ಯಯಾತಿಯ ವಾರ್ಧಕ್ಯ ಮತ್ತು ಪ್ರತಾಪ್ ಚಂದ್ರ ಶೆಟ್ರು !

Update: 2016-06-26 13:12 GMT

ಇವರು ಕೆ. ಪ್ರತಾಪಚಂದ್ರ ಶೆಟ್ಟಿ. ಇವರು ಮೊದಲ ಬಾರಿಗೆ ಶಾಸಕರಾದದ್ದು ಗುಂಡೂರಾಯರ ಕಾಲದಲ್ಲಿ, ಅಂದರೆ 1983ರಲ್ಲಿ. ಅಲ್ಲಿಂದ ಇಲ್ಲಿಯ ತನಕವೂ ಸತತವಾಗಿ 4 ಬಾರಿ ವಿಧಾನ ಸಭೆಯಲ್ಲಿ ಕುಂದಾಪುರ ಕ್ಷೇತ್ರವನ್ನೂ 3 ಬಾರಿ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಯಾಗಿ ವಿಧಾನ ಪರಿಷತ್ತನ್ನೂ ಪ್ರತಿನಿಧಿಸುತ್ತಾ ಬಂದಿರುವ ಶೆಟ್ಟರು ವೀರಪ್ಪ ಮೋಯಿಲಿ, ಎಚ್. ಕೆ. ಪಾಟೀಲ್, ರಮಾನಾಥ ರೈ ಅವರಂತಹ ಹೆವಿವೈಟ್ ರಾಜಕಾರಣಿಗಳ ಸಮಕಾಲೀನರು.

