ಹರ್ಯಾಣದ ಪ್ರತಿ ಸಂಸದ, ಶಾಸಕನಿಗೆ 340 ಕೋಟಿ ದಂಡ?

Update: 2016-06-21 04:25 GMT

ಚಂಢೀಗಡ: ಹರ್ಯಾಣದಲ್ಲಿ ಜಾಟ್ ಹಿಂಸಾಚಾರ ಹಿನ್ನೆಲೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ ಆಗಿರುವ ವ್ಯಾಪಕ ಹಾನಿ ಹಿನ್ನೆಲೆಯಲ್ಲಿ ಎಲ್ಲ 90 ಮಂದಿ ಶಾಸಕರು ಹಾಗೂ 10 ಮಂದಿ ಸಂಸದರು ತಲಾ 340 ಕೋಟಿ ರೂಪಾಯಿ ದಂಡವನ್ನು ಪಾವತಿಸುವಂತೆ ನ್ಯಾಯಾಲಯ ಸೂಚನೆ ನೀಡುವ ಸಾಧ್ಯತೆ ಇದೆ. ಸ್ಥಳೀಯ ನಿವಾಸಿಯೊಬ್ಬರು ಈ ಸಂಬಂಧ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿರುವ ರೇವರಿ ನ್ಯಾಯಾಲಯ, "ಜನಪ್ರತಿನಿಧಿಗಳು ತಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡದಿದ್ದುದೇ ಈ ಹಿಂಸಾಚಾರಕ್ಕೆ ಕಾರಣ" ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಿದೆ.

ರಾಜ್ಯದಲ್ಲಿ ಹಿಂಸಾಚಾರ ವೇಳೆ ಆಗಿರುವ 34 ಸಾವಿರ ಕೋಟಿ ರೂಪಾಯಿಯನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ), ಎಲ್ಲ ಜನಪ್ರತಿನಿಧಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಜುಲೈ 24ರೊಳಗೆ ಅವರು ಉತ್ತರಿಸಬೇಕಾಗುತ್ತದೆ. ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ಇಬ್ಬರು ಕೇಂದ್ರ ಸಚಿವರಾದ ಕೃಷ್ಣಪಾಲ್ ಗುಜ್ಜರ್ ಹಾಗೂ ಇಂದ್ರಜೀತ್ ಸಿಂಗ್ ಅವರಿಗೂ ನೋಟಿಸ್ ಜಾರಿಯಾಗಿದೆ.

ರೇವರಿಯ ನಯಾಗಾಂವ್ ಗ್ರಾಮದ ಸತ್ಬೀರ್ ಸಿಂಗ್ ಎಂಬವರು ಈ ಬಗ್ಗೆ ಅರ್ಜಿ ಸಲ್ಲಿಸಿ, "ಹರ್ಯಾಣದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಿದ್ದ ಹಿನ್ನೆಲೆಯಲ್ಲಿ, ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ಪತ್ನಿಯನ್ನು ನೋಡಲು ಹೋಗಲು ಸಾಧ್ಯವಾಗಲಿಲ್ಲ. ಫೆಬ್ರವರಿ 17ರಿಂದ 22ರವರೆಗೆ ರಾಜ್ಯದ ಮೂಲಕ ಹಾದುಹೋಗುವ ಹೆದ್ದಾರಿ ಕೂಡಾ ಬಂದ್ ಆಗಿತ್ತು. ನಾನು ಎದುರಿಸಿದ ಮಾನಸಿಕ ಹಾಗೂ ಬೌದ್ಧಿಕ ಹಿಂಸೆಗಾಗಿ ಶಾಸಕರು ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು" ಎಂದು ಆಗ್ರಹಿಸಿದ್ದಾರೆ. ಹಿಂಸೆಯನ್ನು ಹತ್ತಿಕ್ಕಲು ಹಾಗೂ ತಮ್ಮ ಕರ್ತವ್ಯ ನಿಭಾಯಿಸಲು ವಿಫಲವಾದ ಈ ಎಲ್ಲ ಜನಪ್ರತಿನಿಧಿಗಳು ಮುಂದೆಂದೂ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News