ಜೇಟ್ಲಿ ಟೀಕೆಗೆ ಸ್ವಾಮಿಯ ‘ರಕ್ತಪಾತ’ದ ಉತ್ತರ!

Update: 2016-06-24 18:37 GMT

ಹೊಸದಿಲ್ಲಿ, ಜೂ.24: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ‘ರಕ್ತಪಾತ’ ಕುರಿತು ಇಂದು ಮಾಡಿರುವ ಟೀಕೆಯನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ನೀಡಿರುವ ಪ್ರತಿಕ್ರಿಯೆಯೆಂದು ಅಭಿಪ್ರಾಯಿಸಲಾಗಿದೆ. ಆದರೆ ಸ್ವಾಮಿ ತನ್ನ ಹೇಳಿಕೆಯಲ್ಲಿ ಯಾರದೇ ಹೆಸರನ್ನು ಉಲ್ಲೇಖಿಸಿರಲಿಲ್ಲ.

ಜನರು ತನಗೆ ಕೇಳದಿದ್ದರೂ ಶಿಸ್ತು ಹಾಗೂ ಸಂಯಮದ ಉಪದೇಶ ನೀಡುತ್ತಿದ್ದಾರೆ. ತಾನು ಶಿಸ್ತನ್ನು ನಿರ್ಲಕ್ಷಿಸಿದರೆ ರಕ್ತಪಾತವಾದೀತೆಂದು ಅವರಿಗೆ ತಿಳಿದಿಲ್ಲ ಎಂದು ಸ್ವಾಮಿ ಟೀಕಿಸಿದ್ದಾರೆ.
ಜೇಟ್ಲಿ ಈ ಮೊದಲು ‘ಭಾರತೀಯ ರಾಜಕಾರಣಿಗಳ ಶಿಸ್ತಿನ’ ಕುರಿತು ಟೀಕಿಸಿದ್ದರು. ಶಿಸ್ತು ಹಾಗೂ ಹುದ್ದೆಗಳ ಅಡ್ಡಿಯು ಪ್ರತಿಕ್ರಿಯೆ ನೀಡುವುದನ್ನು ತಡೆಯುತ್ತಿರುವವರ ವಿರುದ್ಧ ಎಲ್ಲಿಯ ವರೆಗೆ ನಾವು ದಾಳಿ ಮಾಡಬಹುದು ಎಂದು ಪ್ರಶ್ನಿಸಿದ ಅವರು, ಇದು ಒಂದಕ್ಕಿಂತ ಹೆಚ್ಚು ಸಲ ನಡೆದಿದೆಯೆಂದು ಅವರು ಹೇಳಿದ್ದರು.
ಜೇಟ್ಲಿ, ಮುಖ್ಯ ಆರ್ಥಿಕ ಸಲಹೆ ಗಾರ ಅರವಿಂದ ಸುಬ್ರಹ್ಮಣ್ಯನ್‌ರ ವಿರುದ್ಧ ಈ ವಾರಾರಂಭದಲ್ಲಿ ಸ್ವಾಮಿ ಮಾಡಿದ್ದ ವಾಗ್ದಾಳಿಗೆ ಪ್ರತಿಕ್ರಿಯಿಸುತ್ತಿದ್ದರು.
ಗುರುವಾರ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್‌ರ ವಿರುದ್ಧದ ಸ್ವಾಮಿ ಟೀಕೆಗೂ ಜೇಟ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಅದು ವಿತ್ತ ಸಚಿವಾಲಯದ ಒಬ್ಬ ಶಿಸ್ತಿನ ನಾಗರಿಕ ಸೇವಕನ ವಿರುದ್ಧ ನ್ಯಾಯೋಚಿತವಲ್ಲದ ಹಾಗೂ ಸುಳ್ಳು ದಾಳಿಯೆಂದು ಅವರು ಕಿಡಿಕಾರಿದ್ದರು.
ವಿದೇಶಗಳಲ್ಲಿರುವಾಗ ಪಾರಂಪರಿಕ ಹಾಗೂ ಆಧುನಿಕೀಕೃತ ಭಾರತೀಯ ಉಡುಪನ್ನು ಧರಿಸುವಂತೆ ನಮ್ಮ ಸಚಿವರಿಗೆ ಬಿಜೆಪಿಯು ನಿರ್ದೇಶನ ನೀಡಬೇಕು. ಕೋಟು ಹಾಗೂ ಟೈಗಳಲ್ಲಿ ಅವರು ಹೊಟೇಲ್ ಪರಿಚಾರಕರಂತೆ ಕಾಣಿಸುತ್ತಾರೆಂದೂ ಇಂದು ಮುಂಜಾನೆ ಸ್ವಾಮಿ ಟ್ವೀಟಿಸಿದ್ದರು.
ಇದು ಸಹ, ಬೀಜಿಂಗ್‌ನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಸೂಟು ತೊಟ್ಟಿದ್ದ ಜೇಟ್ಲಿಯವರ ಚಿತ್ರದ ಕುರಿತ ಇನ್ನೊಂದು ಲೇವಡಿಯೆಂದು ಅಭಿಪ್ರಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News