ತಿಳಿವಳಿಕೆ, ಸೂಕ್ಷ್ಮಮತಿ, ತಂತ್ರಗಾರಿಕೆ, ಕಸುಬುದಾರಿಕೆ, ಪ್ರಾಮಾಣಿಕತೆ, ಜನಪ್ರಿಯತೆಗಳೇ ಮಾನದಂಡವಾಗಿದ್ದರೆ, ಈವತ್ತು ಮುಖ್ಯಮಂತ್ರಿ ಆಗಬಹುದಾದಷ್ಟು ಸಾಮರ್ಥ್ಯ ಹೊಂದಿರುವ ವ್ಯಕ್ತಿ. ಶಾಸಕರಾಗಿದ್ದಾಗ ಒಮ್ಮೆ ಲಂಕೇಶರು ಆಯ್ದ ಕರ್ನಾಟಕದ ಅತ್ಯುತ್ತಮ ಶಾಸಕರ ಪಟ್ಟಿಯಲ್ಲಿ ಅವರಿಗೆ ಸ್ಥಾನವಿತ್ತು. ಈವತ್ತಿಗೂ ಸದನದಲ್ಲಿ ವಿಷಯನಿಷ್ಠರಾಗಿ ತನ್ನದೇ ಸರ್ಕಾರದ ವಿರುದ್ಧವೂ ಮಾತನಾಡಬಲ್ಲ ಕೆಲವೇ ಕೆಲವು ಶಾಸಕರಲ್ಲಿ ಅವರೂ ಒಬ್ಬರು. ವಿಧಾನಸಭೆ, ಜಿಲ್ಲಾ ಪಂಚಾಯತು ಸಭೆಗಳಲ್ಲೂ ಮಂತ್ರಿಗಳು, ಅಧಿಕಾರಿಗಳು ಈವತ್ತಿಗೂ ತಯಾರಿ ಮಾಡದೇ ಬಂದು ಮಾತನಾಡಲು ಭಯಪಡುವ ರಾಜ್ಯದ ಬೆರಳೆಣಿಕೆಯ ಜನಪ್ರತಿನಿಧಿಗಳಲ್ಲಿ ಒಬ್ಬರು ಪ್ರತಾಪಚಂದ್ರ ಶೆಟ್ಟರು.
ವಿಧಾನ ಪರಿಷತ್ತಿನಲ್ಲಿ ಈವತ್ತು ಅತ್ಯಂತ ಹಿರಿಯ ಸದಸ್ಯರಾಗಿರುವ ಪ್ರತಾಪ್, ಈವತ್ತಿನ ತನಕ ಸಚಿವರಾಗದಿರುವುದಕ್ಕೆ ಏನಾದರೂ ಕಾರಣ ಇದ್ದರೆ, ಅವರು ಬಾಯಿ ಬಿಟ್ಟು ತನಗೆ ಹುದ್ದೆ ಕೊಡಿ ಎಂದು ಕೇಳದಿರುವುದು. ಕನಿಷ್ಟ 4 ಬಾರಿ ಸಚಿವರಾಗುವ ಹಂತಕ್ಕೆ ಹೋಗಿ, ಬೇರೆ ಇನ್ಯಾರೋ ಪಟ್ಟು ಹಿಡಿದು ಹಠ ಮಾಡಿದರೆಂದು ಕೊನೆಯ ಕ್ಷಣದಲ್ಲಿ ಪಟ್ಟಿಯಿಂದ ಹೊರಬಿದ್ದ ಚರಿತ್ರೆ ಅವರದು. ಕುಂದಾಪುರ ಕ್ಷೇತ್ರದಲ್ಲಿ ಬಹುತೇಕ ಎಲ್ಲ ಮೂಲಭೂತ ಇನ್ಫ್ರಾಸ್ಟ್ರಕ್ಚರ್ ಗಳು ಪೂರ್ಣಗೊಂಡದ್ದು, ಅವರ ಶಾಸಕತ್ವದ ಅವಧಿಯಲ್ಲೇ ಎಂಬ ಕುರಿತು ಯಾರದೂ ತಕರಾರು ಇರಲಾರದು. ವಿಧಾನ ಪರಿಷತ್ತಿನ ಸದಸ್ಯರಾಗಿ, ತಾನು ಪ್ರತಿನಿಧಿಸುವ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಭೇಟಿ ನೀಡಿ, ಅನುದಾನ ಕೊಟ್ಟುಬರುವ ಹೊಸಮಾದರಿ ಹಾಕಿಕೊಟ್ಟಿದ್ದಾರೆ.
ಸದ್ಯ ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್ಸಿನ ಹೈಕಮಾಂಡೇ ಆಗಿರುವ ಆಸ್ಕರ್ ಫೆರ್ನಾಂಡೆಸ್ ಅವರಿಗೆ ಕರಾವಳಿಯ ಕಣ್ಣು-ಬಾಯಿ-ಕಿವಿ ಆಗಿರುವ ಪ್ರತಾಪಚಂದ್ರ ಶೆಟ್ಟರನ್ನು ಅವರು ತಾನಾಗಿ ಕೇಳಿಲ್ಲ ಎಂಬ ಕಾರಣಕ್ಕೆ ಯಾವುದೇ ಹುದ್ದೆ ಕೊಡದೆ ಇದ್ದರೂ ಈವತ್ತಿನ ತನಕ ಅವರು ಆ ಬಗ್ಗೆ ಎಲ್ಲೂ ನೋವು ತೋರಿಸಿಕೊಂಡಿಲ್ಲ; ಚಕಾರ ಎತ್ತಿಲ್ಲ. ಪ್ರಚಾರ ಬಯಸದೆ ತನ್ನ ಮಿತಿಯಲ್ಲಿ ತನ್ನ ಕೆಲಸ ಮಾಡುತ್ತಲೇ ಹೋಗುತ್ತಿರುವ ಪ್ರತಾಪ್ ಚಂದ್ರ ಶೆಟ್ಟರಿಗೆ ಕರಾವಳಿಯ ರಾಜಕೀಯ ಅಯಾಚಿತವಾಗಿ ವಾರ್ಧಕ್ಯ ತಂದುಕೊಟ್ಟಿದೆ. ವಿಷನ್ ಇರುವ, ಮಚೂರ್ಡ್ ರಾಜಕಾರಣಿಯೊಬ್ಬ ಈವತ್ತಿನ ರಾಜಕೀಯದಲ್ಲಿ ಅನುಭವಿಸಲೇ ಬೇಕಾಗಿರುವ ಇರುಸುಮುರುಸು ಇದು.
ಕಾಂಗ್ರೆಸ್ಸಿನ ಹೊಸ ಬೆಳೆ ಪ್ರಮೋದ್ ಮಧ್ವರಾಜ್ ಅವರನ್ನು ಪ್ರೀತಿಯಿಂದಲೇ ಹರಸಿ ಕಳಿಸಿರುವ ಪ್ರತಾಪ ಚಂದ್ರ ಶೆಟ್ಟಿ ಅವರ ದೊಡ್ಡತನಕ್ಕೆ ಅಭಿನಂದನೆ ಸಲ್ಲಿಸಲು ಈ ಪೋಸ್ಟ್.

 

Writer - ರಾಜಾರಾಮ್ ತಲ್ಲೂರ್

contributor

Editor - ರಾಜಾರಾಮ್ ತಲ್ಲೂರ್

contributor

Similar News