ಸಾಮಾಜಿಕ ನ್ಯಾಯಕ್ಕೆ ಅರಸು ಹಾಕಿದ ಅಡಿಪಾಯ ವಿಧಾನಸೌಧಕ್ಕಿಂತ ಗಟ್ಟಿ

Update: 2016-06-28 18:24 GMT

ಹಾಗೆ ನೋಡಿದರೆ, ರಾಜಕೀಯವಾಗಿ ಅರಸು- ಇಂದಿರಾ ಗಾಂಧಿ ಇಬ್ಬರದೂ ಅತ್ಯುತ್ತಮ ಅಂಡರ್‌ಸ್ಟಾಂಡಿಂಗ್. ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬರಲು ಸಾಧ್ಯವೇ ಇಲ್ಲವೇನೋ ಅನ್ನುವಷ್ಟು ಗಟ್ಟಿಯಾಗಿತ್ತು. ಆದರೆ ಸಿಲ್ಲಿ ವಿಷಯಕ್ಕೆ ಇಬ್ಬರೂ ಬೇರೆಯಾಗಿಬಿಟ್ಟರು. ಒಬ್ಬರಿಗೆ ಒಂದೇ ಪೋಸ್ಟ್ ಎಂಬ ಕಾರಣವೇ ದೊಡ್ಡದಾಯಿತು. ಪಿಸಿಸಿ ಪ್ರೆಸಿಡೆಂಟ್ ನೇಮಕ ಮಾಡುವಲ್ಲಿ ಅವರಿಬ್ಬರ ನಡುವೆ ಬಿರುಕುಂಟಾಯಿತು. ಕೆಲವರು, ಶಕುನಿ-ಕೈಕೇಯಿ-ಮಂಥರೆ ಥರದವರು ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟು ಮಾಡಿ, ತಮಾಷೆ ನೋಡಿದರು. ಇಂಥವರು ಆ ಕಾಲಕ್ಕಲ್ಲ, ಈಗಲೂ ಇದ್ದಾರೆ... ಕಾಂಗ್ರೆಸ್‌ನಲ್ಲಿ.

‘ಅರಸು ಹಣೆಬರಹ’ ಅಂದ್ರು ಬರೂವ

1977-78ರಲ್ಲಿ ದೇವಕಾಂತ್ ಬರೂವ ಎಐಸಿಸಿ ಅಧ್ಯಕ್ಷರಾಗಿ ದ್ದರು. ಆಗ ಕರ್ನಾಟಕದಲ್ಲಿ ದೇವರಾಜ ಅರಸು ಮೊದಲ ಟರ್ಮ್ ಮುಗಿಸಿ, ಎರಡನೇ ಟರ್ಮ್‌ಗೆ ಸಿದ್ಧರಾಗುತ್ತಿದ್ದರು. ಪಕ್ಷವನ್ನು ಇನ್ನಷ್ಟು ಬಲಪಡಿಸುವ ದೃಷ್ಟಿಯಿಂದ ಹಿಂದುಳಿದ ವರ್ಗಗಳ ನಾಯಕ ಎನಿಸಿಕೊಂಡ ಎಸ್.ಬಂಗಾರಪ್ಪ, ಒಕ್ಕಲಿಗ ಸಮುದಾಯದ ಎಚ್.ಟಿ.ಕೃಷ್ಣಪ್ಪ ಇನ್ನೂ ಮುಂತಾದ ಏಳೆಂಟು ಜನರಿದ್ದ ಪಟ್ಟಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಅನುಮತಿಗಾಗಿ ದಿಲ್ಲಿಗೆ ಕಳುಹಿಸಿಕೊಟ್ಟಿದ್ದರು. ನಾನಾಗ ದಿಲ್ಲಿಯಲ್ಲಿದ್ದೆ, ಆ ಕೆಲಸವನ್ನು ಅರಸು ನನಗೇ ವಹಿಸಿ, ‘‘ಸ್ವಾಮೀಜಿ, ಒಂದು ಪಟ್ಟಿ ತಯಾರಿಸಿ ಅಧ್ಯಕ್ಷರಿಗೆ ಕಳುಹಿಸಿಕೊಟ್ಟಿದ್ದೇನೆ, ಅವರೆಲ್ಲರನ್ನು ಸೇರಿಸಿಕೊಂಡರೆ ಕಾಂಗ್ರೆಸ್ ಸ್ಟ್ರೆಂಥನ್ ಆಗುತ್ತದೆ, ನೀವೇ ಖುದ್ದಾಗಿ ಬರೂವ ಸಾಹೇಬರ ಬಳಿ ಹೋಗಿ ಮಾಡಿಸಿಕೊಂಡು ಬರಬೇಕು’’ ಎಂದರು. ಆಗಲಿ ಎಂದು ಹೇಳಿ ಡಿ.ಕೆ.ಬರೂವ ಹತ್ತಿರ ಹೋದೆ. ಅವರು ಏನೇನೂ ತಕರಾರು ತೆಗೆಯದೆ ಅರಸು ರೆಕಮೆಂಡ್ ಮಾಡಿ ಕಳುಹಿಸಿದ್ದ ಆ ಪಟ್ಟಿಗೆ ಓಕೆ ಎಂದರು.

