ಕಾಶ್ಮೀರದ ಪುಟ್ಟಹಳ್ಳಿಯಿಂದ ಕೋಮು ಸಾಮರಸ್ಯದ ಪಾಠ!
ಹಚ್ಚ ಹಸಿರು ಹೊದ್ದು ನಿಂತಿರುವ ದಕ್ಷಿಣ ಕಾಶ್ಮೀರದ ಈ ಪುಟ್ಟ ಗ್ರಾಮದಲ್ಲಿ ಹಿಂದೂ ದೇಗುಲ ಹಾಗೂ ಮುಸ್ಲಿಂ ಮಸೀದಿ ಅಕ್ಕಪಕ್ಕದಲ್ಲೇ ಇದ್ದು, ಕೋಮುಸಾಮರಸ್ಯದ ಸ್ತಂಭಗಳಾಗಿ ಶತಮಾನಗಳಿಂದ ನಿಂತಿವೆ. ಮೂರು ದಶಕಗಳ ಇಸ್ಲಾಮಿಸ್ಟ್ ಸಂಘರ್ಷದ ನಡುವೆಯೂ ಈ ಕೋಮು ಸಾಮರಸ್ಯದ ಬುನಾದಿ ಅಲ್ಲಾಡದೇ ಭದ್ರವಾಗಿ ನಿಂತಿದೆ.
ರಾಜ್ಯದ ಇತರೆಡೆಗಳಲ್ಲಿ 1990ರ ದಶಕದಲ್ಲಿ ಪ್ರತ್ಯೇಕತಾವಾದದ ಕೂಗು ಪ್ರಬಲವಾಗಿ ಕೇಳಿಬಂದು, ಕಾಶ್ಮೀರಿ ಪಂಡಿತರ ಸಾಮೂಹಿಕ ವಲಸೆಗೆ ಕಾರಣವಾಗಿದ್ದರೂ, ಶ್ರೀನಗರದಿಂದ ಸುಮಾರು 100 ಕಿಲೋಮೀಟರ್ ದೂರದ ಮಂಝಗಾಮ್ ಗ್ರಾಮ ಮಾತ್ರ ಬಹುತೇಕ ಶಾಂತಿಯುತವಾಗಿಯೇ ಉಳಿದಿದೆ. ಈ ಗ್ರಾಮದಲ್ಲಿ ಶಾಂತಿ ನೆಲೆಸಲು 600 ವರ್ಷ ಹಳೆಯ ಪ್ರಾರ್ಥನಾ ಮಂದಿರ ಕಾರಣ ಎನ್ನುವುದು ಸ್ಥಳೀಯ ನಿವಾಸಿಗಳ ಅಂಬೋಣ.
ಹಿಂದೂ ದೇವತೆ ಖೀರ್‌ಭವಾನಿ ಮಂದಿರ ಕೂಡಾ ಈ ಪ್ರಾರ್ಥನಾ ಮಂದಿರದ ಪಕ್ಕದಲ್ಲೇ ಇದೆ. ಮುಸ್ಲಿಂ ಪ್ರಾರ್ಥನಾ ಮಂದಿರಕ್ಕೆ 15ನೇ ಶತಮಾನದ ಸೂಫಿ ಸಂತ ಬಾಬಾ ಕಿಯಾಮ್ ಉದ್ದೀನ್ ಹೆಸರನ್ನು ಇಡಲಾಗಿದೆ. ಕಾಶ್ಮೀರದಲ್ಲಿ ವಿಭಿನ್ನ ಧಾರ್ಮಿಕ ಹಿನ್ನೆಲೆಯವರು ಕೂಡಾ ಅವರ ಬೋಧನೆಗಳನ್ನು ಅನುಸರಿಸುತ್ತಾ ಬಂದಿರುವುದು ಕೋಮು ಸಾಮರಸ್ಯದ ಬುನಾದಿ. ಈ ಕಾರಣದಿಂದಾಗಿಯೇ ಮುಸ್ಲಿಮರು ಹಾಗೂ ಹಿಂದೂಗಳು ವಾರ್ಷಿಕ ಹಬ್ಬಗಳನ್ನು ಎರಡೂ ಮಂದಿರಗಳಿಗೆ ಸೇರಿದ ಜಾಗದಲ್ಲೇ ಜತೆಗೆ ಹಮ್ಮಿಕೊಳ್ಳುತ್ತಾರೆ.
