ಪ್ರಶಸ್ತಿ ಪಡೆದ ಮೋದಿ, ಸಚಿವರ ನಿರುತ್ಸಾಹ

Update: 2016-06-25 18:38 GMT

ಪ್ರಶಸ್ತಿ ಪಡೆದ ಮೋದಿ, ಸಚಿವರ ನಿರುತ್ಸಾಹ

ಅಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿಗೆ ಪ್ರದಾನ ಮಾಡಲಾಗಿದೆ. ಈ ಸುದ್ದಿಗೆ ಮಾಧ್ಯಮಗಳು ಸಿಕ್ಕಾಬಟ್ಟೆ ಪ್ರಚಾರ ನೀಡಲಿವೆಯೆಂದು ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ಕನಿಷ್ಠ ಪಕ್ಷ ಕೇಂದ್ರ ಸಚಿವರು ಹಾಗೂ ಬಿಜೆಪಿ ಮುಖ್ಯಮಂತ್ರಿಗಳಾದರೂ ಮೋದಿಗೆ ಅಭಿನಂದನೆ ಸಲ್ಲಿಸಿಯಾರೆಂದು ಪ್ರಧಾನಿ ಕಾರ್ಯಾಲಯವು ನಿರೀಕ್ಷಿಸಿತ್ತು. ಅದೂ ಕೂಡಾ ಆಗಲಿಲ್ಲ. ಮಾರನೆಯ ದಿನವೇ ಪ್ರಧಾನಿ ಕಾರ್ಯಾಲಯವು ತಪ್ಪಿತಸ್ಥ ಸಚಿವರಿಗೆ ತನ್ನ ಅಸಮಾಧಾನವನ್ನು ತೋರ್ಪಡಿಸಿಕೊಂಡಿತು. ಮಾರನೆಯ ದಿನವೇ ಪ್ರತಿಯೊಬ್ಬ ಸಚಿವ ಹಾಗೂ ಮುಖ್ಯಮಂತ್ರಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದವು. ಆದರೆ ಇದರಲ್ಲಿ ಒಂದು ಸಂದೇಶವಂತೂ ಸ್ಪಷ್ಟವಾಗಿದೆ, ಪ್ರಧಾನಿ ದೇಶದ ಹೊರಗಿರುವಾಗಲೂ ಅವರು ಎಲ್ಲರ ಮೇಲೆ ನಿಗಾವಿಡುತ್ತಾರೆ.

