ಮಾಜಿ ಪ್ರಧಾನಿ ಮನಮೋಹನ್ ರನ್ನು ಸಾ... ಎಂದು ಜರೆದ ರಾಜಸ್ಥಾನ ಗೃಹ ಸಚಿವ

Update: 2016-06-20 13:23 GMT

ಜೈಪುರ, ಜೂ.20: ರವಿವಾರ ನಡೆದ ಸಭೆಯೊಂದರಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರ ವಿರುದ್ಧ ಕೆಟ್ಟ ಭಾಷೆಯನ್ನು ಬಳಸಿದುದಕ್ಕಾಗಿ ರಾಜಸ್ಥಾನದ ಗೃಹ ಸಚಿವ ಗುಲಾಬ್‌ಚಂದ್ ಕಟಾರಿಯಾ ಕಾಂಗ್ರೆಸ್‌ನ ದಾಳಿಗೊಳಗಾಗಿದ್ದಾರೆ.

ಮಾತನಾಡುವ ಭರದಲ್ಲಿ ಹದ ತಪ್ಪಿದ ಮಾತು ಬಾಯಿಂದ ಜಾರಿತೆಂದು ಅವರು ಮೊದಲು ವಿಷಾದಿಸಿದ್ದರು.

ತಾನು ಉಪಯೋಗಿಸಿದ್ದ ಶಬ್ದಕ್ಕೆ ಹೆಂಡತಿಯ ಸೋದರನೆಂದು ಅರ್ಥವೇ ಹೊರತು ಅದು ಬೈಗುಳವಲ್ಲವೆಂದು ಕಟಾರಿಯಾ ಇಂದು ಸ್ಪಷ್ಟೀಕರಣ ನೀಡಿದ್ದಾರೆ. ಅವರು ಉಪಯೋಗಿಸಿದ್ದ ಶಬ್ದ ರಾಜ್ಯದ ಹಲವು ಭಾಗಗಳಲ್ಲಿ ಕೆಟ್ಟ ಬೈಗುಳವಾಗಿದೆ.

ಚುರುವಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ವೇಳೆ ಅವರು, ಪ್ರಧಾನ ಮಂತ್ರಿಯಾಗಿ ಈ ಹಿಂದೆ ಮನಮೋಹನ ಸಿಂಗರು ಅಮೆರಿಕಕ್ಕೆ ಹೋಗುತ್ತಿದ್ದಾಗ ಆ...... ಯನ್ನು ಚಿಲ್ಲರೆ ಪಲ್ಲರೆ ಸಚಿವರು ಎದುರುಗೊಳ್ಳುತ್ತಿದ್ದರು. ಆದರೆ ಈಗ, ಭಾರತದ ಪ್ರಧಾನಿ ಹೋಗುವಾಗ ಸ್ವತಃ ಒಬಾಮರೇ ಅವರನ್ನು ಸ್ವಾಗತಿಸಲು ಹೋಗುತ್ತಾರೆ ಎಂದಿದ್ದರು.

ಸಚಿವರ ಮಾತಿನಲ್ಲಿ ಆಕ್ಷೇಪಾರ್ಹ ಶಬ್ದಗಳಿದ್ದವೆಂದು ವರದಿಯಾಗಿದೆ. ಕನಿಷ್ಠ ಇತರ 6 ಸಚಿವರು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿದ್ದರು.

ರಾಜಸ್ಥಾನದ ಗೃಹ ಸಚಿವ ಗುಲಾಬ್‌ಚಂದ್ ಕಟಾರಿಯಾರನ್ನು ಉಚ್ಚಾಟಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ಬಳಿಕ ತನ್ನ ಶಬ್ದಗಳಿಗಾಗಿ ವಿಷಾದ ಸೂಚಿಸಿರುವ ಕಟಾರಿಯಾ, ಮಾಜಿ ಪ್ರಧಾನಿಯ ವಿರುದ್ಧದ ತನ್ನ ಟೀಕೆಗಳು ದುರುದ್ದೇಶದಿಂದ ಮಾಡಿದವುಗಳಲ್ಲ. ಯಾರಾದರೂ ಅದನ್ನು ವಿರೋಧಿಸುತ್ತಿದ್ದರೆ, ತಾನು ವಿಷಾದಿಸುತ್ತೇನೆ ಎಂದರು ಟ್ವೀಟಿಸಿದ್ದರು.

 ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಕಟಾರಿಯಾ ವಿರುದ್ಧ ಕಿಡಿಗಾರಿದ್ದು, ಅವರನ್ನು ‘ಅಗೌರವಯುತ ಶಬ್ದ ಬಳಸಿದುದಕ್ಕಾಗಿ’ ವಜಾಗೊಳಿಸಬೇಕು. ಮುಖ್ಯಮಂತ್ರಿ ವಸುಂಧರಾ ರಾಜೆ ಈ ಕುರಿತು ಸ್ಪಷ್ಟೀಕರಣ ನೀಡಬೇಕು. ಒಂದೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೇ ದೇಶವನ್ನು ಅಪಮಾನಗೊಳಿಸಿದುದಕ್ಕಾಗಿ ಅವರನ್ನು ಉಚ್ಚಾಟಿಸಬೇಕು ಎಂದಿದ್ದಾರೆ.

ಎರಡನೆಯ ಬಾರಿಗೆ ರಾಜಸ್ಥಾನದ ಗೃಹ ಸಚಿವರಾಗಿರುವ ಕಟಾರಿಯಾ ಈ ಹಿಂದೆಯೂ ನಾಲಿಗೆ ಜಾರುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News