ಆದರೆ ಆ ಪಟ್ಟಿಯಲ್ಲಿದ್ದ ಮೊದಲನೆ ಹೆಸರಾದ ‘‘ಎಸ್.ಬಂಗಾರಪ್ಪನವರನ್ನು ಬಿಟ್ಟು ಮಿಕ್ಕೆಲ್ಲರನ್ನೂ ತೆಗೆದುಕೊಳ್ಳಬಹುದು’’ ಎಂದು ಷರಾ ಬರೆದಿದ್ದರು. ನನಗೆ ಕುತೂಹಲ ತಡೆಯಲಾಗದೆ, ‘‘ಬಂಗಾರಪ್ಪನವರನ್ನು ಬಿಟ್ಟಿದ್ದೇಕೆ ಸರ್?’’ ಎಂದು ಕೇಳಿದೆ. ಅದಕ್ಕವರು ‘‘ಇನ್‌ದ ಇಂಟರೆಸ್ಟ್ ಆಫ್ ಅರಸ್ ಆ್ಯಂಡ್ ಕಾಂಗ್ರೆಸ್ ಓನ್ಲಿ’’ ಅಂದರು. ಆ ಪಟ್ಟಿ ಮತ್ತು ಒಕ್ಕಣೆ ನೋಡಿ ಅರಸು ಅಸಮಾಧಾನಗೊಂಡರು. ‘‘ಬರೂವಗೆ ಹೇಳಿಬಿಡಿ, ಈ ರೀತಿ ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುವುದು ಕಷ್ಟವೆಂದು’’ ಎಂದರು. ನಾನು ಇಂದಿರಾ ಮೇಡಂ ಹಾಗೂ ಬರೂವರಿಗೆ ಅರಸು ಹೇಳಿದ್ದನ್ನು ಹೇಳಿದೆ. ಸಿಕ್ಕಾಪಟ್ಟೆ ಓದಿಕೊಂಡಿದ್ದ, ಕಾನೂನು ಪಂಡಿತರಾಗಿದ್ದ, ಬುದ್ಧಿವಂತರಾಗಿದ್ದ ಬರೂವ ಕೊಂಚ ಅಸಮಾಧಾನದಿಂದಲೇ, ‘‘ನನ್ನ ತಿಳಿವಳಿಕೆ ಪ್ರಕಾರ ಸರಿ ಇದೆ, ಇಷ್ಟರ ಮೇಲೆ ಅರಸು ಹಣೆಬರಹ, ನಾನೇನು ಮಾಡಲಿಕ್ಕಾಗುವುದಿಲ್ಲ’’ ಅಂದು ‘‘ನಾಳೆ ಬೆಳಗ್ಗೆ ಮನೆಗೆ ಬ್ರೇಕ್‌ಫಾಸ್ಟ್‌ಗೆ ಬನ್ನಿ, ಮಾತನಾಡೋಣ’’ ಎಂದರು. ವಿಶಾಲವಾದ ಮನೆ, ಒಂದು ಫ್ಲೋರ್‌ನಲ್ಲಿ ಸುಸಜ್ಜಿತ ಲೈಬ್ರರಿ.

ನನ್ನ ಕರೆದು, ‘‘ಬುಕ್ ನಂಬರ್ 423 ತೆಗೆದುಕೊಂಡು ಬಾ, ಅದರಲ್ಲಿ ಮಾರ್ಕ್ ಮಾಡಿಟ್ಟಿದ್ದೇನೆ, ಅದನ್ನು ನಿಮ್ಮ ಅರಸುಗೆ ತೋರಿಸು’’ ಎಂದರು. ಅದು ಆಂಥ್ರಾಪಾಲಜಿ ಬುಕ್. ಅದು ಜಗತ್ತಿನ ಜಾತಿಗಳನ್ನು, ಆ ಜಾತಿಗೆ ಸೇರಿದ ಜನರನ್ನು ಸೂಕ್ಷ್ಮವಾಗಿ ಅನಲೈಸ್ ಮಾಡಿದ್ದ ಪುಸ್ತಕ. ಅವರು ಮಾರ್ಕ್ ಮಾಡಿದ್ದ ಪೇಜ್ ತೆಗೆದು ನೋಡಿದೆ, ಅದರಲ್ಲಿ ‘‘ಕ್ಯಾರೆಕ್ಟರ್ ಆಫ್ ದಟ್ ಕಮ್ಯುನಿಟಿ... ಅನ್‌ಪ್ರೆಡಿಕ್ಟೆಬಲ್ ಫೆಲೋ’’ ಅಂತ ಬರೆದಿದ್ದರು. ಬರೂವ ಮುಖ ನೋಡಿದೆ, ‘‘ಇಷ್ಟರ ಮೇಲೆ ನಿಮ್ಮ ಹಣೆಬರಹ’’ ಅಂದರು. ದೇವರಾಜ ಅರಸರು ದಿಲ್ಲಿಗೆ ಬರುವ ಮುಂಚೆಯೇ ಈಡಿಗರಿಗೆ ಮಾತು ಕೊಟ್ಟು ಬಂದಿದ್ದರು. ಆ ಕಾರಣಕ್ಕೆ ಹಠಕ್ಕೆ ಬಿದ್ದು ಬಂಗಾರಪ್ಪನವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಅಷ್ಟೇ ಅಲ್ಲ, ಚುನಾವಣೆಗೆ ಟಿಕೆಟ್ ಕೊಟ್ಟು ಗೆಲ್ಲಿಸಿ, ಮೊದಲ ಬಾರಿಗೆ ಸ್ಟೇಟ್ ಮಿನಿಸ್ಟರ್ ಮಾಡಿದರು. ಅನೌನ್ಸ್ ಆದ ತಕ್ಷಣವೇ ಬಂಗಾರಪ್ಪ ಉಲ್ಟಾ ಹೊಡೆದರು. ನಾನು ಹಿಂದುಳಿದ ನಾಯಕ, ಇದು ನನಗೆ ಮಾಡಿದ ಅವಮಾನ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಎಂದು ಧಮ್ಕಿ ಹಾಕಿದರು. ಆರಂಭದಲ್ಲೇ ಆದ ಬಿರುಕು-ಬಂಡಾಯವನ್ನು ಪ್ಯಾಚಪ್ ಮಾಡಲು ಅರಸು, ತಾವೇ ಸೋತು ಬಂಗಾರಪ್ಪರನ್ನು ಕ್ಯಾಬಿನೆಟ್ ಮಿನಿಸ್ಟರ್ ಮಾಡಿ, ಭಾರೀ ಖಾತೆಗಳನ್ನೇ ಕೊಟ್ಟು ಗೌರವಿಸುವ ಮೂಲಕ ಸುಮ್ಮನಿರಿಸಿದರು.

