ಸಂವಿಧಾನಬದ್ಧವಾಗಿ ಕೆಲಸ ಮಾಡದಿದ್ದರೆ ಸೂಕ್ತ ಕ್ರಮ

Update: 2016-06-24 18:39 GMT

ಹೊಸದಿಲ್ಲಿ, ಜೂ.24: ದಿಲ್ಲಿ ವಿಧಾನಸಭೆಯ ಆರೋಪಿತ ಹಗರಣಗಳ ಕುರಿತು ಪ್ರಶ್ನಿಸುವುದಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ನಝೀಬ್ ಜಂಗ್‌ರಿಗೆ ಸಮನ್ಸ್ ಕಳುಹಿಸಿದ ಒಂದು ದಿನದ ಬಳಿಕ, ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯಾಚರಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದೆಂದು ಕೇಂದ್ರ ಸರಕಾರವು ಎಎಪಿ ಸರಕಾರಕ್ಕೆ ತೀಕ್ಷ್ಣ ಎಚ್ಚರಿಕೆ ನೀಡಿದೆ.

ದಿಲ್ಲಿಯು ದೇಶದ ರಾಜಧಾನಿಯೆಂಬುದನ್ನು ಯಾರೂ ಮರೆಯಬಾರದು. ಪ್ರತಿಯೊಬ್ಬನೂ ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಯಾರಾದರೂ ಈ ಮಿತಿಯನ್ನು ಮೀರಿದರೆ, ಅವರ ವಿರುದ್ಧ ಸಂವಿಧಾನದ ಪ್ರಸ್ತಾವಗಳನ್ವಯ ಕ್ರಮ ಕೈಗೊಳ್ಳಬೇಕಾಗುತ್ತದೆಂದು ಕೇಂದ್ರ ಗೃಹ ಸಹಾಯಕ ಸಚಿವ ಕಿರೇನ್ ರಿಜಿಜು ಪತ್ರಕರ್ತರಿಗಿಲ್ಲಿ ತಿಳಿಸಿದರು.

ಶೀಲಾ ದೀಕ್ಷಿತ್ ಸರಕಾರದ ಆಡಳಿತದ ವೇಳೆ ನಡೆದಿದ್ದ ಅವ್ಯವಹಾರದ 4 ಪ್ರಕರಣಗಳ ಸಂಬಂಧ ‘ಪ್ರಶ್ನಿಸುವುದಕ್ಕಾಗಿ’ ಸದನಕ್ಕೆ ಬರುವಂತೆ ಲೆಫ್ಟಿನೆಂಟ್ ಗವರ್ನರ್‌ಗೆ ದಿಲ್ಲಿ ವಿಧಾನಸಭೆಯ ಉಪಾಧ್ಯಕ್ಷೆ ರಾಖಿ ಬಿರ್ಲಾ ಸಮನ್ಸ್ ಕಳುಹಿಸಿರುವ ಕುರಿತಾದ ಪ್ರಶ್ನೆಗೆ ಅವರುತ್ತರಿಸುತ್ತಿದ್ದರು.

ಲೆಫ್ಟಿನೆಂಟ್ ಗವರ್ನರ್‌ರನ್ನು ಸೇರಿಸುವ ಮೂಲಕ ಅರವಿಂದ ಕೇಜ್ರಿವಾಲ್ ಸರಕಾರವು ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆಯೆಂದು ರಿಜಿಜು ಆರೋಪಿಸಿದರು.

ದಿಲ್ಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಜನಮತಗಣನೆ ನಡೆಯಬೇಕೆಂಬ ಎಎಪಿಯ ಬೇಡಿಕೆಯ ಬಗ್ಗೆ ಕೇಳಿದಾಗ, ನಗರದ ಸರಕಾರವು ಬ್ರೆಕ್ಸಿಟ್ ಜನಮತ ಗಣನೆಯಿಂದ ಸ್ಫೂರ್ತಿ ಪಡೆದಂತಿದೆಯೆಂದು ಅವರು ಹೇಳಿದರು.

ಜನಸಾಮಾನ್ಯರ ದೂರುಗಳನ್ನು ಪರಿಶೀಲಿಸುವ ವಿಧಾನಸಭೆಯ ದೂರು ಸಮಿತಿಯಿಂದ ಜಂಗ್ ಹಾಗೂ ದಿಲ್ಲಿ ಭ್ರಷ್ಟಾಚಾರ ವಿರೋಧಿ ದಳದ(ಎಸಿಬಿ) ಮುಖ್ಯಸ್ಥ ಎಂ.ಕೆ. ಮೀನಾರಿಗೆ ಸಮನ್ಸ್ ಕಳುಹಿಸಲಾಗುವುದೆಂದು ಬಿರ್ಲಾ ತಿಳಿಸಿದ್ದರು.

ಲೆಫ್ಟಿನೆಂಟ್ ಗವರ್ನರ್‌ಗೆ ಸಮನ್ಸ್ ನೀಡುವ ಅಧಿಕಾರ ಸಮಿತಿಗಿದೆ. ಮೊದಲ ಎಎಪಿ ಸರಕಾರವು ತನ್ನ 49 ದಿನಗಳ ಅವಧಿಯಲ್ಲಿ ದಾಖಲಿಸಿದ್ದ 4 ಎಫ್‌ಐಆರ್‌ಗಳ ಬಗ್ಗೆ ಏಕೆ ಕ್ರಮ ಕೈಗೊಳ್ಳಲಿಲ್ಲವೆಂದು ಅವರು ತಿಳಿಸಬೇಕೆಂದು ಸಮಿತಿಯ ಅಧ್ಯಕ್ಷೆಯೂ ಆಗಿರುವ ಬಿರ್ಲಾ ನಿನ್ನೆ ಪತ್ರಕರ್ತರೊಡನೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News