ಮುಸ್ಲಿಮರು ವಾರ್ಷಿಕ ಖೀರ್‌ಭವಾನಿ ಜಾತ್ರೆ ಸಂದರ್ಭದಲ್ಲಿ ಖೀರ್ ಭವಾನಿಗೆ ವಿಶಿಷ್ಟ ಸಿಹಿ ಖಾದ್ಯವಾದ ಖೀರು ತಯಾರಿಸಿ ಎಲ್ಲ ಹಿಂದೂ ಬಾಂಧವರಿಗೆ ಅದನ್ನು ಉಣಬಡಿಸುತ್ತಾರೆ. ಅದೇ ರೀತಿ ಶ್ರೇಷ್ಠ ಸೂಫಿ ಸಂತರ ವಾರ್ಷಿಕ ದಿನಾಚರಣೆ ಸಂದರ್ಭದಲ್ಲಿ ಹಿಂದೂಗಳು ಮುಸ್ಲಿಮರ ಜತೆ ಸೇರಿಕೊಂಡು ವೈಭವದಿಂದ ಆಚರಿಸುತ್ತಾರೆ. ಈ ಎರಡೂ ಹಬ್ಬಗಳೂ ಬೇರೆ ಬೇರೆ ದಿನಗಳಲ್ಲಿ ಬರುತ್ತವೆ. ಆದರೆ ಉಳಿದ ದಿನಗಳಲ್ಲಿ ಕೂಡಾ ಮುಸ್ಲಿಮರು ದೇಗುಲಕ್ಕೆ ಹಾಗೂ ಹಿಂದೂಗಳು ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡುವ ಸಂಪ್ರದಾಯ ಇದೆ.
‘‘ಈ ಗ್ರಾಮ ಕೋಮುಸಾಮರಸ್ಯಕ್ಕೆ ಉತ್ತಮ ನಿದರ್ಶನ. ಇದು ಮುಸ್ಲಿಂ ಬಾಹುಳ್ಯದ ಗ್ರಾಮವಾದರೂ, ಹಿಂದೂ ಪಂಡಿತ ಸಹೋದರರಿಗೆ ಆ ಭಾವನೆ ಬಾರದಂತೆ ನಾವು ನಡೆದುಕೊಳ್ಳುತ್ತೇವೆ.’’ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಅರ್ಷದ್ ಬಾಬಾ ಹೇಳುತ್ತಾರೆ. ಇದು ದಶಕಗಳಷ್ಟು ಹಳೆಯದಾದ ಪವಿತ್ರಬಂಧವಾಗಿದ್ದು, ಯಾರೂ ಇದನ್ನು ಮುರಿಯಲಾರರು ಎಂಬ ತುಂಬು ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.
ಇಲ್ಲಿನ ಸಾಮರಸ್ಯದ ಬಂಧ ಅಷ್ಟಕ್ಕೇ ನಿಲ್ಲುವುದಿಲ್ಲ. ಗ್ರಾಮದ ಬಹಳಷ್ಟು ಕುಟುಂಬಗಳು ತಮ್ಮ ಮಕ್ಕಳು ಮತ್ತೊಂದು ಧರ್ಮದ ಧಾರ್ಮಿಕ ಬೋಧನೆಗಳನ್ನು ತಿಳಿದುಕೊಳ್ಳಲು ಬೇಕಾದ ಅಗತ್ಯ ವ್ಯವಸ್ಥೆ ಮಾಡುತ್ತಾರೆ. ಈ ಪ್ರಾರ್ಥನಾ ಮಂದಿರದಿಂದ ಒಂದು ಕಿಲೋಮೀಟರ್ ದೂರದಲ್ಲಿ ಇಸ್ಲಾಮಿಕ್ ಗುಂಪು ನಡೆಸುವ ಇಂಗ್ಲಿಷ್ ಮಾಧ್ಯಮ ಶಾಲೆ ಇದೆ. ಇಲ್ಲಿ ಹಲವಾರು ಮಂದಿ ಹಿಂದೂ ಮಕ್ಕಳು ಕೇವಲ ವಿಜ್ಞಾನ, ಇತಿಹಾಸ ಮತ್ತು ಗಣಿತವನ್ನು ಮಾತ್ರ ಕಲಿಯದೆ, ಮುಸ್ಲಿಂ ಪುಟಾಣಿಗಳ ಜೊತೆ ಇಸ್ಲಾಮಿಕ್ ಬೋಧನೆಗಳನ್ನೂ ಖುಷಿಯಿಂದ ಕಲಿಯುತ್ತಾರೆ.
ಗ್ರಾಮದ ಮಹ್ಮದೀಯ ಸಲಾಫಿಯಾ ಸಂಸ್ಥೆಯಲ್ಲಿ 400ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಇದು ಇಡೀ ಗ್ರಾಮದ ಕೋಮು ಸಾಮರಸ್ಯದ ಆಧಾರಸ್ತಂಭ ಎನಿಸಿಕೊಂಡಿದೆ. ‘‘ನಮ್ಮ ಮಕ್ಕಳು ಮೂಲ ವಿಷಯಗಳ ಜತೆಗೆ ಇತರ ವಿಷಯಗಳನ್ನೂ ಕಲಿಯುವುದು ನಮಗೆ ಖುಷಿಯ ವಿಚಾರ’’ ಎನ್ನುತ್ತಾರೆ ಪ್ರದೀಪ್ ಕುಮಾರ್ (78) ಎಂಬ ಹಿರಿಯ ಹಿಂದೂ ಮುಖಂಡ. ಕುಮಾರ್ ನಿವೃತ್ತ ಸರಕಾರಿ ನೌಕರರಾಗಿದ್ದು, ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಯಾವ ತೊಂದರೆಯೂ ಇಲ್ಲ. ಅದರಲ್ಲೂ ಶಾಂತಿಪ್ರಿಯವಾದ ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳುವುದರಿಂದ ಖಂಡಿತಾ ಯಾವ ಹಾನಿಯೂ ಇಲ್ಲ ಎನ್ನುವುದು ಅವರ ಅಭಿಮತ.