ಆದರೆ ಇದೇ ಬಂಗಾರಪ್ಪ, ಪಿಸಿಸಿ ಪ್ರೆಸಿಡೆಂಟ್ ಆಗುವ ಮೂಲಕ ಅರಸು-ಇಂದಿರಾ ನಡುವಿನ ವೈಮನಸ್ಯಕ್ಕೆ ಬೀಜ ಬಿತ್ತಿದರು. ಹಾಗೆಯೇ ಇದೇ ಬಂಗಾರಪ್ಪ, ಅರಸರನ್ನು ಬಿಟ್ಟು ಹೋದವರಲ್ಲಿ ಮೊದಲಿಗರಾಗಿದ್ದರು. ಡಿ.ಕೆ.ಬರೂವ ಹೇಳಿದ್ದ ಭವಿಷ್ಯ ನಿಜ ಮಾಡಿದ್ದರು.

ಅನುಮಾನ, ಪಿತೂರಿ, ಗಾಳಿಸುದ್ದಿಗಳೇ ಮುಂದೆ

1977ರಲ್ಲಿ, ರಾಯ್‌ಬರೇಲಿ ಕ್ಷೇತ್ರದಿಂದ ರಾಜ್‌ನಾರಾಯಣ್ ಎಂಬ ಎಡಬಿಡಂಗಿ ವ್ಯಕ್ತಿಯ ಎದುರು ಸೋತು ಇಂದಿರಾ ಗಾಂಧಿ ಮನೆಯಲ್ಲಿ ಕೂರುವಂತಾಗಿದ್ದು ಅರಸು ಅವರಿಗೆ ಭಾರೀ ಬೇಸರದ ಸಂಗತಿಯಾಗಿತ್ತು. ಅವರನ್ನು ಕರ್ನಾಟಕಕ್ಕೆ ಕರೆದು ತಂದು ಗೆಲ್ಲಿಸಿ ಕಳುಹಿಸಬೇಕೆಂಬುದು ಅವರ ಆಸೆಯಾಗಿತ್ತು. ಆಗಲೇ ಅರಸು ಜ್ಯೋತಿಷ್ಯ, ಶಾಸ್ತ್ರ, ಶಕುನ ನಂಬಲಿಕ್ಕೆ ಶುರು ಮಾಡಿದ್ದರು. ನನ್ನನ್ನು ಕರೆದು, ‘‘ಸ್ವಾಮೀಜಿ, ಜ್ಯೋತಿಷ್ಯದಲ್ಲಿ ಚಿಕ್ಕಮಗಳೂರು-ಇಂದಿರಾ ಹೆಸರು ಬಂದಿದೆಯಂತೆ, ನಾನೂ ನೀನೂ ಕೂತು ತೀರ್ಮಾನ ತೆಗೆದುಕೊಳ್ಳುವುದರ ಬದಲು, ಚಿಕ್ಕಮಗಳೂರಿನ ಗ್ರಾಮ ಪಂಚಾಯತ್ ಅಧ್ಯಕ್ಷರು-ಉಪಾಧ್ಯಕ್ಷರ ಸಭೆ ಕರೆದು, ಆ ಸಭೆಯಲ್ಲಿ ಮೇಡಂ ಹೆಸರು ಪ್ರಸ್ತಾಪವಾಗಿ, ಅವಿರೋಧವಾಗಿ ಆಯ್ಕೆ ಆಗಲಿ’’ ಎಂದರು. ಇಂದಿರಾ ಗಾಂಧಿ ಸ್ಪರ್ಧಿಸುವುದು ಗ್ಯಾರಂಟಿಯಾಯಿತು.