ಜೋಶಿಗೆ ಅಮಿತ ಉತ್ಸಾಹ

 ಬಿಜೆಪಿಯ ಮಾರ್ಗದರ್ಶಕ ಮಂಡಳಿಗೆ ನೇಮಕಗೊಂಡ ಬಳಿಕ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರಿಗೆ ಪಕ್ಷದಲ್ಲಿ ತಮ್ಮ ಕಾಲ ಮುಗಿದೇ ಹೋಯಿತೆಂದು ಭಾವಿಸಿದ್ದರು. ಆದರೆ ಅಲಹಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅವರಿಗೊಂದು ಅಚ್ಚರಿ ಕಾದಿತ್ತು. ತುಂಬಿದ ಸಭೆಯಲ್ಲಿ ಅಡ್ವಾಣಿ ಹಾಗೂ ಜೋಶಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ನಂಬಿಗಸ್ಥ ನಿಕಟವರ್ತಿಯಾದ ಪಕ್ಷಾಧ್ಯಕ್ಷ ಅಮಿತ್ ಶಾ ಬಹಳಷ್ಟು ಪ್ರಾಮುಖ್ಯತೆ ನೀಡಿದ್ದರು. ಇವರಿಬ್ಬರೂ ಅಡ್ವಾಣಿ ಹಾಗೂ ಜೋಶಿಯವರನ್ನು ಅಧಿಕಾರಕೇಂದ್ರದಿಂದ ದೂರಕ್ಕೆ ತಳ್ಳಿದ್ದರೆಂಬ ಆರೋಪ ಎದುರಿಸುತ್ತಿದ್ದಾರೆ. ಸಮಾವೇಶದಲ್ಲಿ ತನ್ನ ಬಗ್ಗೆ ಗಮನಹರಿಸಿರುವುದು ಜೋಶಿಗೆ ಸ್ವಲ್ಪ ಸಮಾಧಾನ ತಂದಿದೆ. ಆದರೆ ಈಗ ಅರೆಕಾಲಿಕ ರಾಜಕಾರಣಿಯಾಗಿರುವ ಅಡ್ವಾಣಿ, ಅತ್ಯಂತ ಜಾಗರೂಕತೆಯಿಂದ ಪ್ರತಿಕ್ರಿಯಿಸಿದ್ದಾರೆ. ಮೋದಿಯ ಈ ನಡವಳಿಕೆಗೆ ಕಾರಣವೇನೆಂಬ ಬಗ್ಗೆ ಕೂಲಂಕುಶವಾಗಿ ಪರಿಶೋಧಿಸಲು ಅವರು ಯತ್ನಿಸುತ್ತಿದ್ದಾರೆ. ಮೋದಿ ಭಾಷಣದಲ್ಲಿ ತನ್ನನ್ನು ಪ್ರಶಂಸಿಸಿರುವುದು, ರಾಷ್ಟ್ರಪತಿ ಭವನಕ್ಕೆ ತನ್ನ ಸಂಭಾವ್ಯ ಪ್ರವೇಶಕ್ಕೆ ನೀಡಿದ ಸಂಕೇತವೆಂದು ಜೋಶಿ ಭಾವಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ತಾನು ಸ್ಪರ್ಧಿಸುವ ಸಾಧ್ಯತೆಯಿದೆ ಎಂಬ ಸೂಚನೆಯನ್ನು ಅವರು ಕೆಲವು ಪತ್ರಕರ್ತರ ಮುಂದೆ ಹೇಳಿಕೊಂಡಿದ್ದಾರೆನ್ನಲಾಗಿದೆ. ಅವರ ಈ ಉತ್ಸಾಹವು ಕೇವಲ ಕ್ಷಣಿಕವೇ ಅಥವಾ ಅದರಲ್ಲಿ ತಿರುಳಿದೆಯೇ ಎಂಬುದನ್ನು ಕಾದುನೋಡಬೇಕಷ್ಟೆ.

ಕಮಲನಾಥ್ ಆಗಮನ-ನಿರ್ಗಮನ!
  ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ಕಮಲನಾಥ್ ಅವರ ನೇಮಕ ಹಾಗೂ ಅಷ್ಟೇ ತ್ವರಿತವಾಗಿ ಅವರನ್ನು ಆ ಹುದ್ದೆಯಿಂದ ಕಿತ್ತೊಗೆದುದು, ಪಕ್ಷದ ಅನೇಕ ನಾಯಕರನ್ನು ಚಕಿತಗೊಳಿಸಿದೆ. ಈ ಗೊಂದಲಕ್ಕೆ ಕಾರಣ ಹುಡುಕುತ್ತಾ ಹೋದರೆ, ಪಕ್ಷದ ಎರಡು ಅಧಿಕಾರ ಕೇಂದ್ರಗಳಾದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರತ್ತ ಬೆರಳು ತೋರಿಸಲಾಗುತ್ತಿದೆ. ಉಪಾಧ್ಯಕ್ಷ ರಾಹುಲ್‌ಗಾಂಧಿಯವರು, ಕಮಲ್‌ನಾಥ್ ಅವರನ್ನು ಉತ್ತರಪ್ರದೇಶ ಉಸ್ತುವಾರಿ ಹೊಂದಿರುವ ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲು ಆಸಕ್ತಿ ವಹಿಸಿದ್ದರು. ಆದರೆ ಕಾಂಗ್ರೆಸ್ ಅಧ್ಯಕ್ಷೆಯಾದ ಸೋನಿಯಾಗಾಂಧಿಯ ಸಲಹೆಗಾರರು ನಾಥ್‌ಗೆ ಪಂಜಾಬ್‌ನ ಹೊಣೆಗಾರಿಕೆ ನೀಡುವಂತೆ ಸೂಚಿಸಿದ್ದರು. ಇದೇ ವೇಳೆ, ಕಮಲ್‌ನಾಥ್ ಅವರು ಪಕ್ಷದ ಮಧ್ಯಪ್ರದೇಶ ಘಟಕದ ನಾಯಕತ್ವವನ್ನು ವಹಿಸಲು ಆಸಕ್ತಿ ಹೊಂದಿದ್ದರು. 1984ರ ಸಿಖ್ಖ್ ವಿರೋಧಿ ಗಲಭೆಗಳಲ್ಲಿ ಕಮಲ್‌ನಾಥ್ ಅವರ ಪಾತ್ರವಿದೆಯೆಂದು ಆಮ್ ಆದ್ಮಿ ಪಕ್ಷ ಹಾಗೂ ಸಾಮಾಜಿಕ ಸಂಘಟನೆಗಳು ಗದ್ದಲವೆಬ್ಬಿಸಿದಾಗ ನಾಥ್ ದಿಢೀರ್ ಸ್ಥಾನದಿಂದ ನಿರ್ಗಮಿಸಿದರು. ಶೀಘ್ರದಲ್ಲೇ ಚುನಾವಣೆಗೆ ತೆರಳಲಿರುವ ಪಂಜಾಬ್‌ನಲ್ಲಿ, ದಿಲ್ಲಿ ಸಿಖ್ಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್‌ನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಎಎಪಿ ಹಾಗೂ ಅಕಾಲಿಗಳು ನಡೆಸುತ್ತಿರುವ ಪ್ರಚಾರವನ್ನು ಮಟ್ಟಹಾಕುವ ಅಗತ್ಯವಿರುವುದನ್ನು ಅವರು ಸೋನಿಯಾಗೆ ಮನವರಿಕೆ ಮಾಡಿಕೊಟ್ಟರು. ಆದರೆ ಈ ಘಟನೆಯು ಪಕ್ಷದ ವರ್ಚಸ್ಸಿಗೆ ಹಾನಿಯುಂಟು ಮಾಡಿದೆ.