ನಮ್ಮ ಮಕ್ಕಳು ಇಸ್ಲಾಂ ಬಗ್ಗೆ ಕಲಿಯುವುದರಿಂದ ಸಮಾಜದ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ ಮನೆಯಲ್ಲಿ ಕಲಿಯಲಾಗದ್ದನ್ನು ಅವರು ಇಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ
1990ರ ದಶಕದ ಆರಂಭದಲ್ಲಿ ಉಗ್ರಗಾಮಿ ಚಟುವಟಿಕೆ ರಾಜ್ಯದಲ್ಲಿ ತಲೆ ಎತ್ತಿದಾಗ, ಕಾಶ್ಮೀರಿ ಪಂಡಿತರ ಕುಟುಂಬಗಳು ದಿಕ್ಕಾಪಾಲಾಗಿ ಓಡಿದವು. ಕಣಿವೆ ಪ್ರದೇಶದ ಮನೆಗಳಿಂದ ಅವರನ್ನು ಓಡಿಸಲಾಯಿತು. ಆದರೆ ಈ ಗ್ರಾಮದಲ್ಲಿ ಮಾತ್ರ ಆರು ಕುಟುಂಬಗಳು ಇಲ್ಲೇ ಉಳಿಯಲು ನಿರ್ಧರಿಸಿ, ವಾಪಾಸು ಬಂದವು. ಇದು ಸಾಧ್ಯವಾದದ್ದು, ನೆರೆಯ ಮುಸ್ಲಿಂ ಬಂಧುಗಳು ಮಾನವ ಸರಪಣಿ ನಿರ್ಮಿಸಿ, ನಮ್ಮ ರಕ್ಷಣೆಗೆ ನಿಂತರು ಎಂದು ಕುಮಾರ್ ಬಣ್ಣಿಸುತ್ತಾರೆ.
ವಿಶ್ವದ ಬೇರಾವ ಕಡೆಗಳಲ್ಲಿ, ಬೇರೆ ಸಮುದಾಯದವರು ತಮ್ಮ ಜೀವಕ್ಕೆ ಅಪಾಯ ಎದುರಾದರೂ, ಇತರರನ್ನು ರಕ್ಷಿಸಲು ಮುಂದಾಗುತ್ತಾರೆ ಎನ್ನುವುದು ಅವರ ಪ್ರಶ್ನೆ.
ಈ ಪ್ರೀತಿಯ ನಾಡಿನಿಂದ ದೂರ ಹೋದವರನ್ನು ಮರಳಿ ತವರಿಗೆ ಬರುವಂತೆ ನಾವು ಪದೇ ಪದೇ ಮನವಿ ಮಾಡಿದೆವು. ಈ ಭೂಮಿ ನಮ್ಮಿಬ್ಬರಿಗೂ ಸೇರಿದ್ದು ಎಂದು ಗ್ರಾಮದ ಪಂಚಾಯ್ತಿ ಸದಸ್ಯ ಅಬ್ದುಲ್ ರಶೀದ್ ಲಾವೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಇಲ್ಲಿಂದ ದೂರದ ಪ್ರದೇಶಗಳಿಗೆ ವಲಸೆ ಹೋದ ಹಿಂದೂ ಬಾಂಧವರು ಹಬ್ಬದ ಸಂದರ್ಭದಲ್ಲಿ ದೇವಾಲಯಕ್ಕೆ ವಾಪಸ್ಸಾಗುತ್ತಾರೆ. ಆದರೆ ಮಾತಾ ಖೀರ್‌ಭವಾನಿ ದೇವಸ್ಥಾನ ಒದಗಿಸುವ ಸುಸಜ್ಜಿತ ವಸತಿ ವ್ಯವಸ್ಥೆ ಬಳಸಿಕೊಳ್ಳುವ ಬದಲು ನಮ್ಮ ಮನೆಗಳಲ್ಲೇ ಉಳಿಯಲು ಬಯಸುತ್ತಾರೆ...ಆದರೆ ಅವರೆಲ್ಲರೂ ಖಾಯಂ ಆಗಿ ಇಲ್ಲಿಗೆ ಬರಬೇಕು ಎನ್ನುವುದು ನಮ್ಮ ಆಸೆ.. ಎಂದು ಲಾವೆ ಹೇಳುತ್ತಾರೆ.