ಕೇಜ್ರಿವಾಲ್ ಆಯ್ಕೆಯ ಅಧಿಕಾರಿಯನ್ನು ನೀಡಲು ಕೇಂದ್ರ ಸರಕಾರದ ನಕಾರ

Update: 2016-06-24 18:40 GMT

ಹೊಸದಿಲ್ಲಿ,ಜೂ.24: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತನ್ನ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಿಕೊಳ್ಳಲು ಬಯಸಿರುವ ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್)ಯ ಅಧಿಕಾರಿ ಸಂಜೀವ ಚತುರ್ವೇದಿ ಅವರು ದಿಲ್ಲಿ ಸರಕಾರಕ್ಕೆ ತನ್ನ ಪ್ರತಿನಿಯೋಜನೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರವು ತಳ್ಳಿಹಾಕಿದೆ. ಸೇವಾ ನಿಯಮಗಳಲ್ಲಿ ಇಂತಹ ಎರವಲು ಸೇವೆಗೆ ಅವಕಾಶವಿಲ್ಲ ಎಂದು ಅದು ಹೇಳಿದೆ.

ಆಗಸ್ಟ್ 2015ರಲ್ಲಿ ಹರ್ಯಾಣ ಕೇಡರ್‌ನಿಂದ ಉತ್ತರಾಖಂಡ ಕೇಡರ್‌ಗೆ ವರ್ಗಾವಣೆಗೊಂಡಿರುವ ಚತುರ್ವೇದಿ ದಿಲ್ಲಿ ಸರಕಾರವನ್ನು ಸೇರುವ ಮುನ್ನ ಮೂರು ವರ್ಷಗಳ ಕಡ್ಡಾಯ ಕಾಯುವಿಕೆ ಅವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ಅದು ಸ್ಪಷ್ಟಪಡಿಸಿದೆ. 2002ರ ತಂಡದ ಐಎಫ್‌ಎಸ್ ಅಧಿಕಾರಿಯಾಗಿರುವ ಚತುರ್ವೇದಿ ಏಮ್ಸ್‌ನ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ದಿಲ್ಲಿ ಸರಕಾರಕ್ಕೆ ಅಂತರ್ ಕೇಡರ್ ಪ್ರತಿನಿಯೋಜನೆಗಾಗಿ ಕಳೆದ ವರ್ಷ ಕೋರಿಕೊಂಡಿದ್ದರು.
ಚತುರ್ವೇದಿಯವರ ಸೇವೆಯನ್ನು ದಿಲ್ಲಿ ಸರಕಾರಕ್ಕೆ ನೀಡುವಂತೆ ಕೋರಿ ಕೇಜ್ರಿವಾಲ್ ಕಳೆದ ವರ್ಷದ ಫೆ.16ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ ಜಾವಡೇಕರ್ ಅವರಿಗೆ ಪತ್ರವೊಂದನ್ನು ಬರೆದಿದ್ದರು.
ಚತುರ್ವೇದಿಯವರ ಮನವಿಯನ್ನು ಸಂಪುಟದ ನೇಮಕಗಳ ಸಮಿತಿಯು ನಿರಾಕರಿಸಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ತನ್ನ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News