ದುಬಾರಿ ಬೆಲೆ ತೆತ್ತ ಅಜಿತ್
    ‘ಕೈಗೆ ಸಿಕ್ಕಿದರೂ ಬಾಯಿಗಿಲ್ಲ’ ಎಂಬ ಗಾದೆ ಮಾತೊಂದಿದೆ. ಇದು ರಾಷ್ಟ್ರೀಯ ಲೋಕದಳದ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಅವರಿಗೆ ಬಹಳ ಚೆನ್ನಾಗಿ ಅನ್ವಯಿಸುತ್ತದೆ. ಮುಲಾಯಂಸಿಂಗ್ ಅವರ ಬೆಂಬಲ ಸೇರಿದಂತೆ ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಲು ಮುಲಾಯಂಗೆ ಎಲ್ಲಾ ರೀತಿಯ ಅನುಕೂಲಗಳು ಕೂಡಿಬಂದಿದ್ದವು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಅವರು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಗದೆ ಹೋಯಿತು. ನಾಮಪತ್ರ ಸಲ್ಲಿಕೆಯ ಸಮಯದಲ್ಲಷ್ಟೇ ಅವರಿಗೆ ತಾನು ಮತದಾರರ ಗುರುತು ಚೀಟಿ ಹೊಂದಿಲ್ಲವೆಂಬುದು ಅರಿವಾಯಿತು. ಹೊಸದಿಲ್ಲಿಯ ತುಘಲಕ್ ರಸ್ತೆಯ ನಿವಾಸವನ್ನು ತ್ಯಜಿಸಿದ ಬಳಿಕ ಅವರ ಹೆಸರನ್ನು ಅಲ್ಲಿನ ಮತದಾರ ಪಟ್ಟಿಯಿಂದ ತೆಗೆದುಹಾಕಲಾಯಿತು. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವರು ತನ್ನ ಹಾಲಿ ವಸತಿ ಪ್ರದೇಶ ಅಥವಾ ಸ್ವಕ್ಷೇತ್ರದಲ್ಲಿ ಮತದಾರನಾಗಿ ಹೆಸರು ನೋಂದಾಯಿಸಿಕೊಳ್ಳುವ ಅಗತ್ಯವಿತ್ತು. ಆದರೆ ಹಾಗೆ ಮಾಡಲು ಅವರು ವಿಫಲರಾಗಿದ್ದರು. ತನ್ನ ಸುದೀರ್ಘ ಸಾರ್ವಜನಿಕ ಜೀವನದ ಹೊರತಾಗಿಯೂ ಅಜಿತ್ ಸಿಂಗ್ ಅವರು ಸಂಸತ್ ಸದಸ್ಯರಾಗಬೇಕಾದರೆ, ಮತದಾರರಾಗಿ ನೋಂದಾವಣೆಗೊಳ್ಳುವುದು ಕಡ್ಡಾಯವೆಂಬುದನ್ನು ಮರೆತಿದ್ದರು.

