಎಂದು ತೋರಿಸುತ್ತಿದೆ.
ಸರ್ಕಾರ ಹೇಳಿದ ಶೇ. 7.9 ಅಂಕಿ ಅಂಶ ನಿಜವೇ ಆಗಿದ್ದರೂ ಯಾರಿಗೆ ಅದರಿಂದ ನೆರವಾಗಿದೆ? ಶ್ರೀಮಂತ- ಬಡವರ ಅಂತರ ದೊಡ್ಡದಾಗುತ್ತಿದೆಯೆ? ಬಹುತೇಕ ಭಾರತೀಯರು ಎರಡು ಹೊತ್ತಿನ ಊಟಕ್ಕೆ ಕಷ್ಟಪಡುವಾಗ ಬೆಲೆಗಳು ಏರುತ್ತಲೇ ಇವೆ. ಪ್ರತೀ ವರ್ಷ ಭಾರತೀಯ ಮಾರುಕಟ್ಟೆಗೆ ಒಂದು ಕೋಟಿ ಯುವಕರು ಕಾಲಿಸುತ್ತಾರೆ. ಆದರೆ ಕಳೆದ 12 ತಿಂಗಳಲ್ಲಿ 1.4 ಲಕ್ಷ ಉದ್ಯೋಗಗಳಷ್ಟೇ ಸೃಷ್ಟಿಯಾಗಿದೆ. ಹಿಂದಿನ 12 ತಿಂಗಳಲ್ಲಿ 4.3 ಲಕ್ಷ ಉದ್ಯೋಗಗಳಷ್ಟೇ ಸೃಷ್ಟಿಯಾಗಿವೆ. ನಿರುದ್ಯೋಗ ವೇಗವಾಗಿ ಏರುತ್ತಿದೆ. ಇದು ವಿಕಾಸವೆ? ನಿರುದ್ಯೋಗ ಯುವಕರು ದಾರಿ ಬದಿಯ ವ್ಯಾಪಾರಿ, ಮಧ್ಯವರ್ತಿ, ಬೌನ್ಸರ್, ಸ್ಟ್ರಿಂಜರ್, ಕ್ರಿಮಿನಲ್ ಮತ್ತು ಆತ್ಮಹತ್ಯೆಯಲ್ಲಿ ಜೀವನ ಕೊನೆಗೊಳಿಸುತ್ತಿದ್ದಾರೆ. ಯುವತಿಯರು ಲೈಂಗಿಕ ಕಾರ್ಯಕರ್ತೆಯರಾಗಬೇಕೆ?
ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರವಾಗುತ್ತಿರುವಾಗ ಕೋಮುವಾದಿ ಬೆಂಕಿ ಬೀಳುತ್ತಿದೆ. ಇದರ ಲಾಭ ಯಾರಿಗೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಬೇಳೆ, ಬಟಾಟೆ, ಟೊಮ್ಯಾಟೋ ಮತ್ತು ಇತರ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಎಲ್ಲರ ಜೊತೆ ಎಲ್ಲರ ವಿಕಾಸ ಎನ್ನುವ ಹೇಳಿಕೆ ಎಲ್ಲಿ ಹೋಗಿದೆ? ಸುಮಾರು 200 ದೇಶಗಳ ನಡುವೆ ಭಾರತ ಮಾನವ ಅಭಿವೃದ್ಧಿಯಲ್ಲಿ 135 ಸ್ಥಾನದಲ್ಲಿದೆ. ನಮ್ಮ ದೇಶ ಬಡತನ, ನಿರುದ್ಯೋಗ, ಅಪೌಷ್ಠಿಕತೆ ಸಮಸ್ಯೆಗಳಿವೆ ಮತ್ತು ಆರೋಗ್ಯಸೇವೆ- ಶಿಕ್ಷಣದ ಕೊರತೆ ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ಮತ್ತು ಸಾಧನೆ ಶೂನ್ಯ. ಕೇವಲ ಜುಮ್ಲಾಗಳು ಮತ್ತು ನಾಟಕಗಳು ಮಾತ್ರ ಕಂಡಿವೆ. ಜೊತೆಗಿದೆ ಅತಿಯಾದ ಪ್ರಚಾರ ಪಡೆದ ಮೋದಿಯ ವಿದೇಶಿ ಪ್ರವಾಸಗಳು.
ಇವೆಲ್ಲವನ್ನು ಬಿಟ್ಟು ನೋಡಿದರೆ ಜನರ ಜೀವನಮಟ್ಟ ಸುಧಾರಿಸಿದೆಯೆ? ನಾವು ಆಧುನಿಕ ಅತಿ ಔದ್ಯಮಿಕ ದೇಶವನ್ನು ಸೃಷ್ಟಿಸಬೇಕು. ಆ ಮೂಲಕ ಎಲ್ಲರ ಹಿತ ಕಾಪಾಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಮಾಡಿರುವುದು ಶೂನ್ಯ. ಪ್ರತೀ ಸರಕಾರದ ಪರೀಕ್ಷಾ ಮಾನದಂಡ ಜನರ ಜೀವನ ಮಟ್ಟದ ಸುಧಾರಣೆ. ಅದು ಆಗದಿದ್ದಲ್ಲಿ ಆ ವ್ಯವಸ್ಥೆ ಅಥವಾ ಸರಕಾರ ವಿಫಲವಾಗಿದೆ ಎಂದರ್ಥ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News