ಮಥುರಾ ಹಿಂಸಾಚಾರ ತನಿಖೆಗೆ ಮುಸ್ಲಿಂ ನ್ಯಾಯಾಧೀಶ ಬೇಡ ಎಂದ ಬಿಜೆಪಿ ಮುಖಂಡನ ಅರ್ಜಿ ವಜಾ
ಅಲಹಾಬಾದ್,ಜೂ.21 : ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಹಲವು ನಾಗರಿಕರ ಸಾವಿಗೆಕಾರಣವಾದ ಮಥುರಾದ ಜವಾಹರ್ ಬಾಘ್ ಪ್ರದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸಲು ಉತ್ತರ ಪ್ರದೇಶ ಸರಕಾರ ನೇಮಿಸಿದ್ದ ಅಲಹಾಬಾದ್ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಇಮ್ತಿಯಾಜ್ ಮುರ್ತಾಝ ಅವರ ನೇಮಕಾತಿಯನ್ನು ರದ್ದುಗೊಳಿಸಬೇಕೆಂದು ಬಿಜೆಪಿ ವಕ್ತಾರ ಇಂದ್ರ ಪಾಲ್ ಸಿಂಗ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಹಿಂದೂ ಧರ್ಮದ ಬಗ್ಗೆ ಹೆಚ್ಚಿನ ಅರಿವಿರುವ ನ್ಯಾಯಾಧೀಶರೊಬ್ಬರ ನೇತೃತ್ವದ ಆಯೋಗವೊಂದನ್ನು ಈ ಪ್ರಕರಣದ ತನಿಖೆಗೆ ನೇಮಿಸಬೇಕೆಂದೂ ಇಮ್ತಿಯಾಜ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು.
ನಿಷ್ಪ್ರಯೋಜಕ ಹಾಗೂ ಚೇಷ್ಟೆಯಿಂದ ಕೂಡಿದ ಅರ್ಜಿಯನ್ನು ವೈಯಕ್ತಿಕ ಲಾಭಕ್ಕಾಗಿ ಹಾಗೂ ಪ್ರಚಾರ ಬಯಸುವ ವ್ಯಕ್ತಿಯೊಬ್ಬನ ಇಂಗಿತದಂತ ದಾಖಲಿಸಿದ್ದಕ್ಕಾಗಿ ನ್ಯಾಯಾಲಯವು ಅರ್ಜಿದಾರರ ಮೇಲೆ ರೂ 25,000 ದಂಡ ವಿಧಿಸಿದೆ. ಯಾವುದೇ ಗೊತ್ತುಗುರಿಯಿಲ್ಲದ ಅರ್ಜಿಯನ್ನು ತಯಾರಿಸಿ ವೈಯಕ್ತಿಕ ಹಿತಾಸಕ್ತಿಯಿಂದ ಅನಗತ್ಯ ದೂರು ತಯಾರಿಸಿದ ದೂರುದಾರರ ವಕೀಲ ಅಶೋಕ್ ಪಾಂಡೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ನ್ಯಾಯಾಲಯ ಉತ್ತರ ಪ್ರದೇಶ ಬಾರ್ ಕೌನ್ಸಿಲ್ ಗೆ ಆದೇಶಿಸಿದೆ.
ಅಶೋಕ್ ಪಾಂಡೆಯ ಕಾರ್ಯ ಓರ್ವ ಜವಾಬ್ದಾರಿಯುತ ವಕೀಲ ಮಾಡುವಂತಹುದ್ದಾಗಿರದೆ ಅಡ್ವಕೇಟ್ಸ್ ಆಕ್ಟ್ 1961 ಹಾಗೂ ಸಂಬಂಧಿತ ನಿಯಮಗಳಿಗೆ ವಿರುದ್ಧವಾಗಿದೆಯೆಂದೂ ನ್ಯಾಯಾಲಯ ಹೇಳಿದೆ.