ನಾನೇ ಮುಂದೆ ನಿಂತು ನಾಮಿನೇಷನ್ ಪೇಪರ್ಸ್‌ ರೆಡಿ ಮಾಡಿದೆ. ಇಷ್ಟಾದರೂ ನಮ್ಮವರೇ ಕೆಲವರು ಕೊನೆಯ ಗಳಿಗೆಯವರೆಗೂ ಮೇಡಂ ಕಿವಿಗೆ ಇಲ್ಲಸಲ್ಲದ ಗಾಳಿಸುದ್ದಿಗಳನ್ನು ತುಂಬುತ್ತಲೇ ಇದ್ದರು. ಅವರು ಹಿಂದೇಟು ಹಾಕುತ್ತಲೇ ಇದ್ದರು. ಅದಕ್ಕೆ ಸರಿಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಅರಸು ಸಭೆಗಳು, ದಿಲ್ಲಿ ನಾಯಕರ ಭೇಟಿಗಳು ನಡೆಯುತ್ತಿದ್ದುದು ಆ ಅನುಮಾನಕ್ಕೆ ಪುಷ್ಟಿ ಕೊಟ್ಟಿತ್ತು. ನಾಮಿನೇಷನ್ ಫೈಲ್ ಮಾಡುವ ಕೊನೆಯ ಕ್ಷಣದವರೆಗೂ ಇಂದಿರಾಗಾಂಧಿ ಗೊಂದಲದಲ್ಲೇ ಇದ್ದರು. ಇಂತಹ ಸಂದಿಗ್ಧ ಸಂದರ್ಭದಲ್ಲಿಯೇ ನನ್ನನ್ನು ಕರೆದ ಇಂದಿರಾ ಗಾಂಧಿಯವರು, ‘‘ನಾನು ಸೋತರೆ? ನನ್ನನ್ನು ಅವಮಾನಿಸಲು ಅರಸು ಕರ್ನಾಟಕಕ್ಕೆ ಕರೆತಂದಿದ್ದಾರ? ಜನತಾ ಅಲೆ ಇರುವಾಗ, ಕೇಂದ್ರ ಸರಕಾರವಿರುವಾಗ ಮತ್ತೊಮ್ಮೆ ಸ್ಪರ್ಧಿಸಿ ಸೋಲಿಸಲು ಸಂಚು ಮಾಡಿದ್ದಾರ?’’ ಎಂದು ಸಲ್ಲದ ಪ್ರಶ್ನೆಗಳನ್ನು ಕೇಳಿದರು. ನಾನು ‘‘ಒಂದು ಸಲ ಚಿಕ್ಕಮಗಳೂರಿಗೆ ಬಂದು, ಆ ಜನ ನೋಡಿ, ಆಮೇಲೆ ತೀರ್ಮಾನಿಸಿ’’ ಎಂದೆ. ಮತ್ತೆ ಮಾತಾಡಲಿಲ್ಲ. ಬಂದರು.

ಆಗುಂಬೆಯಲ್ಲಿ ರಾತ್ರಿ 10 ಗಂಟೆಯಾದರೂ ಇಂದಿರಾ ಗಾಂಧಿಗಾಗಿ ಕಾದಿದ್ದ ಮಹಿಳೆಯರು ಮಕ್ಕಳನ್ನು ನೋಡಿದ ಮೇಲೆ ವಿಶ್ವಾಸ ಹುಟ್ಟಿತು. ಆ ನಂತರ ನಾಮಿನೇಷನ್ ಫೈಲ್ ಮಾಡಿದರು. ಚುನಾವಣೆಗೆ ನಿಂತ ಮೇಲೆ ಮೇಡಂ, ‘‘ನಾನು ನಿನಗೆ ಪ್ರಶ್ನೆ ಮಾಡಿದ್ದನ್ನು ಅರಸು ಅವರಿಗೆ ಹೇಳಬೇಡ’’ ಎಂದರು. ‘‘ಹೇಳಬೇಕಾದವರು ನೀವು, ನಾನ್ಯಾಕೆ ಹೇಳಲಿ’’ ಎಂದೆ, ಸುಮ್ಮನಾದರು. ಇದ್ಯಾವುದೂ ಗೊತ್ತಿಲ್ಲದ ಅರಸು, ರಾತ್ರಿ ಹಗಲು ಎನ್ನದೆ, ಎಲ್ಲರನ್ನೂ ಸೈನಿಕರಂತೆ ಸಜ್ಜುಗೊಳಿಸಿ, ಇಂದಿರಾ ಗೆಲ್ಲಲೇಬೇಕು ಎಂದು ಫರ್ಮಾನು ಹೊರಡಿಸಿದರು. ಅದು ಐತಿಹಾಸಿಕ ಚುನಾವಣೆ. ಕೊನೆಗೆ ಮೇಡಂ ಗೆದ್ದರು. ಅದರಲ್ಲಿ ಅರಸು ಅವರ ಪಾಲು 99%. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಶಕುನಿಗಳು ಎಲ್ಲಾ ಕಾಲಕ್ಕೂ...