ರಾಜ್‌ನಾಥ್‌ಗೆ ಇರಿಸುಮುರಿಸು
ಉತ್ತರಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ‘ಮುಖ’ ತಾನಾಗಲಿದ್ದೇನೆಂಬ ಸುದ್ದಿಯು ಟಿವಿ ವಾಹಿನಿಗಳಲ್ಲಿ ಹರಿದಾಡಿರುವ ಬಗ್ಗೆ ಕೇಂದ್ರ ಗೃಹ ಸಚಿವ ರಾಜ್‌ನಾಥ ಸಿಂಗ್ ಅಚ್ಚರಿಗೊಂಡಿದ್ದರು. ವೈಯಕ್ತಿಕವಾಗಿ ರಾಜ್‌ನಾಥ ಸಿಂಗ್ ಅವರು ಈ ಯೋಜನೆಗೆ ವಿರುದ್ಧವಾಗಿದ್ದಾರೆ. ಅಟಲ್‌ಬಿಹಾರಿ ವಾಜಪೇಯಿಯವರ ಕಾಲದಲ್ಲಿ ಉತ್ತರಪ್ರದೇಶದ ಮುಖ.್ಯಮಂತ್ರಿಯಾಗಿದ್ದ ರಾಜ್‌ನಾಥ್‌ಸಿಂಗ್ ಮತ್ತೆ ಆ ಸ್ಥಾನಕ್ಕೆ ಅಭ್ಯರ್ಥಿಯಾಗುವುದು, ಅವರಿಗೆ ನೀಡಲಾಗುವ ಒಂದು ಬಗೆಯ ಹಿಂಭಡ್ತಿಯಾಗಿದೆಯೆಂದು ಅವರ ನಿಕಟವರ್ತಿಯೊಬ್ಬರು ಹೇಳಿದ್ದಾರೆ ರಾಜನಾಥ್ ಕೂಡಾ ಮುಂದಿನ ವರ್ಷ ಚುನಾವಣೆಯೆದುರಿಸಲಿರುವ ತನ್ನ ತವರು ರಾಜ್ಯಕ್ಕೆ ಹಿಂದಿರುಗಲು ಆಸಕ್ತರಾಗಿಲ್ಲ.
 ಹಾಗಾದರೆ ಈ ವದಂತಿಗಳು ಹೇಗೆ ಹುಟ್ಟಿಕೊಂಡವು?. ಈ ಕುರಿತು ಅಳವಾದ ಶೋಧ ನಡೆಸಿದಾಗ ಕೊನೆಗೂ ರಹಸ್ಯ ಬಯಲಾಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿಯವರು ತನ್ನ ಕಚೇರಿಯಲ್ಲಿ ನಡೆದ ಗುಪ್ತ ಮಾತುಕತೆಯೊಂದರಲ್ಲಿ, ಉತ್ತರಪ್ರದೇಶದಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ರಾಜ್‌ನಾಥ್ ಪ್ರಥಮ ಆಯ್ಕೆಯೆಂದು ಹೇಳಿಕೊಂಡಿದ್ದುದೇ ಈ ವದಂತಿ ಹುಟ್ಟಿಕೊಳ್ಳಲು ಕಾರಣವಾಯಿತು. ಒಟ್ಟಿನಲ್ಲಿ ಇದರಿಂದ ರಾಜ್‌ನಾಥಗೆ ಇರಿಸುಮುರಿಸಾಗಿರುವುದಂತೂ ಸ್ಪಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News