ಆರೆಸ್ಸೆಸ್ ಘಟಕದಿಂದ ಅಂತಾರಾಷ್ಟ್ರೀಯ ಇಫ್ತಾರ್ ಕೂಟ !

Update: 2016-06-21 18:31 GMT

ಹೊಸದಲ್ಲಿ,ಜೂ.21: ಆರೆಸ್ಸೆಸ್ ಪೋಷಿತ ಮುಸ್ಲಿಮ್ ರಾಷ್ಟ್ರೀಯ ಮಂಚ್(ಎಂಆರ್‌ಎಂ) ಜುಲೈ 2ರಂದು ಇಫ್ತಾರ್ ಕೂಟವನ್ನು ಏರ್ಪಡಿಸಿದ್ದು, ಇಸ್ಲಾಮಿಕ್ ಮತ್ತು ಇಸ್ಲಾಮೇತರ ರಾಷ್ಟ್ರಗಳು ಸೇರಿದಂತೆ ಸುಮಾರು 140 ರಾಷ್ಟ್ರಗಳ ರಾಯಭಾರಿಗಳಿಗೆ ಆಮಂತ್ರಣಗಳನ್ನು ರವಾನಿಸಿದೆ. ಸಂಸತ್ ಭವನ ಸಂಕೀರ್ಣದಲ್ಲಿ ನಡೆಯಲಿರುವ ಇಫ್ತಾರ್ ಕೂಟಕ್ಕೆ ಆಮಂತ್ರಿತರಲ್ಲಿ ಪಾಕಿಸ್ತಾನದ ರಾಯಭಾರಿಯೂ ಸೇರಿದ್ದಾರೆ.

2002ರಲ್ಲಿ ಆರೆಸ್ಸೆಸ್‌ನ ಆಗಿನ ಮುಖ್ಯಸ್ಥ ಕೆ.ಎಸ್.ಸುದರ್ಶನ ಅವರು ಹಿಂದುಗಳು ಮತ್ತು ಮುಸ್ಲಿಮರನ್ನು ಒಗ್ಗೂಡಿಸುವ ಉದ್ದೇಶದಿಂದ ಕೈಗೊಂಡಿದ್ದ ಉಪಕ್ರಮವಾಗಿ ಎಂಆರ್‌ಎಂ ಅಸ್ತಿತ್ವಕ್ಕೆ ಬಂದಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಸಂಪುಟ ಸಚಿವರು ಮತ್ತು ಆರೆಸ್ಸೆಸ್‌ನ ಪ್ರತಿನಿಧಿಗಳೂ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಂಆರ್‌ಎಂ ಮುಖ್ಯಸ್ಥ ಮೊಹಮ್ಮದ್ ಅಫ್ಝಲ್ ತಿಳಿಸಿದರು.

‘‘ಈ ಸರಕಾರವು(ಮೋದಿ) ಮುಸ್ಲಿಮರ ಪಾಲಿಗೆ ಉತ್ತಮ ಸರಕಾರವಾಗಿದೆಯೆಂಬ ಸಂದೇಶವನ್ನು ಜಗತ್ತಿಗೆ ನೀಡಲು ನಾವು ಬಯಸಿದ್ದೇವೆ. ಅದು ಪ್ರಧಾನಿಯವರು ಬರೆದಿರುವ ಜಾಗತಿಕ ಸೌಹಾರ್ದದ ಹೊಸ ಅಧ್ಯಾಯವೊಂದನ್ನು ಪ್ರತಿಬಿಂಬಿಸುತ್ತದೆ’’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಇಫ್ತಾರ್ ಕೂಟವನ್ನು ರಾಜಕೀಯ ತಂತ್ರವೆಂದು ಪರಿಗಣಿಸದಂತೆ ಎಂಆರ್‌ಎಂನ ಸಂಘ ಪ್ರಚಾರಕ ಇಂದ್ರೇಶ ಕುಮಾರ್ ಅವರು ಎಚ್ಚರಿಸಿದ್ದಾರೆ. ಎಂಆರ್‌ಎಂ ಹಿಂದೆಯೂ ಇಫ್ತಾರ್ ಕೂಟಗಳನ್ನು ಆಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News