ಇಂದಿರಾರನ್ನು ಗೆಲ್ಲಿಸಿದ ಅರಸರಿಗೆ ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸವಿತ್ತು. ಕೊಂಚ ಧಿಮಾಕೂ ಇತ್ತು. ಆದರೆ ಇಂದಿರಾ ಗಾಂಧಿಯವರು ಗೆದ್ದ ನಂತರ ಅರಸರನ್ನು ಬಿಟ್ಟರು. ಅರಸು, ಇಂಡಿಯಾ ಅಂದರೆ ಇಂದಿರಾ ಅನ್ನುವ ಯೋಚನೆಯಲ್ಲಿದ್ದರು, ಆ ದಾರಿಯಲ್ಲಿ ದೇಶದ ಎಲ್ಲ ನಾಯಕರನ್ನು ಒಂದುಗೂಡಿಸಿ, ಅದಕ್ಕೆ ಇಂದಿರಾರನ್ನು ಅಧಿನಾಯಕಿಯನ್ನಾಗಿ ಮಾಡುವ ಮಹದಾಸೆ ಹೊಂದಿದ್ದರು. ಮಾಡುವ ನಿಟ್ಟಿನಲ್ಲಿ ಅದು ಇಂದಿರಾರಿಗೆ, ತಾನೇ ಪ್ರಧಾನಿಯಾಗಲು ಮಾಡುತ್ತಿರುವ ಮಸಲತ್ತಿನಂತೆ ಕಂಡಿತು, ಅನುಮಾನಗಳಿಗೆ ಎಡೆಮಾಡಿಕೊಟ್ಟಿತು ಎನ್ನುವುದು ನನ್ನ ಭಾವನೆ. ಹಾಗೆ ನೋಡಿದರೆ, ರಾಜಕೀಯವಾಗಿ ಇಬ್ಬರದೂ ಅತ್ಯುತ್ತಮ ಅಂಡರ್‌ಸ್ಟಾಂಡಿಂಗ್.

ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬರಲು ಸಾಧ್ಯವೇ ಇಲ್ಲವೇನೋ ಅನ್ನುವಷ್ಟು ಗಟ್ಟಿಯಾಗಿತ್ತು. ಆದರೆ ಸಿಲ್ಲಿ ವಿಷಯಕ್ಕೆ ಇಬ್ಬರೂ ಬೇರೆಯಾಗಿಬಿಟ್ಟರು. ಒಬ್ಬರಿಗೆ ಒಂದೇ ಪೋಸ್ಟ್ ಎಂಬ ಕಾರಣವೇ ದೊಡ್ಡದಾಯಿತು. ಪಿಸಿಸಿ ಪ್ರೆಸಿಡೆಂಟ್ ನೇಮಕ ಮಾಡುವಲ್ಲಿ ಅವರಿಬ್ಬರ ನಡುವೆ ಬಿರುಕುಂಟಾಯಿತು. ಕೆಲವರು, ಶಕುನಿ-ಕೈಕೇಯಿ-ಮಂಥರೆ ಥರದವರು ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟು ಮಾಡಿ, ತಮಾಷೆ ನೋಡಿದರು. ಇಂಥವರು ಆ ಕಾಲಕ್ಕಲ್ಲ, ಈಗಲೂ ಇದ್ದಾರೆ... ಕಾಂಗ್ರೆಸ್‌ನಲ್ಲಿ.

ಅದು ಅರಸರಿಗೆ ಸಿಟ್ಟು ತರಿಸಿತು. ಪ್ರತಿಷ್ಠೆಗೆ ಪೆಟ್ಟು ಕೊಟ್ಟು ಘಾಸಿಗೊಳಿಸಿತು. ಹಾಗಂತ ಅರಸುಗೆ ಅಧಿಕಾರದಲ್ಲಿ ಇರಬೇಕು, ನನ್ನ ಬಿಟ್ಟರೆ ಇನ್ಯಾರಿಲ್ಲ ಅನ್ನುವುದೇನೂ ಇರಲಿಲ್ಲ. ಆದರೆ ಅಧಿಕಾರಕ್ಕಾಗಿ ಯಾರ ಮನೆ ಬಾಗಿಲನ್ನೂ ಕಾಯುವವರಲ್ಲ. ಶರಣಾಗತರಾಗುವ ಮನೋಭಾವವೂ ಅವರದಲ್ಲ. ನಾವೆಲ್ಲ ಹೋಗಿ ‘‘ಮಾತನಾಡಿ ಬಗೆಹರಿಸಿಕೊಳ್ಳಿ ಸರ್’’ ಎಂದರೆ, ‘‘ಇದ್ದರೆ ಇರಲಿ, ಹೋದ್ರೆ ಹೋಗಲಿ... ನಾನಂತು ಸರಂಡರ್ ಆಗಲ್ಲ’’ ಅಂದರು. ಮುಂದುವರಿದು, ‘‘ಬದುಕಿದ್ರೆ ಹುಲಿ ಥರ ಬದುಕಬೇಕು ಕಣಯ್ಯ. ಮಾಡಬೇಕಾದ್ದನ್ನೆಲ್ಲ ಮಾಡಿದೀನಿ, ಅಸ್ತಿಭಾರ ಹಾಕಿದ್ದೇನೆ. ಯಾರಿಗೆ ಮಾಡಿದ್ದೇನೋ ಆ ಜನ ಅದನ್ನು ಕಾಪಾಡುತ್ತಾರೆ. ನಿನ್ನೆ ಮೊನ್ನೆ ಬಂದವರ ಮುಂದೆ ನಾನ್ಯಾಕೆ ಶರಣಾಗಬೇಕು’’ ಎಂದು ಸೆಟಗೊಂಡರು.

