ವಾಯುಯಾನ, ರಕ್ಷಣೆ ಸಹಿತ 9 ಕ್ಷೇತ್ರಗಳಲ್ಲಿ ಎಫ್‌ಡಿಐ ಸಡಿಲ

Update: 2016-06-20 18:28 GMT

ಆ್ಯಪಲ್ ಸ್ಟೋರ್‌ಗೆ ಮಾರ್ಗ ಸುಗಮ

ಹೊಸದಿಲ್ಲಿ, ಜೂ.20: ಮಹತ್ವದ ಬೆಳವಣಿಗೆ ಯೊಂದರಲ್ಲಿ ಸರಕಾರವು ಸೋಮವಾರ ರಕ್ಷಣೆ, ಆಹಾರೋತ್ಪನ್ನಗಳು, ನಾಗರಿಕ ವಾಯುಯಾನ, ಔಷಧಿ, ಪ್ರಸಾರ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ಒಂಭತ್ತು ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಾವಳಿಗಳನ್ನು ಸಡಿಲಗೊಳಿಸಿ ಆರ್ಥಿಕ ತಜ್ಞರನ್ನು ಹುಬ್ಬೇರಿಸುವಂತೆ ಮಾಡಿದೆ. ಸಿಂಗಲ್ ಬ್ರಾಂಡ್ ರಿಟೇಲ್ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಇದು ಆ್ಯಪಲ್ ಸ್ಟೋರ್ಸ್ ಭಾರತದಲ್ಲಿ ತನ್ನ ಮಳಿಗೆಯನ್ನು ತೆರೆಯುವ ಮಾರ್ಗವನ್ನು ಸುಗಮಗೊಳಿಸಿದೆ.

ಭಾರತದಲ್ಲಿ ತಯಾರಾದ ಆಹಾರೋತ್ಪನ್ನಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಕಂಪನಿಗಳು ಈಗ ಶೇ.100ರಷ್ಟು ಎಫ್‌ಡಿಐ ಪಡೆದುಕೊಳ್ಳಬಹುದಾಗಿದೆ. ರಕ್ಷಣಾ ಕ್ಷೇತ್ರದಲ್ಲಿಯೂ ಶೇ.100 ಎಫ್‌ಡಿಐ ಹೂಡಿಕೆಗೆ ಅನುಮತಿಯನ್ನು ನೀಡಲಾಗಿದ್ದು,ವಿದೇಶಿ ಪಾಲುದಾರರು ಅತ್ಯಾಧುನಿಕ ತಂತ್ರಜ್ಞಾನವನ್ನು ಭಾರತಕ್ಕೆ ತರಬೇಕೆಂಬ ಕಡ್ಡಾಯ ಷರತ್ತನ್ನು ಕೈಬಿಡಲಾಗಿದೆ.

ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು 1959ರ ಶಸ್ತ್ರಾಸ್ತ್ರ ಕಾಯ್ದೆಯಡಿ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ತಯಾರಿಕೆಗೆ ಅನ್ವಯಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನದ ಉತ್ಪನ್ನಗಳ ಸಿಂಗಲ್ ಬ್ರಾಂಡ್ ಚಿಲ್ಲರೆ ಮಾರಾಟ ಸಂಸ್ಥೆಗಳು ಶೇ.30ರಷ್ಟು ಉತ್ಪನ್ನಗಳನ್ನು ಸ್ಥಳೀಯವಾಗಿ ಪಡೆದುಕೊಳ್ಳಬೇಕೆಂಬ ನಿಯಮವನ್ನು ಮೂರು ವರ್ಷಗಳ ಮಟ್ಟಿಗೆ ಸಡಿಲಿಸಲಾಗಿದೆ. ಇದು ಭಾರತದಲ್ಲಿ ತನ್ನ ಮಳಿಗೆಗಳನ್ನು ತೆರೆಯುವ ಆ್ಯಪಲ್‌ನ ಯೋಜನೆಗೆ ನೆರವಾಗಲಿದೆ. ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದ ಕಂಪನಿಯ ಸಿಇಒ ಟಿಮ್ ಕುಕ್ ಅವರು ವಿಶ್ವಾದ್ಯಂತ ಐ-ಫೋನ್,ಐಪಾಡ್ ಮತ್ತು ಇತರ ಸ್ವಂತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ತಮ್ಮ ಐವರ್ಲ್ಡ್ ಸ್ಟೋರ್ಸ್‌ನ ಮಳಿಗೆಗಳನ್ನು ಇಲ್ಲಿ ತೆರೆಯಲು ಸಾಧ್ಯವಾಗುವಂತೆ ನಿಯಮ ಗಳ ಸಡಿಲಿಕೆಯನ್ನು ಕೋರಿದ್ದರು.

ದೇಶಿಯ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಶೇ.100 ಎಫ್‌ಡಿಐಗೂ ಸರಕಾರವು ಅವಕಾಶವನ್ನು ಕಲ್ಪಿಸಿದೆ. ಈ ಕ್ರಮದಿಂದಾಗಿ ವಿದೇಶಿ ವಿಮಾನಯಾನ ಸಂಸ್ಥೆಗಳು ತಮ್ಮ ಸಂಪೂರ್ಣ ಒಡೆತನದ ಅಧೀನ ಸಂಸ್ಥೆಗಳ ಮೂಲಕ ಭಾರತದಲ್ಲಿ ಕಾರ್ಯಾ ಚರಣೆಗಳನ್ನು ಆರಂಭಿಸಬಹುದಾಗಿದೆ. ಇದು ವಿದೇಶಿ ವಿಮಾನ ನಿಲ್ದಾಣ ಅಭಿವೃದ್ಧಿ ಸಂಸ್ಥೆಗಳಿಂದ ಹೆಚ್ಚಿನ ಹೂಡಿಕೆಯು ಹರಿದು ಬರುವಂತೆಯೂ ಮಾಡಲಿದೆ.

ಸಣ್ಣ ಋಣಾತ್ಮಕ ಪಟ್ಟಿಯೊಂದನ್ನು ಹೊರತುಪಡಿಸಿ ಇನ್ನು ಮುಂದೆ ಹೆಚ್ಚಿನೆಲ್ಲ ಕ್ಷೇತ್ರಗಳು ಸ್ವಯಂಚಾಲಿತ ಪರವಾನಿಗೆ ಮಾರ್ಗದಡಿ ಬರಲಿವೆ. ಈ ಬದಲಾವಣೆಗಳಿಂದಾಗಿ ಭಾರತವೀಗ ಎಫ್‌ಡಿಐಗಾಗಿ ವಿಶ್ವದಲ್ಲಿಯೇ ಅತ್ಯಂತ ಮುಕ್ತ ಆರ್ಥಿಕತೆಯಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಭಾರತದಲ್ಲಿ ನೇಮಕಾತಿಗಳಿಗೆ ಹೆಚ್ಚಿನ ಒತ್ತು ನೀಡಿಕೆ ಮತ್ತು ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ಎಫ್‌ಡಿಐ ನಿಯಮಾವಳಿಗಳನ್ನು ಉದಾರಗೊಳಿಸುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಕೈಗೊಂಡಿದೆ ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News