ದಿಲ್‌ದಾರ್ ಅರಸು

ಅಧಿಕಾರ ಕಳೆದುಕೊಂಡ ಮೇಲೂ ಅಷ್ಟೇ... ಅರಸು ಎಂದೂ ಅಧಿಕಾರಕ್ಕಾಗಿ ಪರಿತಪಿಸಿದವರಲ್ಲ. ಅದಕ್ಕಾಗಿ ತಂತ್ರ-ಕುತಂತ್ರಗಳಿಗೂ ಕೈ ಹಾಕಿದವರಲ್ಲ. ‘‘ಅವಕಾಶ ಸಿಕ್ತು, ಜನರ ಸೇವೆ ಮಾಡಿದೆ’’ ಅಂತೆನ್ನುವ ಅಪರೂಪದ ರಾಜಕಾರಣಿ. ಈ ಅಪರೂಪ ಅಂದಾಗ ನೆನಪಾಯಿತು... ಅವರು ಪೈಪ್ ಸೇದುವ ಸ್ಟೈಲ್ ಇತ್ತಲ್ಲ, ಅದೂ ಕೂಡ ಅವರದೇ ಆದ ಸ್ಪೆಷಲ್ ಸ್ಟೈಲ್. ಪೈಪಿಗೆ ಟೊಬ್ಯಾಕೊ ಹಾಕಿ, ಕಡ್ಡಿ ಗೀರಿ ಪುಸ್ ಪುಸ್ ಅಂತ ಎರಡು ಮೂರು ದಮ್‌ಗೆ ಅಂಟಿಸಿಬಿಡುತ್ತಿದ್ದರು. ಅದು ಹಸಿ ಟೊಬ್ಯಾಕೋ, ಅದಕ್ಕೆ ಲಿಕ್ಕರ್ ಕೂಡ ಬೆರೆಸಿರುತ್ತಾರೆ, ಬೆಂಕಿ ಕಂಡ ತಕ್ಷಣ ಅಂಟಿಕೊಳ್ಳಲಿ ಎಂದು. ಅದನ್ನು ಅರಸು ಒಂದೇ ಕಡ್ಡಿಯಲ್ಲಿ ಹತ್ತಿಸಿ, ತುಟಿಯ ಒಂದು ತುದಿಯಿಂದ ಹೊಗೆ ಬಿಡುತ್ತಿದ್ದ ರೀತಿ... ಭಾರೀ ಮಜವಾಗಿರುತ್ತಿತ್ತು. ಭಾರತದ ರಾಜಕಾರಣಿಗಳಲ್ಲಿ, ನನ್ನ ಅನುಭವದ ಪ್ರಕಾರ ಪೈಪ್ ಸೇದುವ ರಾಜಕಾರಣಿಗಳು ಮೂವರು ಮಾತ್ರ- ದೇವಕಾಂತ್ ಬರೂವ, ಪ್ರಣವ್ ಮುಖರ್ಜಿ ಮತ್ತು ದೇವರಾಜ ಅರಸು.

ಬರೂವ ಸಾಹೇಬರೇ ಖುದ್ದಾಗಿ ಅರಸು ಮತ್ತು ಪ್ರಣವ್ ಮುಖರ್ಜಿಯವರಿಗೆ ತಮ್ಮಲ್ಲಿದ್ದ ಪೈಪ್‌ಗಳನ್ನು ಫ್ರೀಯಾಗಿ ಕೊಟ್ಟಿದ್ದರು. ನಾನು ವಿದೇಶಕ್ಕೆ ಹೋದಾಗ ಅರಸರಿಗೆ ಒಂದೆರಡು ತಂದುಕೊಟ್ಟಿದ್ದೆ. ಅರಸು ಮೊದಲು ತುಂಬಾ ಆರ್ಡಿನರಿ ಲಿಕ್ಕರ್ ಕುಡಿಯುತ್ತಿದ್ದರು. ಆಮೇಲೆ, ಮುಖ್ಯಮಂತ್ರಿಗಳಾದ ಮೇಲೆ ಸೆಲೆಕ್ಟೆಡ್ ಓನ್ಲಿ. ಫ್ರೆಂಚ್ ಕೊನ್ಯಾಕ್ ಬ್ರಾಂಡಿಯನ್ನು ತುಂಬಾ ಇಷ್ಟಪಡುತ್ತಿದ್ದರು. ಬಿಸಿನೀರು, ಜೇನುತುಪ್ಪ ಬೆರೆಸಿದ ಕೊನ್ಯಾಕ್ ಬ್ರಾಂಡಿಯನ್ನು ಇಟ್ಟುಕೊಂಡು ಸಿಪ್ ಬೈ ಸಿಪ್ ಕುಡೀತಾ ಭಾಷಣ ರೆಡಿ ಮಾಡಿಬಿಡುತ್ತಿದ್ದರು. ಉನ್ನತ ಅಧಿಕಾರಿಗಳು, ಮಹತ್ವದ ಚರ್ಚೆಗಳು ಇದ್ದಾಗ ಡ್ರಿಂಕ್ಸ್ ತಗೋತಿದ್ದರು. ಅವರು ಈಗಿಲ್ಲ ಎಂಬ ಕಾರಣಕ್ಕೆ ದಿನಾ ಕುಡಿತಿದ್ದರು, ಸಿಕ್ಕಾಪಟ್ಟೆ ಕುಡಿತಿದ್ದರು ಅಂತೆಲ್ಲ ಹೇಳಕ್ಕಾಗಲ್ಲ. ಒಟ್ಟಿನಲ್ಲಿ ಎಲ್ಲಾ ಥರದ ಅಭ್ಯಾಸಗಳೂ ಇತ್ತು. ದೇವರ ಪೂಜೆ ಮಾಡುತ್ತಿದ್ದರು. ಜ್ಯೋತಿಷ್ಯ ಕೇಳುತ್ತಿದ್ದರು.

ಆ ದ್ವಾರಕಾನಾಥ್ ಎಂಬವರ ಮನೆಗೆ ನಾನೇ ಕರೆದುಕೊಂಡು ಹೋಗಿ ಬಿಟ್ಟೆ. ಅಲ್ಲಿ ತೀರಿಕೊಂಡರು. ನನಗೆ ಗೊತ್ತಿರುವ ಹಾಗೆ ಅವರು ತೀರಿಕೊಂಡಿದ್ದು ಹೃದಯಾಘಾತದಿಂದ. ಹಿಂದೊಮ್ಮೆ ಆಗಿತ್ತು, ಡಾ. ಚೆನ್ನಪ್ಪ ಅಂತ ಬೌರಿಂಗ್ ಆಸ್ಪತ್ರೆಯ ಡಾಕ್ಟರ್ ಅವರಿಗೆ ಟ್ರೀಟ್‌ಮೆಂಟ್ ಮಾಡಿದ್ದರು. ಅರಸು ಕೇರ್ ತೆಗೆದುಕೊಳ್ಳಲಿಲ್ಲ. ಇಂದಿರಾ-ಅರಸು ಕೊನೇ ಭೇಟಿ

ಲಂಡನ್ ಯೂನಿವರ್ಸಿಟಿಯವರು 1982ರಲ್ಲಿ ದೇವರಾಜ ಅರಸು ಅವರನ್ನು, ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯವನ್ನು ಜಾರಿಗೆ ತಂದದ್ದು, ಅದರಿಂದಾದ ಪರಿಣಾಮ ಕುರಿತು ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ಅರಸು ಲಂಡನ್‌ಗೆ ಹೋಗಲು ಮೈಸೂರು ವಿಸಿ ಜೊತೆ ದಿಲ್ಲಿಗೆ ಬಂದಿದ್ದರು. ಆಗ ನಾನು ದಿಲ್ಲಿಯಲ್ಲಿದ್ದೆ. ದಿಲ್ಲಿಯಿಂದ ಜೈಪುರಕ್ಕೆ ಹೋಗಿ ಮುಖ್ಯಮಂತ್ರಿ ಶೆಖಾವತ್ ಭೇಟಿ ಮಾಡಿ ಬಂದರು. ಆಮೇಲೆ ಅರಸು ಅವರಿಗೆ ಏನನ್ನಿಸಿತೋ, ಸಂಜಯ ಗಾಂಧಿ ತೀರಿಹೋಗಿದ್ದರಲ್ಲ, ‘‘ಮೇಡಂ ನೋಡಿಕೊಂಡು ಬರೋಣ’’ ಅಂದರು.

ನಾನು ಪ್ರೈಮ್ ಮಿನಿಸ್ಟರ್ ಆಫೀಸಿಗೆ ಫೋನ್ ಮಾಡಿ, ಮೇಡಂ ಜೊತೆ ಮಾತನಾಡಿದಾಗ, ಅವರು ‘‘ವೈ ನಾಟ್, ಪ್ಲೀಸ್ ಕಮ್’’ ಎಂದರು. ಒಂದೂವರೆ ವರ್ಷಗಳ ನಂತರ ಅವರಿಬ್ಬರ ಭೇಟಿ ಎಷ್ಟು ಸಹಜವಾಗಿತ್ತೆಂದರೆ, ಮೆಚ್ಯೂರ್ಡ್‌ ರಾಜಕಾರಣಿಗಳಿಬ್ಬರು ಕೂತು ಮಾತನಾಡಿದಂತಿತ್ತು. ಇಬ್ಬರ ನಡುವೆ ಏನು ನಡೆದೇ ಇಲ್ಲವೇನೋ, ಹಾಗೆ ಯೋಚನೆ ಮಾಡಿದ್ದು ನಮ್ಮ ತಪ್ಪೇನೋ ಎನ್ನುವಷ್ಟು ಕೂಲಾಗಿ ಕೂತು ಮಾತನಾಡಿದರು. ಇಂದಿರಾ ಮೇಡಂ, ‘‘ಫಾರಿನ್ ಪಾಲಿಸಿ ಮಾತನಾಡುವಾಗ ಜಾಗರೂಕರಾಗಿ ಮಾತನಾಡಬೇಕು, ನಮ್ಮ ದೇಶದ ಸದ್ಯದ ಆರ್ಥಿಕ ಸ್ಥಿತಿ, ನಮ್ಮ ಸರಕಾರದ ನಿಲುವುಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ’’ ಎಂದು ಸಲಹೆ, ಸೂಚನೆಗಳನ್ನು ಕೊಟ್ಟರು. ಅಲ್ಲದೆ, ಲಂಡನ್‌ನಲ್ಲಿ ಅರಸರಿಗೆ ಉಳಿದುಕೊಳ್ಳಲು, ಹೋಗಿ ಬರಲು ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಟ್ಟರು. ಅರಸು, ‘‘ಏನೋ ಅವರ-ನಮ್ಮ ಋಣ ಮುಗೀತು, ಅಷ್ಟೆ’’ ಎಂದರೆ ಹೊರತು, ಎಂದೂ ಇಂದಿರಾ ಬಗ್ಗೆ ಸಣ್ಣ ಮಾತು ಆಡಿದವರಲ್ಲ. ಇದು ಇಂದಿರಾರಿಗೆ ಗೊತ್ತಾಗಿದ್ದು ಸಂಜಯ ಗಾಂಧಿ ಸತ್ತ ನಂತರ. ಆಗ ಅವರ ಮನಸ್ಸು ಕರಗಿತ್ತು. ಸತ್ಯ ಏನೆಂದು ಗೊತ್ತಾಗಿತ್ತು. ಇಂಥ ಸಮಯದಲ್ಲಿ ಭೇಟಿ ನಡೆಯಿತು.

ನನ್ನ ಜೀವನದಲ್ಲಿ ಆ ಮೀಟಿಂಗ್ ಮರೆಯಲಾರದ ಮಹತ್ವದ ಸ್ಥಾನ ಪಡೆದಿದೆ. ಕರ್ನಾಟಕದ ರಾಜಕಾರಣಿಗಳ ಪೈಕಿ ಅರಸು ಅದ್ವಿತೀಯ ವ್ಯಕ್ತಿ. ಕಷ್ಟಪಟ್ಟು ಮೇಲೆ ಬಂದವರು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡವರು. ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿ, ತಮ್ಮದೇ ಆದ ಭಿನ್ನ ಮಾದರಿಯ ರಾಜಕಾರಣಕ್ಕೆ ನಾಂದಿ ಹಾಡಿದವರು. ಅವರು ಅಧಿಕಾರದಲ್ಲಿದ್ದಾಗ ಜಾರಿ ಮಾಡಿದ ಭೂ ಸುಧಾರಣೆ, ಮೀಸಲಾತಿ, ಜೀತಮುಕ್ತಿ, ಮಲ ಹೊರುವ ಪದ್ಧತಿ ನಿಷೇಧ... ಇವು ಬರೀ ಕಾರ್ಯಕ್ರಮಗಳಲ್ಲ, ಭದ್ರ ಬುನಾದಿಯಂತಹ ಯೋಜನೆಗಳು. ಕರ್ನಾಟಕ ರಾಜ್ಯದಲ್ಲಿ ಯಾವುದೇ ಸರಕಾರವಾಗಲಿ, ಕಾಂಗ್ರೆಸ್ ಇರಲಿ, ಕಾಂಗ್ರೆಸ್ಸೇತರ ಸರಕಾರವಿರಲಿ, ಯಾರೂ ಇವುಗಳನ್ನು ಬಿಟ್ಟು ಆಡಳಿತ ನಡೆಸುವಂತೆಯೇ ಇಲ್ಲ. ಅವರು ಸಾಮಾಜಿಕ ನ್ಯಾಯಕ್ಕೆ ಹಾಕಿದ ಅಡಿಪಾಯ ವಿಧಾನಸೌಧಕ್ಕಿಂತ ಗಟ್ಟಿಯಾಗಿದೆ. ಯಾರೇ ಆಗಿರಲಿ ಪಾಲಿಸಿಕೊಂಡು, ಮುಂದುವರೆಸಿಕೊಂಡು ಹೋಗಲೇಬೇಕು... ಅಷ್ಟಂತೂ ಸತ್ಯ.

Writer - ಬಸು ಮೇಗಲ್ಕೇರಿ

contributor

Editor - ಬಸು ಮೇಗಲ್ಕೇರಿ

contributor

Similar News